ADVERTISEMENT

ಸುಷಿ ಖುಷಿ!

ಎಸ್.ರಶ್ಮಿ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಕಡಿಮೆ ಮಸಾಲೆ, ಹೆಚ್ಚಿನ ರುಚಿ. ಅಂತ ಹೇಳುತ್ತಲೇ ಸುಧೀರ್ ನಾಯರ್ ನಕ್ಕಿದ್ದರು.
ರಾಯಲ್ ಆರ್ಕೆಡ್ಸ್ ಹೋಟೆಲ್‌ನ ಜಿನ್ಸೆಂಗ್ ರೆಸ್ಟೋರೆಂಟ್‌ನಲ್ಲಿ ಬಫೆ ಸವಿಯುವಾಗ ಉಣ್ಣುವವರ ತಟ್ಟೆ ಮೇಲೆ ಕಣ್ಣಾಡಿಸುತ್ತಿದ್ದರು ಅಲ್ಲಿಯ ಬಾಣಸಿಗ ಸುಧೀರ್.

ಯಾರಾದರೂ ತಟ್ಟೆಯಲ್ಲಿ ಏನಾದರೂ ಉಳಿಸಿದ್ದರೆ, ಅವರ ಬಳಿ ಹೋಗಿ, ಅದ್ಯಾಕೆ ಇಷ್ಟವಾಗಲಿಲ್ಲ ಎಂದು ವಿಚಾರಿಸುತ್ತಲೂ ಇದ್ದರು. ಖಾದ್ಯಗಳ ವಿವರಣೆ ಮತ್ತು ಮಾಹಿತಿ ನೀಡುತ್ತಿದ್ದರು. ಥಾಯ್ ಆಹಾರದ ಬಗ್ಗೆ ಜನರಿಗೆ ತಪ್ಪು ತಿಳಿವಳಿಕೆ ಇದೆ. ಅದಕ್ಕೆ ಬಫೆ ಆರಂಭವಾದರೆ ಅಡುಗೆಮನೆಯಿಂದ ಶೆಫ್ ಊಟದ ಮನೆಗೆ ಬರುತ್ತಾರೆ ಅಂತ ಸಹಾಯಕ ನೀರಜ್ ವಿವರಿಸಿದರು.

ಮಾಂಸಾಹಾರ ಹಾಗೂ ಸಸ್ಯಾಹಾರಗಳಲ್ಲಿ ಸಾಕಷ್ಟು ಆಯ್ಕೆಗಳನ್ನು ನೀಡಿರುವ ಈ ಬಫೆಯಲ್ಲಿ ವೈನ್ ಅಥವಾ ಬಿಯರ್ ಸಹ ನೀಡಲಾಗುತ್ತದೆ.

ಕರಿದ ಮೆಕ್ಕೆಜೋಳದ ತಿನಿಸಿಗೆ ಹಸಿ ಈರುಳ್ಳಿ, ಕೊತ್ತಂಬರಿ ಸೊಪ್ಪು, ನಿಂಬೆಹುಳಿಯೊಂದಿಗೆ ಒಂದಿನಿತು ಸಿಹಿ... ಅದರೊಂದಿಗೆ ಮೆಕ್ಕೆಜೋಳದ ರಸ ಬಾಯೊಳಗೆ ಸಿಡಿಯುತ್ತಿದ್ದರೆ ಬಾಯ್ತುಂಬ ನೀರು. ಹೊಟ್ಟೆ ಹಸಿವಾಗಿದ್ದು ಎಷ್ಟು ಎಂಬುದು ಅರಿವಿಗೆ ಬರುತ್ತದೆ.

ಹಸಿವನ್ನು ನೀಗುವ ಬದಲು ಕೆರಳಿಸುವ ಇನ್ನೊಂದು ಖಾದ್ಯವೆಂದರೆ ಇಲ್ಲಿಯ ವಿಶೇಷ ಸೂಪ್. ಈ ಸೂಪ್‌ಗೆ ನಿಂಬೆಯ ಸ್ವಾದ ಬರಲು, ನಿಂಬೆಯ ಎಳೆ ಚಿಗುರೆಲೆಯನ್ನು ಬಳಸಲಾಗುತ್ತದೆ. ಸೀಬೆಕಾಯಿ ಮರದ ಎಲೆ ಕೀಳುವಾಗ ಬರುವ ಪರಿಮಳವೇ ಈ ಸೂಪ್‌ನೊಂದಿಗೆ ಬೆರೆತಂತೆ ಎನಿಸುತ್ತದೆ. ಹುಳಿಯಲ್ಲದ, ಹುಳಿಯ ಅನುಭವ ನೀಡುವ ಈ ಸೂಪ್ ಹಸಿವುಕಾರಕ.

ಸಸ್ಯಾಹಾರಿಗಳಿಗೆ ರೈಸ್ ಪೇಪರ್‌ನಲ್ಲಿ ಸುತ್ತಿರುವ ತರಕಾರಿಗಳು ಸಾತ್ವಿಕ ಆಹಾರದ ಅನುಭವ ನೀಡುತ್ತದೆ. ಹಿಟ್ಟಿನ ಬಟ್ಟಲಲ್ಲಿ ಹದವಾಗಿ ಬೆರೆಸಿರುವ ತರಕಾರಿ ಹಾಗೂ ಗಿಣ್ಣನ್ನು ಹಬೆಯಲ್ಲಿಯೇ ಬೇಯಿಸಿದ ಮಾಮೋ ಸ್ವಾದ ಬಾಯಿಂದ ಗಂಟಲಿನವರೆಗೂ ರಸಾಸ್ವಾದ ನೀಡುತ್ತದೆ. ಮಾಂಸಾಹಾರಿಗಳಿಗೆ ಕ್ರಿಸ್ಪ್ ಸೀಗಡಿ ತರಹೇವಾರಿ ಜಲಚರಗಳ ಖಾದ್ಯಗಳೇ ಇಲ್ಲಿವೆ.

ಮೇನ್ ಕೋರ್ಸ್‌ನಲ್ಲಿ ಶೆಜವಾನ್ ನೂಡಲ್ಸ್, ಬಟರ್ ಜಿಂಜರ್ ರೈಸ್, ಫ್ರೈಡ್ ರೈಸ್ ಮುಂತಾದ ಖಾದ್ಯಗಳಿರುತ್ತವೆ. 

ವಿಶೇಷವೆಂದರೆ ಜಿಹ್ವಾ ಚಾಪಲ್ಯ ತಣಿಸುವ ಸ್ಟಾರ್ಟರ್ ಹೊರತುಪಡಿಸಿದರೆ ಇಲ್ಲಿ ಯಾವುದೂ ಎಣ್ಣೆಯಲ್ಲಿ ಕರಿದ ಅಥವಾ ಹುರಿದ ಖಾದ್ಯಗಳಿಲ್ಲ. ಎಲ್ಲವೂ ಬೇಯಿಸಿದ ಮತ್ತು ಬೆಂದ ಖಾದ್ಯಗಳೇ.

ಊಟ ಮತ್ತು ತೂಕ ಎರಡನ್ನೂ ಗಮನದಲ್ಲಿರಿಸಿಕೊಂಡೇ ತಟ್ಟೆ ಹಿಡಿಯುವ ಇಂದಿನ ಅಭ್ಯಾಸವನ್ನು ಲೇವಡಿ ಮಾಡುವ ಸುಧೀರ್ ರುಚಿಕಟ್ಟಾದ ಹಾಗೂ ಅಚ್ಚುಕಟ್ಟಾದ ಊಟ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಮಂತ್ರ ಹೇಳುತ್ತಾರೆ. ಅದಕ್ಕೆಂದೇ ಸಾಧ್ಯವಿದ್ದಷ್ಟೂ ಹಸಿಯಾದ ಅಥವಾ ಬೆಂದ ಆಹಾರವನ್ನೇ ಸೇವಿಸಿ ಎಂಬುದು ಅವರ ಕಿವಿಮಾತು.

`ಸುಷಿ~ ಎಂಬುದು ಪರಿಪೂರ್ಣವಾದ ಸಾಗರ ಖಾದ್ಯ. ಇಲ್ಲಿ ಮೀನಿಗೆ ವಿನೆಗರ್ ಅನ್ನದ ಲೇಪನವಿದ್ದು, ಮೇಲೆ ಮೀನಿನ ಮೊಟ್ಟೆಗಳ ಅಲಂಕಾರವಿರುತ್ತದೆ. ಜೊತೆಗೆ ಉಪ್ಪು ನೀರಿನಲ್ಲಿ ಅದ್ದಿ ತೆಗೆದ ಹಸಿಮಾಂಸವಿರುತ್ತದೆ.

ಚೀನಾ ಮತ್ತು ಜಪಾನ್‌ನ ಈ ಸಾಂಪ್ರದಾಯಿಕ ಖಾದ್ಯದಲ್ಲಿ ಅಷ್ಟಪದಿ ಆಕ್ಟೋಪಸ್‌ನ ಮಾಂಸದ ತೆಳುವಾದ ತುಂಡುಗಳೂ ಇರುತ್ತವೆ. ಬಾಯಿಗೆ ಹಾಕಿ ಜಗಿದಾಗ ಚುಯಿಂಗ್ ಗಮ್‌ನ ಅನುಭವ ನೀಡುವ ಇದು, ಹುಳಿಮೀನಿನೊಂದಿಗೆ ತಿನ್ನಲು ವಿಶೇಷ ಅನುಭವವನ್ನೇ ನೀಡುತ್ತದೆ.

ಮೀನಿನ ಮೊಟ್ಟೆಗಳ ಅಲಂಕಾರವಂತೂ ಕಣ್ಣಿಗೆ ಖುಷಿ ನೀಡುತ್ತದೆ. ಜೆಲ್ಲಿಯಂಥ ಸಣ್ಣ ಮೊಟ್ಟೆಗಳು, ಸಕ್ಕರೆ ಪಾಕದ ಗುಳ್ಳೆಗಳಂತೆ ಕಾಣುತ್ತವೆ. ಆದರೆ ಬಾಯಿಗಿಟ್ಟರೆ ಮಾತ್ರ ಒಳಗೆಲ್ಲ ರಸಸಿಂಚನ! ಸುಷಿ ಸ್ವಾದದ ಅನುಭವವೇ ಹುಳಿಮಧುರ.

ಹನಾನ್ ಚಿಕನ್ ಎಂದು ಕರೆಯಲಾಗುವ ಇನ್ನೊಂದು ಖಾದ್ಯ ಹೊಟ್ಟೆಗೆ ತಂಪು ಈಯುತ್ತದೆ. ಕಾರಣ ಇಲ್ಲಿ ಬೆಳ್ಳುಳ್ಳಿ, ಧನಿಯಾ ಮಿಶ್ರಣದ ನೀರನ್ನು ಕುದಿಸಲಾಗುತ್ತದೆ. ಇದರಲ್ಲಿ ಒಂದಿಡೀ ಚಿಕನ್ ಕುದಿಸಲಾಗುತ್ತದೆ. ಮಾಂಸ ಅರಳಿಕೊಂಡಾಗ, ಅದನ್ನು ಅಲ್ಲಿಂದ ತೆಗೆದು ಕೂಡಲೇ ತಣ್ಣನೆಯ ಉಪ್ಪು ಮಿಶ್ರಿತ ನೀರಿನಲ್ಲಿ ಅದ್ದಲಾಗುತ್ತದೆ. ನಂತರ ಅದನ್ನು ಅಡ್ಡಡ್ಡ ಕೊಚ್ಚಲಾಗುತ್ತದೆ. ಅದರ ಮೇಲೆ ಸೀಸೆಮ್ ತೈಲ ಹಾಗೂ ಸೋಯಾ ಸಾಸ್ ಸುರಿದು ನೀಡಲಾಗುತ್ತದೆ.

ಇದರೊಂದಿಗೆ ನೀಡುವ ಅನ್ನ ಮಾತ್ರ ವಿಶಿಷ್ಟ ಸ್ವಾದದ್ದು. ಇದಕ್ಕೂ ಕಡಿಮೆ ಮಸಾಲೆ. ಕೇವಲ ಬೆಣ್ಣೆಯಲ್ಲಿ ಹಸಿಶುಂಠಿಯ ಪೇಸ್ಟ್ ಬೆರೆಸಿ ಅನ್ನವನ್ನು ಬೇಯಿಸಲಾಗುತ್ತದೆ. ಕೊತ್ತಂಬರಿ ಸೊಪ್ಪಿನ ಅಲಂಕಾರದೊಂದಿಗೆ ನೀಡಿದರೆ ಬಾಯೊಳಗಿಟ್ಟರೆ ಜಾರುವ, ಕರಗುವ ಅನ್ನ. ಶುಂಠಿಯ ಖಾರದ ಸ್ವಾದ ಹಾಗೂ ವಾಸನೆ ಮಗದೊಮ್ಮೆ ಅನ್ನದ ಸೌಟು ಮೊಗಚುವಂತೆ ಮಾಡುತ್ತದೆ. 

ರಾಯಲ್ ಆರ್ಕೆಡ್ ಹೋಟೆಲ್‌ನಲ್ಲಿರುವ ಜಿನ್ಸಿಂಗ್ ರೆಸ್ಟೋರೆಂಟ್‌ನಲ್ಲಿ ಈ ಬಫೆಯನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 12.30ರಿಂದ 3.30ರವರೆಗೆ ಊಟವನ್ನು ಆಸ್ವಾದಿಸಬಹುದು. `ಬ್ಯಾಂಕಾಕ್ ಟು ಬೀಜಿಂಗ್~ ಎಂದು ಕರೆಯಲಾಗುವ ಈ ಬಫೆ ಬೆಲೆ 499. ಹೆಚ್ಚುವರಿ ತೆರಿಗೆ ಕೂಡ ಕಟ್ಟವೇಕು. ಕಾರ್ಪೊರೆಟ್ ಜಗತ್ತನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಬಫೆ ಆಯೋಜಿಸಲಾಗಿದೆ ಎನ್ನುತ್ತಾರೆ ಸುಧೀರ್. ಹೆಚ್ಚಿನ ಮಾಹಿತಿಗೆ: 25205566.

ಆದರೆ ಚೀನಾ, ಥಾಯ್, ಜಪಾನ್ ಆಹಾರ ಸ್ವಾದದ ಅನುಭವ ಬೇಕೆಂದರೆ ಕುಟುಂಬವೊಂದು ತನ್ನ ಇಡೀ ತಿಂಗಳ ದಿನಸಿ ಲೆಕ್ಕದಲ್ಲಿ ಒಂದು ಊಟವನ್ನು ಸವಿಯಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.