ADVERTISEMENT

ಹಚ್ಚೆ ಹುಚ್ಚು: ಪ್ರೀತಿಗೂ ಫ್ಯಾಷನ್‌ಗೂ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಮೂರು ವರ್ಷಗಳ ಹಿಂದಿನ ಮಾತು. ಬಾಲಿವುಡ್ ಬೆಡಗಿ ಕರೀನಾ ಶಾಹಿದ್ ತೆಕ್ಕೆಯಿಂದ ಜಾರಿ ಸೈಫ್ ಜತೆ ಓಡಾಡುತ್ತಿದ್ದಾರೆ ಎಂಬ ಗುಸುಗುಸು. ಅದರ ಹಿಂದೆಯೇ ಸೈಫ್ ಮೊಣಕೈ ಮೇಲೆ ಮನದನ್ನೆ ಕರೀನಾ ಹೆಸರು ಕಾಣಿಸಿಕೊಂಡಿತ್ತು. ಅಲ್ಲಿಗೆ ಆ ಜೋಡಿ ಗಾಢ ಪ್ರೀತಿಯಲ್ಲಿ ಬಿದ್ದಿದ್ದು, ತಿರುಗಾಡುತ್ತ ಇದ್ದಿದ್ದು ಎಲ್ಲವೂ ಖುಲ್ಲಂ ಖುಲ್ಲ.

`ಸೈಫೀನಾ~ ತರಹವೇ ಹಾಲಿವುಡ್‌ನ ಸೂಪರ್ ಜೋಡಿ ಬ್ರಾಡಂಜಲೀನಾ (ಬ್ರಾಡ್ ಪಿಟ್, ಅಂಜಲೀನಾ ಜೋಲಿ) ಪರಸ್ಪರರ ಹೆಸರು ಅಮರವಾಗಿರಲೆಂದು `ಟಾಟೂ~ ಕೆತ್ತಿಸಿಕೊಂಡಿದ್ದು ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಒಂದೂವರೆ ವರ್ಷದ ಹಿಂದೆ ರಣಬೀರ್‌ನಿಂದ ಬೇರೆಯಾದ ದೀಪಿಕಾ ಕೂಡ ಕುತ್ತಿಗೆ ಮೇಲೆ ಕೆತ್ತಿಸಿಕೊಂಡಿದ್ದ `ಆರ್~ ಅಕ್ಷರ ಇನ್ನೂ ಅಳಿಸಿಕೊಂಡಿಲ್ಲ.

ಈ `ಟಾಟೂ~ ಅರ್ಥಾತ್ ಹಚ್ಚೆ ಕಲೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದರೂ ಫ್ಯಾಷನ್ ಪಂಡಿತರ ಪ್ರಕಾರ `ಟಾಟೂ~ ಕ್ರೇಜ್ ಪಶ್ಚಿಮದ ದೇಶಗಳ ನಂತರ ನಿಧಾನವಾಗಿ ಭಾರತದಲ್ಲಿ ಹೆಚ್ಚಾಗಿದ್ದು 21ನೇ ಶತಮಾನದ ಮೊದಲ ದಶಕದಲ್ಲಿಯೇ.

ನವ ಯುವಕ/ಯವತಿಯರ ತೋಳು, ಬೆನ್ನು, ಕುತ್ತಿಗೆಯಲ್ಲಿ ಒಂದಾದರೂ `ಟಾಟೂ~ ಕಾಣದಿದ್ದಲ್ಲಿ ಅವರ `ಫ್ಯಾಷನ್ ಕೋಶಂಟ್ (fashion quotient) ಕೆಳಮಟ್ಟದಲ್ಲಿ ಇದೆ ಎಂದೇ ಅರ್ಥ.

ಬಾಲಕಿಯರು, ಹದಿಹರೆಯದ ಯುವತಿಯರ ಅಚ್ಚುಮೆಚ್ಚಿನ ಬಾರ್ಬಿ ಗೊಂಬೆಯ 2011ರ ಆವೃತ್ತಿಯಲ್ಲಿ ಟಾಟೂ ಕಾಣಿಸಿಕೊಂಡಿದ್ದು ಈಗ ವಿವಾದಕ್ಕೂ ಕಾರಣವಾಗಿದೆ.

ಯುವಜನರ ಈ `ಟಾಟೂ~ ಹುಚ್ಚಿನಿಂದಾಗಿಯೇ ಹಚ್ಚೆ ಹಾಕುವುದು ಉದ್ಯಮವಾಗಿ ಬೆಳೆಯುತ್ತಿದೆ. ಮಹಾನಗರಗಳ ಶಾಪಿಂಗ್ ಸ್ಟ್ರೀಟ್‌ಗಳ ಬದಿಯಲ್ಲಿ ಕೂರುವ ಹಚ್ಚೆ ಕಲಾವಿದರಿಂದ ಹಿಡಿದು `ಟಾಟೂ~ ಸ್ಟುಡಿಯೋ ತೆರೆಯುವ ವೃತ್ತಿಪರರತನಕ ಈಗ ಕೈತುಂಬ ಕೆಲಸ.

ಆ ಟಾಟೂಗಳಲ್ಲಾದರೋ ಏನೇನು ವಿಧ? ಏಸೊಂದು ಚಿತ್ತಾರ. ಪೂರ್ವದ ಜಪಾನ್, ಆಗ್ನೇಯ ಏಷ್ಯಾದ ಫಿಲಿಪ್ಪೀನ್ಸ್, ಇಂಡೋನೇಷ್ಯಾದ ವಿನ್ಯಾಸ, ಮಾಯನ್ನರು, ಅಜ್‌ಟೆಕ್‌ರಿಂದ ಂದ ಲ್ಯಾಟಿನ್ ಅಮೆರಿಕನ್ ವಿನ್ಯಾಸ, ಐರ‌್ಲೆಂಡ್, ಇಂಗ್ಲೆಂಡ್‌ನ ಜಾನಪದ ಕಲಾಜಾಲ... ಶುದ್ಧ ಆರ್ಯನ್ನರ ಹುಡುಕಾಟದಲ್ಲಿ ಭಾರತಕ್ಕೆ ಬಂದು ಸಾಂಪ್ರದಾಯಿಕ ಹಚ್ಚೆ ಹಾಕಿಸಿಕೊಂಡು ಹೋಗುವ ಜರ್ಮನ್ನರ ಹುಚ್ಚಾಟ.

ಟಾಟೂ ವಿನ್ಯಾಸ ಯಾವುದೇ ಇರಲಿ, ಹೇಗೇ ಇರಲಿ; ಅದನ್ನು ಹಾಕಿಸಿಕೊಳ್ಳುವವರಿಗೂ, ಹಾಕುವವರಿಗೂ ಭಲೇ ತಾಳ್ಮೆ ಬೇಕು. ಹಾಕಿದ ಟಾಟೂ ತೆಗೆಸಿಕೊಳ್ಳಬೇಕು ಅಂದರೆ ಅದರ ದುಪ್ಪಟ್ಟು ಸಂಯಮ ಬೇಕು. ನೋವೂ ಅನುಭವಿಸಬೇಕು. ಆದರೂ ಟಾಟೂ ಮೋಹ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳಿಲ್ಲ.

ವಿದೇಶಗಳಲ್ಲಿ ವಿಶ್ವದಾಖಲೆ ಮಾಡಲೆಂದೇ ಮೈತುಂಬ ಹಚ್ಚೆ ಹಾಕಿಸಿಕೊಳ್ಳುವ ಭೂಪರಿದ್ದಾರೆ. ಬಟ್ಟೆಯ ಅಲರ್ಜಿ ಎಂಬಂತೆ ಹಚ್ಚೆಯಲ್ಲಿ ಮೈಮುಚ್ಚಿಕೊಂಡು ಬಯಲಾದವರೂ ಇದ್ದಾರೆ.

ಇತಿಹಾಸ ಕೆದಕಿದಾಗ
ಇಂಥ `ಟಾಟೂ~ ಇತಿಹಾಸ ಕೆದಕಹೋದರೆ  ಅದು ಹಲವು ದೇಶಗಳ ಚರಿತ್ರೆಯ ಭಾಗವಾಗಿರುವುದು ಕಣ್ಣಿಗೆ ಬೀಳುತ್ತದೆ. ಬ್ರಿಟನ್ಸ್ ಎಂಬ ಪದದ ಅರ್ಥವೇ `ವಿನ್ಯಾಸಗಳ ಜನ~ ಎಂದು. ಉತ್ತರ ಬ್ರಿಟನ್‌ನ ಮೂಲ ನಿವಾಸಿಗಳಾಗಿದ್ದ `ಪಿಕ್ಟ್ಸ್~ ಎಂಬ ಜನಾಂಗದ ಹೆಸರಿನ ಶಬ್ದಶಃ ಅರ್ಥ ಸಹ `ಬಣ್ಣ ಬಳಿದುಕೊಂಡ ಜನ~ ಎಂದಾಗುತ್ತದೆ. ಇಂದಿಗೂ ಯುರೋಪ್‌ನಲ್ಲಿ ಬ್ರಿಟಿಷರೇ ಅತಿ ಹೆಚ್ಚು ಸಂಖ್ಯೆಯಲ್ಲಿ `ಟಾಟೂ~ ಹಾಕಿಸಿಕೊಳ್ಳುವುದು. ನಂತರದ ಸ್ಥಾನ ಜರ್ಮನ್ನರಿಗಿದೆ.

ಭಾರತದಲ್ಲಿ ಹುಡುಕುವುದಾದರೆ ರಾಜಸ್ತಾನ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಚ್ಚೆ ಹಾಕುವ ಜನಾಂಗಗಳೇ ಇವೆ. ಹೆಂಗಳೆಯರು ಪ್ರೀತಿಯಿಂದ ಕೈಗೆ ಅಲಂಕಾರ ಮಾಡಿಕೊಳ್ಳುವ ಮೆಹಂದಿಯೂ ಒಂದು ರೀತಿಯ `ಟಾಟೂ~ವೇ ಅಲ್ಲವೇ ?
ತೈವಾನ್, ಪಾಲಿನೇಷ್ಯಾ ಭಾಗದಲ್ಲಿ ವ್ಯಾಪಕವಾಗಿದ್ದ ಹಚ್ಚೆ ಕಲೆಯನ್ನು 17-18ನೇ ಶತಮಾನದ ನಾವಿಕರು ಯುರೋಪ್‌ಗೆ ಮತ್ತೆ ಪರಿಚಯಿಸಿದರು. `ಟಾಟೂ~ ಎಂಬ ಪದವೂ ಇಂಗ್ಲಿಷ್‌ಗೆ ಅಲ್ಲಿಂದಲೇ ಬಂತು.

ಆಧುನಿಕ ಯುಗದಲ್ಲಿ ಅಂದಚಂದಕ್ಕಾಗಿ ಹಚ್ಚೆ ಹಾಕಿಸಿಕೊಂಡರೆ ಪುರಾತನ ಜನ ತಮ್ಮ ಪ್ರಾಣಿ ಸಂಪತ್ತು ಸುರಕ್ಷಿತವಾಗಿರಲೆಂದು ಜಾನುವಾರುಗಳಿಗೆ ಹಚ್ಚೆ ಹಾಕಿ ಗುರುತು ಮಾಡುತ್ತಿದ್ದುದು, ಬುಡಕಟ್ಟು ಜನಾಂಗಗಳು ತಾವು ಗೆದ್ದ ಹೆಣ್ಣುಗಳಿಗೆ ಹಚ್ಚೆ ಹಾಕುತ್ತಿದ್ದುದು ಉಂಟು. ಕಳ್ಳತನ ಮಾಡಿದವರು, ಅಪರಾಧ ಮಾಡಿದವರ ಗುರುತು ಹಚ್ಚಲು ಸುಲಭವಾಗಲೆಂದು ಅವರ ಹಣೆಯ ಮೇಲೆ, ಮುಖದ ಮೇಲೆ ಹಚ್ಚೆ ಕೆತ್ತಿಸುತ್ತಿದ್ದ ಸಮುದಾಯಗಳು ಇದ್ದಿವೆ. 14ರಿಂದ 16ನೇ ಶತಮಾನದ ಅವಧಿಯಲ್ಲಿ ಗುಲಾಮರ ವ್ಯಾಪಾರ ಜೋರಾಗಿದ್ದಾಗ ತಾವು ಖರೀದಿಸಿದ ವ್ಯಕ್ತಿಗಳು ತಪ್ಪಿಸಿಕೊಂಡು ಹೋಗದಂತೆ ಮಾಲಿಕರು ಹಚ್ಚೆ ಮುದ್ರೆ ಹಾಕಿಸುತ್ತ್ದ್ದಿದರಂತೆ.

ನಾಜಿಗಳ ಕಾನ್ಸಂಟ್ರೇಷನ್ ಕ್ಯಾಂಪ್‌ಗಳಲ್ಲಿ ವ್ಯಕ್ತಿಗಳ ಗುರುತು ಪತ್ತೆಗಾಗಿ ಬಲವಂತವಾಗಿ ಹಚ್ಚೆ ಹಾಕಿಸುತ್ತಿದ್ದುದು ಇತ್ತಂತೆ. ರಷ್ಯಾದಲ್ಲಿ ಟಾಟೂ ಹಾಕಿಸಿಕೊಳ್ಳುವುದು `ಮಾಫಿಯಾ~ ಸಂಸ್ಕೃತಿಯ ಭಾಗ. ಹಿಪ್ಪಿಗಳು, ಪಾಪ್ ಪ್ರಿಯರಿಗೂ ಹಚ್ಚೆ ಅಂದರೆ ಕೊಂಚ ಜಾಸ್ತಿ ಪ್ರೀತಿ.

ಪಾಪ್ ಸಂಸ್ಕೃತಿ: ಕಳೆದ ದಶಕದಲ್ಲಿ ಸಿಕ್ಕಾಪಟ್ಟೆ ಹೆಚ್ಚಿದ ಪಾಪ್ ಸಂಸ್ಕೃತಿ, ಟಿಎಲ್‌ಸಿ ಚಾನೆಲ್‌ನಲ್ಲಿ ಪ್ರಸಾರವಾಗುವ ಮಿಯಾಮಿ ಇಂಕ್ ಮತ್ತು ಲಾಸ್‌ಏಂಜಲಿಸ್ ಧಾರಾವಾಹಿಗಳಿಂದ ಹಚ್ಚೆ ಮತ್ತಷ್ಟು ಜನಪ್ರಿಯವಾಗುತ್ತಿದೆ ಅಂತಾರೆ ಫ್ಯಾಷನ್ ತಜ್ಞರು.
ಚರಿತ್ರೆಯ ಕಥೆಗಳು ಏನೇ ಹೇಳಲಿ, ಟ್ರೆಂಡ್ ಹೇಗೇ ಇರಲಿ, `ಟಾಟೂ~ ಮಾತ್ರ ನಾನು ಪ್ರೀತಿಗೂ ಸೈ, ಫ್ಯಾಷನ್‌ಗೂ ಸೈ ಎನ್ನುವಂತಿದೆ.
 

`ಟಾಟೂ~ ಬ್ರಹ್ಮ

ಸಮೀಪದಚಿತ್ರದಲ್ಲಿರುವವರನ್ನು ಗಮನಿಸಿ. ಇವರು ಗಿರೀಶ್. ನಗರದ ಮುಂಚೂಣಿ ಟಾಟೂ ಕಲಾವಿದ. ಎರಡು ತೋಳುಗಳ ತುಂಬ ಒಂಚೂರೂ ಜಾಗವಿಲ್ಲದಂತೆ ಹಚ್ಚೆ ಹಾಕಿಕೊಂಡಿರುವ, ತೋಳಿಲ್ಲದ ಟಿ ಶರ್ಟ್, ಬರ್ಮುಡಾ ಹಾಕಿಕೊಳ್ಳುವ ಗಿರೀಶ್ ಮೇಲ್ನೋಟಕ್ಕೆ ಹಿಪ್ ಹಾಪ್ ಯುವಕರ ಪ್ರತಿನಿಧಿಯಂತೆ ಕಾಣುತ್ತಾರೆ.

`ಟಾಟೂ~ ಕಲಾವಿದರಾಗಿದ್ದು ಹೇಗೆ? ತಲೆಯ ಹಿಂದಿರುವ ಜುಟ್ಟು ಸ್ಟೈಲಿಗೆ ಬಿಟ್ಟಿದ್ದೇ ಅಂತ ಕೇಳಿದ್ರೆ ಗಮ್ಮತ್ತಾದ ಕಥೆ ಹೇಳುತ್ತಾರೆ. ಗಿರೀಶ್ ಮೂಲ ಹೆಸರು ಗಿರಿಧರ್ ವಿ. ಬಿ. ಬಿ ಅಂದರೆ ಬ್ರಹ್ಮಣಿಪುರ. ಚನ್ನಪಟ್ಟಣ ತಾಲ್ಲೂಕಿನ ಬ್ರಹ್ಮಣಿಪುರ ಇವರ ಹುಟ್ಟೂರು. ಇವರ ವಂಶಸ್ಥರು ಅಲ್ಲಿನ ದೇವಸ್ಥಾನದ ಅರ್ಚಕರು. ಗಿರೀಶ್ ಸಹ ಕೆಲ ಕಾಲ ಅರ್ಚಕ ವೃತ್ತಿ ಮಾಡಿಕೊಂಡಿದ್ದವರು. ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮಾಡಿದ ನಂತರ ಶಿಷ್ಟ ಓದಿಗೆ ಬೈ ಹೇಳಿದರು.

ಮಾಧ್ವ ಸಂಪ್ರದಾಯದಂತೆ ಮುದ್ರೆ ಹಾಕಿಸಿಕೊಳ್ಳಲು ಹೋದರೆ ಅವರ ಮೈ ಮೇಲೆ ಮುದ್ರೆ ನಿಲ್ಲುತ್ತಿರಲಿಲ್ಲ. ಆಗ ಕಂಡಿದ್ದು `ಟಾಟೂ~ ದಾರಿ. ಆಕಸ್ಮಿಕವಾಗಿ ಪರಿಚಿತರಾದ ರಷ್ಯಾದ ವ್ಯಕ್ತಿಯೊಬ್ಬರು ಇವರಿಗೆ `ಟಾಟೂ~ ಕಲೆಯ ಗುಟ್ಟನ್ನೆಲ್ಲ ಹೇಳಿಕೊಟ್ಟರು. ಹವ್ಯಾಸಕ್ಕಾಗಿ ಸ್ಕೆಚಿಂಗ್, ಡ್ರಾಯಿಂಗ್ ಮಾಡುತ್ತಿದ್ದುದು `ಟಾಟೂ~ ಕೈಗೂಡಿಸಿಕೊಳ್ಳುವಲ್ಲಿ ನೆರವಾಯಿತು. ಹಚ್ಚೆ ಕಲೆಯನ್ನೇ ವೃತ್ತಿಯಾಗಿ ಸ್ವೀಕರಿಸುವ ಹಂಬಲದಿಂದ ಒಂಬತ್ತು ವರ್ಷಗಳ ಹಿಂದೆ `ಟಾಟೂ~ ಸ್ಟುಡಿಯೊ ತೆರೆದರು.

ಟಾಟೂ ಅರ್ಥಾತ್ ಹಚ್ಚೆ ಕಲೆಯ ಬಗ್ಗೆ ಸಾಕಷ್ಟು ವಿವರ ಕಲೆ ಹಾಕಿರುವ ಗಿರೀಶ್ ನಮ್ಮ ಮಲೆನಾಡಿನಲ್ಲಿ ಹಚ್ಚೆಯೇ ವೃತ್ತಿಯಾಗಿರುವ ಜನಾಂಗವಿದೆ ಎನ್ನುತ್ತಾರೆ. ಹಚ್ಚೆ ಕುರಿತು ಸಂಶೋಧನೆ ನಡೆಸಿರುವ ವಿದ್ವಾಂಸರ ಜತೆಗೆಲ್ಲ ಚರ್ಚಿಸಿದ್ದಾರೆ.

`ಬೆಂಗಳೂರು ಒಂದರಲ್ಲೇ 40ಕ್ಕೂ ಹೆಚ್ಚು `ಟಾಟೂ~ ಸ್ಟುಡಿಯೊಗಳು ಇವೆ. ಆದರೆ, ಎಲ್ಲರೂ ವೃತ್ತಿಪರರಾಗಿರುವುದಿಲ್ಲ. `ಹೌ ಟು ಬಿಕಮ್ ಟಾಟೂ ಆರ್ಟಿಸ್ಟ್~ ಎಂಬಂತಹ ಸಿ.ಡಿ. ನೋಡಿ ಹಚ್ಚೆ ಹಾಕುವುದು ಕಲಿತವರು ಇದ್ದಾರೆ. ಈಗೆಲ್ಲ ಹಚ್ಚೆ ಹಾಕಲು ಮಷೀನ್ ಬಂದಿರುವುದರಿಂದ ಎಲ್ಲವೂ ಸುಲಭ ಅನಿಸುತ್ತದೆ. `ಟಾಟೂ~ ವಿನ್ಯಾಸಕ್ಕೆ ತಕ್ಕಂತೆ ಅದನ್ನು ಹಾಕಲು ಸಮಯ ಹಿಡಿಯುತ್ತದೆ. ಬೆನ್ನು ತುಂಬ ಟಾಟೂ ಹಾಕಲು 30-40 ಸಿಟ್ಟಿಂಗ್ ಬೇಕಾಗುತ್ತದೆ ~
`ಆದರೆ, ವೃತ್ತಿಪರರಲ್ಲದವರ ಬಳಿ ಹಚ್ಚೆ ಹಾಕಿಸಿಕೊಳ್ಳುವುದು ಯಾವಾಗಲೂ ಅಪಾಯಕಾರಿ. ಸ್ಟುಡಿಯೊಗಳಲ್ಲಿ ಸಾವಿರ, ಎರಡು ಸಾವಿರ ಛಾರ್ಜ್ ಮಾಡುತ್ತಾರೆ ಅಂತ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ 300 ರೂಪಾಯಿಗೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಅದು ಕೆಟ್ಟು ಹೋಗುತ್ತದೆ. ಸರಿ ಮಾಡ್ತೀರಾ ಅಂತ ಬರ‌್ತಾರೆ. ನಮ್ಮ ಸ್ಟುಡಿಯೊಕ್ಕೆ ವಾರದಲ್ಲಿ ಹತ್ತು ಜನ ಬೇರೆ ಕಡೆ ಹಚ್ಚೆ ಹಾಕಿಸಿಕೊಂಡು, ಇಲ್ಲಿ ರಿಪೇರಿಗಾಗಿ ಬರುತ್ತಾರೆ. ದುಡ್ಡು ಕೊಂಚ ಹೆಚ್ಚು ಅನ್ನಿಸಿದರೂ ಆರೋಗ್ಯ, ಶುಚಿತ್ವದ ದೃಷ್ಟಿಯಿಂದ ದೊಡ್ಡ ಸ್ಟುಡಿಯೊದಲ್ಲೇ ಹಚ್ಚೆ ಹಾಕಿಸಿಕೊಳ್ಳಿ~ ಎಂದು ಸಲಹೆ ನೀಡುತ್ತಾರೆ ಗಿರೀಶ್.

`ಭಾರತೀಯರ ಚರ್ಮಕ್ಕೆ ಬಣ್ಣದ ಹಚ್ಚೆ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ. ಅಲ್ಲದೇ ಹಾಕಿದ ಹಚ್ಚೆ ಅಷ್ಟು ಸುಲಭಕ್ಕೆ ಹೋಗುವುದಿಲ್ಲ. ಅಳಿಸುವಾಗ ತುಂಬ ನೋವಾಗುತ್ತದೆ. ಅಲ್ಲೊಂದು ಪ್ಯಾಚ್ ಉಳಿದುಕೊಳ್ಳುತ್ತದೆ. ಹಾಗಾಗಿ ನಮ್ಮ ಸ್ಟುಡಿಯೋಕ್ಕೆ ಬರುವ ಯುವಕರಿಗೆ ಪ್ರೇಮಿಯ ಹೆಸರು ಹಾಕಿಸಿಕೊಳ್ಳಬೇಡಿ. ಸಂಬಂಧ ಕಡಿದಲ್ಲಿ ಕಷ್ಟವಾಗುತ್ತೆ ಅಂತ ಎಚ್ಚರಿಸ್ತೀವಿ~.

ಬೆಂಗಳೂರಿನ ಇತರೆಲ್ಲ ಸ್ಟುಡಿಯೋಗಳಲ್ಲಿ `ಟಾಟೂ~ ವಿನ್ಯಾಸಕ್ಕೆ ತಕ್ಕಂತ ದರವಿದೆೆ. ಆದರೆ, ಗಿರೀಶ್ ಅವರ `ಬ್ರಹ್ಮ~ ಸ್ಟುಡಿಯೊದಲ್ಲಿ ಗಂಟೆಗೆ ಇಂತಿಷ್ಟು ಎಂದು ಛಾರ್ಜ್ ಮಾಡಲಾಗುತ್ತದೆ.

`ಈ ವಿಚಾರದಲ್ಲಿ ನಾವು ಅಂತರ್‌ರಾಷ್ಟ್ರೀಯ ಮಾನದಂಡ ಅನುಸರಿಸುತ್ತೇವೆ. ಅಲ್ಲದೇ `ಟಾಟೂ~ಗೆ ಬಳಸುವ ಉತ್ಕೃಷ್ಟ ಇಂಕ್ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತೇವೆ. ಹಾಗಾಗಿ ಬ್ರಹ್ಮ ಸ್ಟುಡಿಯೊ ದುಬಾರಿ ಅನಿಸಬಹುದು~ ಅಂತಾರೆ ಗಿರೀಶ್.

ಗಿರೀಶ್ ಅವರ `ಬ್ರಹ್ಮ~ ಸ್ಟುಡಿಯೊ ಚರ್ಚ್ ಸ್ಟ್ರೀಟ್‌ನ ಭೀಮಾ ರೆಸ್ಟೊರೆಂಟ್ ಎದುರಿಗೆ ಇದೆ. www.bramhatattoostudio.in ಮಾಹಿತಿ ಪಡೆಯಬಹುದು. ದೂ: 94482 00145, 98442 00145.


-

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.