ADVERTISEMENT

'ಹಿಂದಿ ಹಾಡುಗಳತ್ತ ಎಫ್‌ಎಂ ಮರುಪಯಣ' ಲೇಖನಕ್ಕೆ ಪ್ರತಿಕ್ರಿಯೆ...

​ಪ್ರಜಾವಾಣಿ ವಾರ್ತೆ
Published 20 ಜನವರಿ 2013, 19:59 IST
Last Updated 20 ಜನವರಿ 2013, 19:59 IST
'ಹಿಂದಿ ಹಾಡುಗಳತ್ತ ಎಫ್‌ಎಂ ಮರುಪಯಣ' ಲೇಖನಕ್ಕೆ ಪ್ರತಿಕ್ರಿಯೆ...
'ಹಿಂದಿ ಹಾಡುಗಳತ್ತ ಎಫ್‌ಎಂ ಮರುಪಯಣ' ಲೇಖನಕ್ಕೆ ಪ್ರತಿಕ್ರಿಯೆ...   

ಯಾಕೆ ಮೌನ?
`ಮೆಟ್ರೊ'ದಲ್ಲಿ ಇಷ್ಟೆಲ್ಲಾ ಪ್ರತಿಕ್ರಿಯೆಗಳು ಪ್ರಕಟವಾದರೂ ಒಂದೇ ಒಂದು ಎಫ್‌ಎಂ ವಾಹಿನಿ ಕೂಡ ಪ್ರತಿಕ್ರಿಯೆ ನೀಡದೇ ಇರುವುದು ವಿಪರ್ಯಾಸ. ಅಲ್ಲಿನ ಅಧಿಕಾರಿಗಳಿಗೆ ಈ ವಿಷಯ ಗೊತ್ತಿಲ್ಲ ಎಂದು ಅರ್ಥವಲ್ಲ. ಬಹುಶಃ ಅವರದ್ದು ಜಾಣ ಮೌನ ಇರಬೇಕು. ಒಂದು ವೇಳೆ ಹಿಂದಿ ಹಾಡುಗಳನ್ನು ಕೇಳಿಸುವ ಅವುಗಳ ನಿರ್ಧಾರ ಸಮಂಜಸವಾಗಿದ್ದರೆ ಅಥವಾ ಗುಣಮಟ್ಟದ ದೃಷ್ಟಿಯಿಂದ ಸಮರ್ಥನೆ ಇದ್ದರೆ ಅದು ತಪ್ಪಲ್ಲ. ಆದರೆ ಅದನ್ನು ಎಫ್‌ಎಂ ವಾಹಿನಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕಷ್ಟೆ.
-ರಂಗನಾಥ

ಅನವಶ್ಯಕ `ರೀಲ್'

ರೇಡಿಯೊ ಯುಗ ಪುನಃ ಜೀವ ಪಡೆದಿದ್ದೇ ಎಫ್‌ಎಂ ಚಾನೆಲ್‌ಗಳಿಂದ. ಎಫ್‌ಎಂ ಪ್ರಖ್ಯಾತಿ ಪಡೆಯುತ್ತಿದ್ದಂತೆಯೇ ಎಫ್‌ಎಂ ಚಾನೆಲ್‌ಗಳ ಪೈಪೋಟಿ ಶುರುವಾಯಿತು. ಜನರ ಅಭಿರುಚಿಗೆ ತಕ್ಕಂತೆ ಎಫ್‌ಎಂ ಸಂತೆಗಳಲ್ಲಿ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕೆಲವೊಮ್ಮೆ ಅವರ ಅಭಿರುಚಿಗೆ ತಕ್ಕಂತೆ ಕೇಳುಗರನ್ನು ಪರಿವರ್ತಿಸಲಾಗುತ್ತಿದೆ. ಆರ್‌ಜೆಗಳು ಇಲ್ಲಸಲ್ಲದ ಅನವಶ್ಯಕ ರೀಲ್ ಬಿಡುವುದೇ ನಿಪುಣತೆ ಎಂದು ತಿಳಿದುಕೊಂಡಿರಬಹುದೇನೋ? ಟ್ರಾಫಿಕ್ ಮಾಹಿತಿ ಬಿಟ್ಟು ಚರ್ಚೆ ಮಾಡಲು ಬೇರೆ ವಿಷಯಗಳೇ ಇಲ್ಲವೆಂಬಂತೆ ಕಾಣುತ್ತದೆ.

ಕೆಲವು ವಿಷಯಗಳನ್ನು ಹೊರತು ಪಡಿಸಿ ಅವರು ಚರ್ಚೆ ಮಾಡುವ ವಿಷಯಗಳಿಂದ ಸಾಮಾನ್ಯ ಜನರಿಗೆ ಯಾವ ರೀತಿಯ ಜ್ಞಾನಾರ್ಜನೆಯಂತೂ ಆಗದು. ಯಾವುದೇ ಭಾಷೆಯ ಎಫ್‌ಎಂ ಚಾನೆಲ್ ಆಗಿರಲಿ ಸಾಮಾಜಿಕ ಜವಾಬ್ದಾರಿ ಹೊತ್ತು ತನ್ನ ಕೆಲಸ ನಿಭಾಯಿಸಿದರೆ ಸಮಾಜದಲ್ಲಿ ಖಂಡಿತವಾಗಿಯೂ ಅಷ್ಟೋ ಇಷ್ಟೋ ಬದಲಾವಣೆ ಸಾಧ್ಯ. ಇದಕ್ಕೆ ವಿವಿಧ ಭಾರತಿಯ `ಸಹೇಲಿ', `ರೌಶ್ನಿ ಕಾ ಕಾರ್ವಾನ್' ಮುಂತಾದ ಕಾರ್ಯಕ್ರಮಗಳೇ ಸಾಕ್ಷಿ. ಮುಂದಿನ ದಿನಗಳಲ್ಲಿ ಬರೀ ವಾರ್ತೆಗಳ ಎಫ್‌ಎಂಗಳು ಸಹ ಬರಬಹುದು. ಅದು ರಾಜಕೀಯ ವ್ಯಕ್ತಿಗಳ ಸ್ವತ್ತಾಗದಿದ್ದರೆ ಸಾಕು.
-ಜಬೀವುಲ್ಲಾ ಖಾನ್

ದಾರಿ ಮರೆಯುವುದು ಸಲ್ಲ

ಬೆಂಗಳೂರಿಗೆ ಕಾಲಿಟ್ಟ 2005ರಿಂದ ಎಫ್‌ಎಂ ವಾಹಿನಿಗಳನ್ನು ಕೇಳುತ್ತಿರುವೆ. ಹಿಂದಿ, ಇಂಗ್ಲಿಷ್ ಹಾಡುಗಳಿಂದ ಜನರಿಂದ ದೂರವೇ ಉಳಿದಿದ್ದ ಈ ವಾಹಿನಿಗಳು ಜನರ ಹತ್ತಿರ ಬಂದಿದ್ದೇ ಕನ್ನಡ ಸಂಗೀತ ಹಾಡುಗಳ ಮೂಲಕ. ರೇಡಿಯೋ ಮಿರ್ಚಿ ಮೂಲಕ ಒಂದೊಂದೇ ವಾಹಿನಿಗಳು ಕನ್ನಡ ಸಂಗೀತ ನೀಡುವ ಮೂಲಕ ಆಟೊ ಚಾಲಕರಿಂದ ಹಿಡಿದು, ಡಾಕ್ಟರ್‌ಗಳವರೆಗೆ ಅನೇಕರು ಶ್ರೋತೃಗಳಾದರು. ಇದರಿಂದ ಇವುಗಳ ಮಾರುಕಟ್ಟೆ ದಿನೇದಿನೇ ವೃದ್ಧಿಯಾಯಿತು. ಕನ್ನಡವನ್ನೇ ನೀಡುತ್ತೇವೆ ಎಂದು ಒಂದಕ್ಕೊಂದು ಸ್ಪರ್ಧೆಗಿಳಿದು ಕೇಳುಗರನ್ನ ಹೆಚ್ಚಿಸಿಕೊಂಡು, ಇದೀಗ ತಾವು ಬಂದ ದಾರಿಮರೆತು ಹಿಂದಿಗೆ ಜೋತುಬ್ದ್ದಿದು ಹಳೆ ಸ್ಥಿತಿಗೆ ಮರುಳುತ್ತಿವೆ.

ಮನೋಮೂರ್ತಿ, ವಿ.ಹರಿಕೃಷ್ಣ, ಅರ್ಜುನ್ ಜನ್ಯ ಮುಂತಾದ ಸಂಗೀತಕಾರರು ಒಳ್ಳೆಯ ಹಾಡುಗಳನ್ನೇ ನೀಡುತ್ತಿದ್ದಾರೆ. ಇನ್ನು ಗುರುಕಿರಣ್, ಸಾಧು ಕೋಕಿಲ, ವಿ.ಮನೋಹರ್ ಕೂಡ ಉತ್ತಮ ಲಯದಲ್ಲೇ ಇದ್ದಾರೆ. ಕನ್ನಡ ಚಿತ್ರರಂಗದ ಕಥೆಗಳು ಸೋತ ಮಾತ್ರಕ್ಕೆ ಸಂಗೀತ ಸೋತಂತೆ ಅಲ್ಲ. ಹಿಂದಿಯಲ್ಲೂ ಕರ್ಕಶ ಐಟಂ ಗೀತೆಗಳಿವೆ. ಅವುಗಳನ್ನು ಕೇಳಿಸುವ ಬದಲು ಕನ್ನಡದ ಸಂಗೀತವನ್ನು ಮುಂದುವರಿಸಿದರೆ ವಾಹಿನಿಗಳ ವಹಿವಾಟು ಅಭಿವೃದ್ಧಿ ಸಾಧ್ಯ. ನನಗೆ `ಚಿಕಿನಿ ಚಮೇಲಿ' ಅನ್ನೋ ಹಾಡಿಗಿಂತ `ತೊಂದರೆ ಇಲ್ವಾ ಪಂಕಜ' ಅನ್ನೋ ಗೀತೆಯೇ ಬೇಕು!
-ಜಯತೀರ್ಥ ಬಾ.ನಾಡಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.