ADVERTISEMENT

ಸುರ್ರನ್ನೋ ಸೂಪು, ಸ್ವಾದಭರಿತ ಡೆಸರ್ಟ್‌...

ರೋಹಿಣಿ ಮುಂಡಾಜೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಸುರ್ರನ್ನೋ ಸೂಪು, ಸ್ವಾದಭರಿತ ಡೆಸರ್ಟ್‌...
ಸುರ್ರನ್ನೋ ಸೂಪು, ಸ್ವಾದಭರಿತ ಡೆಸರ್ಟ್‌...   

ಮೊಮೊ, ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರ ಅಚ್ಚುಮೆಚ್ಚಿನ ತಿನಿಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ ರಸ್ತೆ ಬದಿಯ ಕೈಗಾಡಿ, ದರ್ಶಿನಿ, ಹೋಟೆಲ್‌ಗಳಲ್ಲಿ ಮಾತ್ರವಲ್ಲದೆ ತಾರಾ ಹೋಟೆಲ್‌ಗಳಲ್ಲಿಯೂ ಮೊಮೊಗಳ ವೈವಿಧ್ಯಮಯ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ.

ಐಟಿಸಿ ಸಮೂಹದ ವೆಲ್‌ಕಮ್‌ ಹೋಟೆಲ್‌ನ ಮಹಾತ್ಮ ಗಾಂಧಿ ರಸ್ತೆಯ ಶಾಖೆಯಲ್ಲಿ ಈಗ ಮೊಮೊ ಉತ್ಸವವೇ ಏರ್ಪಾಡಾಗಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿಗಳ ಬಾಯಿ ಮೆಚ್ಚುವಂತಹ ಮೊಮೊಗಳನ್ನು ಬಗೆ ಬಗೆಯ ಬಣ್ಣಗಳಲ್ಲಿ ತಯಾರಿಸಿ ಕೊಡಲಾಗುತ್ತಿದೆ. ಮುಖ್ಯ ಬಾಣಸಿಗ ಸಂಜಯ್‌ ಬಿಸ್ವಕರ್ಮ ಈ ಮೊಮೊ ಆಹಾರ ಉತ್ಸವಕ್ಕೆ ‘ಡಿಮ್‌ಸಮ್‌’ ಎಂದು ಹೆಸರಿಟ್ಟಿದ್ದಾರೆ.

‘ಮೊಮೊಗೆ ಮೈದಾ ಹಿಟ್ಟು ಬಳಸುವುದು ಸಾಮಾನ್ಯ. ಬೇಕಾದ ಆಕಾರ ಮತ್ತು ವಿನ್ಯಾಸ ಮಾಡಲು ಮೈದಾದಂತೆ ಇನ್ನಾವುದೇ ಹಿಟ್ಟು ಒದಗಿಬರುವುದಿಲ್ಲ. ಅಲ್ಲದೆ ಯಾವುದೇ ಹೂರಣ ತುಂಬಿದರೂ ಬಾಯಿ ಬಿಟ್ಟುಕೊಳ್ಳದಂತೆ ಹಿಡಿದಿಡುವ ಗುಣ ಮೈದಾ ಹಿಟ್ಟಿನದು. ಹಾಗಾಗಿ ಮೈದಾ ಬಳಕೆ ವ್ಯಾಪಕವಾಗಿದೆ. ಆದರೆ ‘ಡಿಮ್‌ ಸಮ್‌’ ಆಹಾರೋತ್ಸವದಲ್ಲಿ ಮೈದಾದ ಬದಲು ಆಲೂಗಡ್ಡೆ ಗಂಜಿಯ ಪುಡಿ (ಪೊಟಾಟೊ ಸ್ಟಾರ್ಚ್‌ ಪೌಡರ್‌) ಬಳಸಿ ಮೊಮೊ ತಯಾರಿಸಲಾಗುತ್ತದೆ. ಮೈದಾದ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿಬರುತ್ತಿರುವ ಕಾರಣ ನಮ್ಮ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಮೈದಾಕ್ಕೆ ಪರ್ಯಾಯವಾಗಿ ಈ ಪುಡಿಯನ್ನು ಬಳಸಲಾಗಿದೆ’ ಎಂದು ವಿವರಣೆ ಕೊಡುತ್ತಾರೆ, ಸಂಜಯ್.

ADVERTISEMENT

ರುಚಿಕರವಾದ ಸೂಪ್‌ನೊಂದಿಗೆ ಊಟ ಶುರು ಮಾಡಿ ಎಂದು ಕಿರಿಯ ಶೆಫ್‌ ಮನೋಜ್‌ ಸಿಂಗ್‌ ಸಲಹೆ ಕೊಡುತ್ತಾರೆ. ನಾನು ಸವಿದದ್ದು ಚಿಕನ್‌ ಅಂಡ್‌ಬೀನ್‌ ಕರ್ಡ್‌ ಬ್ರಾತ್‌ ಎಂಬ ಸೂಪ್‌. ಉಪ್ಪು ಸ್ವಲ್ಪ ಜಾಸ್ತಿ ಅನಿಸಿದರೂ ಸುರ್ರ್‌ ಅಂತ ಬಿಸಿ ಬಿಸಿಯಾಗಿ ಬಾಯಿಗೆಳೆದುಕೊಂಡರೆ ಹಾಯೆನಿಸುವಂತಿತ್ತು.

ಮೊಮೊ ಸವಿಯುವ ಸರದಿ ಶುರುವಾಯಿತು. ಕನಿಷ್ಠ ಆರು ಬಗೆಯ ಮೊಮೊಗಳನ್ನಾದರೂ ಸವಿಯುವ ಟಾರ್ಗೆಟ್‌ ಇಟ್ಟುಕೊಂಡೇ ಹೋಗಿದ್ದ ಕಾರಣ ಪುಟಾಣಿ ಮೊಮೊಗಳನ್ನೇ ಮಾಡಿಕೊಟ್ಟಿದ್ದರು ಸಂಜಯ್‌ ತಂಡದವರು. ಅವುಗಳಲ್ಲಿ ಹೇಳಲೇಬೇಕಾದ್ದು ಚಿಕನ್‌ ಅಂಡ್‌ ಸ್ಪ್ರಿಂಗ್‌ ಆನಿಯನ್‌ ಡಿಮ್‌ ಸಮ್‌ ಎಂಬ ಮೊಮೊ. ಸಣ್ಣದಾಗಿ ಕತ್ತರಿಸಿದ ಕೋಳಿ ಮಾಂಸ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಸ್ಪ್ರಿಂಗ್‌ ಆನಿಯನ್‌,  ಸಾಸಿವೆ ಎಣ್ಣೆ, ಎರಡು ಬಗೆಯ ಸೋಯಾ ಸಾಸ್‌, ಉಪ್ಪು, ಸ್ಟಾರ್ಚ್‌ ಪೌಡರ್‌ ಬಳಸಿ ಮಾಡಿರುವ ಸೂಪ್‌ ಇದು. ಪನೀರ್‌, ಅಣಬೆ ಮತ್ತು ಕೋಳಿಯ ಮಾಂಸವನ್ನು ಒಂದೇ ಆಕಾರದಲ್ಲಿ ಕತ್ತರಿಸಿ ಹಾಕಿರುವುದು ಸೂಪ್‌ಗೆ ಒಂದು ಸೌಂದರ್ಯವನ್ನೂ ತಂದುಕೊಟ್ಟಿತ್ತು. ರುಚಿಯೂ ಚೆನ್ನಾಗಿತ್ತು.

ಸಸ್ಯಾಹಾರಿಗಳಿಗೆ ಅಣಬೆ, ಪನೀರ್‌, ಬೀನ್ಸ್‌, ಕ್ಯಾರೆಟ್‌, ಜೋಳ, ಕ್ಯಾಪ್ಸಿಕಂಗಳ ಸಂಯೋಜನೆಯ ತರಾವರಿ ಮೊಮೊ ಇದೆ. ಮಾಂಸಾಹಾರಿಗಳಿಗೆ ಕೋಳಿ, ಸಿಗಡಿ ಮತ್ತು ಕುರಿ ಮಾಂಸದಿಂದ ಮಾಡಿದ ಬೇರೆ ಬೇರೆ ಬಣ್ಣಗಳ ಮೊಮೊ ಸವಿಯಬಹುದು. ತಟ್ಟೆಗೆ ಒಂದೊಂದು ಬಗೆಯ ಮೊಮೊ ಬಂದು ಕುಳಿತಾಗಲೂ ಅರೆಕ್ಷಣ ಅದರ ಅಂದ ನೋಡುವಂತಾಗುತ್ತದೆ. ಹೊಟ್ಟೆಯೊಳಗಿನ ತರಕಾರಿಗಳೋ, ಮಾಂಸವೋ ಕಾಣುವಷ್ಟು ತೆಳುವಾಗಿ ಕೂತಿರುವ ಡಿಮ್‌ ಸಮ್‌ ಹಿಟ್ಟಿನ ಕಣಕ, ಹಬೆ, ಹೂವಿನಂತೆಯೂ ಕುಂಕುಮದ ಬಟ್ಟಲಿನಂತೆಯೂ ಕಾಣುವ ವಿನ್ಯಾಸ... ಇಷ್ಟೆಲ್ಲ ಕಣ್ತುಂಬಿಕೊಂಡು ಮೊಮೊ ಬಾಯಿಗಿಟ್ಟುಕೊಂಡರೆ ಬಿಸಿ ಆರಿ ಹದವಾಗಿರುತ್ತದೆ. ಆದರೆ ಎಳೆ ಕುರಿ ಮಾಂಸದ ಮೊಮೊ ಮಾತ್ರ ಸಾಕಷ್ಟು ಮಸಾಲೆ ಮತ್ತು ಉಪ್ಪು ಹೀರಿಕೊಂಡಿರದ ಕಾರಣ ಬಾಯಿಗೆ ಮೆಚ್ಚುಗೆಯಾಗಲಿಲ್ಲ.

ಡಿಮ್ ಸಮ್‌ ಆಹಾರೋತ್ಸವದಲ್ಲಿ ಡೆಸರ್ಟ್‌ ಸವಿಯಲೇಬೇಕು. ಇಲ್ಲಿರುವುದು ಎರಡೋ ಮೂರೋ ಆಯ್ಕೆಗಳು. ಅದರಲ್ಲಿ ಡೇಟ್ಸ್‌ ಕೇಕ್‌ ಮತ್ತು ಟೆಂಡರ್‌ ಕೋಕನಟ್‌ ಐಸ್‌ಕ್ರೀಂನ ಜೋಡಿ ಸಖತ್ತಾಗಿತ್ತು. ಅಪ್ಪಟ ಖರ್ಜೂರದಿಂದ ಮಾಡಿದ ಕೇಕ್‌ನ್ನು ಐಸ್‌ಕ್ರೀಂ ಜೊತೆ ಸವಿಯುವಾಗ ತಾನಾಗಿ ಕಣ್ಣು ಮುಚ್ಚಿಕೊಳ್ಳುತ್ತದೆ! ಮೊಮೊ ಮತ್ತು ವಗೈರೆಗಳನ್ನು ಸವಿಯಲು, ಕೊನೆಯಲ್ಲಿ ಡೆಸರ್ಟ್‌ ಆಸ್ವಾದಿಸಲು ನೀವೂ ಹೋಗಿಬನ್ನಿ ಮತ್ತೆ...

‘ಡಿಮ್‌ಸಮ್‌’ ಆಹಾರೋತ್ಸವ

ಸ್ಥಳ: ವೆಲ್‌ಕಮ್‌ ಕೆಫೆ ಜಕರಂದ, ವೆಲ್‌ಕಮ್‌ ಹೋಟೆಲ್‌, ರಿಚ್ಮಂಡ್‌ ರಸ್ತೆ

ಸಮಯ: ಮಾ.4ರವರೆಗೆ ಮಧ್ಯಾಹ್ನ 12–3.30, ರಾತ್ರಿ 7ರಿಂದ 11.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.