ADVERTISEMENT

ಹೊಸ ಅಲೆ ಮೇಲೆ ಹುಮಾ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

`ಗ್ಯಾಂಗ್ಸ್ ಆಫ್ ವಸೇಪುರ್' ಚಿತ್ರದಲ್ಲಿನ ತಮ್ಮ ಪಾತ್ರವನ್ನು ಸಮರ್ಥಿಸಿಕೊಂಡಿರುವ ನಟಿ ಹುಮಾ ಕುರೇಷಿ, ವಿದ್ಯಾ ಬಾಲನ್ ಹಾಗೂ ಕಲ್ಕಿ ಕೊಕ್ಲೀನ್ ಅವರು `ಗ್ಲಾಮರ್ ಎಂಬ ಪದಕ್ಕೆ ಹೊಸ ಅರ್ಥವನ್ನು ನೀಡಿದ್ದಾರೆ. ಈಕಾಲಕ್ಕೆ ಅದೇ ಸರಿ' ಎಂದು ಹೇಳಿದ್ದಾರೆ.

`ಗ್ಲಾಮರ್ ದುನಿಯಾ ಊಹೆಗೂ ನಿಲುಕದಷ್ಟು ವೇಗವಾಗಿ ಬದಲಾಗುತ್ತಿದೆ. ವಿದ್ಯಾ ಬಾಲನ್ ಮಾಡಿದ ಮೋಡಿಯನ್ನೇ ನೋಡಿ. ಅವರು ನಿರ್ವಹಿಸಿರುವ ಪಾತ್ರ ಮಹಿಳೆಯರಿಗೆ ಹೊಸತನ್ನು ನೀಡಿದೆ. ಕೊಂಕಣಾ, ಕಲ್ಕಿ ಅವರನ್ನಾಗಲೀ ಅಥವಾ ನನ್ನನ್ನೇ ಆಗಲೀ ಗಮನಿಸಿದಲ್ಲಿ ಬಾಲಿವುಡ್‌ನ ಗ್ಲಾಮರ್‌ಗೆ ಹೊಸ ಅರ್ಥವನ್ನು ನೀಡುವ ಪ್ರಯತ್ನ ನಡೆಸಿದ್ದೇವೆ. ಅದಕ್ಕಾಗಿ ಹೊಸ ಬಗೆಯ ಕಲ್ಪನೆಗಳನ್ನು ಹೊತ್ತು ತಂದ ನಿರ್ದೇಶಕರು ಹಾಗೂ ಬರಹಗಾರರಿಗೆ ಅಭಿನಂದನೆ' ಎಂದು ಹುಮಾ ತಿಳಿಸಿದ್ದಾರೆ.

ಕಲ್ಲಿದ್ದಲು ಮಾಫಿಯಾ ವಸ್ತುವಿನ `ಗ್ಯಾಂಗ್ಸ್ ಆಫ್ ವಸೇಪುರ್' ಚಿತ್ರದಲ್ಲಿನ ಹುಮಾ ಅವರ ಪಾತ್ರ ಹಾಗೂ ಅಭಿನಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. `ನನ್ನನ್ನು ಸೌಂದರ್ಯವತಿ ಎಂದರೆ ಏನೂ ಸಮಸ್ಯೆ ಇಲ್ಲ. ಅದರೊಂದಿಗೆ ಗ್ಲಾಮರ್ ಹಾಗೂ ಆಕರ್ಷಕ ಉಡುಪು ತೊಟ್ಟು ಜತೆಗೊಂದಿಷ್ಟು ಕಠಿಣ ಪರಿಶ್ರಮವೂ ಸೇರಿರುತ್ತದೆ ಎನ್ನುವುದನ್ನೂ ಹೇಳಬಯಸುತ್ತೇನೆ. ದಿನಕ್ಕೆ 14-16 ಗಂಟೆ ಶ್ರಮಪಟ್ಟು ದುಡಿಯುತ್ತೇನೆ. ಆ ಶ್ರಮದಲ್ಲೂ ನಾನು ಖುಷಿಯನ್ನು ಕಂಡುಕೊಂಡಿದ್ದೇನೆ.

ಒಂಬತ್ತು ತಿಂಗಳ ಹಿಂದೆ ನಾನು ಏನೂ ಆಗಿರಲಿಲ್ಲ. ಈಗ ನಿಧಾನವಾಗಿ ಕೆಲಸ ಕಲಿತಿದ್ದೀನಿ. ವೈಯಕ್ತಿಕವಾಗಿ ಬದಲಾಗದಿದ್ದರೂ, ಸಾರ್ವಜನಿಕ ಜೀವನದಲ್ಲೊಂದು ಸ್ಥಾನ ದೊರೆತಿದೆ. ಮಾಧ್ಯಮಗಳೂ ಈಗ ನನ್ನತ್ತ ಬೆರಗುಗಣ್ಣಿನಿಂದ ನೋಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ' ಎಂದು ಹುಮಾ ಉದ್ಗರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.