ADVERTISEMENT

ಸೇವೆಗೂ ಸಂತೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ನಪರ ಸೇವಾ ಸಂಸ್ಥೆ ‘ಕಮ್ಯುನಿಟಿ ಸರ್ವಿಸಸ್‌ ಆಫ್‌ ಬೆಂಗಳೂರು’ (ಸಿಎಸ್‌ಬಿ) ಗುರುವಾರ ಚಾರಿಟಿ ಸಂತೆ ಆಯೋಜಿಸಿದೆ. ಒಂದು ದಿನ ನಡೆವ ಈ ಸಂತೆಯಲ್ಲಿ ಹಲವು ವಿಶೇಷತೆಗಳಿವೆ. ಸಂತೆಯಲ್ಲಿ ಸಂಗ್ರಹವಾಗುವ ಹಣವೆಲ್ಲಾ ಅವಶ್ಯಕತೆ ಇರುವವರಿಗೆ ಬಳಕೆಯಾಗಲಿದೆ ಎನ್ನುವುದು ಒಂದು ವಿಶೇಷವಾದರೆ, ಇಲ್ಲಿ ಸಿಗುವ ವಸ್ತುಗಳೆಲ್ಲಾ ಪರಿಸರ ಸ್ನೇಹಿ ಉತ್ಪನ್ನಗಳು ಎಂಬುದು ಮತ್ತೊಂದು ವಿಶೇಷ.

ಕಳೆದ 12 ವರ್ಷಗಳಿಂದ ಸಕ್ರಿಯವಾಗಿರುವ ಸಿಎಸ್‌ಬಿ ಸಂಸ್ಥೆಯಲ್ಲಿ ನೂರಕ್ಕೂ ಅಧಿಕ ಸದಸ್ಯರಿದ್ದಾರೆ. ಈ ಸಂಸ್ಥೆಯ ಸದಸ್ಯರು ಅನೇಕ ಗೃಹೋಪಯೋಗಿ ಉತ್ಪನ್ನಗಳು, ಹೋಂ ಮೇಡ್‌ ಕೇಕ್‌, ಜಾಮ್‌, ವಿವಿಧ ಬಗೆಯ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಈ ಬಾರಿ ನಡೆವ ಸಂತೆಯಲ್ಲಿ ಇವೆಲ್ಲವೂ  ಮಾರಾಟಕ್ಕೆ ಲಭ್ಯವಿದೆ. ಜತೆಗೆ ಹೊರಗಿನ ಸ್ವಯಂ ಸೇವಾ ಸಂಸ್ಥೆಗಳ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.

‘ಒಂದು ಸದುದ್ದೇಶಕ್ಕಾಗಿ ವರ್ಷಕ್ಕೊಮ್ಮೆ ಚಾರಿಟಿ ಸಂತೆ ಆಯೋಜಿಸುವುದು ಸಂಸ್ಥೆ ನಡೆಸಿಕೊಂಡು ಬಂದಿರುವ ಪದ್ಧತಿ. 12 ವರ್ಷಗಳಿಂದ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಸಂಸ್ಥೆಯಲ್ಲಿ ತಯಾರಿಸಿದ ಉತ್ಪನ್ನಗಳ ಜತೆಗೆ ಹೊರಗಿನವರ ವಸ್ತುಗಳ ಮಾರಾಟಕ್ಕೂ ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಈ ಸಂತೆಯಲ್ಲಿ 45 ಸ್ಟಾಲ್‌ಗಳನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ.

ಸ್ಟಾಲ್‌ಗಳಿಂದ ಬರುವ ಬಾಡಿಗೆ ಹಣ ಅಂಗವಿಕಲರ ಶಿಕ್ಷಣಕ್ಕೆ, ಅನಾಥರಿಗೆ, ಹಿರಿಯ ನಾಗರಿಕರಿಗೆ ಮೊದಲಾದವರ ಕಲ್ಯಾಣಕ್ಕೆ ಬಳಕೆಯಾಗಲಿದೆ. ಬೆಂಗಳೂರು, ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕೆಲವು ಸಂಸ್ಥೆಗಳು ಈ ಸಂತೆಯಲ್ಲಿ ಪಾಲ್ಗೊಂಡು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿವೆ. ಪರಿಸರ ಸ್ನೇಹಿ ಹಾಗೂ ಸಾವಯವ ಪದಾರ್ಥಗಳು ಸಂತೆಯ ಪ್ರಮುಖ ಆಕರ್ಷಣೆ’ ಎನ್ನುತ್ತಾರೆ ಸಂಸ್ಥೆಯ ನಿರ್ಮಲಾ ನಾಯಕ್‌.

‘ಚಾರಿಟಿ ಸಂತೆಯಲ್ಲಿ ಗೃಹೋಪಯೋಗಿ ವಸ್ತುಗಳು, ಅಡುಗೆ ಪದಾರ್ಥಗಳು, ಅಲಂಕಾರಿಕ ವಸ್ತುಗಳು, ಹಬ್ಬಕ್ಕೆ ಬೇಕಾದ ವಸ್ತುಗಳು, ಉಡುಗೊರೆಗಳು ಸಿಗುತ್ತವೆ. ದಸರಾ, ದೀಪಾವಳಿ ಹಬ್ಬ ಹತ್ತಿರದಲ್ಲಿದೆ. ಹಬ್ಬಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಇದು ಈ ಬಾರಿಯ ವಿಶೇಷ’ ಎಂದು ಮಾತು ಸೇರಿಸುತ್ತಾರೆ ಅವರು.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10.30ರಿಂದ ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.