ADVERTISEMENT

ಹರಟೆ ಶೈಲೇಂದ್ರ @ ಬೆಂಗಳೂರು

ಇ.ಎಸ್.ಸುಧೀಂದ್ರ ಪ್ರಸಾದ್
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಅಂದು ಬೆಂಗಳೂರಿನಲ್ಲಿ ಜೋರು ಮಳೆ ಏನೂ ಬಂದಿರಲಿಲ್ಲ. ಆದರೆ ಮಾತಿನಲ್ಲೇ ಕೊಚ್ಚಿಹೋಗುವಷ್ಟು ಮಳೆ ಸುರಿಸಲು ಮುಂಬೈನಿಂದ ಶೈಲೇಂದ್ರ ಸಿಂಗ್ ಬಂದಿದ್ದರು. ಬದುಕಿನ ಅರ್ಥ , ಜೀವನ ನಡೆಸಬೇಕಾದ ರೀತಿಯಿಂದ ಹಿಡಿದು ಬಾಲಿವುಡ್, ಬ್ಯುಸಿನೆಸ್, ಕ್ರಿಕೆಟ್, ಸಂಗೀತ ಎಲ್ಲದರ ಸುತ್ತ ಅವರ ಮಾತು ಗಿರಕಿ ಹೊಡೆಯಿತು. ‘ಪರ್ಸೆಪ್ಟ್’ ಎಂಬ ಕಂಪೆನಿಯನ್ನು ಹುಟ್ಟುಹಾಕಿರುವ ಶೈಲೇಂದ್ರ ಸಿಂಗ್ ಹತ್ತಾರು ಕಂಪೆನಿಗಳನ್ನು ನಡೆಸುತ್ತಾರೆ.

ಒಂದಿಷ್ಟು ಸಿನಿಮಾಗಳನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದಾರೆ. ಇದೀಗ ಪುಸ್ತಕ ಬರೆದು ಲೇಖಕರೂ ಆಗಿದ್ದಾರೆ. ತಮ್ಮ ಪುಸ್ತಕ ‘F?@k KNOWS’ ಬಿಡುಗಡೆ ನೆಪದಲ್ಲಿ ಶೈಲೇಂದ್ರ ಸಿಂಗ್ ಒಂದಷ್ಟು ಹೊತ್ತು ಹರಟಿದರು. ಅಯ್ಯೋ ಎಷ್ಟು ದೂರಾರೀ ನಿಮ್ಮ ಊರಿನ ವಿಮಾನ ನಿಲ್ದಾಣ, F?@k. ಇಲ್ಲಿನ ಟ್ರಾಫಿಕ್ ಬೇರೆ ವಿಚಿತ್ರ. ಇಲ್ಲೇ ಇದೆ ಹೋಗಬೇಕಾದ ಸ್ಥಳ ಎಂದರೂ ಒನ್ ವೇಗಳಲ್ಲಿ ಸುತ್ತುತ್ತಲೇ ಅರ್ಧ ಊರು ನೋಡಿಯಾಯಿತು. ಹ...ಹ...ಹ... ಎನ್ನುತ್ತಲೇ ಅವರು ಮಾತಿಗಿಳಿದರು.

ಜೀವನ ನಾವು ಅಂದುಕೊಂಡಂತಿರದು. ಇರುವಷ್ಟು ದಿನ ನಾವು ಪೂರ್ಣ ಪ್ರಮಾಣವಾಗಿ ಬದುಕಬೇಕು. ನಮ್ಮ ಬದುಕಿನ ಪ್ರತಿ ಕ್ಷಣವನ್ನೂ ಅನುಭವಿಸಬೇಕು. ಬಹಳಷ್ಟು ಮಂದಿ ಹೇಳದ ಸತ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಟ್ಟಿದ್ದೇನೆ. ಇದು ಫಿಲಾಸಫಿಯಲ್ಲ, ವ್ಯಕ್ತಿತ್ವ ವಿಕಸನವೂ ಅಲ್ಲ, ವಿಡಂಬನೆ, ಹಾಸ್ಯ ಹೀಗೆ ಏನು ಎಂದು ಹೇಳಲಾರೆ. ಆದರೆ ಓಶೋ ಅವರ ತತ್ವಗಳಲ್ಲಿ ನನಗೆ ಬಲವಾದ ನಂಬಿಕೆ ಇದೆ. F?@k ಎಂಬ ಪದವನ್ನು ಅವರು ವಿವರಿಸಿರುವ ರೀತಿ ನಿಜಕ್ಕೂ ಮೋಹಕ. ಆ ಪದವೇ ಈ ಪುಸ್ತಕ ಬರೆಯಲು ಪ್ರೇರಣೆ. ಮೊದಲ ಪ್ರಯತ್ನದಲ್ಲಿ ಅನಿಸಿದ್ದನ್ನು ಹೇಳಿಕೊಂಡಿದ್ದೇನೆ, ಅಷ್ಟೆ. ಆದರೆ ಅದಕ್ಕೆ ಸಿಕ್ಕ ಯಶಸ್ಸು ನಿಜಕ್ಕೂ F?@king ಅದ್ಭುತ. ಅಂತರಜಾಲದಲ್ಲಿ ಓದಿದವರ ಸಂಖ್ಯೆ ಬಹಳಷ್ಟು ದೊಡ್ಡದು. ಚೇತನ್ ಭಗತ್‌ಗಿಂತ ನನ್ನ ಪುಸ್ತಕ ಓದುತ್ತಿರುವವರ ಸಂಖ್ಯೆ ದೊಡ್ಡದು ಎಂದು ಹೇಳಲು ಹೆಮ್ಮೆಯಾಗುತ್ತಿದೆ. 4.5ರಷ್ಟು ಗರಿಷ್ಠ ರೇಟಿಂಗ್ ಸಿಕ್ಕಿದೆ' ಎಂದು ಶೈಲೇಂದ್ರ ಓತಪ್ರೋತವಾಗಿ ಹೇಳಿಕೊಂಡರು.

‘F?@k KNOWS’ ಪುಸ್ತಕವನ್ನು ಹೀಗೇ ಓದಬೇಕು ಎಂದು ಒಂದಿಷ್ಟು ಸಲಹೆಗಳನ್ನು ಅವರು ನೀಡಿದ್ದಾರೆ. ನಿತ್ಯವೂ ಕಮೋಡ್ ಮೇಲೆ ಕುಳಿತು ದಿನಕ್ಕೆ ಒಂದು ಭಾಗವನ್ನು ಮಾತ್ರ ಓದಬೇಕೆಂಬುದೂ ಒಂದು. ಈ ಪುಸ್ತಕ ಬರೆಯಲು ಶೈಲೇಂದ್ರ ಸಿಂಗ್ ಅವರಿಗೆ ಒಂದು ವರ್ಷ ಮೂರು ತಿಂಗಳು ಹಿಡಿಯಿತಂತೆ.

ಹತ್ತಾರು ಕಂಪೆನಿಗಳು, ಜಾಹೀರಾತು, ಸಿನಿಮಾ, ಕ್ರಿಕೆಟ್ ಎನ್ನುತ್ತಲೇ ದೇಶ ವಿದೇಶ ಸುತ್ತುವ ಶೈಲೇಂದ್ರ ಅವರಿಗೆ ಸದಾ ಇ–ಮೇಲ್ ಸಂದೇಶ ರವಾನಿಸುವ ಫೋನ್‌ಗಳಾಗಲೀ, ಫಾಲೋವರ್ಗಳನ್ನು ಕೊಡುವ ಫೇಸ್‌ಬುಕ್ ಖಾತೆಯಾಗಲೀ ಇಲ್ಲ. ಭಾರತದ ಇಂಡಿಯನ್ ಪ್ರೀಮಿಯರ್‌ ಕ್ರಿಕೆಟ್‌ ಲೀಗ್‌ ಹಾಗೂ ತಮ್ಮದೇ ಒಡೆತನದ ಸಂಗೀತ ಹಾಗೂ ನೃತ್ಯ ಸಂಸ್ಥೆ ‘ಸನ್ ಬರ್ನ್’ ಇವೆರಡು ಜಗತ್ತಿನ 80 ದೇಶಗಳನ್ನು ತಲುಪಿವೆ ಎಂದರೆ ಶತಕೋಟಿ ಜನಸಂಖ್ಯೆ ಮೀರಿದ ಭಾರತೀಯರಿಗೆ ಅವಮಾನದ ಸಂಗತಿ. ಅತಿ ಬುದ್ಧಿವಂತರನ್ನು ಹೊಂದಿರುವ ಭಾರತೀಯರ ಕೈಯಲ್ಲಿ ಮೊಬೈಲ್ ಹಾಗೂ ಇಂಟರ್‌ನೆಟ್ ಬಂದಿದ್ದರಿಂದ ಅವರ ಬುದ್ಧಿಮಟ್ಟವನ್ನು ಕಸಿದುಕೊಂಡಂತಾಗಿದೆ. ಪ್ರತಿಯೊಂದಕ್ಕೂ ಅಂತರಜಾಲವನ್ನೇ ನೆಚ್ಚಿಕೊಂಡು ತಮ್ಮ ಸ್ವಂತಿಕೆ ಹಾಗೂ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ’ ಎಂಬುದು ಅವರ ವಾದ.

ಮೊನ್ನೆ ಭಾರೀ ಗಲಾಟೆಯಾಯಿತಲ್ಲ, ಮುಜಾಫ್ಫರ್‌ನಗರ ಅಲ್ಲಿಯವರು ತಾವು, ಜಾಟ್ ಸಮುದಾಯಕ್ಕೆ ಸೇರಿದವರು ಎನ್ನುತ್ತಲೇ ತಮ್ಮ ಪ್ರೊಫೈಲ್‌ ಬಿಚ್ಚಿಟ್ಟರು– ‘ದ್ವಿತೀಯ ದರ್ಜೆಯಲ್ಲಿ ವಾಣಿಜ್ಯ ಪದವಿ ಪಡೆದೆ. ಮುಂಬೈನ ತಾಜ್ ಹೋಟೆಲ್‌ನಲ್ಲಿರುವ ಶಾಮಿಯಾನ ಎಂಬ ಕಾಫಿಶಾಪ್ನಲ್ಲಿ ಸ್ಟಿವರ್ಡ್ ಕೆಲಸದ ಮೂಲಕ ವೃತ್ತಿ ಜೀವನ ಆರಂಭಿಸಿದೆ. ಆಗ ನನ್ನ ಸಂಬಳ  ₨ 1280. ಆಮೇಲೆ ಆರಂಭಿಸಿದ ಕಂಪೆನಿ ಪರ್ಸೆಪ್ಟ್. ಮಾಧ್ಯಮ, ಸಿನಿಮಾ, ಕ್ರಿಕೆಟ್, ಜಾಹೀರಾತು ಹೀಗೆ ಒಂದಕ್ಕೊಂದು ಸಂಪರ್ಕ ಬೆಸೆಯುತ್ತಾ ಹೋದೆ. ಐಶ್ವರ್ಯ ರೈ ಕೊ ಸಡಕ್ ಸೇ ಉಠಾಯ ಮೈನೆ (ಐಶ್ವರ್ಯಾ ರೈ ಅವರನ್ನು ರಸ್ತೆಯಿಂದ ಮೇಲೆತ್ತಿದ್ದೇ ನಾನು). ಕೇವಲ ಐದು ಸಾವಿರ ರೂಪಾಯಿ ಸಂಭಾವನೆ ಪಡೆದು ಮೂರು ಜಾಹೀರಾತುಗಳಲ್ಲಿ ಆಕೆ ನಟಿಸಿದಳು’.

‘ಹನುಮಾನ್’ ಎಂಬ ಅನಿಮೇಷನ್ ಸಿನಿಮಾ ಹಾಗೂ ‘ಪೇಜ್-3’ ಎಂಬ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಿಸಿದ ಶೈಲೇಂದ್ರ ಸಿಂಗ್‌ಗೆ ತಮ್ಮ ಉಸಿರಿನ ಮೇಲೆ ಬಲವಾದ ನಂಬಿಕೆ. ‘ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಅರಿವಿಗೆ ಬರುವ ನಮ್ಮ ಉಸಿರೇ ನಾವು ಬದುಕಿರುವ ಗ್ಯಾರೆಂಟಿ. ನಾನೆಂದೂ ದೇವರನ್ನು ನೋಡಿದವನಲ್ಲ. ಮೊರೆ ಇಟ್ಟಾಗಲೂ ಆತ ಬರಲಿಲ್ಲ. ನನ್ನ ತಂದೆಗೆ ಕ್ಯಾನ್ಸರ್ ಆಗಿ ಮೃತಪಟ್ಟಾಗ ನಾನೂ ಕುಗ್ಗಿ ಹೋಗಿದ್ದೆ. ಅದೇ ಒತ್ತಡದಲ್ಲಿ ನನಗೆ ಹೃದಯಾಘಾತವಾಯಿತು. ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿದರು. ಆಗ ಜೀವನದಲ್ಲಿ ಹಣ ಕೂಡಿಡುವತ್ತ ಚಿಂತಿಸಬಾರದು.

ದೂರದ ದೊಡ್ಡ ಯೋಜನೆಗಳನ್ನು ರೂಪಿಸಬಾರದು ಎಂದುಕೊಂಡೆ. ಹೃದಯ ಸದಾ ನನಗೆ ಹೇಳಿದ್ದನ್ನು ಅಲಕ್ಷಿಸಿ ಅದಕ್ಕೆ ಸುಮ್ಮನಿರಲು ಹೇಳುತ್ತಿದ್ದೆ. ಮೆದುಳು ಹೇಳಿದ್ದನ್ನು ಮಾಡಲು ತುದಿಗಾಲ ಮೇಲೆ ನಿಂತಿರುತ್ತಿದ್ದೆ. ಆದರೆ, ಆ ದಿನ ಹೃದಯ ಸುಮ್ಮನಿರಲು ನಿರ್ಧರಿಸಿತ್ತು ಎಂದೆನಿಸುತ್ತದೆ. ಆಗ ಸಾಕಷ್ಟು ವಿಚಾರಗಳು ತಲೆಯೊಳಗೆ ಹೊಕ್ಕವು. ಘಟಿಸಿದ ಘಟನೆಗಳು ಕಣ್ಣಮುಂದೆ ಹಾದು ಹೋದವು. ಆಗ ನಾನು ನಿರ್ಧರಿಸಿದೆ. ನನಗಾಗಿ ಬದುಕಲು ತೀರ್ಮಾನಿಸಿದೆ. F?@king ನಾಳೆಯನ್ನು ಕಂಡವರು ಯಾರು. ಈಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ದಿನಕ್ಕೆ 200 ಪುಷಪ್ಸ್ ಹೊಡೆಯುತ್ತೇನೆ’ ಎಂದು ತಮ್ಮ ಬಲವಾದ ತೋಳುಗಳನ್ನು ತೋರಿಸುತ್ತ ಗಹಗಹಿಸಿ ನಕ್ಕರು.

ಮೊದಲ ಪುಸ್ತಕ ಗಳಿಸಿಕೊಟ್ಟ ಪ್ರಸಿದ್ಧಿಯಿಂದ ಪ್ರೇರೇಪಿತರಾದ ಶೈಲೇಂದ್ರ ಸಿಂಗ್ ಮತ್ತೊಂದು ಪುಸ್ತಕ ಬರೆಯಲು ಸಜ್ಜಾಗಿದ್ದಾರೆ. ಅದನ್ನೂ ಅವರ ಬಾಯಲ್ಲೇ ಕೇಳಿ: ‘‘ಮಗ ಇತ್ತೀಚೆಗೆ ಓದಲು ಇಂಗ್ಲೆಂಡ್‌ಗೆ  ಹೊರಡುವ  ಸಂಭ್ರಮದಲ್ಲಿದ್ದ. ಆಗ ನನ್ನ ಸೆಕ್ರೆಟರಿಯ -ಸ್ನೇಹಿತೆ ನಿಕೋಲ್ ನನ್ನನ್ನು ಕರೆದು, ಮಗನಿಗೆ ಸೆಕ್ಸ್ ಕುರಿತು ಶಿಕ್ಷಣ ನೀಡಿದ್ದೀಯಾ ಎಂದು ಕೇಳಿದಳು. ಎಲ್ಲಾ ಭಾರತೀಯ ತಂದೆಯಂತೆ ಇಲ್ಲ ಎಂದೆ. ಮಗ ಬೆಳೆದಿದ್ದಾನೆ, ಅರಿವಿಲ್ಲದೇ ಆತ ಏನಾದರೂ ಅಚಾತುರ್ಯ ಮಾಡಿದರೆ? ಎಂಬ ಪ್ರಶ್ನೆಯನ್ನೂ ಹಾಗೂ ಹೇಳಿಕೊಡಬೇಕಾದ ಸಂಗತಿಯನ್ನು ವಿವರಿಸಿದಳು. ಇವೆಲ್ಲವನ್ನೂ ಮಗನಿಗೆ ಹೇಳಲೇಬೇಕೆಂದು ಆತನ ಕೋಣೆಗೆ ಹೋದೆ.

ADVERTISEMENT

ಆದರೆ ಅದೇಕೋ ನಾಲಿಗೆ ತುದಿವರೆಗೂ ಬಂದ ಮಾತು ಅಲ್ಲೇ ಒಣಗಿಹೋದವು.  ಹೀಗಾಗಿ ಒಬ್ಬ ತಂದೆ ತನ್ನ ಮಗನಿಗೆ ಹೇಳುವ ಕಥೆಯನ್ನೇ ಇಟ್ಟುಕೊಂಡು ‘ಲೆಟ್ಸ್ ಟಾಕ್ ಅಬೌಟ್ ಸೆಕ್ಸ್’ ಎಂಬ ಪುಸ್ತಕ ಬರೆಯಲು ತೀರ್ಮಾನಿಸಿದ್ದೇನೆ. ನಾವೆಲ್ಲರೂ ಮಾಡುತ್ತೇವೆ ಆದರೆ ಈ ವಿಷಯ ಕುರಿತು ಮಾತನಾಡುವುದಿಲ್ಲ’’. ಇದೇ ವಿಷಯ ಕುರಿತು ಸಿನಿಮಾ ಮಾಡುವ ಉದ್ದೇಶವೂ ಅವರಿಗಿದೆ. 

ಬೆಂಗಳೂರನ್ನು ಬಹುವಾಗಿ ಮೆಚ್ಚುವ ಶೈಲೇಂದ್ರ ಇಲ್ಲಿರುವ ಒಬ್ಬ ಕಲಾವಿದ ಸ್ನೇಹಿತರನ್ನು ನೆನಪಿಸಿಕೊಂಡರು. ‘‘ಮುಂಬೈನಲ್ಲಿ ಪಾರ್ಟಿ ಲೈಫ್ ಆರಂಭವಾಗುವ ಹೊತ್ತಿನಲ್ಲಿ ಬೆಂಗಳೂರಿನಲ್ಲಿನ ಡಿಸ್ಕೋಗಳು ಮುಚ್ಚುವ ಹಂತದಲ್ಲಿರುತ್ತದೆ. ಇದೇ ಒಳ್ಳೆಯದು. ಏಕೆಂದರೆ ಬೇಗನೇ ಪಾರ್ಟಿ ಲೈಫ್ ಮುಗಿಸಿ ನೇರವಾಗಿ ಮನೆಗೆ ಹೋಗಬಹುದು. ಕುಟುಂಬದೊಂದಿಗೂ ಒಂದಷ್ಟು ಹೊತ್ತು ಕಳೆದಂತಾಗುತ್ತದೆ.

‘ಸನ್ ಬರ್ನ್’ ಕಾರ್ಯಕ್ರಮಕ್ಕಾಗಿ ನನ್ನ ವಿದೇಶಿ ಸ್ನೇಹಿತರು ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಈ ಬಾರಿ ಪಾರ್ಟಿಯನ್ನು ನನ್ನ ಸ್ನೇಹಿತನ ಮನೆಯಲ್ಲೇ ಆಯೋಜಿಸಿದ್ದೇನೆ’’ ಎಂದ ಶೈಲೇಂದ್ರ ಸಿಂಗ್ ಕೊನೆಯದಾಗಿ ‘ನಾನು ಇಷ್ಟೆಲ್ಲಾ ಮಾಡಿದ್ದೇನೆ. ವಿದೇಶದ ಮಾಧ್ಯಮಗಳು ನನ್ನ ಕುರಿತು ಮುಖಪುಟದಲ್ಲಿ ಬರೆಯುತ್ತವೆ. ಆದರೆ ಇಲ್ಲಿ ನಾನು ಪ್ರಖ್ಯಾತನಲ್ಲ. ಹಿತ್ತಲ ಗಿಡ ಮದ್ದಲ್ಲ ಎಂಬ ಮಾತು ನಿಜವಿರಬೇಕು’ ಎನ್ನುತ್ತಲೇ ಮಾತು ಮುಗಿಸಿದರು.

₨ 195 ಬೆಲೆಯ ‘F?@k KNOWS’ ಪುಸ್ತಕ ಈಗ ಹಿಂದಿ ಭಾಷೆಗೂ ಅನುವಾದಗೊಳ್ಳುತ್ತಿದೆಯಂತೆ. ‘ಈ ಪುಸ್ತಕವನ್ನು ವಿಮಾನದೊಳಗೆ ಮಾತ್ರ ಓದಬೇಡಿ. ಓದಿದ ನಂತರ ಎಲ್ಲಿಯಾದರೂ ಓಡಬೇಕೆಂದರೆ ಅಲ್ಲಿ F?@king ತೆರೆದ ಬಾಗಿಲುಗಳಿರುವುದಿಲ್ಲ’ ಎಂದು ನಗುತ್ತಲೇ ತಮ್ಮ ಗೆಳತಿ ನಿಕೋಲ ಜೊತೆ ಹೆಜ್ಜೆಹಾಕಿದರು.

ಚಿತ್ರ: ಎಂ.ಎಸ್‌.ಮಂಜುನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.