ADVERTISEMENT

ಹೋರಾಟದ ರೈಲು

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 19:30 IST
Last Updated 5 ಜೂನ್ 2012, 19:30 IST
ಹೋರಾಟದ ರೈಲು
ಹೋರಾಟದ ರೈಲು   

ಅದು ಚೆನ್ನೈ ರೈಲು ನಿಲ್ದಾಣ. ಮೆಟ್ಟಿಲುಗಳನ್ನು ಹತ್ತಿ ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಗಡಿಬಿಡಿಯಲ್ಲಿ ಧಾವಿಸಿದ ಎಪ್ಪತ್ತರ ಆಸುಪಾಸಿನ ಆ ವ್ಯಕ್ತಿ ರೈಲು ಸಿಗದೆ ನಿರಾಸೆಯಿಂದ ಬೆಂಚಿನ ಮೇಲೆ ಕುಳಿತು ನಿಟ್ಟುಸಿರುಬಿಟ್ಟರು.

ದೂರದ ಇಂದೋರ್‌ ನಲ್ಲಿರುವ ಮಗಳ ಮನೆಗೆ ಬೆಂಗಳೂರಿನಿಂದ ಹೊರಟಿದ್ದ ಆ ಹಿರಿಯ ಜೀವ ಅಷ್ಟರಲ್ಲೇ ದಣಿದಿತ್ತು. ಹಾಗೆಯೇ ಕಣ್ಮುಚ್ಚಿ ಕುಳಿತವರಿಗೆ ತಮ್ಮ ಕಾಲೇಜು ದಿನಗಳಲ್ಲಿ ಪತ್ರಿಕೆಯೊಂದರಲ್ಲಿ ಓದಿದ್ದ ವರದಿಯೊಂದು ನೆನಪಿಗೆ ಬಂತು.
 
ಅದೇನೆಂದರೆ- ಅಮೆರಿಕದಲ್ಲಿ ಸಾಮಾನ್ಯ ಪ್ರಜೆಯೊಬ್ಬ ಒಂದು ಪ್ರಮುಖ ನಗರದಿಂದ ನ್ಯೂಯಾರ್ಕ್‌ಗೆ ರೈಲು ಸಂಪರ್ಕ ಬೇಕೆಂದು ಅಂದಿನ ಅಧ್ಯಕ್ಷರಿಗೆ ಪತ್ರ ಬರೆದಿದ್ದ. ಆತನ ಬೇಡಿಕೆಗೆ ಉತ್ತರವಾಗಿ ಕೆಲವೇ ದಿನಗಳಲ್ಲಿ ನ್ಯೂಯಾರ್ಕ್‌ಗೆ ರೈಲು ಸಂಪರ್ಕ ಕಲ್ಪಿಸಲಾಗಿತ್ತು! ಅಂತಹ ಯತ್ನ ಮಾಡುವ ದೃಢನಿರ್ಧಾರವನ್ನು ಅವರೂ ಮಾಡಿದರು.

ಅದು ಹೋರಾಟದ ಹಾದಿ. ಒಂದು ವರ್ಷ ಅದಕ್ಕಾಗಿ ಚಪ್ಪಲಿ ಸವೆಸಿದರು. ಹೀಗೆ ಏಕಾಂಗಿ ಹೋರಾಟ ನಡೆಸಿದವರು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ರಾವ್.

ಹೋರಾಟದ ಹಾದಿ...
ಬೆಂಗಳೂರಿನಿಂದ ಇಂದೋರ್‌ಗೆ ನೇರ ರೈಲು ಸಂಪರ್ಕವಿರಲಿಲ್ಲ. ಹಾಗಾಗಿ ಬೆಂಗಳೂರಿನಿಂದ ಚೆನ್ನೈಗೆ ಹೋಗಿ, ಅಹಲ್ಯನಗರಿ ರೈಲಿನ ಮೂಲಕ ಮಗಳ ಮನೆ ಸೇರುತ್ತಿದ್ದರು. ಅವರಿಗಿದ್ದುದು ಇದೊಂದೇ ಮಾರ್ಗ.

ಚೆನ್ನೈ ರೈಲು ನಿಲ್ದಾಣದಲ್ಲಿ ಮತ್ತೊಂದು ಸಮಸ್ಯೆ ಎದುರಾಗುತ್ತಿತ್ತು. ಅಲ್ಲಿ ರೈಲುಗಾಡಿ ಬರುವ ಐದು ನಿಮಿಷ ಮುಂಚೆಯಷ್ಟೇ ಪ್ಲಾಟ್‌ಫಾರ್ಮ್‌ ನಂಬರ್ ಪ್ರಕಟಿಸಲಾಗುತ್ತಿತ್ತು.

ಇದರಿಂದ ರಾಘವೇಂದ್ರ ರಾವ್ ಅವರಂತಹ ಹಿರಿಯ ನಾಗರಿಕರು ಪ್ಲಾಟ್‌ಫಾರ್ಮ್‌ ಮೆಟ್ಟಿಲುಗಳನ್ನು ಹತ್ತಿ ಇಳಿದು ಅಹಲ್ಯನಗರಿ ರೈಲು ಹೊರಡುವ ಜಾಗ ತಲುಪುವ ಹೊತ್ತಿಗೆ ರೈಲು ಹೊರಟೇ ಹೋಗಿರುತ್ತಿತ್ತು. ಇದು ಬೆಂಗಳೂರಿನಿಂದ ಇಂದೋರ್‌ಗೆ ಹೋಗುವ ಬಹುತೇಕ ಪ್ರಯಾಣಿಕರ ಗೋಳಾಗಿತ್ತು. ಅವರು ಅಂದು ಚೆನ್ನೈ ರೈಲು ನಿಲ್ದಾಣದಲ್ಲಿ ದೃಢನಿರ್ಧಾರಕ್ಕೆ ಬರಲು ಈ ಕಹಿ ಅನುಭವವೇ ಪ್ರೇರಣೆ.

`ನನ್ನಂತೆ ಅದೆಷ್ಟು ಮಂದಿಗೆ ಪ್ರತಿನಿತ್ಯ ಹೀಗೆ ರೈಲು ತಪ್ಪಿಹೋಗುತ್ತಿದೆಯೋ? ದೂರದ ಊರುಗಳಿಂದ ಬಂದರೂ ನೆಮ್ಮದಿಯಿಲ್ಲವಲ್ಲ~ ಎಂದು ನೊಂದು 2011, ಮಾರ್ಚ್ 11ರಂದು ಹುಬ್ಬಳ್ಳಿಯ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದು ವಾಸ್ತವ ಪರಿಸ್ಥಿತಿಯನ್ನು ವಿವರಿಸಿ ಬೆಂಗಳೂರಿನಿಂದ ಇಂದೋರ್‌ಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡರು. ಆದರೆ ಅಲ್ಲಿಂದ ಪ್ರತ್ಯುತ್ತರ ಬರಲೇ ಇಲ್ಲ.

`ನಾನು ಇಷ್ಟಕ್ಕೇ ಸುಮ್ಮನಾಗದೇ ಹೋರಾಟ ಮುಂದುವರೆಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕಲೆಹಾಕಿ, ಮನವಿ ಪತ್ರಗಳ ಸ್ಥಿತಿಗತಿಯನ್ನು ಅರಿತುಕೊಂಡೆ. ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಕಚೇರಿಗೂ ಪತ್ರ ಬರೆದೆ. ಅಲ್ಲದೇ ರಾಜ್ಯದ ಮುಖ್ಯಮಂತ್ರಿಗಳಿಗೂ ಮನವಿ ಕಳುಹಿಸಿದೆ. ಆದರೆ ಇವರ‌್ಯಾರಿಂದಲೂ ಪ್ರತ್ಯುತ್ತರ ಬರಲಿಲ್ಲ. ಆದರೂ ಛಲ ಬಿಡಲಿಲ್ಲ. ಹೋರಾಟಕ್ಕಿಳಿದವನಂತೆ ನಿರಂತರವಾಗಿ ಪತ್ರ ವ್ಯವಹಾರ ಮುಂದವರಿಸಿದೆ.
 
ಕೊನೆಗೆ ರಾಷ್ಟ್ರಪತಿ ಭವನಕ್ಕೆ ಮನವಿ ಪತ್ರ ಕಳುಹಿಸಿದೆ~ ಎಂದು ರಾಘವೇಂದ್ರ ರಾವ್ ತಮ್ಮ ಹೋರಾಟದ ಹಾದಿಯನ್ನು ಹೇಳಿಕೊಳ್ಳುತ್ತಾರೆ.

ರಾಷ್ಟ್ರಪತಿ ಭವನದಿಂದ ಪ್ರತ್ಯುತ್ತರ ಬಂದದ್ದಷ್ಟೇ ಅಲ್ಲದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಇಲಾಖೆಗೂ ಅಲ್ಲಿನವರು ಪತ್ರ ಕಳುಹಿಸಿದ್ದರು. ಈ ಬೆಳವಣಿಗೆಯನ್ನು ತಕ್ಷಣಕ್ಕೆ ಅವರಿಗೆ ನಂಬಲಾಗಲಿಲ್ಲವಂತೆ.

ಕೊನೆಗೂ, 2012-13ರ ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದ 75 ಹೊಸ ರೈಲು ಸಂಪರ್ಕಗಳ ಪಟ್ಟಿಯಲ್ಲಿ ಇಂದೋರ್-ಅಕೋಲ-ಕಾಚಿಗುಡ ಮಾರ್ಗವಾಗಿ ಯಶವಂತಪುರಕ್ಕೆ ಹೊಸ ರೈಲು ಸಂಚಾರ ಪ್ರಾರಂಭವಾಗುವ ಪ್ರಸ್ತಾಪವಿದೆ! ಈ ರೈಲು ವಾರಕ್ಕೊಮ್ಮೆ ಸಂಚರಿಸಲಿದೆ.

ಅಂತೂ ರಾಘವೇಂದ್ರರಾವ್ ಅವರ  ಒಂದು ವರ್ಷದ ಹೋರಾಟದ ಫಲವಾಗಿ ದೂರದ ಇಂದೋರ್ ಮತ್ತು ಬೆಂಗಳೂರಿನ ನಡುವೆ ರೈಲು ಸಂಚರಿಸಲಿದೆ. ಇದು ಐತಿಹಾಸಿಕ ಹೋರಾಟವಲ್ಲವೆ? ...ಹ್ಯಾಟ್ಸಾಫ್. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.