ADVERTISEMENT

ಹಳೆ ಬೂಟಿಗೆ ಹೈಟೆಕ್ ಹೊಲಿಗೆ

ಸುಮಲತಾ ಎನ್, ಪದ್ಮನಾಭ ಭಟ್ಟ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ಚಪ್ಪಲಿ ಅಥವಾ ಶೂ ಕಿತ್ತು ಹೋದರೆ ಬೀದಿ ಬದಿ ಚಪ್ಪಲಿ ಹೊಲಿಯುವವರ ಬಳಿ ಚೌಕಾಸಿ ಮಾಡಿ ಹೊಲಿಸಿಕೊಂಡು ಬರುತ್ತೇವೆ. ಕಡಿಮೆ ಬೆಲೆಯದ್ದಾದರೆ ಎಸೆದು ಸುಮ್ಮನಾಗುತ್ತೇವೆ. ಆದರೆ ಈಗ ಚಪ್ಪಲಿ ಹೊಲಿಗೆಗೂ ಹೈಟೆಕ್ ಸ್ಪರ್ಶ. ಚಪ್ಪಲಿ ಅಥವಾ ಶೂ ಕಿತ್ತುಹೋದರೆ ಅದನ್ನು ಎಸೆಯುವ ಬದಲು ನಮಗೆ ನೀಡಿ, ಅದಕ್ಕೆ ಮೂಲರೂಪ ಕೊಡುತ್ತೇವೆ ಎನ್ನುತ್ತಿದೆ ಡಾ. ಪ್ರೊಂಟೊ ಶೂ ಅಂಡ್‌ ಬ್ಯಾಗ್‌ ರಿಪೇರ್‌ ಕ್ಲಿನಿಕ್‌.

ಚಪ್ಪಲಿ ಅಥವಾ ಶೂ ಇಲ್ಲದೇ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಆಗದು. ಧರಿಸುವ ಉಡುಗೆಗೆ ಮ್ಯಾಚಿಂಗ್ ಶೂ, ಚಪ್ಪಲಿ ಹಾಕಿಕೊಳ್ಳುವುದು ಈಗಿನ ಜಮಾನ. ಆದರೆ ಇವು ಕಿತ್ತುಹೋದ ಪಕ್ಷದಲ್ಲಿ ಕಡಿಮೆ ಬೆಲೆಯದ್ದಾದರೆ ಎಸೆದು ಸುಮ್ಮನಾಗುತ್ತೇವೆ.

ದುಬಾರಿ ಬೆಲೆ ತೆತ್ತು ತಂದ ಶೂಗಳನ್ನು ಎಸೆಯಲೂ ಮನಸ್ಸಾಗದೆ, ಧರಿಸಲೂ ಆಗದೆ ಇಟ್ಟುಕೊಳ್ಳುವವರೇ ಹೆಚ್ಚು. ದುಬಾರಿಯಾದದ್ದನ್ನು ಹೊಲಿಯಲು ಕೊಟ್ಟರೆ ದಾರ ಕಾಣುವಂತೆ ಹೊಲಿದು ಚೆಂದಗೆಡಿಸುತ್ತಾರೆ ಎನ್ನುವುದೂ ಒಂದು ಕಾರಣ. ಆದರೆ ಈ ಕ್ಲಿನಿಕ್‌ನಲ್ಲಿ ಅವುಗಳಿಗೆ ಮೂಲ ರೂಪ ಕೊಡುತ್ತಾರಂತೆ.

ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಕಾಲಿಟ್ಟಿರುವ ಈ ಕ್ಲಿನಿಕ್‌ನ ಮೂಲ ಚೆನ್ನೈ. ಜನರ ಚಪ್ಪಲಿ ಪ್ರೀತಿಯನ್ನು ಬಂಡವಾಳವಾಗಿಸಿಕೊಂಡು ಈ ಕ್ಲಿನಿಕ್‌ ತೆರೆದಿದ್ದು. ಶೂ ರಿಪೇರಿಯನ್ನು ವ್ಯಾಪಾರವಾಗಿ ಪರಿಗಣಿಸಿ ನಗರದಲ್ಲಿ ಮೊದಲು ಮಾಲ್‌ಗಳಲ್ಲಿ ಶುರುಮಾಡಿದ ಈ ಸೇವೆ ಇದೀಗ ‘ಮೆಟ್ರೊ’ ಕಡೆ ಮುಖ ಮಾಡಿದೆ. ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ರೈಲ್ವೆ ನಿಲ್ದಾಣಗಳಲ್ಲಿ ತಲೆಎತ್ತಿರುವ ಈ ಶೂ ಸೇವೆಗೆ ಸಾಕಷ್ಟು ಜನ ಸ್ಪಂದನೆಯೂ ಸಿಕ್ಕಿದೆಯಂತೆ.

ಶೂ, ಬ್ಯಾಗ್‌ಗೆ ಹೊಸ ರೂಪ
ಹಳೆಯ ಚಪ್ಪಲಿಗಳನ್ನು, ಬ್ಯಾಗ್‌ಗಳನ್ನು ಎಸೆದುಬಿಡುವವರೇ ಹೆಚ್ಚು. ಆದರೆ ಇಲ್ಲಿಗೆ ಬಂದರೆ ಅವುಗಳಿಗೆ ಹೊಸ ರೂಪ ಕೊಡಲಾಗುತ್ತದೆ. ಹಳೆಯ ಬ್ಯಾಗ್‌ ಅಥವಾ ಸೂಟ್‌ಕೇಸ್‌ಗಳನ್ನೂ ಬಳಕೆಗೆ ಯೋಗ್ಯವಾಗುವ ರೀತಿ ರಿಪೇರಿ ಮಾಡಲಾಗುತ್ತದೆ.

ಶೂ, ಚಪ್ಪಲಿಗಳಿಗಾದರೆ ಪಾಲಿಶಿಂಗ್‌, ಕ್ಲೀನಿಂಗ್‌, ಪ್ಯಾಚ್‌ ವರ್ಕ್‌, ಸೋಲ್‌, ಹೀಲ್‌ ಟಾಪ್‌ ಬದಲಿಸುವುದು, ಎತ್ತರವನ್ನು ಹೆಚ್ಚು ಮಾಡುವುದು, ಶೂ ಎಕ್ಸ್‌ಪ್ಯಾನ್ಷನ್, ಸೋಲ್‌ ಪ್ರೊಟೆಕ್ಟರ್‌, ಮ್ಯಾಸೊನೈಟ್‌ ಹೀಲ್, ಬೇಸ್‌ ಚೇಂಜ್‌ ಹೀಗೆ ಹಲವು ಸೇವೆಗಳು ಲಭ್ಯ. ಬ್ಯಾಗ್‌ಗಳಿಗಾದರೆ ಟ್ರಾಲಿ, ಝಿಪ್‌ ಬದಲಾಯಿಸುವುದು ಹೀಗೆ ಇನ್ನಿತರ ರಿಪೇರಿ ಸೌಲಭ್ಯವೂ ಇದೆ.

‘ಮೆಟ್ರೊ’ದಲ್ಲಿ ಉತ್ತಮ ಪ್ರತಿಕ್ರಿಯೆ
ಶೂ ಮತ್ತು ಬ್ಯಾಗ್‌ ರಿಪೇರಿ ಸೇವೆಯನ್ನು ‘ಮೆಟ್ರೊ’ದಲ್ಲಿ ಆರಂಭಿಸಲೂ ಕಾರಣವಿದೆಯಂತೆ. ಇಲ್ಲಿ ನಿತ್ಯ ನೂರಾರು ಮಂದಿ ಓಡಾಡುತ್ತಾರೆ. ಅಲ್ಲದೆ ‘ಮೆಟ್ರೊ’ ರೈಲಿಗೆ ಬರುವ ಬಹಳಷ್ಟು ಮಂದಿ ಸಮಯ ಉಳಿಸಲು ಬರುತ್ತಾರೆ. ಅದೇ ರೀತಿ ಎಲ್ಲಿಯೋ ಚಪ್ಪಲಿ ಹೊಲಿಯಲು ಹುಡುಕಿಕೊಂಡು ಹೋಗುವ ಬದಲು ಇಲ್ಲಿಯೇ ಬರಬಹುದು.

ಅಲ್ಲದೆ ಕೆಲಸಕ್ಕೆ ಹೋಗುವವರಾದರೆ ಬೆಳಿಗ್ಗೆ ಕಚೇರಿಗೆ ಹೋಗುವಾಗ ಕೊಟ್ಟು, ಸಂಜೆ ಮನೆಗೆ ಮರಳುವಾಗ ವಾಪಸ್‌ ತೆಗೆದುಕೊಂಡು ಹೋಗಬಹುದು. ಒಟ್ಟಿನಲ್ಲಿ ಸಮಯದ ಉಳಿತಾಯದೊಂದಿಗೆ ಉತ್ತಮ ಸೇವೆ ಪಡೆಯಬಹುದು ಎನ್ನುವುದು ಕ್ಲಿನಿಕ್‌ ಹೇಳಿಕೆ. ಮೂರು ತಿಂಗಳ ಹಿಂದೆ ಆರಂಭಗೊಂಡಿರುವ ಈ ಕ್ಲಿನಿಕ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆಯಂತೆ.

ದುಬಾರಿ ಬೆಲೆ
ಬೀದಿ ಬದಿ ಚೌಕಾಸಿ ಮಾಡಿ ಹರಿದ ಚಪ್ಪಲಿಯನ್ನು ಹತ್ತು ರೂಪಾಯಿ ಕೊಟ್ಟು ಹೊಲಿಸಿಕೊಳ್ಳುವವರಿಗೆ ಇಲ್ಲಿನ ಬೆಲೆ ಕೇಳಿದರೆ ಅಬ್ಬಾ ಎನಿಸುತ್ತದೆ.  ಸಾಮಾನ್ಯ ಹೊಲಿಗೆಯ ಬೆಲೆ 45 ರೂಪಾಯಿಯಿಂದ ಆರಂಭವಾಗುತ್ತದೆ. ದರ ಪಟ್ಟಿ ಮುಗಿಯುವುದು 2000 ರೂಪಾಯಿಯಲ್ಲಿ. ಇಲ್ಲಿ ಚೌಕಾಸಿಗೆ ಅವಕಾಶವಿಲ್ಲ. ಎಲ್ಲದಕ್ಕೂ ನಿಗದಿ ಮಾಡಿದ್ದೇ ಬೆಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.