ADVERTISEMENT

ಹಲವು ಟಿಸಿಲುಗಳ `ಸಂಗೀತ ಧಾಮ'

ನಾದದ ಬೆನ್ನೇರಿ...

ಉಮಾ ಅನಂತ್
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

`ಹೊಸ ವರ್ಷದಂತೆ ಯಾರು ಬಂದಾರು
ಗಿಡಗಳಿಗೆ ಹೊಸ ವಸ್ತ್ರ ಯಾರು ತಂದಾರು'

ಹೆಸರಾಂತ ಸುಗಮ ಸಂಗೀತ ಗಾಯಕರಾಗಿದ್ದ ಸಿ. ಅಶ್ವಥ್ ಸಂಯೋಜನೆಯ ಈ ಗೀತೆಯನ್ನು ತಾರಸ್ಥಾಯಿಯಲ್ಲಿ ಹಾಡುತ್ತಿದ್ದವರು ಗಾಯಕ ಮೃತ್ಯುಂಜಯ ದೊಡ್ಡವಾಡ. ತಾವೇ ಕಟ್ಟಿ ಬೆಳೆಸಿದ `ಸಂಗೀತ ಧಾಮ'ದಲ್ಲಿ ಇವರು ತನ್ಮಯರಾಗಿ ಹಾಡುತ್ತಾ ಮೈಮರೆತಿದ್ದರು.

ಪಕ್ಕದ ಕೊಠಡಿಯಲ್ಲಿ ನಡೆಯುತ್ತಿದ್ದದ್ದು ಹಿಂದೂಸ್ತಾನಿ ಸಂಗೀತ ಪಾಠ. ಪೂರ್ವಿ ಥಾಟ್‌ನಲ್ಲಿ ಬರುವ ಸುಮಧುರ `ಪೂರಿಯಾ ಧನಾಶ್ರೀ' ರಾಗದ ಬಂದಿಶ್ `ಪಾಯಲಿಯಾಜನ್ ಕಾರ್ ಮೋರಿ..' ಅನ್ನು ಸಂಗೀತ ಶಿಕ್ಷಕ ಆನಂದರಾಜ್ ಗೋನ್ವಾರ್ ಸ್ವರ ಸಹಿತ ಹೇಳಿಕೊಡುತ್ತಿದ್ದಾಗ ವಿದ್ಯಾರ್ಥಿಗಳು ಅಷ್ಟೇ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಮಧ್ಯೆ ಮಧ್ಯೆ ಶಿಕ್ಷಕ ತಿದ್ದಿ ಹೇಳಿಕೊಡುತ್ತಿದ್ದರು.

ಆ ಸಂಗೀತ ಶಾಲೆಯ ಒಳಗೆ ಒಂದು ಸುತ್ತು ಹಾಕಿದಾಗ ಅಲ್ಲಿ ವಿವಿಧ ವಾದ್ಯಗಳನ್ನೂ ಮಕ್ಕಳು ಕಲಿಯುತ್ತಿದ್ದರು. ಇದು ಜೆ.ಪಿ. ನಗರದಲ್ಲಿರುವ `ಸಂಗೀತ ಧಾಮ'ದಲ್ಲಿ ಕಂಡುಬಂದ ಸಂಗೀತ ಪಾಠದ ದೃಶ್ಯಾವಳಿ.

ಹತ್ತು ವರ್ಷಗಳ ಹಿಂದೆ ಆರಂಭವಾದ `ಸಂಗೀತ ಧಾಮ'ವನ್ನು ಗಾಯಕ, ಕೀಬೋರ್ಡ್ ವಾದಕ ಮೃತ್ಯುಂಜಯ ದೊಡ್ಡವಾಡ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಸುಗಮ ಸಂಗೀತ, ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಜತೆಗೆ ವಾದ್ಯಗಳಲ್ಲಿ ಕೀಬೋರ್ಡ್, ತಬಲಾ, ಡ್ರಮ್ಸ, ಗಿಟಾರ್, ಪಿಟೀಲು, ಕೊಳಲು, ವೀಣೆ ಇಷ್ಟು ಆಯ್ಕೆಗಳಿವೆ. ಸುಮಾರು 250ಕ್ಕೂ ಹೆಚ್ಚು ಮಕ್ಕಳು ಇಲ್ಲಿ ವಿವಿಧ ಸಂಗೀತ ಪಾಠ ಕಲಿಯುತ್ತಿದ್ದಾರೆ. ಪ್ರತಿಯೊಂದಕ್ಕೂ ಪರಿಣತ ಶಿಕ್ಷಕರಿದ್ದು, ಮಕ್ಕಳಿಗೆ ಪ್ರತ್ಯೇಕ ಪಾಠ ಹೇಳಿಕೊಡುತ್ತಾರೆ.

`ಇಲ್ಲಿನ ಮಕ್ಕಳು ಬಹಳ ಶ್ರದ್ಧೆಯಿಂದ, ಆಸಕ್ತಿಯಿಂದ ಕಲಿಯುತ್ತಾರೆ. ಹಿಂದೂಸ್ತಾನಿ ಸಂಗೀತವನ್ನು ಆನಂದರಾಜ್ ಗೋನ್ವಾರ್, ಕರ್ನಾಟಕ ಸಂಗೀತವನ್ನು ಬಿ.ಸುಕನ್ಯಾ, ಸುಗಮ ಸಂಗೀತವನ್ನು ಮೃತ್ಯುಂಜಯ ದೊಡ್ಡವಾಡ ಮತ್ತು ಸುಮಾ ಪ್ರಸಾದ್, ಕೀಬೋರ್ಡ್ ರೇಣುಕಾ ದೊಡ್ಡವಾಡ, ಗಿಟಾರ್ ಜೋಸೆಫ್ ಜೂಲಿಯಸ್, ತಬಲಾ ವೀರಣ್ಣ ಹಿರೇಗೌಡರ, ಪಿಟೀಲು ಚಕ್ರಪಾಣಿ, ಕೊಳಲು ವಿಜಯಕುಮಾರ್, ವೀಣೆ ವಸುಂಧರಾ ಮತ್ತು  ಡ್ರಮ್ಸ ಅನ್ನು ಮುರಳಿ ಹೇಳಿಕೊಡುತ್ತಾರೆ.

ವಾರದಲ್ಲಿ ಎರಡು ಕ್ಲಾಸ್‌ಗಳಿರುತ್ತವೆ' ಎಂದು ವಿವರ ನೀಡುತ್ತಾರೆ ಸಂಗೀತ ಧಾಮದ ನಿರ್ದೇಶಕರಾದ ಮೃತ್ಯುಂಜಯ ದೊಡ್ಡವಾಡ.

`ಕೀಬೋರ್ಡ್ ಕಡೆ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಲ್ಲಿ 80 ಮಕ್ಕಳು ಬರೀ ಕೀಬೋರ್ಡ್ ಕಲಿಯುತ್ತಿದ್ದಾರೆ. ಉಳಿದ ಮಕ್ಕಳು ಬೇರೆ ಬೇರೆ ವಾದ್ಯ ಪ್ರಕಾರಗಳನ್ನು ಆರಿಸಿಕೊಂಡಿದ್ದಾರೆ. ಪರೀಕ್ಷಾ ಸಮಯದಲ್ಲೂ ಸಂಗೀತಾಭ್ಯಾಸ, ಕ್ಲಾಸ್‌ಗಳನ್ನು ತಪ್ಪಿಸದೆ ಉತ್ಸಾಹ ತೋರಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಇದು ಮಕ್ಕಳಲ್ಲಿ ಸಂಗೀತದ ಅಭಿರುಚಿಯನ್ನು ಬಿಂಬಿಸುತ್ತದೆ' ಎಂದು ಹೇಳುತ್ತಾರೆ ಅವರು.

`ಹಿಂದೂಸ್ತಾನಿ ಸಂಗೀತಕ್ಕೆ ಮಕ್ಕಳು ಒಲವು ತೋರುತ್ತಿದ್ದಾರೆ. ಆಸಕ್ತಿಯಿಂದ ಕಲಿಯುತ್ತಾರೆ. ಶ್ರದ್ಧೆಯಿಂದ ರಿಯಾಜ್ ಮಾಡುತ್ತಾರೆ. ಹೀಗಾಗಿ ಇಲ್ಲಿ ಕಲಿಸಲು ಖುಷಿಯಾಗುತ್ತದೆ' ಎಂದು ಹೇಳುತ್ತಾರೆ ಇಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಕರಾಗಿರುವ ಆನಂದ ಗೋನ್ವಾರ್.


ಇಲ್ಲಿ ಕಲಿಯುವ ಮಕ್ಕಳಿಗೆ ಸಂಗೀತ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಪಠ್ಯಕ್ರಮದ ಪ್ರಕಾರ ಪಾಠ ಹೇಳಿಕೊಡಲಾಗುತ್ತದೆ. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಜೂನಿಯರ್, ಸೀನಿಯರ್ ಪರೀಕ್ಷೆ ಅಲ್ಲದೆ ಗಂಧರ್ವ ಮಹಾವಿದ್ಯಾಲಯ ನಡೆಸುವ ಸಂಗೀತ ಪರೀಕ್ಷೆಗಳನ್ನೂ ಎದುರಿಸಲು ತರಬೇತಿ ನೀಡಲಾಗುತ್ತದೆ.

ವೈವಿಧ್ಯಮಯ ಕಾರ್ಯಕ್ರಮ
ಸಂಗೀತ ಧಾಮ ವರ್ಷಪೂರ್ತಿ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. `ಸಂಗೀತ ಧಾಮ ಸಂಭ್ರಮ' ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಕಾರ್ಯಕ್ರಮ. ಇಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸುವ ಅವಕಾಶ ನೀಡಲಾಗುತ್ತದೆ. ಮಕ್ಕಳಿಗೆ ಸ್ವತಂತ್ರವಾಗಿ ವೇದಿಕೆಯಲ್ಲಿ ಹಾಡುವ, ನುಡಿಸುವ ಅವಕಾಶ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶ.

`ಪರಂಪರೆ' ಎನ್ನುವುದು ಮತ್ತೊಂದು ವಿಭಿನ್ನ ಕಾರ್ಯಕ್ರಮ. ಸುಗಮ ಸಂಗೀತದ ಹಿರಿಯ ಕಲಾವಿದರನ್ನು ಕರೆಸಿ ಅವರಿಂದ ಹಾಡಿಸಿ, ಅವರು ಮಕ್ಕಳಿಗೆ ಗೀತೆ ಹೇಳಿಕೊಟ್ಟು ಹಾಡಿಸುವ ಈ ಕಾರ್ಯಕ್ರಮದಿಂದ ಕಲಿಯುವವರಿಗೆ ವಿಶಿಷ್ಟ ಅನುಭವವಾಗುತ್ತದೆ.

ಇಲ್ಲಿ ನಾಡಿನ ಹಿರಿಯ ಕವಿಗಳಾದ ಚೆನ್ನವೀರ ಕಣವಿ, ಜಿ.ಎಸ್. ಶಿವರುದ್ರಪ್ಪ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದವರ ಕವನಗಳನ್ನು ಹಾಡಲು ಹೇಳಿಕೊಡಲಾಗುತ್ತದೆ. ಹಿರಿಯ ಕವಿಗಳನ್ನೂ ಕರೆಸಿ ಮಕ್ಕಳಿಗೆ ಮಾರ್ಗದರ್ಶನ ನೀಡಲಾಗುತ್ತದೆ.

`ಭರವಸೆಯ ಕೊರಳುಗಳು' ಈ ಕಾರ್ಯಕ್ರಮದಲ್ಲಿ ಉದಯೋನ್ಮುಖರಿಗೆ ಅವಕಾಶವಿದೆ. 

ಉಚಿತ ಕಾರ್ಯಾಗಾರ
ಸಂಗೀತ ಧಾಮದ ಮಹತ್ತರ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಾಗಾರ ಬಹಳ ಮುಖ್ಯವಾದದ್ದು. ಈ ಕಾರ್ಯಾಗಾರಗಳನ್ನು ಬೆಂಗಳೂರು ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿ ಏರ್ಪಡಿಸಲಾಗುತ್ತದೆ. ಈಗಾಗಲೇ ಸಂಗೀತ ಧಾಮ ಮಲ್ಲಾಡಿಹಳ್ಳಿ, ಚಿತ್ರದುರ್ಗ, ಶಿರಸಿ, ಗದಗ, ಹಾವೇರಿ, ಧಾರವಾಡಗಳಲ್ಲಿ ಉಚಿತವಾಗಿ ನಡೆಸಿದೆ. ಇದನ್ನು ಪ್ರತಿ ತಿಂಗಳೂ ನಡೆಸಲಾಗುತ್ತಿದೆ. ಇದು ಗಾಯಕ ಶ್ರೀಧರ ಅಯ್ಯರ್ ಅವರ `ಸ್ವರ ಸುರಭಿ ಟ್ರಸ್ಟ್' ಜತೆಗೂಡಿ ಮಾಡುವ ಕಾರ್ಯಕ್ರಮ.

ಸಂಗೀತಾಸಕ್ತ ಮಕ್ಕಳಿಗೆ ಬೇರೆ ಬೇರೆ ಸುಮಧುರ ಗೀತೆಗಳನ್ನು ಹೇಳಿಕೊಟ್ಟು, ಚೆನ್ನಾಗಿ ತರಬೇತಿ ನೀಡಿ ಮಕಳಿಂದಲೇ ಹಾಡಿಸುವ ವಿಶಿಷ್ಟ ಕಾರ್ಯಕ್ರಮ.

ಬೇಸಿಗೆ ರಜೆ ಬಂದಿದೆ. ಮಕ್ಕಳಿಗೆ ಸಂಗೀತಧಾಮದಲ್ಲಿ ಉಚಿತ ಸುಗಮ ಸಂಗೀತ ಶಿಬಿರ ಇದೆ. 20 ದಿನ ನಡೆಯುವ ಈ ಶಿಬಿರದಲ್ಲಿ ಖ್ಯಾತ ಸುಗಮ ಸಂಗೀತ ಕಲಾವಿದರು ವೈವಿಧ್ಯಮಯ ಗೀತೆಗಳನ್ನು ಹೇಳಿಕೊಡುತ್ತಾರೆ.

ಸುಗಮ ಸಂಗೀತವನ್ನು ಜನಸಾಮಾನ್ಯರಿಗೂ ತಲುಪಿಸಿ, ಕವಿಗಳ ಅರ್ಥಪೂರ್ಣ ಗೀತೆಗಳನ್ನು ಪ್ರಚಾರ ಮಾಡಬೇಕೆನ್ನುವ ಉದ್ದೇಶ ಗಾಯಕ ಮೃತ್ಯುಂಜಯ ದೊಡ್ಡವಾಡ ಅವರದು. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕರ್ಲವಾಡ ಎಂಬ ಹಳ್ಳಿಯಲ್ಲಿ.

ಓದಿದ್ದು ಡಿಪ್ಲೊಮಾ ಆದರೂ ಸಂಗೀತದ ವಿವಿಧ ಮಜಲುಗಳಲ್ಲಿ ಸಾಕಷ್ಟು ಕೃಷಿ ನಡೆಸಿದ್ದಾರೆ. ಹಿಂದೂಸ್ತಾನಿ ಸಂಗೀತವನ್ನು ಎಂ.ವಿ. ಹೆಗಡೆ ಮತ್ತು ಸ್ನೇಹಾ ಹಂಪಿಹೊಳಿ, ಕೀಬೋರ್ಡ್ ಅನ್ನು ಆರ್.ಎಸ್. ಜೇಮ್ಸ, ಚಲನಚಿತ್ರ ಗೀತೆ ಹಿನ್ನೆಲೆ ಗಾಯನವನ್ನು ಆದರ್ಶ ಫಿಲ್ಮ್ ಇನ್ಸ್‌ಟ್ಯೂಟ್‌ನ ಮನೋರಂಜನ್ ಪ್ರಭಾಕರ್ ಅವರ ಬಳಿ, ಕರ್ನಾಟಕ ಸಂಗೀತವನ್ನು ಎನ್. ಬಾಲಸುಬ್ರಹ್ಮಣ್ಯಂ ಅವರ ಬಳಿ, ಸುಗಮ ಸಂಗೀತವನ್ನು ರಾಜು ಅನಂತಸ್ವಾಮಿ ಅವರಲ್ಲಿ ಕಲಿತವರು.

ಇವರ ಸಂಗೀತ ನಿರ್ದೇಶನದಲ್ಲಿ 17 ಸುಗಮ ಸಂಗೀತ ಸೀಡಿ ಮತ್ತು ಮೂರು ಭಕ್ತಿಗೀತೆಗಳ ಸೀಡಿ ಹೊರಬಂದಿವೆ. `ಕರ್ನಾಟಕ ವಿಕಾಸ ರತ್ನ', `ಕರುನಾಡ ಸಿರಿ', `ಗಾನ ಕುಶಲ' ಇವರಿಗೆ ಸಂದಿರುವ ಬಿರುದುಗಳು.

ವಿಳಾಸ: ಮೃತ್ಯುಂಜಯ ದೊಡ್ಡವಾಡ, ಸಂಗೀತ ಧಾಮ, ನಂ. 48, ಎರಡನೇ ಮಹಡಿ, ನಾಲ್ಕನೇ ಕ್ರಾಸ್, 21ನೇ ಮುಖ್ಯರಸ್ತೆ, ಮಾರೇನಹಳ್ಳಿ, ಜೆ.ಪಿ. ನಗರ, ಬೆಂಗಳೂರು-78. ಫೋನ್: 080-26490288/ 9448139784.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT