ADVERTISEMENT

ಸೃಜನಾತ್ಮಕ ಆವಿಷ್ಕಾರಗಳು

ಪೃಥ್ವಿರಾಜ್ ಎಂ ಎಚ್
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಜಿಯೊಪಾಲಿಮರ್‌ ಸಿಮೆಂಟ್‌ನಿಂದ ತಯಾರಿಸಿದ ಕಾಂಕ್ರೀಟ್ ಇಟ್ಟಿಗೆ ಬಗ್ಗೆ ಪ್ರಾಧ್ಯಪಕರಿಗೆ ವಿವರಿಸುತ್ತಿರುವ ವಿದ್ಯಾರ್ಥಿ.
ಜಿಯೊಪಾಲಿಮರ್‌ ಸಿಮೆಂಟ್‌ನಿಂದ ತಯಾರಿಸಿದ ಕಾಂಕ್ರೀಟ್ ಇಟ್ಟಿಗೆ ಬಗ್ಗೆ ಪ್ರಾಧ್ಯಪಕರಿಗೆ ವಿವರಿಸುತ್ತಿರುವ ವಿದ್ಯಾರ್ಥಿ.   

ಕಲುಷಿತಗೊಂಡ ಕೆರೆಗಳನ್ನು ಸ್ವಚ್ಛಗೊಳಿಸುವ ಗಿಡ, ಪರಿಸರ ಸ್ನೇಹಿ ಸಿಮೆಂಟ್ ಇಟ್ಟಿಗೆ, ರಸ್ತೆಯ ಗುಣಮಟ್ಟ ಹೆಚ್ಚಿಸುವ ಹೊಸ ಮಾದರಿಯ ಕಾಂಕ್ರೀಟ್ ಮಾದರಿ, ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸೂಚಿಸುವ ಯೋಜನೆ, ಕಟ್ಟಡಗಳ ತಾಜ್ಯ ಪುನರ್ಬಳಕೆ... ಹೀಗೆ ಹಲವು ವಿಧದ ಉಪಯುಕ್ತ ಯೋಜನೆಗಳು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ  ಅನಾವರಣಗೊಂಡಿದ್ದವು.

ಕಾಲೇಜಿನ ಎಂಜಿನಿಯರಿಂಗ್ ವಿಭಾಗದಲ್ಲಿ ಆಯೋಜಿಸಿದ್ದ ‘ಓಪನ್‌ ಡೇ’ ತಾಂತ್ರಿಕ ಮಾದರಿಗಳ ಪ್ರದರ್ಶನದಲ್ಲಿ, ವಿದ್ಯಾರ್ಥಿಗಳು ಹಲವು ಮಾದರಿಗಳನ್ನು ಪ್ರದರ್ಶಿಸಿದರು.

ಕೆರೆ ಮಾಲಿನ್ಯ ನಿಯಂತ್ರಣ
ಕೆರೆಗಳಿಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿರುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಪರಿಸರದ ತಾಪಮಾನ ಹೆಚ್ಚಾಗುವುದು, ಪಕ್ಷಿಗಳ ನೀರು ಸಿಗದಿರುವುದು ಮತ್ತು ಜಲಚರಗಳ ಮಾರಣಹೋಮಕ್ಕೆ ಕಾರಣವಾಗುತ್ತದೆ. ಹೀಗಾಗಿ, ವಿದ್ಯಾರ್ಥಿ ಸಚಿನ್ ತಂಡ ‘ಫ್ಲೋಟಿಂಗ್ ಐಲ್ಯಾಂಡ್ಸ್‌’ ಹೆಸರಿನ ಮಾದರಿಯೊಂದನ್ನು ತಯಾರಿಸಿದೆ.

ADVERTISEMENT

‘ಈ ಮಾದರಿಯಲ್ಲಿ ಬಳಸಿರುವ ಗಿಡಗಳು ನೀರಿನಲ್ಲೇ ಬೆಳೆಯುವ ಗುಣ ಹೊಂದಿದ್ದು, ಇದರ ಬೇರುಗಳು ಮಾಲಿನ್ಯಕ್ಕೆ ಕಾರಣವಾಗುವ ನೈಟ್ರೇಟ್ಸ್‌ ಮತ್ತು ಫಾಸ್ಪೇಟ್ಸ್‌ಗಳನ್ನು ಹೀರಿಕೊಳ್ಳುತ್ತವೆ. ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಸಚಿನ್‌.

‘ಈ ನೀರು ಬಳಕೆಗೂ ಲಭ್ಯವಾಗುತ್ತದೆ. ಜಲಚರಗಳ ಜೀವನಕ್ಕೂ ಯಾವುದೇ ತೊಂದರೆ ಆಗುವುದಿಲ್ಲ. ಪಕ್ಷಿ ಸಂಕುಲದ ಸಂತಾನೋತ್ಪತ್ತಿಗೆ ನೆರವಾಗುತ್ತದೆ. ಜತೆಗೆ ಕೆರೆಯ ಸೌಂದರ್ಯ ಹೆಚ್ಚಾಗುತ್ತದೆ.’ ಎಂದು ಅವರು ಹೇಳುತ್ತಾರೆ.

ಪರಿಸರ ಸ್ನೇಹಿ ಪಾಲಿಮರ್ ಕಾಂಕ್ರೀಟ್‌
ಕಟ್ಟಡ ನಿರ್ಮಾಣ ಕ್ಷೇತ್ರದ ಅಭಿವೃದ್ದಿ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಇದರಿಂದ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಸಿಮೆಂಟ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಬದಲಾಗಿ ಪರಿಸರದಲ್ಲಿ ಬಳಕೆಯಾಗದ ಉಳಿದಿರುವ ವ್ಯರ್ಥ ವಸ್ತುಗಳಿಂದ ತಯಾರಿಸಿದರ ಜಿಯೊ ಪಾಲಿಮರ್‌ ಕಾಂಕ್ರೀಟ್‌ ಅನ್ನು ಕಟ್ಟಡ ನಿರ್ಮಾಣದಲ್ಲಿ ಬಳಸಿಕೊಳ್ಳಬಹುದಾದ ಸಾಧ್ಯತೆಯನ್ನು ಅಭಿಲಾಷ್‌ ಮತ್ತು ತಂಡದವರು ಪ್ರಸ್ತುತ ಪಡಿಸಿದರು.

ಕೃತಕ ಮರಳು (ಎಂ–ಸ್ಯಾಂಡ್‌) ಮತ್ತು ಶೇ 65ರಷ್ಟು ಕಟ್ಟಡ ತಾಜ್ಯಗಳನ್ನೇ ಬಳಸಿ ಜಿಯೊ ಪಾಲಿಮರ್ ಸಿಮೆಂಟ್‌ ಅನ್ನು ಈ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಇದು ಕೂಡ ಸಿಮೆಂಟ್‌ನಂತೆ ದೃಢವಾಗಿದೆ. ಪರಿಸರ ಸ್ನೇಹಿಯೂ ಆಗಿರಲಿದೆ.

‘ಜೊಯೊ ಪಾಲಿಮರ್ ಸಿಮೆಂಟ್‌ ತಯಾರಿಕಾ ಪ್ರಕ್ರಿಯೆ ಸಾಮಾನ್ಯ ಸಿಮೆಂಟ್‌ ತಯಾರಿಕಾ ಪ್ರಕ್ರಿಯೆಗಿಂತ ದುಬಾರಿ ಎನಿಸಿದರೂ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿದರೆ ಅಗ್ಗದ ಬೆಲೆಯಲ್ಲೇ ಗ್ರಾಹಕರಗೆ ಪೂರೈಸಬಹುದು’ ಎನ್ನುತ್ತಾರೆ ಅಭಿಲಾಷ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.