ADVERTISEMENT

ಸೊಂಟದವರೆಗೆ ಬಂದಿದೆ ರವಿಕೆ

ಸುಮನಾ ಕೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ಸೊಂಟದವರೆಗೆ ಬಂದಿದೆ ರವಿಕೆ
ಸೊಂಟದವರೆಗೆ ಬಂದಿದೆ ರವಿಕೆ   

ಸೀರೆ ಉಟ್ಟಾಗ ಸೊಂಟ ಕಾಣಬೇಕು ಎಂಬುದು ಅಲಿಖಿತ ನಿಯಮ.  ಆದರೆ ಈಗ ಕೋರ್‌ಸೆಟ್‌ ರವಿಕೆ ಫ್ಯಾಷನ್‌ ಟ್ರೆಂಡ್‌ ಆಗಿದೆ. ಸೊಂಟದವರೆಗೂ ಚಾಚಿಕೊಳ್ಳುವ ಈ ರವಿಕೆ ಮಹಿಳೆಯರ ವಾರ್ಡ್‌ರೋಬ್‌ಗಳನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿವೆ.

ಕೋರ್‌ಸೆಟ್‌ ರವಿಕೆಗಳು ಮಾಮೂಲು ರವಿಕೆಗಳಂತೆ ಇರುವುದಿಲ್ಲ. ಉದ್ದಕ್ಕೆ ಸೊಂಟದವರೆಗೂ ಚಾಚಿಕೊಂಡಿರುತ್ತವೆ.ಈ ರವಿಕೆ ತೊಟ್ಟಾಗ ಸೀರೆ ಜೊತೆ ನಾರಿಯೂ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಾಳೆ. ಗ್ಲಾಮರಸ್‌ ನೋಟದ ಜೊತೆಗೆ ಅಲಂಕಾರದ ವಿಷಯದಲ್ಲಿ ಬದಲಾದ ಫ್ಯಾಷನ್‌ ಅಭಿರುಚಿಯನ್ನೂ ಇದು ಪ್ರತಿನಿಧಿಸುತ್ತದೆ.

ಇತ್ತೀಚೆಗೆ ಬಾಲಿವುಡ್‌ನ ನಟಿಯರಾದ ಶಿಲ್ಪಾಶೆಟ್ಟಿ, ಮಾಧುರಿ ದೀಕ್ಷಿತ್‌, ಮಲೈಕಾ ಅರೋರ, ಸೋನಂ ಕಪೂರ್‌ ಮುಂತಾದ ನಟಿಯರು ಖಾಸಗಿ ಕಾರ್ಯಕ್ರಮಗಳಲ್ಲಿ ಕೋರ್‌ಸೆಟ್‌ ಬ್ಲೌಸ್‌ ಹಾಗೂ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸಗಳ ಮಿಶ್ರಣದಂತಿರುವ ಕೋರ್‌ಸೆಟ್‌ ಬ್ಲೌಸ್‌ಗಳಲ್ಲಿ ವಿನ್ಯಾಸ ಮಾಡಲು ವಸ್ತ್ರ ವಿನ್ಯಾಸಕರೂ ಸಹ ಉತ್ಸಾಹ ತೋರುತ್ತಿದ್ದಾರೆ.

ADVERTISEMENT

ಅನೇಕ ಫ್ಯಾಷನ್‌ ಷೋಗಳಲ್ಲಿ ರೂಪದರ್ಶಿಯರು ಸೀರೆಗೆ ಇಂತಹ  ಬ್ಲೌಸ್‌ಗಳನ್ನೇ ತೊಟ್ಟಿದ್ದನ್ನು ನಾವು ಕಾಣಬಹುದು. ಇತ್ತೀಚೆಗೆ ಕಾಂಜಿವರಂ, ಬನಾರಸ್‌ನಂತಹ ಅಪ್ಪಟ ಸಾಂಪ್ರದಾಯಿಕ ಸೀರೆಗೂ ಕೋರ್‌ಸೆಟ್‌ ರವಿಕೆ ತೊಡುವುದು ಟ್ರೆಂಡ್‌ ಆಗುತ್ತಿದೆ.

ಈ ಕೋರ್‌ಸೆಟ್‌ ಬ್ಲೌಸ್‌ಗಳು ಆಧುನಿಕ ವಿನ್ಯಾಸಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಸೊಂಟದ ತನಕ ಉದ್ದ ಇರುವ ಈ ಬ್ಲೌಸ್‌ ರೇಷ್ಮೆ ಸೀರೆ, ಫ್ಯಾನ್ಸಿ ಸೀರೆ, ಕೈಮಗ್ಗ, ಕಸೂತಿ ಹೀಗೆ ಯಾವ ಸೀರೆಗಾದರೂ ಚೆನ್ನಾಗಿ ಒಪ್ಪುತ್ತವೆ. ಒಂದು ಬಾರಿ ಇಂತಹ ರವಿಕೆ ಹೋಲಿಸಿಕೊಂಡಲ್ಲಿ ಅದನ್ನು ಲೆಹೆಂಗಾ, ಮ್ಯಾಕ್ಸಿ ಸ್ಕರ್ಟ್‌, ಪ್ಯಾಂಟ್‌ ಸೀರೆ ಹಾಗೂ ಡೆನಿಮ್‌ ಜೀನ್ಸ್‌ಗಳಿಗೂ ತೊಟ್ಟುಕೊಳ್ಳಬಹುದು. ಇದು ಹೊಸ ಹೊಸ ವಿನ್ಯಾಸಗಳ ಪ್ರಯೋಗ ಹಾಗೂ ನವೀನ ಶೈಲಿಯಲ್ಲಿ ವಸ್ತ್ರ ತೊಡಲು ಬಯಸುವವರಿಗೆ ಮೆಚ್ಚಿನ ಆಯ್ಕೆ.

ತುಂಬು ತೋಳಿನ, ಹೈನೆಕ್‌ ಹಾಗೂ ಸ್ಲೀವ್‌ಲೆಸ್‌ ಕೋರ್‌ಸೆಟ್‌ ರವಿಕೆಗಳು ಫ್ಯಾನ್ಸಿ ಸೀರೆಗಳಿಗೆ ಚೆನ್ನಾಗಿ ಒಪ್ಪುತ್ತವೆ. ರೇಷ್ಮೆ, ಹತ್ತಿ ಸೀರೆ ಉಟ್ಟಾಗ ಸರಳ ವಿನ್ಯಾಸದ ಬ್ಲೌಸ್‌ಗಳು ಆಕರ್ಷಕವಾಗಿರುತ್ತವೆ. ಸಾದಾ ಸೀರೆಗೆ ತುಂಬ ವಿನ್ಯಾಸಗಳಿರುವ ಫ್ಯಾನ್ಸಿ ಕೋರ್‌ಸೆಟ್‌ ರವಿಕೆ ತೊಡುವುದು ಜಾಣತನ. ಹೈನೆಕ್‌ ರವಿಕೆಗಳನ್ನು ತೊಟ್ಟಾಗ ಹೆಚ್ಚು ಆಭರಣ ತೊಡುವ ಅವಶ್ಯಕತೆಯೂ ಇಲ್ಲ. ನಿರಾಭರಣ ಸುಂದರಿಯಾಗಿ ಮಿಂಚಬಹುದು.

ಫ್ಯಾನ್ಸಿ ಸೀರೆಗಳನ್ನು ಉಟ್ಟಾಗ ಬಂಗಾರದ ಬಣ್ಣದ ಕೋರ್‌ಸೆಟ್‌ ರವಿಕೆ ತೊಟ್ಟರೆ ಉತ್ತಮ. ಸೀರೆ ಸೆರಗನ್ನು ಸಪೂರವಾಗಿ ಪಿನ್‌ ಮಾಡುವುದು ಒಳ್ಳೆಯದು. ಉದ್ದ ತೋಳಿನ ಕೋರ್‌ಸೆಟ್‌ ತೊಡುವಾಗ ತೋಳಿಗೆ ನೆಟ್‌ ಬಟ್ಟೆ ಅಥವಾ ತೆಳುವಾದ ಬಟ್ಟೆ ವಿನ್ಯಾಸ ಇರಲಿ. ಆಗ ಪರಸ್ಪರ ವಿರುದ್ಧದ ಬಣ್ಣಗಳಿಂದ ಈ ರವಿಕೆಗಳಿಗೆ ಪ್ರಯೋಗ ಮಾಡಬಹುದು.

ಇನ್ನು ರವಿಕೆಗೆ ಹೊಟ್ಟೆ, ಸೊಂಟ, ಬೆನ್ನಿನ ಭಾಗ ಕಾಣುವಂತೆ ನೆಟ್‌ ಬಟ್ಟೆಗಳಿಂದ ಹೋಲಿಸಿಕೊಂಡಲ್ಲಿ ಇನ್ನಷ್ಟು ಆಕರ್ಷಕವಾಗಿರುತ್ತದೆ. ಉತ್ತಮವಾದ ಮೈಕಟ್ಟು ಇರುವವರು ಈ ರೀತಿಯ ವಿನ್ಯಾಸವನ್ನು ಪ್ರಯತ್ನಿಸಬಹುದು.

ಹೆಚ್ಚು ವಿನ್ಯಾಸವಿರುವ ಕೋರ್‌ಸೆಟ್‌ ತೊಟ್ಟಾಗ ಸೆರಗನ್ನು ಬೆನ್ನಿನ ಭಾಗದಿಂದ ಬಲಭಾಗದಲ್ಲಿ ಮುಂಭಾಗಕ್ಕೆ ತಂದು ದುಪಟ್ಟಾದಂತೆ ಹಾಕಿಕೊಳ್ಳಬಹುದು. ಫುಲ್‌ ನೆಕ್‌ ಇರುವ ಬ್ಲೌಸ್‌ ಹಾಕಿದಾಗ ಸೆರಗನ್ನು ಮುಂಭಾಗದಲ್ಲಿ ಎಡಗಡೆಯಲ್ಲಿ ಸಪೂರ ಪಿನ್‌ ಮಾಡಿ ಹಾಕಿಕೊಂಡಲ್ಲಿ ಚಂದ ಕಾಣುತ್ತದೆ. ಕೋರ್‌ಸೆಟ್‌ ತೊಟ್ಟಾಗ ಸೀರೆ ನೆರಿಗೆ ಹಾಕಿದ ಮೇಲೆ ಸೆರಗು ಹಾಕುವ ಮುನ್ನ ಎಚ್ಚರಿಕೆ ವಹಿಸಬೇಕು.

ಇಲ್ಲದಿದ್ದರೆ ಸೊಂಟದ ಹತ್ತಿರ ರವಿಕೆ ಮೇಲಕ್ಕೆ ಹತ್ತಿಕೊಂಡಂತೆ ಕಾಣುವುದರಿಂದ ಆಭಾಸವಾಗಬಹುದು. ಕೋರ್‌ಸೆಟ್‌ ರವಿಕೆಗಳು ಹೊಲಿಸುವಾಗ ಅಥವಾ ಖರೀದಿಸುವಾಗ ಅವುಗಳು ತಕ್ಕಮಟ್ಟಿಗೆ ಎಲ್ಲಾ ಬಟ್ಟೆಗಳಿಗೆ ತೊಡಲು ಸಾಧ್ಯವಾಗುವಂತೆ ಇರುವ ವಿನ್ಯಾಸದವುಗಳನ್ನು ಖರೀದಿಸಿದರೆ ಒಳ್ಳೆಯದು.

*
ತೀರ ದಪ್ಪ, ತೀರ ಸಣ್ಣ ಇರುವವರಿಗೆ ಕೋರ್‌ಸೆಟ್‌ ಬ್ಲೌಸ್‌ಗಳು ಚಂದ ಕಾಣಲ್ಲ. ಉತ್ತಮ ಮೈಕಟ್ಟು ಇರುವವರಿಗೆ ಚೆನ್ನಾಗಿ ಒಪ್ಪುತ್ತದೆ. ಈಗ ಮದುವೆಗೂ ಹೆಣ್ಣುಮಕ್ಕಳು ಕೊರ್‌ಸೆಟ್‌ ರವಿಕೆ ಹೋಲಿಸಿಕೊಳ್ಳುತ್ತಾರೆ. ರಿಸೆಪ್ಷನ್‌ಗಳಿಗೆ ಕೋರ್‌ಸೆಟ್ ಹೋಲಿಸಿಕೊಳ್ಳಿ ಎಂದು ನಾನು ಸಲಹೆ ನಿಡುತ್ತೇನೆ. ಈಚೆಗೆ ಫ್ಯಾನ್ಸಿ ಸೀರೆಗಳ ಜೊತೆಗೆ ಇಂಥ ರವಿಕೆಗಳನ್ನು ಯುವತಿಯರು ಹೆಚ್ಚು ಇಷ್ಟಪಡುತ್ತಿದ್ದಾರೆ.
–ಜ್ಯೋತಿ ಶಿವು, ಡಿಸೈನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.