ADVERTISEMENT

ಹಾಡುಗಳ ಹೊನಲು ಹಣತೆಗಳ ಸಾಲು

ಉಮಾ ಅನಂತ್
Published 28 ಫೆಬ್ರುವರಿ 2013, 19:59 IST
Last Updated 28 ಫೆಬ್ರುವರಿ 2013, 19:59 IST
ದಾಸರ ಪದಗಳನ್ನು ಹಾಡುತ್ತಿರುವ ವಿದ್ವಾನ್ ರಾಮಚಂದ್ರಾಚಾರ್.
ದಾಸರ ಪದಗಳನ್ನು ಹಾಡುತ್ತಿರುವ ವಿದ್ವಾನ್ ರಾಮಚಂದ್ರಾಚಾರ್.   

ಹುಣ್ಣಿಮೆ ಚಂದಿರ ಆಗಸದಲ್ಲಿ ಬೆಳಕ ಚೆಲ್ಲಲು ನಗರದ ಕಾಡುಮಲ್ಲೇಶ್ವರ ಬಯಲು ರಂಗ ಮಂದಿರದಲ್ಲಿ ಹಣತೆಗಳ ಸಾಲು ಬೆಳಕಿನ ಹೊಳಪು ನೀಡಲಾರಂಭಿಸುತ್ತವೆ. ಈ ಸುಂದರ ಸಂಜೆಗೆ ಸಂಗೀತದ ಸಾಥಿ... ಅಲ್ಲೊಂದು ಅದ್ಭುತ ಮಾಯಾಲೋಕ ಸೃಷ್ಟಿಯಾಗುತ್ತದೆ.

ಇದು ಕಾಡುಮಲ್ಲೇಶ್ವರ ಗೆಳೆಯರ ಬಳಗ ಪ್ರತಿ ಹುಣ್ಣಿಮೆಯಂದು ಏರ್ಪಡಿಸುವ `ಸಂಗೀತ ಹಬ್ಬ' ಎಂಬ  ಸುಂದರ ಕಾರ್ಯಕ್ರಮದ ಪರಿ. ನೂರಾರು ಮಹಿಳೆಯರು ರಂಗಮಂದಿರದ ವೇದಿಕೆಯ ಸುತ್ತ ಸ್ವಯಂಪ್ರೇರಣೆಯಿಂದ ಹಣತೆ ಹಚ್ಚುತ್ತಾರೆ.

ಗೆಳೆಯರ ಬಳಗದ ಸದಸ್ಯರು ಈ ಹಬ್ಬದಲ್ಲಿ ಸ್ವಂತ ಮನೆಯ ಕಾರ್ಯಕ್ರಮವೆಂಬಂತೆ ಸಂಭ್ರಮದಿಂದ ಓಡಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ.ನೆರೆದವರಿಗೆ ಅಂದು ನಿಜಕ್ಕೂ ರಸದೌತಣ. ನುರಿತ ಕಲಾವಿದರು ವೇದಿಕೆಯಲ್ಲಿ ಪ್ರಸ್ತುತಪಡಿಸುವ ಗಾಯನ ಮನಮುಟ್ಟುತ್ತದೆ, ಹೃದಯ ತಟ್ಟುತ್ತದೆ.

ಕಳೆದ 43 ತಿಂಗಳಿಂದ ನಿರಂತರವಾಗಿ ನಡೆದು ಬಂದಿರುವ `ಹುಣ್ಣಿಮೆ ಹಾಡು'  ಈಗ ಜನಮನ ಸೂರೆಗೊಳ್ಳುತ್ತಿದೆ.ಈ ಸಲದ ಹುಣ್ಣಿಮೆಯ ದಿನ ಸೋಮವಾರ ನಡೆದದ್ದು `ದಾಸಗಾನ ವೈಭವ'. ಗಾನ ಕಲಾಭೂಷಣ ರಾಮಚಂದ್ರಾಚಾರ್ ಅವರು ಹಾಡಿದ ಹರಿದಾಸ ಪದಗಳಿಗೆ ನೆರೆದವರು ತಲೆದೂಗಿದರು.

ಸಂಜೆ ಆರಂಭವಾದ ಗಾನಸುಧೆ ರಾತ್ರಿ 11ರವರೆಗೂ ನಿರಂತರವಾಗಿ ಹರಿದಾಗ ಕೇಳುಗರು ಅಕ್ಷರಶಃ ಅದರಲ್ಲಿ ಮಿಂದೆದ್ದರು. ಸುಶ್ರಾವ್ಯ ಗಾಯನದ ಅಲೆ ಅಲೆಗಳು ದೀಪದ ಬೆಳಕಿನೊಂದಿಗೆ ಲೀನವಾಗಿ ಅದ್ಭುತ ರಸ ಸೃಷ್ಟಿಯಾಯಿತು.

ADVERTISEMENT

ಗಾಯಕರ ಪ್ರತಿ ಹಾಡುಗಳಲ್ಲಿದ್ದ `ಭಕ್ತಿರಸ' ಕೇಳುಗರಲ್ಲಿ ಪುಳಕ ಉಂಟು ಮಾಡಿತು. ಇವರಿಗೆ ತಬಲಾದಲ್ಲಿ ಕೇಶವ ಜೋಶಿ ಮತ್ತು ಪಿಟೀಲಿನಲ್ಲಿ ಬಳ್ಳಾರಿ ಸುರೇಶ್ ಸಹಕರಿಸಿದರು.

ವಿಭಿನ್ನ ಸಭಾ ಕಾರ್ಯಕ್ರಮ

ಪ್ರತಿ ಹುಣ್ಣಿಮೆಗೂ ಇಲ್ಲಿ ಸಂಗೀತ ವೈಭವ ನಡೆಯುವ ಮುನ್ನ ವಿಶಿಷ್ಟವಾದ ರೀತಿಯಲ್ಲಿ ಸಭಾ ಕಾರ್ಯಕ್ರಮವೂ ನಡೆಯುತ್ತದೆ. ರಂಗ ಮಂದಿರದ ಸುತ್ತ ದೀಪದ ಬೆಳಕು ಚಂದ್ರನ ಬೆಳದಿಂಗಳಿಗೆ ಸೆಡ್ಡು ಹೊಡೆಯುವಂತಿದ್ದರೆ ಅತಿಥಿಗಳು, ಅಭ್ಯಾಗತರು ಹಚ್ಚುವ ದೀಪ ಇನ್ನಷ್ಟು ಮೆರುಗು ನೀಡುತ್ತದೆ.

ಸಂಸ್ಕೃತಿ ಕೇಂದ್ರದ ಅಧ್ಯಕ್ಷರಾದ ರಾಜಾರಾವ್, ಮಲ್ಲೇಶ್ವರ ಆರ್ಯವೈಶ್ಯ ಸಂಘದ ಅಧ್ಯಕ್ಷ ಡಾ. ಪಿ.ಎನ್. ಗೋವಿಂದರಾಜುಲು ಹಾಗೂ ಜೀರಿಗೆ ಲೋಕೇಶ್ ಅವರು ದೀಪ ಬೆಳಗಿದರು.

ಒಟ್ಟು ಕಾರ್ಯಕ್ರಮದ ರೂವಾರಿ ಕಾಡುಮ್ಲ್ಲಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರಾದ ಬಿ.ಕೆ. ಶಿವರಾಮ್ ಅವರು. ನೆಲ-ಜಲ-ಹಸಿರು- ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ಮಹತ್ತರ ಧ್ಯೇಯ ಹೊತ್ತ ಗೆಳೆಯರ ಬಳಗ ಆಯೋಜಿಸುವ ಈ ಕಾರ್ಯಕ್ರಮ ನಿಜಕ್ಕೂ ಅನುಕರಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.