ADVERTISEMENT

ಹಾಡಿನ ಪಾಡು ಸೀಡಿಯಲ್ಲಿ

ಎ.ಎಂ.ಸುರೇಶ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST
ಹಾಡಿನ ಪಾಡು ಸೀಡಿಯಲ್ಲಿ
ಹಾಡಿನ ಪಾಡು ಸೀಡಿಯಲ್ಲಿ   

ಒಂದೇ ಶಾಟ್‌ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಿದ್ದ `ಅಲೆಮಾರಿ~ ಚಿತ್ರತಂಡ ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಸಿನಿಮಾ ತಯಾರಾದ ಬಗೆಯನ್ನು ಚಿತ್ರೀಕರಿಸಿ ಚಿತ್ರಪ್ರಚಾರಕ್ಕೆ ಅದನ್ನು ಬಳಸಿಕೊಳ್ಳುವುದು ಹಳೆಯ ವಿಚಾರವಾದರೂ ಅದು ತೀರಾ ಅಪರೂಪ. ಜಾಕಿಚಾನ್ ಚಿತ್ರಗಳಲ್ಲಿ ಇವು ಸಾಮಾನ್ಯ. ಆದರೆ ಅಲೆಮಾರಿ ಚಿತ್ರತಂಡದ್ದು ವಿಭಿನ್ನ ಹಾದಿಯಲ್ಲಿ ಇಂಥದ್ದೇ ಪ್ರಯತ್ನ. ಈ ಚಿತ್ರತಂಡ ಪ್ರೇಕ್ಷಕರಿಗೆ ತೋರಿಸಲು ಹೊರಟಿರುವುದು ಹಾಡು ತಯಾರಾದ ಬಗೆಯನ್ನು. ಚಿತ್ರದ ಹಾಡುಗಳ ಧ್ವನಿಮುದ್ರಣ, ಚಿತ್ರೀಕರಣ, ನಟನಟಿಯರ ಕಾಸ್ಟ್ಯೂಮ್, ಮೇಕಪ್ ಸಿದ್ಧಗೊಳಿಸುವಿಕೆ, ಸೆಟ್ ನಿರ್ಮಾಣ ಹೀಗೆ ಒಂದು ಹಾಡು ಸಿದ್ಧಗೊಳ್ಳುವ ವಿವಿಧ ಪ್ರಕ್ರಿಯೆಗಳನ್ನು ಸೀಡಿಯಲ್ಲಿ ದೃಶ್ಯರೂಪದಲ್ಲಿ ಜನರಿಗೆ ನೀಡಲು `ಅಲೆಮಾರಿ~ ಚಿತ್ರತಂಡ ಮುಂದಾಗಿದೆ.

ಮತ್ತೊಂದು ವಿಶೇಷವೆಂದರೆ ಚಿತ್ರದ ಪ್ರತಿ ಹಾಡಿನ ಬಗ್ಗೆ ಆ ಹಾಡನ್ನು ಹಾಡಿದ ಗಾಯಕರೇ ವಿವರಣೆ ನೀಡುತ್ತಾರೆ. ಹಾಡಿಗೆ ತಾವು ನಡೆಸಿದ ತಯಾರಿ, ತಮಗಾದ ಅನುಭಗಳನ್ನು ಹಂಚಿಕೊಳ್ಳುವುದನ್ನು ಸಹ ಈ ಸೀಡಿ ಒಳಗೊಂಡಿರುತ್ತದೆ. ಚಿತ್ರದಲ್ಲಿ ಆರು ಹಾಡುಗಳು ಮತ್ತು ಮೂರು ಕಿರುಹಾಡುಗಳಿವೆ. ಅದರಲ್ಲಿ ಏಳು ಹಾಡುಗಳು ಈ `ಮೇಕಿಂಗ್ ಆಫ್ ಸಾಂಗ್ಸ್~ ಸೀಡಿಯಲ್ಲಿ ಲಭ್ಯ. ಈ ಹಾಡುಗಳಿಗೆ ಮುಂಬೈನ ಲೈವ್ ಇಂಡಿಯನ್ ತಂತ್ರಜ್ಞಾನದ ಮಿಶ್ರಣವಿದೆ. ವೆಚ್ಚದಾಯಕ ಎನಿಸಿದರೂ ಈ ತಂತ್ರಜ್ಞಾನದಿಂದಾಗಿ ಹಾಡುಗಳ ಗುಣಮಟ್ಟ ಹೆಚ್ಚುತ್ತದೆ.

ಶ್ರೇಯಾ ಘೋಷಾಲ್, ಜಾವಿದ್ ಅಲಿ, ಕೈಲಾಶ್ ಖೇರ್, ವಿಜಯಪ್ರಕಾಶ್, ಫಯಾಜ್ ಖಾನ್,  ಕಾರ್ತಿಕ್, ಪ್ರಿಯಾ ಹಿಮೇಶ್ ಚಿತ್ರದ ಹಿನ್ನೆಲೆ ಗಾಯಕರು. ಇವರೆಲ್ಲರ ಮಾತುಗಳು ಸೀಡಿಯಲ್ಲಿ ಅಡಕವಾಗಿವೆ. ಚಿತ್ರದಲ್ಲಿ ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಿದ ಹಾಡಿಗೆ ತಾಲೀಮು ನಡೆಸಿ ಒಂದೇ ಶಾಟ್‌ನಲ್ಲಿ ಹಾಡಿದ್ದಾರೆ ಎ.ಆರ್. ರೆಹಮಾನ್ ಶಿಷ್ಯ ಕಾರ್ತಿಕ್. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹ ಗೀತೆಯೊಂದನ್ನು ಹಾಡಿದ್ದು, ನಟ ರಾಕೇಶ್ ಅಡಿಗ ಕೂಡ ಅದಕ್ಕೆ ದನಿಗೂಡಿಸಿದ್ದಾರೆ.

ADVERTISEMENT

ಇದೆಲ್ಲಾ ಮಾಡುತ್ತಿರುವುದು ಚಿತ್ರದ ಪ್ರಚಾರಕ್ಕಾಗಿ ಎನ್ನುತ್ತಾರೆ ನಿರ್ದೇಶಕ ಸಂತು. ಪೈರಸಿ ಹಾವಳಿಗೆ ಇದುಕೊಂಚ ಕಡಿವಾಣ ಹಾಕಲಿದೆ ಎಂಬ ವಿಶ್ವಾಸವೂ ಅವರದು. ಅಂದಹಾಗೆ `ಅಲೆಮಾರಿ~ಯ ಹಾಡುಗಳ ಧ್ವನಿಸುರುಳಿ ಫೆಬ್ರುವರಿ 1ರಿಂದ ಮಾರುಕಟ್ಟೆಯಲ್ಲಿ ಲಭ್ಯ. ಅದರೊಟ್ಟಿಗೇ ಚಿತ್ರತಂಡ `ಮೇಕಿಂಗ್ ಆಫ್ ಸಾಂಗ್ಸ್~ ಸೀಡಿಯನ್ನು ಉಚಿತವಾಗಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.