ADVERTISEMENT

ಸೆಕೆಂಡ್ ಇನಿಂಗ್ಸ್‌ಗೆ ಸಜ್ಜಾಗಿದ್ದಾರೆ ಶ್ವೇತಾ

ಮಂಜುಶ್ರೀ ಎಂ.ಕಡಕೋಳ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಪತಿ ಮತ್ತು ಮಗಳೊಂದಿಗೆ ಶ್ವೇತಾ
ಪತಿ ಮತ್ತು ಮಗಳೊಂದಿಗೆ ಶ್ವೇತಾ   

ಹೆರಿಗೆ ನಂತರ ಚಿತ್ರರಂಗವನ್ನು ಮಿಸ್ ಮಾಡಿಕೊಳ್ತಿದ್ದೀರಾ?

ಖಂಡಿತ ಅನಿಸ್ತಾ ಇದೆ. ಕಲಾವಿದೆ ಆದ್ಮೇಲೆ ಮಗು ಆಗಲೀ ಅಥವಾ ಇನ್ನಿತರ ಯಾವುದೇ ಕೆಲಸಕ್ಕೆ ಬಿಡುವು ಪಡೆದರೂ ಸಿನಿರಂಗದಿಂದ ದೂರ ಇದ್ದರೆ ಖಂಡಿತಾ ಬೇಸರವಾಗುತ್ತೆ. ನಾವೆಲ್ಲಾ ಕನಸಿನ ಲೋಕದಲ್ಲಿ ಜೀವನ ಮಾಡೋರು. ನಮ್ಮ ಮನಸ್ಥಿತಿ ಸಾಮಾನ್ಯರಿಗಿಂತ ಹೆಚ್ಚು ಭಾವುಕವಾಗಿರುತ್ತದೆ. ನಮ್ಮನ್ನು ನಾವು ಬೇರೆ ಪಾತ್ರದಲ್ಲಿ ಬೇರೆ ಜೀವನದಲ್ಲಿ ಕಂಡುಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತೇವೆ. ಹಾಗಾಗಿ, ಈಗ ಸಿನಿರಂಗವನ್ನು ಮಿಸ್ ಮಾಡಿಕೊಳ್ತಾ ಇದ್ದೀನಿ.

ಮಗಳ ಬಗ್ಗೆ ಹೇಳಿ... ಏನು ಹೆಸರು ಇಟ್ರಿ?

ADVERTISEMENT

ಮಗಳಿಗೆ ಈಗ ಎಂಟು ತಿಂಗಳು. ಅಮ್ಮ... ಬಾ ಬಾ ಬಾ ಅಂತ ಕರೀತಾಳೆ. ಗಂಡನ ಹೆಸರು ಅಮಿತ್. ನನ್ನ ಹೆಸರು ಶ್ವೇತಾ ಎರಡನ್ನೂ ಸೇರಿಸಿ ಅಶ್ವಿತಾ ಅಂತ ಹೆಸರಿಟ್ಟಿದ್ದೀವಿ.

ಹೆರಿಗೆ ನಂತರದ ಮೇಕ್ ಓವರ್ ಬಗ್ಗೆ ಹೇಳಿ...

ಜಾಸ್ತಿ ಏನೂ ಮೇಕ್ ಓವರ್ ಮಾಡಿಕೊಂಡಿಲ್ಲ. ಯೋಗ ಮತ್ತು ಆಹಾರದ ಕಡೆಗೆ ಗಮನ ಹರಿಸಿದ್ದೀನಿ ಅಷ್ಟೇ. ಮಗುವಿನ ಎಲ್ಲ ಕೆಲಸಗಳನ್ನು ನಾನೇ ಮಾಡ್ತೀನಿ. ಮಗುವಿಗೆ ಇನ್ನೂ  ಹಾಲು ಕುಡಿಸ್ತಾ ಇದ್ದೀನಿ. ಇದನ್ನು ಎಂಜಾಯ್ ಮಾಡ್ತಾ ಇದ್ದೀನಿ.

ಬಾಣಂತಿ ಪಥ್ಯ ಫಾಲೋ ಮಾಡಲ್ವಾ?

ಬಾಣಂತಿಯರು ಹೇಗಿರಬೇಕು ಎಂಬ ಬಗ್ಗೆ ಕೆಲ ಮಿಥ್ಯೆಗಳಿವೆ. ಆದರೆ, ನಾನು ಯಾವುದಕ್ಕೂ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಹೊಟ್ಟೆ ದಪ್ಪಗಾಗದಂತೆ ಬಟ್ಟೆ ಕಟ್ಟಿಕೊಳ್ಳವುದಾಗಲೀ, ಬೆಲ್ಟ್ ಹಾಕಿಕೊಳ್ಳುವುದಾಗಲೀ ಮಾಡಿಲ್ಲ. ನಮ್ಮತ್ತೆ, ನಮ್ಮ ತಾಯಿ  ಅದು ಮಾಡು ಇದು ಮಾಡು ಅಂತ ಹೇಳ್ತಾ ಇರ್ತಾರೆ. ಆದರೆ, ಅವರ ಮಾತಿಗೆಲ್ಲಾ ಹೆಚ್ಚು ಗಮನ ಕೊಟ್ಟಿಲ್ಲ. ನನ್ನ ಪ್ರಕಾರ ಬಾಣಂತಿಯರಿಗೆ ಇಡೀ ದೇಹವನ್ನು ಹೀಲ್ ಮಾಡಿಕೊಳ್ಳಲು ಒಳ್ಳೆಯ ಪೌಷ್ಟಿಕ ಆಹಾರ ಅಗತ್ಯ. ಪಥ್ಯ ಮಾಡುತ್ತಿಲ್ಲ ಅಂತ ಕಣ್ಣಿಗೆ ಕಂಡದ್ದನ್ನೆಲ್ಲಾ ತಿನ್ನಬಾರದು. ಹೊರಗಿನ ಊಟಕ್ಕಿಂತ ಮನೆಯಲ್ಲಿ ಮಾಡಿದ ಅಡುಗೆ ತಿನ್ನುವುದು ಒಳ್ಳೆಯದು. ಎಲ್ಲಾ ಬಗೆಯ ಸೊಪ್ಪು ತರಕಾರಿ, ಬೇಳೆಕಾಳು, ನವಣೆ, ಬಾರ್ಲಿ ಇತ್ಯಾದಿ ಅಂಶಗಳು ಆಹಾರದಲ್ಲಿ ಇರುವಂತೆ ನೋಡಿಕೊಳ್ತೀನಿ.

ಫಿಟ್‌ನೆಸ್ ಹೇಗೆ ಕಾಪಾಡಿಕೊಳ್ತೀರಿ?

ಇತ್ತೀಚೆಗೆ ಯೋಗಾಭ್ಯಾಸ ಶುರು ಮಾಡಿದ್ದೀನಿ. ದೇಹ ದಣಿದಷ್ಟು ಎದೆಹಾಲು ಉತ್ಪಾದನೆ ಕಡಿಮೆ ಆಗುತ್ತೆ. ಸಣ್ಣ ಆಗೋದು ಇದ್ದಿದ್ದೆ. ಅದಕ್ಕಿಂತಲೂ ಮಗಳ ಆರೋಗ್ಯ ಮುಖ್ಯ. ಮಗಳು ಖುಷಿಯಾಗಿದ್ದರೆ ನನ್ನ ಮನಸು ಖುಷಿಯಾಗಿರುತ್ತದೆ. ನಮ್ಮ ಒಳಮನಸು ಖುಷಿಯಾಗಿದ್ದರೆ ಅದಕ್ಕಿಂತ ದೊಡ್ಡ ಸಂತಸ ಮತ್ತೊಂದಿಲ್ಲ. ಎಲ್ಲದಕ್ಕೂ ಮನಸೇ ಕಾರಣ. ಸುಮ್ಮನೆ ಮೇಲ್ನೋಟಕ್ಕೆ ನಗುತ್ತಾ ಫೇಸ್‌ಬುಕ್‌ನಲ್ಲಿ ಫೋಟೊ ಹಾಕಿಕೊಂಡು ನಾವು ಖುಷಿಯಾಗಿದ್ದೀವಿ ಅಂತ ತೋರಿಸಿಕೊಳ್ಳೋದಲ್ಲ.

ಹೊಸ ಹೇರ್‌ಸ್ಟೈಲ್?

ನಾನಂತೂ ಜಾಸ್ತಿ ಬ್ಯೂಟಿಪಾರ್ಲರ್‌ಗೆ ಹೋಗೋದಿಲ್ಲ. ಹೆರಿಗೆಯ ನಂತರ ಕೂದಲು ಟ್ರಿಮ್ ಮಾಡಿಸಿದ್ದಿಲ್ಲ. ಈಗ ಕೂದಲು ತುಂಬಾ ಉದ್ದ ಬೆಳೆದಿತ್ತು. ಗಂಡನ ಒತ್ತಾಯದ ಮೇರೆಗೆ ಬ್ಯೂಟಿಪಾರ್ಲರ್‌ಗೆ ಹೋಗಿದ್ದೆ. ಆವತ್ತು ಏಪ್ರಿಲ್ ಒಂದು. ಅವರು ನನ್ನ ಕೂದಲನ್ನು ಎತ್ತಿ ಹಿಡಿದಾಗ ಅದು ಕಟ್‌ ಮಾಡಿದಂತೆ ಕಾಣುತ್ತಿತ್ತು. ಸ್ವಲ್ಪ ಚಮಕ್ ಕೊಡೋಣ ಅಂತ ಸುಮ್ಮನೆ ಆ ಫೋಟೊವನ್ನು ಅಪ್‌ಲೋಡ್ ಮಾಡಿದೆ ಅಷ್ಟೇ. ಕೂದಲನ್ನು ಸ್ವಲ್ಪ ಟ್ರಿಮ್ ಮಾಡಿಸಿದ್ದೀನಿ.

ಒಪ್ಪಿಕೊಂಡಿರುವ ಎರಡೂ ಸಿನಿಮಾಗಳಲ್ಲಿ ನೀವೇ ನಾಯಕಿನಾ?

ಹೌದು. ಎರಡಲ್ಲೂ ನಾನೇ ನಾಯಕಿ. ಅಲ್ಲಲ್ಲ ನಾನೇ ಹೀರೋ. ಬೇರೆ ಯಾರೋ ಏಕೆ ಹೀರೋ ಆಗಬೇಕು. ನನ್ನ ಸಿನಿಮಾಕ್ಕೆ ನಾನೇ ಹೀರೋ ಅಂದುಕೊಳ್ತೀನಿ. ಎರಡೂ ವಿಭಿನ್ನ ಬಗೆಯ ಸಿನಿಮಾಗಳು. ಫಾರ್ಮಾಲಿಟಿ ಇನ್ನೂ ಮುಗಿದಿಲ್ಲ. ಅದೆಲ್ಲಾ ಮುಗಿದ ಮೇಲೆ ನಿಮಗೇ ಸಿನಿಮಾ ಹೆಸರು ಗೊತ್ತಾಗುತ್ತೆ. ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಬರೋಣ ಅನ್ನೋದು ನನ್ನಾಸೆ. ಸಿನಿಮಾಗಳ ಪಾತ್ರಕ್ಕಾಗಿ ನಾನು ಸಣ್ಣಗಾಗುವ ಅಗತ್ಯವಿದೆ. ಅರ್ಧ ಸಿನಿಮಾ ಸಣ್ಣ, ಮತ್ತರ್ಧ ಸಿನಿಮಾ ದಪ್ಪಗಿರಬೇಕು. ಹೀಗೆ ಹಲವಾರು ಟ್ರಾನ್ಸ್‌ಫಾರ್ಮೇಷನ್ ಇದೆ. ಮಗುವಿಗೆ ಒಂದು ವರ್ಷವಾದ ಮೇಲೆ ಚಿತ್ರೀಕರಣ ಶುರುವಾಗುತ್ತೆ.

ಮತ್ತೊಂದು ಮಗು?

ಖಂಡಿತವಾಗಿಯೂ ಆ ಬಗ್ಗೆ ಯೋಚಿಸಲು ಸಮಯ ಇಲ್ಲ. ಕಣ್ತುಂಬಾ ನಿದ್ದೆ ಮಾಡಿದ್ರೆ ಸಾಕಪ್ಪ ಅನಿಸ್ತಾ ಇದೆ. ನನಗೆ ಹೆಣ್ಣು ಮಗು ಆಗಿರೋದರಿಂದ ಮತ್ತೊಂದು ಮಗುವಿನ ಬಗ್ಗೆ ಯೋಚಿಸಲ್ಲ ಅನ್ಸುತ್ತೆ. ಬಹುಶಃ ಗಂಡು ಮಗು ಆಗಿದ್ದರೆ ಮತ್ತೊಂದು ಮಗುವಿನ ಬಗ್ಗೆ ಯೋಚಿಸುತ್ತಿದ್ದೆ ಅನಿಸುತ್ತೆ.

(ಮಗಳೊಂದಿಗೆ ಶ್ವೇತಾ)

ಮಲಯಾಳಂ ಪತ್ರಿಕೆಯೊಂದರಲ್ಲಿ ರೂಪದರ್ಶಿಯೊಬ್ಬರು ಮಗುವಿಗೆ ಎದೆಹಾಲು ಕುಡಿಸುತ್ತಿರುವ ಚಿತ್ರ ಪ್ರಕಟವಾಗಿತ್ತು. ಈ ಬಗ್ಗೆ ಏನನ್ನಿಸುತ್ತೆ?

ನೋಡಿದೆ. ಪತ್ರಿಕೆ ಮತ್ತು ಜನರ ಪ್ರತಿಕ್ರಿಯೆ ತುಸು ಅತಿರೇಕ ಅನಿಸ್ತು. ಎರಡೂ ತಪ್ಪು ಅನಿಸ್ತು. ಫೋಟೊ ತೆಗೆದಿರುವ ರೀತಿಯೂ ನನಗೆ ಇಷ್ಟವಾಗಲಿಲ್ಲ. ಉದ್ಯೋಗಸ್ಥ ತಾಯಂದಿರು ಹಾಲು ಕುಡಿಸಬೇಕಾಗಿ ಬಂದಾಗ ಅವರಿಗೆ ನಾವು ಸಹಾಯ ಮಾಡಬೇಕು. ಈ ಥರದ್ದನ್ನು ತೋರಿಸಲು ಕಲಾತ್ಮಕ ವೇದಿಕೆ ಇದೆ.

ಆದರೆ, ಇಂಥ ವಿಷಯವನ್ನು ಹೀಗೆ ತೋರಿಸಬೇಕಾಗಿರಲಿಲ್ಲ. ಹೆಣ್ಣುಮಕ್ಕಳು ಈ ಬಗ್ಗೆ ಮಾತನಾಡಲೇಬಾರದು ಅನ್ನೋದು ಕೂಡಾ ಸರಿಯಲ್ಲ. ಗರ್ಭಿಣಿಯರು ನಾಲ್ಕು ಗೋಡೆ ಮಧ್ಯೆ ಇರಬೇಕು ಅನ್ನೋದೂ ತಪ್ಪು.

‘ನನಗೂ ಇಂಥ ಆಫರ್ ಬಂದರೆ ಏನು ಮಾಡಬೇಕು’ ಅಂತ ನಾನು ನನ್ನ ಗಂಡ ಇಬ್ಬರೂ ಮಾತಾಡಿಕೊಂಡೆವು. ನಾನು ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡಿದ್ದು ನಿಮಗೆ ನೆನಪಿರಬಹುದು. ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಈ ಸಮಾಜಕ್ಕಿಲ್ಲ ಅನಿಸಿತು. ಮುಂದೆ ಇಂಥದ್ದು ಮಾಡಿದರೆ ನನಗೆ, ನನ್ನ ಗಂಡ ಮತ್ತು ಮಗಳಿಗೆ ಮಾತ್ರ ಅದು ಸೀಮಿತವಾಗಿರುತ್ತದೆ. ತಾಯಿಯಾಗಿ ಆ ಥರ ಪೋಸ್ ಕೊಡಿ ಅಂದರೆ ನನಗೆ ಕೊಡಲಾಗದು. ಅದರಲ್ಲಿ ನನಗೆ ಆಸಕ್ತಿಯೂ ಇಲ್ಲ. ನಮ್ಮ ಸಮಾಜಕ್ಕೆ ಅಂಥ ಚಿತ್ರಗಳ ಅಗತ್ಯವೂ ಇಲ್ಲ.

**

ಶ್ವೇತಾ ಸಮ್ಮರ್ ಟಿಪ್ಸ್

* ಬೇಸಿಗೆಯಲ್ಲಿ ಎಲ್ಲಾ ರೀತಿಯ ಹಣ್ಣುಗಳ ಜ್ಯೂಸ್ ತಪ್ಪದೇ ಕುಡೀತೀನಿ.

* ನನ್ನ ಜತೆ ಮಗಳೂ ಜ್ಯೂಸ್ ಕುಡೀತಾಳೆ.

* ಬೇಸಿಗೆಯಲ್ಲಿ ಚೆನ್ನಾಗಿ ನೀರು ಕುಡಿಯಬೇಕು. ದೇಹದಲ್ಲಿಯುವ ವಿಷಯುಕ್ತ ಅಂಶಗಳು ಹೊರಹೋಗಲು ಇದು ಸಹಾಯಕ.

* ಬಾಣಂತಿಯರು ಬಿಸಿನೀರು ಕುಡಿಯುವುದೊಳಿತು.

* ತಾಜಾ ಆಹಾರ ಸೇವಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.