ADVERTISEMENT

ಸೋನು ಸೋನೆ ಮಳೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಶನಿವಾರ ಇಳಿ ಸಂಜೆಯಿಂದಲೇ ಅರಮನೆ ಮೈದಾನದಲ್ಲಿ ಸೋನು ನಿಗಮ್ ಅಭಿಮಾನಿಗಳು ಸೇರುತ್ತಲೇ ಇದ್ದರು. 6.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 7 ಗಂಟೆಗೆ ಶುರುವಾಗುವ ಲಕ್ಷಣ ತೋರುತ್ತಿತ್ತು. ನಂತರದ ಒಂದೂವರೆ ಗಂಟೆ ಸಭಿಕರು ಸೋನುಗಾಗಿ ಕಾದು ಕಾದು, ಕಾಯ್ದರು. 

ಸುದರ್ಶನ ಸೇವಾ ಸಮಿತಿ ಮತ್ತು ನವಕರ್ನಾಟಕ ಸಮಾಜ ಸೇವಾ ಟ್ರಸ್ಟ್ ಮಕ್ಕಳ ಶಿಕ್ಷಣ ಹಾಗೂ ಭಾರತೀಯ ಭಾಷೆಯ ಬಳಕೆಗಾಗಿ ಟ್ಯುನ್ಸ್ ಆಫ್ ಟ್ರೆಶರ್ ಉತ್ಸವವನ್ನು ಆಯೋಜಿಸಿತ್ತು.

ಗಾಯಕಿ ಗುಂಜನ್ ಪಿಯಾ... ತೂ... ಅಬ್ ತೋ ಆಜಾ... ತಾರಕದಲ್ಲಿ ಆರಂಭಿಸಿದಾಗ ಕಾದವರ ನಿರೀಕ್ಷೆಗೆ ಧ್ವನಿ ತುಂಬಿದಂತಿತ್ತು. ಸೋನುಗಾಗಿ `ಶೋಲಾ ಸಾ ಮನ್ ಭಡಕೆ... ಆಕೆ ಭುಜಾ ಜಾ..~ ಎಂಬ ಹಾಡಿನಂತೆ ಸೋನು ಕಾದವರ ನಿರೀಕ್ಷೆಯನ್ನು ತಣಿಸಿದರು. ಭರ್ತಿ ಮೂರು ಗಂಟೆಗಳ ಹಾಡು, ಭಾವದ ಮಳೆಯಲ್ಲಿ ಮಿಂದೇಳುವಂತೆ ಮಾಡಿತು.

ADVERTISEMENT

ತಲೆದೂಗುವಂತೆ ಹಾಡು. ಹೆಜ್ಜೆ ಹಾಕುವಂತೆ ನಾದ. ಅಸಂಖ್ಯಾತ ಅಭಿಮಾನಿಗಳ ಹುಚ್ಚು ಹೊಳೆ.

ಆದರೂ ಸೋನು ಬಂದಿರಲಿಲ್ಲ. ಬರಗೆಟ್ಟವರು ಮುಂಗಾರಿಗೆ ಕಾಯ್ದಂತೆ ಈ ಗಾಯಕನಿಗಾಗಿ ಕಾಯುತ್ತಿದ್ದರು. ನೀಳವಾದ ಕತ್ತನ್ನು ಆಗಾಗ ಪ್ರವೇಶ ದ್ವಾರದತ್ತ ಹಾಯಿಸುತ್ತಲೇ ಇದ್ದರು.

ಗುಂಜನ್ ಧ್ವನಿ ಗುನುಗುತ್ತಲೇ ತಮ್ಮ ನೆಚ್ಚಿನ ಗಾಯಕನನ್ನು ಧೇನಿಸುತ್ತಿದ್ದರು. ಇಳಿ ಸಂಜೆಗೆ ಕಾವೇರಿತ್ತು. ನಿಶೆಯ ರಾತ್ರಿಗೆ ನಶೆ ಏರುತ್ತಿತ್ತು. ಸೋನು ತಂಡ ಬಂದಿಳಿದಾಗ 8 ಗಂಟೆ 30 ನಿಮಿಷ. ಸುಮ್ಮನೆ ಬರಲಿಲ್ಲ. ವಾದ್ಯಗಳೊಡನೆ ದಾಂಗುಡಿ ಇಟ್ಟರು.

ಆಗಲೇ ಸೋನು ನಿಗಮ್‌ನ ಕಿರು ಪರಿಚಯವನ್ನು ತೋರಿಸಿದರು. ಇದ್ದಕ್ಕಿದ್ದಂತೆ ಕತ್ತಲೆ ಆವರಿಸಿತು. ಮೋಡದ ಕಲ್ಪನೆ ಬರುವಂತೆ ಹೊಗೆ ಬಿಡಲಾಯಿತು. ಆ ವರ್ಣಗಳಲ್ಲೆಲ್ಲೋ ಇರುವ ಸೋನುವನ್ನು ನೆರೆದ ಜನ ಹುಡುಕ ತೊಡಗಿದರು.

ಮಂದ್ರದಲ್ಲಿ ಶುಕರ್ ಅಲ್ಲಾ... ಧ್ವನಿ ಅನುರಣಿಸತೊಡಗಿತು. ದೇವರಿಗೆ ಧನ್ಯವಾದ ಹೇಳುವ, ಪ್ರತಿಯೊಬ್ಬನ ಮನದೊಳಗಿರುವ ದೈವವನ್ನೇ ಮುಟ್ಟುವ ಧ್ವನಿ ಅದು. ಆ ಧ್ವನಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಲೇ ಇತ್ತು. ಶಾರೀರ ಎಲ್ಲೆಡೆ ಆವರಿಸಿಕೊಂಡರೂ ಶರೀರ ಮಾತ್ರ ಕಾಣುತ್ತಲೇ ಇರಲಿಲ್ಲ.

ಆದರೆ ಈ ಮಾಧುರ್ಯ ಎಲ್ಲೆಡೆ ಹರಡಿದ ನಂತರ ಇದ್ದಕ್ಕಿದ್ದಂತೆ ಅಬ್ಬರ ಕೇಳತೊಡಗಿತು. ಆ ಅಬ್ಬರದ ನಡುವೆ ಗಾಯನದ ಆರಾಧ್ಯ ದೈವ ಎಂಬಂತೆ ಸೋನು ನಿಗಮ್ ಕಡುಕೆಂಪು ಬಣ್ಣದ ಜಾಕೆಟ್, ಕಪ್ಪು ಬಣ್ಣದ ಟೀಷರ್ಟ್‌ನಲ್ಲಿ ಹಾಡುತ್ತಲೇ ವೇದಿಕೆಗೆ ಬಂದಿದ್ದರು.

ಶುಕರ್ ಅಲ್ಲಾ... ದ ನಂತರ ದೇವರ ನಂತರದ ದೇಶಕ್ಕಾಗಿ ಧ್ವನಿ ಎತ್ತಿದರು. ರಂಗ ದೇ ಬಸಂತಿ ಚೋಲಾ... ಮಾಹೆ ರಂಗ ದೇ ಬಸಂತಿ ಚೋಲಾ....~ ಹಾಡಿಗೆ ನೆರೆದವರು ಧ್ವನಿ ಗೂಡಿಸಿದರು.

ಯುವಶಕ್ತಿಯನ್ನು ಬಡಿದೆಬ್ಬಿಸುವ ಕೆಲಸ ಮಾಡಿದ `ಸರ್‌ಫರೋಷಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ...~ ಹಾಡನ್ನು ಹಾಡಿದರು.

ಮನರಂಜನೆಯನ್ನೇ ಬಯಸಿ ಬಂದವರಿಗೆ ತುಸು ನಿರಾಸೆ ಎನಿಸಿತ್ತು. ಮಾಧುರ್ಯವನ್ನು ಉಣಬಡಿಸುತ್ತಿದ್ದ ಸೋನು ನಿಗಮ್ ಆಗಾಗ ಅಬ್ಬರದ ಸಂಗೀತವನ್ನೂ ಉಣಬಡಿಸಿದರು. ಅವರ ಹಾಡಿಗೆ ಹೆಜ್ಜೆ ಹಾಕುತ್ತಿದ್ದವರಿಗೆ ಕಾಡಿಸಿ, ಪೀಡಿಸಿ, ಹಾಸ್ಯವನ್ನೂ ಉಣಬಡಿಸಿದರು.
ನೃತ್ಯಾಂಗನೆಯರನ್ನು ನೃತ್ಯಪಟುಗಳು ಎತ್ತಿಳಿಸುವ ಮುನ್ನವೇ ಹಾಡಿಗೊಂದು ಅಲ್ಪವಿರಾಮ ನೀಡುತ್ತಿದ್ದ ಸೋನು, ಸಭಿಕರತ್ತ ತುಂಟ ನಗೆ ಎಸೆಯುತ್ತಿದ್ದರು. ಹಾಡು ಮುಗಿದಾಗಲೆಲ್ಲ ಬೆಂಗಳೂರಿಗರನ್ನು ಹಾಡಿಹೊಗಳುತ್ತಿದ್ದರು. ಆದರೆ ಕನ್ನಡ ಹಾಡು ಹೇಳಲು ಇನ್ನಷ್ಟು ಕಾಯಿಸಿದರು.

ಕನ್ನಡಿಗರ ಮನ ಗೆಲ್ಲುವ ಮಾತುಗಳನ್ನು ಹೇಳಿದರು. `ಕನ್ನಡ ನನ್ನ ಎರಡನೆಯ ಮಾತೃಭಾಷೆ. ಹಿಂದಿ ಬಿಟ್ಟರೆ ನನ್ನನ್ನು ಪೋಷಿಸುವಷ್ಟು ಪ್ರೋತ್ಸಾಹ ನೀಡಿದ್ದು ಕನ್ನಡ. ಆ ನಿಟ್ಟಿನಲ್ಲಿ ಕನ್ನಡವೂ ನನಗೆ ತಾಯಿ ಭಾಷೆಯೇ..~ ಎಂದೆಲ್ಲ ಹೇಳಿದಾಗ ಕನ್ನಡಿಗರು ಕೈ ಬೀಸಿದ್ದರು. ಕಂಠ ಎತ್ತಿದ್ದರು.

ಆಗ ಅವರು ಕನ್ನಡ ಹಾಡಬಹುದು ಎಂದು ಕಿವಿ ತೆರೆದು ಕುಳಿತ ಕನ್ನಡಿಗರನ್ನು ಇನ್ನಷ್ಟು ಕಾಯಿಸಿದರು. `ಜೋಧಾ ಅಕ್ಬರ್~ ಚಿತ್ರದ `ಕೆಹೆನೆಕೊ ಜಷ್ನ್ ಎ ಬಹಾರೆ ಹೈ..~ ಹಾಡ ತೊಡಗಿದರು.

ಈ ನಡುವೆ ಸೋನು ನಿಗಮ್ ತಮ್ಮಿಡೀ ತಂಡದ ನಡುವೆ ಆಗಾಗ ತುಣುಕು ಜುಗಲ್‌ಬಂಧಿಗಳನ್ನು ಏರ್ಪಡಿಸಿ, ಅವರನ್ನು ಕೇಳುಗರಿಗೆ ಪರಿಚಯಿಸುತ್ತಿದ್ದರು.
ರಾತ್ರಿಯಾಗತ್ತಿದ್ದಂತೆ ಚಳಿಗಾಳಿ ಹೆಚ್ಚುತ್ತಿತ್ತು. ಆಗ ಮುಂಗಾರು ಮಳೆಯ `ಅನಿಸುತಿದೆ ಯಾಕೋ ಇಂದು~ ಕನ್ನಡಿಗರ ನಿರೀಕ್ಷೆಗೆ ತಂಪೆರೆಯುವಂತೆ ಮಾಡಿತು. ಆ ಹಾಡಿನ ಮೂಡಿನಿಂದಾಚೆ ಬರುವ ಮುನ್ನವೇ `ಈ ಸಂಜೆ ಯಾಕಾಗಿದೆ... ನೀನಿಲ್ಲದೆ..~ ಹಾಡು ಬಹುತೇಕರ ಚಪ್ಪಾಳೆ ಗಿಟ್ಟಿಸಿತು. ನಂತರದ `ನಿನ್ನಿಂದಲೇ...~ ಹಾಡು ಮತ್ತಿತರ ಹಾಡುಗಳು, ಮಾತುಗಳು ನೆರೆದವರಿಗೆ ರಸದೌತಣವನ್ನೇ ನೀಡಿದವು.

ಈ ನಡುವೆ...

ಸೋನು ನಿಗಮ್ ಕಾರ್ಯಕ್ರಮ ಆರಂಭಕ್ಕೆ ಮುಂಚೆ, ರಮ್ಯ ವಸಿಷ್ಠ ವೇದಿಕೆಯನ್ನೇರಿದ್ದರು. ವಿಳಂಬಕ್ಕೆ ಕಾರಣವನ್ನು ಹೇಳದೆ, ಸೋನು ಬರಲಿದ್ದಾರೆ, ಕಾರಿಂದಿಳಿದರು, ವೇದಿಕೆಯ ಬಳಿ ಬಂದರು ಎಂದೆಲ್ಲ ನಿರಂತರವಾಗಿ ಉಲಿಯುತ್ತಿದ್ದರು. ಅವರು ವೇದಿಕೆ ಹತ್ತುವ ಮುನ್ನ ಕಾರ್ಯಕ್ರಮದ ಪ್ರಾಯೋಜಕರಲ್ಲಿ ಒಬ್ಬರಾದ ಲಕ್ಕಿ ನಿರ್ಮಾಣ ತಂಡದ ಪ್ರೊಮೊ ವೀಕ್ಷಣೆಯನ್ನು ಘೋಷಿಸಿದರು.

ಕಾಯ್ದ ಜನತೆ ಇದನ್ನು ನಿರಾಕರಿಸುವಂತೆ ಕಿರುಚಿದರು. ಇದಕ್ಕೆ ಪ್ರತಿಯಾಗಿ ಇದನ್ನು ಹೊರತು ಪಡಿಸಿದರೆ, ನಿಮಗ್ಯಾವ ಆಯ್ಕೆಗಳೂ ಇಲ್ಲ ಎಂದು ಹೇಳಿದ ರಮ್ಯ ತುಸು ನಗುತ್ತ ಅಲ್ಲಿಂದ ತೆರಳಿದರು. ಭದ್ರತೆಗಿದ್ದ ಪೊಲೀಸರು ಮೇಲಧಿಕಾರಿಗಳ ಕುಟುಂಬದ ಮರ್ಜಿ ಕಾಯುವಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.