ADVERTISEMENT

ಹೈಟೆಕ್ ದೋಬಿಘಾಟ್ ಒಗೆತ ಫಟಾಫಟ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST
ಹೈಟೆಕ್ ದೋಬಿಘಾಟ್ ಒಗೆತ ಫಟಾಫಟ್
ಹೈಟೆಕ್ ದೋಬಿಘಾಟ್ ಒಗೆತ ಫಟಾಫಟ್   

ಮಲ್ಲೇಶ್ವರದ ಸ್ವಿಮಿಂಗ್ ಪೂಲ್ ದಾರಿಯಲ್ಲಿ ಸಾಗುವಾಗ ಅನತಿ ದೂರದಲ್ಲಿ ದೃಷ್ಟಿ ಹಾಯಿಸಿದರೆ ಬೆಳ್ಳಕ್ಕಿಗಳ ಸಾಲು ಕಂಡಂತೆ ಭಾಸವಾಗುತ್ತದೆ. ಸಾವಿರಾರು ಬೆಳ್ಳಕ್ಕಿಗಳು ಒಂದೆಡೆ ಮೀಟಿಂಗ್ ಮಾಡುತ್ತಿವೆ ಎಂದು ಎನಿಸಿದರೂ ಅಚ್ಚರಿಯಿಲ್ಲ.
 
ಇಲ್ಲಿ ಯಾಕೆ, ಇಷ್ಟೊಂದು ಬೆಳ್ಳಕ್ಕಿ ಎಂದುಕೊಂಡು ಸ್ವಲ್ಪ ಸಮೀಪ ಹೋದರೆ ಕಾಣುವುದು ಬಟ್ಟೆಗಳ ರಾಶಿ. ಎಲ್ಲವೂ ಶುಭ್ರ ಬೆಳ್ಳಗಿನ ಬಟ್ಟೆಗಳೇ. ಅವುಗಳ ನಡುವೆ ಬಣ್ಣದ ವಸ್ತ್ರಗಳ ಅಂದ. ಅಬ್ಬಬ್ಬಾ! ಸಾವಿರಾರು ಬಟ್ಟೆಗಳು. ಎಲ್ಲವೂ ತುಂಬಾ ಕ್ಲೀನ್. ಅದು ಹೇಗಪ್ಪ ಎಂಬ ಪ್ರಶ್ನೆ ಇಟ್ಟುಕೊಂಡು ಇನ್ನೂ ಸಮೀಪ ಹೋದರಷ್ಟೆ ನಿಜ ಸಂಗತಿ ಏನೆಂದು ತಿಳಿದೀತು.

ಅದು ರಾಜ್ಯದಲ್ಲಿನ ಏಕೈಕ ಹೈಟೆಕ್ ದೋಬಿಘಾಟ್ ಕಮಾಲ್! ಬಿಬಿಎಂಪಿ ವತಿಯಿಂದ ಈ ದೋಬಿಘಾಟ್‌ಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಬಟನ್ ಒತ್ತಿದರೆ ಸಾಕು, ಮುಂದಿನ ಕೆಲಸ ಸಲೀಸು. ಇಲ್ಲಿ ಒಂದು ದಿನ ಎಡೆಬಿಡದೆ ಕೆಲಸ ಮಾಡಿದರೆ ಎಷ್ಟು ಬಟ್ಟೆ ತೊಳೆಯಬಹುದು ಎಂದು ಊಹಿಸಬಲ್ಲೆರಾ? 10 ಸಾವಿರ, 50ಸಾವಿರ, 1 ಲಕ್ಷ... ಅಲ್ಲ.
ಸುಮಾರು ನಾಲ್ಕು ಲಕ್ಷ ಬಟ್ಟೆಗಳನ್ನು ಇಲ್ಲಿ ತೊಳೆಯಬಹುದು. 40 ನಿಮಿಷದಲ್ಲಿ 15 ಸಾವಿರ ಬಟ್ಟೆಗಳನ್ನು ತೊಳೆಯಬಲ್ಲ ಸಾಮರ್ಥ್ಯ ಇಲ್ಲಿ ಅಳವಡಿಸಲಾದ ಮಷಿನ್‌ಗಳಿಗೆ ಇದೆ. ಸುಮಾರು ಒಂದು ಸಾವಿರ ಮಡಿವಾಳ ಕುಟುಂಬದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

50 ಕೆ.ಜಿ, 100 ಕೆ.ಜಿ ಮತ್ತು 200 ಕೆ.ಜಿ. ಸಾಮರ್ಥ್ಯದ ಮೂರು ವಾಷಿಂಗ್ ಮಷಿನ್‌ಗಳನ್ನು ಅಳವಡಿಸಲಾಗಿದೆ. ಒಂದು ಬಾರಿಗೆ 40-50 ಕೆ.ಜಿ ಬಟ್ಟೆಗಳನ್ನು ತುಂಬಬಹುದಾಗಿದೆ. ಇದಕ್ಕೆ ಇಂಡಸ್ಟ್ರಿಯಲ್ ಇನ್ಸ್‌ಟಿಟ್ಯೂಷನ್ ಲಾಂಡ್ರಿ ಕೆಮಿಕಲ್ ಬಳಸಲಾಗುತ್ತಿದೆ.

ಬೆಂಗಳೂರು ಒಂದರಲ್ಲಿಯೇ 14 ದೋಬಿಘಾಟ್ ಇದೆ. ಆದರೆ, ಇಷ್ಟು ಬಟ್ಟೆಗಳನ್ನು ತೊಳೆಯುವ ಸಾಮರ್ಥ್ಯ ಇರುವುದು ಈ ಒಂದು ಸ್ಥಳದಲ್ಲಿ ಮಾತ್ರ ಎನ್ನುತ್ತಾರೆ ರಾಜ್ಯ ಮಡಿವಾಳ ಸಂಘದವರು.

ಯಾವ್ಯಾವ ಬಟ್ಟೆಗಳ ಒಗೆತ?
ಇಷ್ಟೆಲ್ಲ ವಸ್ತ್ರಗಳು ಇಲ್ಲಿ ಹೇಗೆ ಬಂತು, ದೋಬಿಘಾಟ್ ಉದ್ದೇಶ ಏನು ಎನ್ನುವುದು ಹಲವರಿಗೆ ತಿಳಿದಿರಲಿಲ್ಲ. ಹೋಟೆಲ್, ಕಾರ್ಖಾನೆ, ದೊಡ್ಡ ದೊಡ್ಡ ಕಂಪೆನಿಗಳಲ್ಲಿ, ಸಿಬ್ಬಂದಿ ಬಳಕೆ ಮಾಡುವ ಸಮವಸ್ತ್ರ, ಹೋಟೆಲ್‌ಗಳಲ್ಲಿ ಟೇಬಲ್‌ಗಳ ಮೇಲೆ ಹಾಕುವ ವಸ್ತ್ರ, ಶಾಮಿಯಾನ ಇತ್ಯಾದಿಯನ್ನು  ಶುಚಿಗೊಳಿಸಿ ಕೊಡುವುದೇ ದೋಬಿಘಾಟ್ ಉದ್ದೇಶ.

ಇಲ್ಲಿ ಕೆಲಸ ಮಾಡುವವರು ಮಡಿವಾಳ ಸಮುದಾಯಕ್ಕೆ ಸೇರಿದ ಜನ. ಬಟ್ಟೆ ತೊಳೆಯುವುದು ಇವರ ಮೂಲ ಕಸುಬು. ಸಮವಸ್ತ್ರವಾಗಲೀ, ಸ್ಟಾರ್ ಹೋಟೆಲ್‌ಗಳಲ್ಲಿ ಬಳಕೆ ಮಾಡುವ ವಸ್ತ್ರಗಳಾಗಲಿ ಕೊಳೆಯಾದರೆ ನಡಿದೀತೆ? ಅಲ್ಲಿ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಅದಕ್ಕಾಗಿಯೇ ಅಲ್ಲಿಯ ವಸ್ತ್ರಗಳನ್ನೆಲ್ಲ ದೋಬಿಘಾಟ್‌ಗೆ ನೀಡಲಾಗುತ್ತದೆ. ಇದನ್ನೇ ನಂಬಿ ಸಾವಿರಾರು ಮಡಿವಾಳ ಕುಟುಂಬಗಳು ಜೀವನ ಸಾಗಿಸುತ್ತಿವೆ. ಕಂಪೆನಿಗಳು, ಹೋಟೆಲ್‌ಗಳು ನೀಡುವ ಶುಲ್ಕದಿಂದ ಇಲ್ಲಿ ಕೆಲಸ ಮಾಡುವವರ ಬದುಕು ನಡೆಯುವುದು.

ಎಲ್ಲವೂ ಸುಲಭ
ಮಲ್ಲೇಶ್ವರದ ಬಳಿಯ ದೋಬಿಘಾಟ್‌ಗೆ ಹೈಟೆಕ್ ಸ್ಪರ್ಶ ನೀಡಿದ ಮೇಲೆ ಆಗಿರುವ ಕ್ರಾಂತಿಯ ಕುರಿತು ಮಡಿವಾಳ ಸಂಘದ ಅಧ್ಯಕ್ಷ ಬಾಲಕೃಷ್ಣ ಹಾಗೂ ಕಾರ್ಯದರ್ಶಿ ಜಿ.ಎಸ್. ಪುಟ್ಟರಂಗಯ್ಯ ಹೀಗಂತಾರೆ:

`ದೋಬಿಘಾಟ್‌ನಲ್ಲಿ ಕೆಲಸ ಮಾಡೋದು ಅಂದ್ರೆ ಅಷ್ಟು ಸುಲಭವಲ್ಲ. ಗಂಟೆಗಟ್ಟಲೆ ಕೆಮಿಕಲ್ ಮತ್ತು ಡಿಟರ್ಜೆಂಟ್ ನೀರಿನಲ್ಲಿ ನಿಲ್ಲಬೇಕು. ವಸ್ತ್ರ ಕ್ಲೀನ್ ಆಗಿಲ್ಲ ಎಂದರೆ ಮಾಲೀಕರು ಕೇಳ್ತಾರೆಯೇ, ಒಮ್ಮೆ ಸ್ವಲ್ಪ ತಪ್ಪಾದರೂ ಮತ್ತೆ ಅವರು ಬಟ್ಟೆ ಕೊಡೋದೇ ಇಲ್ಲ.

ಆದ್ದರಿಂದ ಎಷ್ಟೇ ಕಷ್ಟ ಆದರೂ ಕೆಲಸದವರು ಶ್ರಮಪಟ್ಟು ಕೆಲಸ ಮಾಡಲೇಬೇಕು. ಇದರಿಂದ ದೋಬಿಘಾಟ್‌ಗಳಲ್ಲಿ ಕೆಲಸ ಮಾಡುವ ಮಡಿವಾಳರು ಅನೇಕ ಕಾಯಿಲೆಗಳಿಂದ ನರಳುವಂತಾಗಿತ್ತು. ಚರ್ಮ ರೋಗ, ಅಸ್ತಮಾ, ಉಸಿರಾಟದ ತೊಂದರೆ ಒಂದೇ ಎರಡೇ. ಅವರು ದುಡಿಯುವ ದುಡ್ಡು ಅರ್ಧಕ್ಕರ್ಧ ಡಾಕ್ಟರ್‌ಗೇ ನೀಡುವಂತಾಗುತ್ತಿದೆ.

ಬೆಳಗಿನ ಜಾವ ಚಳಿ, ಮಳೆಯನ್ನೂ ಲೆಕ್ಕಿಸದೆ ತಣ್ಣೀರಿನಿಂದ ಕೆಲಸ ಮಾಡ್ತಾ ಇರಬೇಕಿತ್ತು. ಈಗ ಕೆಲವು ಕೆಲಸಗಳನ್ನು ಮಷಿನ್ ಮಾಡುತ್ತದೆ. ಆದುದರಿಂದ ಕೆಲಸಗಾರರ ಆರೋಗ್ಯ ಸುಧಾರಿಸಿದೆ, ಕಡಿಮೆ ಶ್ರಮ, ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬಹುದಾಗಿದೆ. ಆರೋಗ್ಯ ಕಾಪಾಡುವುದರ ಜೊತೆಗೆ ಹೈಜಿನಿಕ್ ವಾಷ್ ಕೂಡ ಮಾಡಲು ಸಾಧ್ಯವಾಗಿದೆ.

ರಾಜ್ಯದ ಎಲ್ಲ ದೋಬಿಘಾಟ್‌ಗಳನ್ನು ಹೈಟೆಕ್ ಮಾಡಬೇಕು ಎಂದು ನಮ್ಮ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಈಗಾಗಲೇ ಮಹಾಲಕ್ಷ್ಮಿ ಬಡಾವಣೆ, ಆಸ್ಟೀನ್ ಟೌಬ್, ಸಿಂಗಪುರ ಮಾರ್ಕೆಟ್ ಮತ್ತು ಶ್ರೀನಗರದಲ್ಲಿ ಟೆಂಡರ್ ಕರೆಯಲಾಗಿದೆ. ಇವೆಲ್ಲವೂ ಹೈಟೆಕ್ ಆದರೆ ನಮ್ಮ ಜನಾಂಗದವರು ನೆಮ್ಮದಿಯ ಉಸಿರು ಬಿಡುತ್ತಾರೆ.~

ಅಂದಹಾಗೆ, ಮಲ್ಲೇಶ್ವರದಲ್ಲಿನ ದೋಬಿಘಾಟ್ ಅಸ್ವಿತ್ವಕ್ಕೆ ಬಂದದ್ದು 1970ರಲ್ಲಿ. ಹೈಟೆಕ್ ಆದದ್ದು ಈಗ. 
 

 ಚಿತ್ರಗಳು: ವಿಶ್ವನಾಥ ಸುವರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT