ADVERTISEMENT

ಸ್ನೇಹಾ ಸಿಹಿನುಡಿ

ಪ್ರಜಾವಾಣಿ ವಿಶೇಷ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST
ಸ್ನೇಹಾ ಸಿಹಿನುಡಿ
ಸ್ನೇಹಾ ಸಿಹಿನುಡಿ   

ಊರು, ಓದಿನ ಬಗ್ಗೆ ಹೇಳಿ?
ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಜೈನ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಓದುತ್ತಿದ್ದೇನೆ.

ಮಾಡೆಲಿಂಗ್ ಪ್ರವೇಶ ಮಾಡಿದ್ದು ಯಾವಾಗ? ಯಾಕೆ?
ಸುಮಾರು ಒಂದು ವರ್ಷವಾಯಿತು. ನೋಡುವುದಕ್ಕೂ ಚೆನ್ನಾಗಿದ್ದೇನೆ ಎಂಬ ಆತ್ಮವಿಶ್ವಾಸ ನನಗಿತ್ತು. ಜತೆಗೆ ಈ ಕ್ಷೇತ್ರದ ಬಗ್ಗೆ ಕುತೂಹಲವಿತ್ತು. ರಂಗಭೂಮಿಯಲ್ಲಿ ಅಭಿನಯಿಸುತ್ತಿದ್ದೆ. ಮಾಡೆಲಿಂಗ್ ಕೂಡ ಮಾಡಿ ಬಿಡೋಣ ಎನಿಸಿತು.

ರಂಗಭೂಮಿಯ ಅನುಭವ ಹೇಗಿತ್ತು?
ಚಿಕ್ಕವಳಿರುವಾಗ ರಂಗಶಂಕರಕ್ಕೆ ಹೋಗಿ ನಾಟಕ ನೋಡುತ್ತಿದ್ದೆ. ಅದೇ ಸ್ಫೂರ್ತಿಯಿಂದ ನಾನೂ ಯಾಕೆ ನಾಟಕದಲ್ಲಿ ಅಭಿನಯಿಸಬಾರದು ಎಂಬ ಯೋಚನೆ ಬಂತು. ಕಾರ್ಯಾಗಾರಕ್ಕೆ ಸೇರಿಕೊಂಡೆ. ಬೇರೆ ಬೇರೆ ಕಡೆ ನಾಟಕ ಪ್ರದರ್ಶನ ನೀಡಿದ್ದೆ. ರಂಗಭೂಮಿ ನಟನೆಗೆ ತವರೂರು. ಅಲ್ಲಿ ಹೇಳಿಕೊಡುವಷ್ಟು ಚೆನ್ನಾಗಿ ಬೇರೆ ಯಾರೂ ಹೇಳಿಕೊಡಲಾರರು. ಅಭಿನಯದ ಪಟ್ಟುಗಳನ್ನು ಕಲಿಸ್ದ್ದಿದೇ ರಂಗಭೂಮಿ.

ಸಿನಿಮಾ ಕ್ಷೇತ್ರದತ್ತ ಆಸಕ್ತಿ ಯಾಕೆ?
ಮೊದಲಿನಿಂದಲೂ ಸಿನಿಮಾದಲ್ಲಿ ಅವಕಾಶ ಬಂದಿತ್ತು. ಆದರೆ ಒಂದು ಒಳ್ಳೆಯ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಸ್ನೇಹಿತರೇ ಸೇರಿ ನಿರ್ದೇಶಿಸುತ್ತಿರುವ ಸಿನಿಮಾ ಇದು. ಪ್ರಕೃತಿಯ ಮಡಿಲಿನಲ್ಲಿಯೇ ಜಾಸ್ತಿ ಶೂಟಿಂಗ್ ನಡೀತಿದೆ. ಏನಾದರೂ ಹೊಸತನ ತರಬೇಕು ಎಂಬ ಉದ್ದೇಶದಿಂದ ಶುರುವಾದ ಸಿನಿಮಾ ಇದು.

ಓದಿಗೆ ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ?
ಕಾಲೇಜಿನಲ್ಲಿ ಎಲ್ಲರೂ ಬೆಂಬಲ ನೀಡುತ್ತಾರೆ. ಹಾಗಾಗಿ ಓದಿಗೆ ಅಷ್ಟೇನೂ ತೊಂದರೆಯಾಗಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಾಲೇಜಿನಲ್ಲಿ ಇರುತ್ತೇನೆ. ಮನೆಗೆ ಬಂದು ಏನಾದರೂ ಸ್ವಲ್ಪ ಓದಿ ಮತ್ತೆ ರಂಗಭೂಮಿಯತ್ತ ಹೋಗುತ್ತೇನೆ. ಈಗ ಸಿನಿಮಾ ಶೂಟಿಂಗ್ ಇರುವುದರಿಂದ ಅದರಲ್ಲಿ ಬ್ಯುಸಿಯಾಗಿರುತ್ತೇನೆ. ಈ ಕೆಲಸಗಳಿಂದ ರಾತ್ರಿ ಮಲಗಿದರೆ  ನೆಮ್ಮದಿಯ ನಿದ್ದೆ ಬರುತ್ತದೆ.

ನಟನೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳುತ್ತೀರಿ?
ರಂಗಭೂಮಿಯಲ್ಲಿ ಜಾಸ್ತಿ ಸಮಯ ಕಳೆಯುತ್ತೇನೆ. ಜತೆಗೆ ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುತ್ತೇನೆ. ಅವರು ಯಾವ ರೀತಿ ಅಭಿನಯಿಸುತ್ತಾರೆ ಎಂಬುದನ್ನು ಗಂಭೀರವಾಗಿ ಗಮನಿಸುತ್ತೇನೆ.

ನಿಮ್ಮಿಷ್ಟದ ನಟಿ ಯಾರು?
ರಾಧಿಕಾ ಪಂಡಿತ್.

ಮಾಡೆಲಿಂಗ್ ಬಿಟ್ಟು ಇತರೆ ಹವ್ಯಾಸವೇನು?
ಭರತನಾಟ್ಯ ಇಷ್ಟ. ಹತ್ತು ವರ್ಷದಿಂದ ಅಭ್ಯಾಸ ಮಾಡುತ್ತಿದ್ದೇನೆ. ಮನಸ್ಸಿಗೆ ರಿಲ್ಯಾಕ್ಸ್ ಕೂಡ ಸಿಗುತ್ತದೆ. ತುಂಬಾ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಆದರೆ ಇತ್ತೀಚೆಗೆ ಸಮಯದ ಅಭಾವದಿಂದ ನೃತ್ಯ ಮಾಡಲು ಆಗುತ್ತಿಲ್ಲ.

ಫ್ಯಾಷನ್ ಎಂದರೆ ನಿಮ್ಮ ಪ್ರಕಾರ?
ನಮಗೆ ಸರಿಯೆನಿಸಿದ ಬಟ್ಟೆ ಧರಿಸಬೇಕು.

ಮಾಡೆಲಿಂಗ್ ಕ್ಷೇತ್ರದಲ್ಲಿ ನಿಮಗೆ ಇಷ್ಟವಾಗದೇ ಇರುವುದು?
ಎಲ್ಲಾ ಕ್ಷೇತ್ರಗಳಲ್ಲೂ ಒಳಿತು, ಕೆಡುಕು ಇರುತ್ತದೆ. ನಾವು ಸರಿಯಾದ ಮಾರ್ಗದಲ್ಲಿ ನಡೆದರೆ ಕೆಡುಕು ನಮ್ಮನ್ನು ಹಿಂಬಾಲಿಸುವುದಿಲ್ಲ.

ಇಷ್ಟದ ಸಂಗತಿಗಳು ಯಾವುವು?
ಮಾಡೆಲಿಂಗ್‌ನಲ್ಲಿ ಕ್ರಿಯೇಟಿವಿಟಿ ಇರುತ್ತದೆ. ತುಂಬಾ ಜನರ ಪರಿಚಯವಾಗುತ್ತದೆ. ಹೊಸ ಶೈಲಿಗಳ ಪರಿಚಯವಾಗುತ್ತದೆ.

ನಿಮಗೆ ಇಷ್ಟವಾದ ಡಿಸೈನರ್ ಯಾರು?
ರೀತು ಬೇರಿ. ಅವರ ವಿನ್ಯಾಸದ ಉಡುಪುಗಳು ಬಣ್ಣವೈವಿಧ್ಯದಿಂದ ಕೂಡಿರುತ್ತವೆ. ಬಣ್ಣದ ದಿರಿಸು ಧರಿಸಿದರೆ ಮನಸ್ಸಿಗೂ ಖುಷಿಯಾಗುತ್ತದೆ.

ಯಾವ ರೀತಿಯ ಉಡುಗೆ ನಿಮಗೆ ಇಷ್ಟ?
ಜೀನ್ಸ್, ಟಿ-ಶರ್ಟ್ ಇಷ್ಟ. ಆದರೆ ನಾನು ಯಾವತ್ತೂ ನಮ್ಮ ಸಂಪ್ರದಾಯವನ್ನು ಮರೆತಿಲ್ಲ. ಜೀನ್ಸ್ ಹಾಕಿದರೂ ಕಿವಿಗೆ ಜುಮುಕಿ ಹಾಕುತ್ತೇನೆ.

ನಿಮ್ಮಿಷ್ಟದ ಫೋಟೊ ಯಾವುದು?
ಕಬ್ಬನ್‌ಪಾರ್ಕ್‌ನಲ್ಲಿ ಮುಂಜಾನೆ ಹೊತ್ತು ತೆಗೆದ ಫೋಟೊ ತುಂಬಾ ಇಷ್ಟ. ಯಾವುದೇ ರೀತಿಯ ಮೇಕಪ್ ಮಾಡಿಕೊಂಡಿರಲಿಲ್ಲ. ನನಗೆ ಅದು ಸದಾ ಅಚ್ಚುಮೆಚ್ಚು.

ಫೋಟೋಗ್ರಾಫರ್‌ಗೆ ನೀವು ಯಾವತ್ತಾದರೂ ಸಲಹೆ ನೀಡಿದ್ದಿದೆಯಾ?
ಇಲ್ಲ. ಆದರೆ ನನಗೆ ಸ್ಟುಡಿಯೋ ಬೆಳಕಿಗಿಂತ ನ್ಯಾಚುರಲ್ ಬೆಳಕು ಇಷ್ಟವಾಗುತ್ತದೆ.

ನಿಮ್ಮ ಮುಂದಿನ ಗುರಿ ಏನು?
ದೊಡ್ಡ ನಟಿಯಾಗಬೇಕು ಜತೆಗೆ ಯಶಸ್ವಿ ಉದ್ಯಮಿಯಾಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.