ADVERTISEMENT

ಹೊಸತನದ ಸಂಭ್ರಮದಲ್ಲಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ಹೊಸತನದ ಸಂಭ್ರಮದಲ್ಲಿ
ಹೊಸತನದ ಸಂಭ್ರಮದಲ್ಲಿ   

ಎಲ್ಲರ ಮುಖದಲ್ಲೂ ಹೊಸತನದ ಸಂಭ್ರಮ, ಅಲ್ಲಿ ಒಂದೆಡೆ ಸೇರಿದ್ದ ಯುವಮನಸ್ಸಿನ ತವಕ ತಲ್ಲಣಗಳೂ ಸಂತಸದ ರೂಪ ಪಡೆದುಕೊಂಡಿತ್ತು. ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರು ಆಯೋಜಿಸಿದ್ದ ವಿಭಿನ್ನ ಕಾರ್ಯಕ್ರಮಗಳಲ್ಲಿ ಕಾಲೇಜಿಗೆ ಹೊಸದಾಗಿ ಸೇರಿಕೊಂಡ ಕಿರಿಯ ವಿದ್ಯಾರ್ಥಿನಿಯರೆಲ್ಲಾ ಕುಣಿದು ಕುಪ್ಪಳಿಸಿದ್ದರು.

ಈ ಕ್ಷಣಗಳಿಗೆ ವೇದಿಕೆಯಾಗಿದ್ದು ನಗರದ ಮೌಂಟ್ ಕಾರ್ಮಲ್ ಕಾಲೇಜು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿನಿಯರಿಗೆಂದೇ ಹಿರಿಯ ವಿದ್ಯಾರ್ಥಿನಿಯರೆಲ್ಲಾ ಕೂಡಿ ಮೂರು ದಿನಗಳ `ಫ್ರೆಶರ್ಸ್‌ ಪಾರ್ಟಿ~ ನಡೆಸಿಕೊಟ್ಟರು. ತಮ್ಮ ಕಾಲೇಜಿಗೆ ಕಾಲಿಟ್ಟ ಕಿರಿಯರನ್ನು ಸಂತಸ ಪಡಿಸುವ ಸಲುವಾಗಿ ಅವರಿಗೆಂದೇ ತರಾವರಿ ಮನರಂಜನಾ ಸ್ಪರ್ಧೆಗಳನ್ನು ಹಿರಿಯ ವಿದ್ಯಾರ್ಥಿನಿಯರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಗಳು ಎಲ್ಲಾ ನಿರ್ಬಂಧಗಳನ್ನು ಮೀರಿ ನಕ್ಕು ನಲಿಯುವಂತೆ ಅವರನ್ನು ಪ್ರೇರೇಪಿಸಿದವು. ಮೂರೂ ದಿನಗಳ ಕಾಲ ಈ ಕಾರ್ಯಕ್ರಮ ಜರುಗಿತು.

`ನಮ್ಮ ಕಿರಿಯರು ಕಾಲೇಜಿಗೆ ಮಾತ್ರವಲ್ಲ, ಬದುಕಿನ ಹೊಸ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ಸಂತಸ ನೀಡಬೇಕು. ಜತೆಗೆ ನಾವೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಅವರಲ್ಲಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು. ಸುಮಾರು 60 ಬಗೆಯ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು~ ಎಂದರು ಮೌಂಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಗಾಯತ್ರಿ.

`ಕಾಲೇಜಿನ ಎಲ್ಲಾ ವಿಭಾಗದವರೂ ಇದಕ್ಕೆ ಕೈಜೋಡಿಸಿದ್ದಾರೆ. ಹಿರಿಯ, ಕಿರಿಯ ವಿದ್ಯಾರ್ಥಿನಿಯರೆಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿತ್ತು~ ಎಂದು ವಿವರಣೆ ನೀಡಿದರು.

“ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿರುವುದು ನನ್ನ ಮೊದಲ ಅನುಭವ. ಒಂದೊಂದು ದಿನವೂ ಒಂದೊಂದು ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನ `ಕಾರ್ಟೂನ್~, ಎರಡನೇ ದಿನ `ಮಿಕ್ಸ್ ಆ್ಯಂಡ್ ಮ್ಯಾಚ್~, ಮೂರನೇ ದಿನ `ಫೇರಿಟೇಲ್~ ಎಂಬ ಥೀಮ್ ಇಟ್ಟುಕೊಂಡಿದ್ದೆವು. ಎಲ್ಲಾ ಹುಡುಗಿಯರೂ ನಾವು ಹೇಳಿದ ವಿಷಯಕ್ಕೆ ತಕ್ಕಂತೆ ಉಡುಪು ತೊಟ್ಟು ಬಂದಿದ್ದರು. ಕಾರ್ಯಕ್ರಮಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಬಹಳ ಸಂತಸವಾಯಿತು.

ವಿದ್ಯಾರ್ಥಿನಿಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸ್ಫೂರ್ತಿ ತುಂಬಿತು” ಎಂದು ಸಂತಸ ಹಂಚಿಕೊಂಡವರು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸೋನಿಯಾ ಮರಿಯಾ.
`ಕಿರಿಯ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಸಮಯ. ಅವರು ಹೊಸ ಕಾಲೇಜಿಗೆ ಸೇರ್ಪಡೆಗೊಂಡ ಭಯದಿಂದ ಹೊರಬರಲು ಇದು ಸೂಕ್ತ ವೇದಿಕೆ. ಈ ಕಾಲೇಜಿನ ಸಂಸ್ಕೃತಿಯನ್ನೂ ಅವರು ಬೇಗ ಅರ್ಥ ಮಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅನುವು ಮಾಡಿಕೊಡುತ್ತದೆ~ ಎಂದರು ಮರಿಯಾ.

ಪಾಶ್ಚಾತ್ಯ, ಭಾರತೀಯ ಸಂಗೀತ ಮತ್ತು ನೃತ್ಯ, ಸ್ಟ್ರೀಟ್ ಡ್ಯಾನ್ಸ್, ಟ್ಯಾಲೆಂಟ್ ಶೋ, ಪರ್ಸನಾಲಿಟಿ ಕಾಂಟೆಸ್ಟ್ ಹೀಗೆ ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.

`ಹಿರಿಯರೊಂದಿಗೆ ಇಷ್ಟು ಬೇಗನೆ ಬೆರೆಯುತ್ತೇವೆ ಎಂಬ ಯೋಚನೆಯೂ ಇರಲಿಲ್ಲ, ನಮ್ಮ ಸೀನಿಯರ್ಸ್‌ ನಮೆಲ್ಲಾ ಭಯವನ್ನೂ ಹೋಗಲಾಡಿಸಿದರು. ಸೀನಿಯರ್ ಎಂದಾಕ್ಷಣ ಎಲ್ಲರಿಗೂ ರ‌್ಯಾಗಿಂಗ್ ಮತ್ತು ಭಯ ಎನಿಸುತ್ತದೆ,  ಆದರೆ ಇಲ್ಲಿ ಹೊಸತೊಂದು ಅನುಭವ  ಪಡೆದುಕೊಂಡೆ~ ಎಂದು ತಮ್ಮ ಸಂತಸ ಹಂಚಿಕೊಂಡರು ಮೊದಲ ವರ್ಷದ ಸಂವಹನ ವಿಭಾಗದ ವಿದ್ಯಾರ್ಥಿನಿ ಸೀಮಾ ಕಪೂರ್.

`ನಾವು ಒಳ್ಳೆಯ ಸಮಯವನ್ನು ಹಂಚಿಕೊಳ್ಳಲು ಬಂದಿದ್ದೇವೆ. ಎಲ್ಲ ಎಲ್ಲೆಗಳನ್ನು ಮೀರಿ ಮನಸೋ ಇಚ್ಛೆ ಸಂತಸದಿಂದ ಕುಣಿದು ಕುಪ್ಪಳಿಸಿದೆವು. ನಾನು ತುಂಬಾ ನಾಚಿಕೆ ಸ್ವಭಾವದವಳು. ಆದರೆ ನನ್ನ ಭಯ ಹೋಗಿ ಈಗ ಆತ್ಮವಿಶ್ವಾಸ ಹೆಚ್ಚಾಗಿದೆ. ನಮ್ಮ ಕಾಲೇಜು ದಿನ ಹೀಗೇ ಮುಂದುವರೆಯಲಿ~ ಎಂದು ಆಶಯ ವ್ಯಕ್ತಪಡಿಸಿದರು ಮೊದಲನೆ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅರ್ಪಿತಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.