`ದೇವರ ಹರಕೆಗಾಗಿ ಮಾಂಸಾಹಾರ ತಿನ್ನುವುದನ್ನು ಬಿಟ್ಟಿರುವೆ. ಅದು ನನ್ನ ಫಿಟ್‌ನೆಸ್‌ಗೂ ನೆರವಾಗಿದೆ~ ಎಂದು ನಕ್ಕರು ಹಾರ್ದಿಕಾ ಶೆಟ್ಟಿ.
ಹೊಳೆವ ಮೈಕಾಂತಿಯ ಸಪೂರ ಚೆಲುವೆ ಹಾರ್ದಿಕಾ ಮಂಗಳೂರಿನವರು. ಅವರೀಗ `ಬೆಂಗಳೂರು ಮೆಟ್ರೊ~ ಮತ್ತು `ಗಲಾಟೆ~ ಚಿತ್ರಗಳ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ನಿಶಾ ಶೆಟ್ಟಿ ಎಂಬ ತಮ್ಮ ನಾಮಾಂಕಿತವನ್ನು ಹಾರ್ದಿಕಾ ಎಂದು ಬದಲಿಸಿಕೊಂಡು ಸಂಖ್ಯಾಶಾಸ್ತ್ರದ ಮ್ಯಾಜಿಕ್ ನಡೆಯುವುದೇ ಎಂದು ಕಾದು ಕುಳಿತಿದ್ದಾರೆ.
`ನಟಿಯಾದ ಮೇಲೆ ಚೆನ್ನಾಗಿ ಕಾಣಿಸುವುದು ತುಂಬಾನೆ ಮುಖ್ಯ~ ಎನ್ನುವ ಅವರು ಫಿಟ್‌ನೆಸ್‌ಗೆ ಆದ್ಯತೆ ನೀಡುವ ನಟಿ. `ಪ್ರತಿದಿನ ಕನಿಷ್ಠ ಒಂದು ಗಂಟೆ ಯೋಗ ಮಾಡುವೆ. ಅದೇ ನನ್ನ ಆರೋಗ್ಯಕರ ಮೈಕಾಂತಿಯ ಗುಟ್ಟು. ಆಗಾಗ ಏರೋಬಿಕ್ಸ್ ಕೂಡ ಮಾಡುತ್ತೇನೆ.
ಆದರೆ ನಿಯಮಿತವಾಗಿ ಯೋಗ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲ~ ಎನ್ನುವ ಅವರಿಗೆ ತಿನ್ನುವ ಆಹಾರದ ಬಗ್ಗೆಯೂ ಎಚ್ಚರ ಇದೆ. ಕೇವಲ ಸಣ್ಣಗಾಗಬೇಕು ಎಂದು ಅತಿಯಾದ ಡಯಟಿಂಗ್‌ಗೆ ಮೊರೆಹೋಗದ ಅವರು ಆರೋಗ್ಯಕರ ಡಯಟಿಂಗ್‌ಗೆ ಮನಸೋತವರು.
`ಅನ್ನ ಜಾಸ್ತಿ ತಿಂದರೆ ಮುಖ ಊದಿಬಿಡುತ್ತದೆ. ಅದಕ್ಕೇ ನಾನು ಅನ್ನ ತಿನ್ನಲ್ಲ. ಹೆಚ್ಚಾಗಿ ತರಕಾರಿ, ಹಣ್ಣು ತಿನ್ನುತ್ತೇನೆ, ಜ್ಯೂಸ್‌ಗಳನ್ನು ಕುಡಿಯುತ್ತೇನೆ. ಜಂಕ್‌ಫುಡ್ ತಿನ್ನುವುದೇ ಇಲ್ಲ. ಇನ್ನು ನನ್ನಿಷ್ಟದ ಚಿಕನ್ ತಿನ್ನುವುದನ್ನು ಬಿಟ್ಟುಬಿಟ್ಟಿದ್ದೇನೆ~ ಎಂದು ಪಟ್ಟಿ ಒಪ್ಪಿಸುತ್ತಾರೆ.
ಅವರು ಮಾಂಸಾಹಾರ ತ್ಯಜಿಸಿರುವುದರ ಹಿಂದೆ ಫಿಟ್‌ನೆಸ್‌ಗಿಂತ ಹೆಚ್ಚಾಗಿ ದೇವರಿಗೆ ಮಾಡಿಕೊಂಡಿರುವ ಹರಕೆಯೇ ಕಾರಣ. ತಾವು ಜನಪ್ರಿಯ ನಟಿಯಾಗಬೇಕೆಂಬ ಸಂಕಲ್ಪ ತೊಟ್ಟು ಇಷ್ಟದ ಮಾಂಸಾಹಾರವನ್ನು ಬಿಟ್ಟಿದ್ದಾರಂತೆ. ಜೊತೆಗೆ ಅದು ಫಿಟ್‌ನೆಸ್‌ಗೂ ಸಹಕಾರಿಯಾಗಿದೆ ಎನ್ನುತ್ತಾರವರು.
`ಮಾಂಸಾಹಾರದಿಂದ ದೇಹದಲ್ಲಿ ಹೆಚ್ಚು ಕೊಬ್ಬಿನಂಶ ಶೇಖರಣೆಯಾಗುತ್ತದೆ. ಅದನ್ನು ಬಿಡುವುದರಿಂದ ಕೊಬ್ಬು ದೇಹದಲ್ಲಿ ಸೇರುವುದನ್ನು ನಿಯಂತ್ರಿಸಬಹುದು. ನಾನು ಯಾವುದೇ ಡಯಟೀಶಿಯನ್ ಅಥವಾ ಫಿಟ್‌ನೆಸ್ ಗುರುಗಳನ್ನು ಆಶ್ರಯಿಸಿಲ್ಲ. ಆರೋಗ್ಯಕರವಾದ ಹವ್ಯಾಸಗಳನ್ನು ಸಣ್ಣಂದಿನಿಂದ ಬೆಳೆಸಿಕೊಂಡಿರುವುದರಿಂದ ನನ್ನ ವೃತ್ತಿಗೆ ಅದು ನೆರವಾಗಿದೆ~ ಎನ್ನುತ್ತಾರೆ.
`ನಟಿಯಾಗಿ ಮೈಕಟ್ಟು ಕಾಯ್ದುಕೊಳ್ಳುವುದು ಎರಡನೆಯ ಸಂಗತಿ. ಆದರೆ ಮಾನವರಾಗಿ ಆರೋಗ್ಯವಂತ ಮೈಕಟ್ಟು ಹೊಂದುವುದು ಎಲ್ಲರಿಗೂ ಮುಖ್ಯ~ ಎನುವುದರಲ್ಲಿ ನಂಬಿಕೆ ಇಟ್ಟಿರುವ ಹಾರ್ದಿಕಾಗೆ ಮೈಯ್ಯಲ್ಲಿ ಆರೋಗ್ಯ ಇಲ್ಲದಿದ್ದರೆ ಮುಖದ ಕಾಂತಿ ಮೆರೆಯಾದಂತೆ ಎನಿಸಿದೆ.
ನಟಿಯಾಗಿರುವುದರಿಂದ ಕೊಂಚ ಹೆಚ್ಚು ಫಿಟ್‌ನೆಸ್ ಕಡೆ ಗಮನಹರಿಸಿರುವ ಹಾರ್ದಿಕಾ ಸಣ್ಣಗಿದ್ದರೂ ಆಕರ್ಷಕವಾಗಿರಬೇಕೆಂಬಾಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.