ADVERTISEMENT

ಸ್ವಪ್ನನಗರಿ ; ಬಿಸ್ಮಿಲ್ಲಾ ಖಾನರ ನಗರದ ನೆನಪುಗಳು

ಎಸ್.ಆರ್.ರಾಮಕೃಷ್ಣ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

`ಬಿಸ್ಮಿಲ್ಲಾ ಆಫ್ ಬನಾರಸ್' ಎಂಬ ಸಾಕ್ಷ್ಯಚಿತ್ರದಲ್ಲಿ ಶೆಹನಾಯಿ ವಾದ್ಯದ ಮೇರು ಕಲಾವಿದ ಬಿಸ್ಮಿಲ್ಲಾ ಖಾನರಿಗೂ ಬೆಂಗಳೂರಿಗೂ ಇರುವ ನಂಟಿನ ಪ್ರಸ್ತಾಪವಿದೆ. ಈ ಸಾಕ್ಷ್ಯಚಿತ್ರವನ್ನು ನೋಡಿದರೆ ನಗರದಲ್ಲಿನ ಮೇರು ಸಂಗೀತಗಾರರ ಕುರಿತೂ ಸಾಕ್ಷ್ಯಚಿತ್ರಗಳು ಬೇಕು ಎನ್ನಿಸುತ್ತದೆ.

ನಸ್ರೀನ್ ಮುನ್ನಿ ಕಬೀರ್ ಎಂಬಾಕೆ ಹಲವು ವರ್ಷದಿಂದ ಮುಂಬೈ ಚಿತ್ರರಂಗದಲ್ಲಿ ಹೆಸರು ಮಾಡಿದವರ ಜೀವನ, ಕೃತಿಗಳನ್ನು ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಇವರು ಇಂಗ್ಲೆಂಡ್‌ನ ಬಿಬಿಸಿಯ ವಾಹಿನಿಯೊಂದಕ್ಕೆ ಪ್ರತಿವರ್ಷ ಭಾರತೀಯ ಸಿನಿಮಾ ಉತ್ಸವವನ್ನು ಏರ್ಪಡಿಸುವಲ್ಲಿ ನೆರವಾಗುತ್ತಿದ್ದಾರೆ. ಗುರುದತ್, ಲತಾ ಮಂಗೇಷ್ಕರ್, ಶಾರುಖ್ ಖಾನ್, ಎ.ಆರ್. ರೆಹಮಾನ್ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ.

ಕೆಲವರ ಬಗ್ಗೆ ಸಾಕ್ಷ್ಯಚಿತ್ರಗಳನ್ನು ಕೂಡ ಮಾಡಿದ್ದಾರೆ. ಸಿನಿಮಾ ಕ್ಷೇತ್ರದಿಂದ ಆಚೆ ಗಮನಹರಿಸಿ ನಸ್ರೀನ್ ಮಾಡಿರುವ ಒಂದು ಸಾಕ್ಷ್ಯಚಿತ್ರದ ಸೀಡಿಯನ್ನು ಮೊನ್ನೆ ಕೊಂಡೆ. ಅದರ ಹೆಸರು `ಬಿಸ್ಮಿಲ್ಲಾ ಆಫ್ ಬನಾರಸ್'. ಶೆಹನಾಯಿ ವಾದ್ಯದ ಮೇರು ಕಲಾವಿದರಾದ ಬಿಸ್ಮಿಲ್ಲಾ ಖಾನರ ಬಗೆಗಿನ ಚಿತ್ರ.
ಬಿಸ್ಮಿಲ್ಲಾ ಖಾನರಿಗೂ, ಕನ್ನಡಕ್ಕೂ ಒಂದು ಕೊಂಡಿಯಿದೆ. ಸನಾದಿ ಅಪ್ಪಣ್ಣ ಚಿತ್ರ ತಯಾರಾದಾಗ ಅದಕ್ಕೆ ಶೆಹನಾಯಿ ನುಡಿಸಲು ಬಿಸ್ಮಿಲ್ಲಾ ಖಾನರೇ ಆಗಬೇಕು ಎಂದು ಚಿತ್ರದ ನಾಯಕರಾದ ರಾಜಕುಮಾರ್ ಪಟ್ಟು ಹಿಡಿದಿದ್ದರಂತೆ. ಅವರ ಆಸೆ ಈಡೇರಿತು.

ಕಾಶಿಯಿಂದ ಬಂದು ಬಿಸ್ಮಿಲ್ಲಾ ಖಾನರೇ ಹಾಡುಗಳಿಗೆ, ಹಿನ್ನೆಲೆ ಸಂಗೀತಕ್ಕೆ ಶೆಹನಾಯಿ ನುಡಿಸಿದರು. `ಕರೆದರೂ ಕೇಳದೆ' ಎಂಬ ಹಾಡಿನಲ್ಲಿನ ಅವರ ಕಲಾವಂತಿಕೆ ಹೊಸ ಪೀಳಿಗೆಯ ರೇಡಿಯೋ ಕೇಳುಗರಿಗೂ ಪರಿಚಯವಿದೆ.

ನಸ್ರೀನ್ ಅವರು ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಿದ್ದು 2002ರಲ್ಲಿ. ಹತ್ತು ವರ್ಷ ಯಾರೂ ಅದನ್ನು ವಿತರಿಸಲು ಸಿದ್ಧರಿರಲಿಲ್ಲ. ಈ ವರ್ಷ ಅದು ಕೊನೆಗೂ ಸೋನಿ ಸಂಸ್ಥೆಯಿಂದ ವಿತರಣೆಯಾಗಿ ಅಂಗಡಿಗಳಲ್ಲಿ ಲಭ್ಯವಿದೆ. ಹೀಗಾಗಲು ಎ.ಆರ್.ರೆಹಮಾನ್ ಕಾರಣ. ಹದಿನೈದು ನಿಮಿಷ ಈ ಚಿತ್ರವನ್ನು ನೋಡಿದ ರೆಹಮಾನ್ ಸೋನಿ ಸಂಸ್ಥೆಯವರಿಗೆ ಒಂದು ಮಾತು ಹೇಳಿದರಂತೆ. ನಸ್ರೀನ್ ಹೇಳುವಂತೆ, `ರೆಹಮಾನ್ ಹೇಳಿದ ಮೇಲೆ ಯಾರೂ ಇಲ್ಲ ಅನ್ನಲಾರರು.'

`ಬಿಸ್ಮ್ಲ್ಲಿಲಾ ಆಫ್ ಬನಾರಸ್' ಸಾಕ್ಷ್ಯಚಿತ್ರ ಆತ್ಮೀಯವಾಗಿ ಮೂಡಿಬಂದಿದೆ. ಬಿಸ್ಮ್ಲ್ಲಿಲಾ ಖಾನರ ಮಾತನ್ನೇ ಹೆಚ್ಚಾಗಿ ಆಧರಿಸಿ ತೆಗೆದ ಈ ಚಿತ್ರ ಕಾಲಾವಕಾಶ ಮತ್ತು ಹಣ ಇದ್ದಿದರೆ ಇನ್ನೂ ವಿಸ್ತಾರವಾಗಿ ಮೂಡಿಬಂದಿರುತ್ತಿತ್ತೇನೋ. ಅವರ ಬಗ್ಗೆ 1989ರಲ್ಲಿ ಎನ್‌ಎಫ್‌ಡಿಸಿ ಮಾಡಿದ ಸಾಕ್ಷ್ಯಚಿತ್ರ `ಮೀಟಿಂಗ್ ಎ ಮೈಲ್ ಸ್ಟೋನ್' ಕೂಡ ಚೆನ್ನಾಗಿದೆಯಂತೆ. ನಾನು ನೋಡಿಲ್ಲ. ಬಿಸ್ಮ್ಲ್ಲಿಲಾ ಖಾನರಿಗೂ ಕಾಶಿಗೂ ಇದ್ದ ಸಂಬಂಧ ಅದ್ಭುತ. ಬಾಲಾಜಿ ಮಂದಿರಕ್ಕೆ ಹೋಗಿ ಪ್ರತಿದಿನ ಶೆಹನಾಯಿ ನುಡಿಸಿ ಬರುತ್ತಿದ್ದ ಅವರಿಗೆ ಈ ಚಿತ್ರ ಸಿದ್ಧವಾಗುವ ವೇಳೆಗೆ 86 ವರ್ಷ ತುಂಬಿತ್ತು.

ಕಾಶಿಯನ್ನು ಬಿಬಿಸಿಯ ತಾಂತ್ರಿಕ ತಂಡದವರು ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಸಂದರ್ಶನವನ್ನೇ ಆಧರಿಸಿದ ಈ ಚಿತ್ರದಲ್ಲಿ ಬಿಸ್ಮಿಲ್ಲಾ ಖಾನರ ಸರಳತೆ ಪ್ರತಿಯೊಂದು ಮಾತಿನಲ್ಲೂ ಮಾರ್ದನಿಸುತ್ತದೆ. ಅವರು ಹೇಳಿದ ಕಥೆಯೊಂದು ತುಂಬಾ ಅದ್ಭುತವಾಗಿದೆ ಮತ್ತು ಭಾರತದಲ್ಲಿನ ಮತಧರ್ಮಗಳ ಸ್ನೇಹಪರ ಪೈಪೋಟಿಯನ್ನು ಸ್ವಾರಸ್ಯಕರವಾಗಿ ಹೇಳುತ್ತದೆ.

ಒಮ್ಮೆ ಮಹಾನ್ ಕಲಾವಿದರೆಲ್ಲ ಸೇರಿದಾಗ ಬಿಸ್ಮ್ಲ್ಲಿಲಾ ಖಾನರು ಒಂದು ಪ್ರಶ್ನೆ ಕೇಳಬಹುದೇ ಎಂದು ಅನುಮತಿ ಕೇಳಿದರಂತೆ. `ಯಾಕಾಗಬಾರದು' ಎಂದು ಎಲ್ಲರೂ ಇವರನ್ನು ಹುರಿದುಂಬಿಸಿದಾಗ, ಅವರು ಕೇಳಿದ ಪ್ರಶ್ನೆ: `ಹಿಂದೂ ಧರ್ಮದಲ್ಲಿ ಅತಿ ಶ್ರೇಷ್ಠ ವಿದ್ಯೆ ಯಾವುದು?' ಅಲ್ಲಿ ನೆರೆದಿದ್ದ ದೊಡ್ಡ ಸಂಗೀತಗಾರರೆಲ್ಲ ಉತ್ತರಿಸಿದರಂತೆ: `ಸಂಗೀತ ವಿದ್ಯೆ. ಅದರಲ್ಲೇನು ಅನುಮಾನ? ಅದಕ್ಕಿಂತ ಶ್ರೇಷ್ಠವಾದದ್ದು ಯಾವುದಾದರೂ ಉಂಟೆ?'.


ನಂತರ ಬಿಸ್ಮ್ಲ್ಲಿಲಾ ಖಾನರು ಕೇಳಿದ ಪ್ರಶ್ನೆ: `ನಿಮಗೆ ಉಸ್ತಾದ್ ಫಯಾಜ್ ಖಾನರ ಸಂಗೀತ ಏನನಿಸುತ್ತದೆ?' ಹಿಂದೂ ಸಂಗೀತಗಾರರೆಲ್ಲರೂ ಆಗ್ರಾ ಘರಾಣೆಯ ಆ ದಿಗ್ಗಜರನ್ನು ಹೋಗಳಿದರಂತೆ. ಹಾಗೆಯೇ ಇನ್ನೂ ಹಲವಾರು ಮುಸಲ್ಮಾನ ಕಲಾವಿದರ ಹೆಸರನ್ನು ಬಿಸ್ಮ್ಲ್ಲಿಲಾ ಖಾನರು ಪ್ರಸ್ತಾಪಿಸಿದರಂತೆ.  ಅಲ್ಲಿ ನೆರೆದಿದ್ದವರೆಲ್ಲ ಆ ಎಲ್ಲ ಕಲಾವಿದರನ್ನೂ ಮನಃಪೂರ್ವಕವಾಗಿ ಕೊಂಡಾದಿದರಂತೆ.

ಆಗ ಬಿಸ್ಮ್ಲ್ಲಿಲಾ ಖಾನರು ಅಂದರಂತೆ: `ಆದರೆ ನೋಡಿ ನಮ್ಮ ಇಸ್ಲಾಂ ಧರ್ಮದಲ್ಲಿ ಸಂಗೀತ ನಿಷಿದ್ಧ. ಅದು ಹರಾಮ್.' ಎಲ್ಲರೂ ಸುಮ್ಮನಾಗಿ ಬಿಟ್ಟರಂತೆ. ಬಿಸ್ಮ್ಲ್ಲಿಲಾ ಖಾನರಿಗೆ ಎಲ್ಲಿ ನೋವಾಗಬಹುದೋ ಎಂದು ಯಾರೂ ತುಟಿ ಪಿಟಿಕ್ಕೆನ್ನಲಿಲ್ಲ. ಆಗ ಅವರೇ ಹೇಳಿದರಂತೆ: `ನೋಡಿ, ಸಂಗೀತ ನಿಷಿದ್ಧವಾಗಿದ್ದ ನಮ್ಮಲ್ಲಿ ಎಂತೆಂಥ ಕಲಾವಿದರು ಬಂದರು. ಇನ್ನು ನಿಮ್ಮವರ ಹಾಗೆ ನಮ್ಮವರೂ ಸಂಗೀತ ಮಹಾನ್ ವಿದ್ಯೆ ಎಂದಿದ್ದರೆ ಇನ್ನೂ ಎಂಥ ಸಾಧನೆ ಮಾಡಿರುತ್ತಿದ್ದೆವೋ!'

ಈ ಸಾಕ್ಷ್ಯಚಿತ್ರ ನೋಡುತ್ತಿದ್ದಂತೆ ಒಂದು ಘಟನೆ ನೆನಪಾಗುತ್ತಿದೆ. 1993ರಲ್ಲಿ ಬೆಂಗಳೂರಿನಲ್ಲಿ ಮೊದಲ ಸಾರ್ಕ್ ಸಮ್ಮೇಳನ ನಡೆಯಿತು. ಏಳು ರಾಷ್ಟ್ರಗಳಿಂದ ಗಣ್ಯರಲ್ಲದೆ ಕಲಾವಿದರೂ ಬಂದಿದ್ದರು. ಬಿಸ್ಮಿಲ್ಲಾ ಖಾನರೂ ಕಾರ್ಯಕ್ರಮ ಕೊಡಲು ಬಂದಿದ್ದರು. ಅವರನ್ನು ಬರಮಾಡಿಕೊಂಡು ಹೋಟೆಲ್‌ಗೆ ಕರೆದೊಯ್ಯುವ ಕೆಲಸ ನನ್ನ ಸ್ನೇಹಿತರೊಬ್ಬರ ಪಾಲಿಗೆ ಬಂದಿತ್ತು. ವಿಂಡ್ಸರ್ ಮ್ಯೋನರ್‌ಗೆ ಉಸ್ತಾದರನ್ನು ಕರೆದೊಯ್ದೊಗ ಅವರು ಸಿಟ್ಟು ಮಾಡಿಕೊಂಡು ಅಲ್ಲಿ ಇರಲು ನಿರಾಕರಿಸಿದರಂತೆ.

ಕಾರಣ: ಅಲ್ಲಿನ ಬಾತ್ ರೂಮ್‌ನಲ್ಲಿ ಪಾಶ್ಚಿಮಾತ್ಯ ಶೈಲಿಯ ಕಮೋಡ್ ಮಾತ್ರ ಇದ್ದು, ದೇಸಿ ಕಕ್ಕಸು ಇಲ್ಲದಿರುವುದು! ಕೊನೆಗೆ ಅವರನ್ನು ಆ ಐಷಾರಾಮಿ ಹೋಟೆಲ್‌ನಿಂದ ಯಾವುದೋ ಕಡಿಮೆ ದರದ ಹೋಟೆಲ್‌ಗೆ ಕರೆದೊಯ್ದೊಗ ಕೋಪ ಶಮನವಾಯಿತಂತೆ. ಬಿಸ್ಮ್ಲ್ಲಿಲಾಖಾನರು ಖುಷಿಯಾದರಂತೆ.
`ಬಿಸ್ಮಿಲ್ಲಾ ಆಫ್ ಬನಾರಸ್' ನೋಡಿದಾಗ ಅನ್ನಿಸುವುದು: ಬೆಂಗಳೂರಿನ ಸಂಗೀತಗಾರರು, ಹಿರಿಯ ಸಾಧಕರ ಬಗ್ಗೆಯೂ ಇಂಥ ಸಾಕ್ಷ್ಯಚಿತ್ರಗಳು ಆಗಬೇಕು. 
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.