ADVERTISEMENT

ಹೋಳಿಗೆ ನಿತ್ಯೋತ್ಸವ

ಸುರೇಖಾ ಹೆಗಡೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

`ಅಮ್ಮ, ಈ ಬಾರಿ ಒಬ್ಬಟ್ಟು ಮಾಡೋಣ. ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತಿದೆ. ತಿನ್ನದೆ ವರ್ಷಗಳೇ ಕಳೆದ ಹಾಗಿದೆ. ಹೂರಣ ಇಟ್ಟು ಅದನ್ನು ಲಟ್ಟಿಸುವ ಕೆಲಸ ನನ್ನದು. ಅಮ್ಮಾ ಪ್ಲೀಸ್ ಈ ಹಬ್ಬಕ್ಕೆ ಮನೆಯಲ್ಲಿ ಒಬ್ಬಟ್ಟು ಮಾಡೋಣ' ಪುಟ್ಟಿ ಅರ್ಜಿ ಹಾಕಿದಳು. ಮನೆಯಲ್ಲೂ ಕೆಲಸ, ಹೊರಗೂ ವೃತ್ತಿಯ ಒತ್ತಡ ಅನುಭವಿಸುವ ಅಮ್ಮನಿಗೆ ಪುಟ್ಟಿಯ ಬೇಡಿಕೆ ಈಡೇರಿಸಲು ಈಗ ಪುರುಸೊತ್ತಿಲ್ಲ.

ನಗರದಲ್ಲಿ ಮನೆಯವರೆಲ್ಲಾ ಕುಳಿತು ಒಬ್ಬಟ್ಟು ಮಾಡುತ್ತಿದ್ದ ಚಿತ್ರಣ ಈಗ ಮೊದಲಿನಷ್ಟು ಢಾಳಾಗಿ ಕಾಣುತ್ತಿಲ್ಲ. ಹಿಟ್ಟು ಕಲಸಿ, ಹೂರಣ ತಯಾರಿಸಿ, ಅದನ್ನು ಲಟ್ಟಿಸಿ ಬೇಯಿಸಿ ತಿನ್ನುವಷ್ಟು ತಾಳ್ಮೆ ಕಡಿಮೆಯಾಗಿದೆ. ಹಬ್ಬ ಇರಲಿ, ಸಮಾರಂಭವಿರಲಿ ಆರ್ಡರ್ ಕೊಟ್ಟರಾಯಿತು. ಸಮಯಕ್ಕೆ ಸರಿಯಾಗಿ ಬರುವ ಅವುಗಳಿಗೆ ತುಪ್ಪವನ್ನೋ, ಸಕ್ಕರೆ ಪಾಕವನ್ನೋ, ಹಾಲನ್ನೋ ಹಾಕಿಕೊಂಡು ತಿಂದರಾಯಿತು.

ಕೆಲವೇ ವರ್ಷಗಳ ಹಿಂದೆ ನಗರದಲ್ಲಿ ಹಬ್ಬದ ಸಂದರ್ಭದಲ್ಲಿ ಆರ್ಡರ್ ಪಡೆದು, ಒಬ್ಬಟ್ಟನ್ನು ಪೂರೈಸುವವರು ಅನೇಕರು ಇದ್ದರು. ಈಗ ಒಬ್ಬಟ್ಟಿಗೆ ನಿತ್ಯಬೇಡಿಕೆ. ಹೋಟೆಲ್‌ಗೆ ಹೋಗಿ, ದೋಸೆ ತಿಂದಷ್ಟೇ ಸಲೀಸಾಗಿ ಒಬ್ಬಟ್ಟಿನ ರುಚಿ ಸವಿಯುವವರಿದ್ದಾರೆ. ಒಬ್ಬಟ್ಟನ್ನು ಸದಾ ಕಾಲ ಮಾರುವಂಥ ಅಂಗಡಿಗಳೂ ಕಡಿಮೆಯೇನಿಲ್ಲ.

ಇತ್ತೀಚೆಗೆ ಹೋಳಿಗೆ ಮಾರಾಟ ಮಾಡುವುದನ್ನೇ ಉದ್ಯಮವಾಗಿ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಏರುತ್ತಿದೆ. ನಗರದಲ್ಲಿ ಹತ್ತಾರು ವರ್ಷಗಳಿಂದ ಇದೇ ಕಾರ್ಯದಲ್ಲಿ ತೊಡಗಿಕೊಂಡವರಿದ್ದಾರೆ. ಇರುವ ಆರ್ಡರ್ ಪೂರೈಸಲೂ ಆಗದಷ್ಟು ಅವರು ಬ್ಯುಸಿ. ಬೆಳಿಗ್ಗೆ 4ರಿಂದ ಪ್ರಾರಂಭವಾಗುವ ಕೆಲಸ ಮುಗಿಯುವುದು ರಾತ್ರಿ ಹನ್ನೊಂದಕ್ಕೋ ಹನ್ನೆರಡಕ್ಕೋ. ಬಂದ ಗ್ರಾಹಕರಿಗೆ ಆಗಿಂದಾಗಲೇ ಬಿಸಿ ಬಿಸಿ ಒಬ್ಬಟ್ಟು ಮಾಡಿಕೊಡುವ ಅವರ ವೇಗ ನೋಡಿದರೆ ಅಬ್ಬಬ್ಬಾ ಎನ್ನಬೇಕು. ಕೆಲಸ ಕಷ್ಟದ್ದಾದರೂ ವ್ಯಾಪಾರ ಚೆನ್ನಾಗಿ ಆಗುವುದರಿಂದ ಒಮ್ಮೆ ಶುರುಮಾಡಿಕೊಂಡ ಒಬ್ಬಟ್ಟು ಮಾಡುವ ಕಾಯಕವನ್ನು ಬಿಡುವ ಮನಸ್ಸು ಅವರಿಗೆ ಇಲ್ಲವಂತೆ.

ಉಪನಯನ, ಮದುವೆ, ಆರತಕ್ಷತೆ, ನಿಶ್ಚಿತಾರ್ಥ, ನಾಮಕರಣ, ಸೀಮಂತ ಮುಂತಾದ ಶುಭ ಸಂದರ್ಭಗಳಲ್ಲಿ ರುಚಿಯಾದ ಸಿಹಿತಿನಿಸು ಊಟದ ಭಾಗವಾಗಿರಬೇಕು. ಭಾರೀ ಭೋಜನ ಸಿಕ್ಕರೆ ಎಲ್ಲವೂ ಸಾಂಗವಾಗಿ ನಡೆದ ಸಮಾಧಾನ. ಈಗೀಗ ಜಿಲೇಬಿ ಮುಂತಾದ ಸಿಹಿಪದಾರ್ಥಕ್ಕಿಂತ ಹೋಳಿಗೆಗೇ ಹೆಚ್ಚಿನ ಬೇಡಿಕೆಯಂತೆ. ಅಷ್ಟೇ ಏಕೆ, ಕೆಲವು ಹೋಟೆಲ್‌ಗಳ ಮೆನುಗಳಲ್ಲಿ ಸದಾ ಒಬ್ಬಟ್ಟು ಕೂಡ ಇರುತ್ತದೆ.

ಕೆಲವು ಹೋಟೆಲ್‌ಗಳು ಮೊದಲು ಒಬ್ಬಟ್ಟನ್ನು ಖರೀದಿಸಿ ನೀಡುತ್ತಿದ್ದವಂತೆ. ಆದರೆ ಇದಕ್ಕೆ ಇರುವ ಬೇಡಿಕೆಯನ್ನು ಪರಿಗಣಿಸಿ ಹೋಟೆಲ್‌ಗಳಲ್ಲೇ ಪ್ರತಿದಿನ ಸಾವಿರಾರು ಹೋಳಿಗೆಗಳು ತಯಾರಾಗುತ್ತಿವೆ. ಮಾಡಿದ ಎಲ್ಲಾ ಒಬ್ಬಟ್ಟು ಖಾಲಿ ಆಗುತ್ತಿವೆ ಎಂಬುದು ವಿಶೇಷ. ದಿನವಿಡೀ ಕಷ್ಟಪಟ್ಟು, ಗ್ರಾಹಕರಿಗೆ ರುಚಿರುಚಿಯಾದ ಬಿಸಿಬಿಸಿ ಒಬ್ಬಟ್ಟು ಕರುಣಿಸುವವವರ ಮಾತುಗಳಲ್ಲೇ ಕೇಳಿ ನಗರಿಗರ ಸಿಹಿಪ್ರೀತಿ...

ಭಾರೀ ಬೇಡಿಕೆ
ಹೋಳಿಗೆ ಮನೆಗೆ ಏಳು ತುಂಬಿದೆ. ಬೇರೆಯವರ ಬಳಿ ಕೆಲಸ ಮಾಡುತ್ತಿದ್ದ ನಾಗರಾಜ್ ಹಾಗೂ ಉಮೇಶ್ ತಾವೇ ಹೋಳಿಗೆ ಒಬ್ಬಟ್ಟು ಮಾಡುವ ಉದ್ಯಮಕ್ಕೆ ಕೈ ಹಾಕಿದರು. ಮೂಲತಃ ಸಾಗರದವರಾದ ಇವರ ಬಳಿ ಕೆಲಸಕ್ಕೆ ಆರು ಜನ ಇದ್ದಾರೆ. ಮಾಮೂಲಿ ದಿನಗಳಲ್ಲಿ ಸಾವಿರದಿಂದ ಎರಡು ಸಾವಿರ ಒಬ್ಬಟ್ಟು ಮಾಡುತ್ತಾರಂತೆ. ಹಬ್ಬದ ಸಂದರ್ಭದಲ್ಲಿ 5-10 ಸಾವಿರ ಹೋಳಿಗೆ ಮಾಡಿದರೂ ಸಾಲದು. ಕೆಲವೊಮ್ಮೆ ಗ್ರಾಹಕರು ಬಂದು ಬಿಸಿಬಿಸಿ ಒಬ್ಬಟ್ಟನ್ನು ಕೊಂಡುಹೋಗುತ್ತಾರಂತೆ. ಅಡುಗೆ ಕಾಂಟ್ರಾಕ್ಟ್, ಹೋಟೆಲ್, ಮನೆಯವರೂ ಒಬ್ಬಟ್ಟಿಗೆ ನಿರಂತರ ಬೇಡಿಕೆ ಇಡುತ್ತಾರೆ.

ಕಾಯಿ ಹೋಳಿಗೆಗೆ ಬೇಡಿಕೆ ಇನ್ನೂ ಹೆಚ್ಚು. `ಮಾಮೂಲಿ ದಿನಗಳಲ್ಲಿ ಎರಡು ದಿನ ಮೊದಲೇ ಎಷ್ಟು ಹೋಳಿಗೆ ಬೇಕು ಎಂದು ತಿಳಿಸಿರಬೇಕು. ಹಬ್ಬಗಳಲ್ಲಿ ಒಂದು ವಾರ ಮುಂಚೆ ಹೇಳಿದರೂ ತಯಾರು ಮಾಡುವುದು ತುಸು ಕಷ್ಟವೇ. ತೀರಾ ಅಪರೂಪಕ್ಕೊಮ್ಮೆ ಆರ್ಡರ್ ಕೊಟ್ಟವರು ದಿಢೀರ್ ಆಗಿ ಬೇಡ ಎನ್ನುವ ಸಂದರ್ಭಗಳು ಕೂಡ ಬರುತ್ತವೆ. ಅಷ್ಟರಲ್ಲಿ ಮತ್ಯಾರೋ ಬೇಕು ಎಂದು ಫೋನ್ ಮಾಡುತ್ತಾರೆ. ಹೀಗಾಗಿ ಹಾಳಾಗುವ ಸಂದರ್ಭ ಇಲ್ಲಿ ಕಡಿಮೆ' ಎನ್ನುತ್ತಾರೆ ಹೋಳಿಗೆ ಮನೆಯ ಕೆಲಸಗಾರರಲ್ಲಿ ಒಬ್ಬರಾದ ಓಂಕಾರ್.

ಸಾಂಪ್ರದಾಯಿಕ ತಿಂಡಿ
`ಮಹಾರಾಷ್ಟ್ರದಲ್ಲಿ ಇದಕ್ಕೆ ಪೂರನ್ ಪೋಳಿ ಎನ್ನುತ್ತಾರೆ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಈ ತಿಂಡಿ ಸಾಂಪ್ರದಾಯಿಕ ಸಿಹಿ ತಿನಿಸೂ ಹೌದು. ಪ್ರತಿದಿನ 2000 ಒಬ್ಬಟ್ಟಂತೂ ಖರ್ಚಾಗೇ ಆಗುತ್ತದೆ. ಅಡುಗೆ ಕಾಂಟ್ರಾಕ್ಟ್‌ನವರನ್ನು ಬಿಟ್ಟು ಉಳಿದವರೂ ಬಂದು ಖರೀದಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ 15-20 ಸಾವಿರಕ್ಕೂ ಹೆಚ್ಚು ಆರ್ಡರ್ ಬರುತ್ತವೆ ಎಂದರೆ ನಂಬುತ್ತೀರಾ? ರುಚಿ, ಎಣ್ಣೆಯ ಜಿಡ್ಡು ಇರಲ್ಲ. ತಿಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲ. ಹೀಗಾಗಿ ಬೇಡಿಕೆ ಜಾಸ್ತಿ. ಹಬ್ಬದ ಸಂದರ್ಭದಲ್ಲಿ ಶೇ 75 , ವಿಶೇಷ ಕಾರ್ಯಕ್ರಮಗಳಿಗಾಗಿ ಶೇ 50ರಷ್ಟು ಒಬ್ಬಟ್ಟುಗಳು ಬಿಕರಿಯಾದರೆ, ಶೇ 20ರಷ್ಟು ಒಬ್ಬಟ್ಟುಗಳನ್ನು ಜನ ಹೋಟೆಲ್‌ನಲ್ಲೇ ತಿನ್ನುತ್ತಾರೆ' ಎನ್ನುತ್ತಾರೆ ಹಳ್ಳಿಮನೆ ವ್ಯವಸ್ಥಾಪಕ ಬಾಬುರಾವ್.

ಸಮಯ ಇಲ್ಲ
`ವೇಗದ ಬದುಕು. ಯಾರಿಗೂ ಸಮಯ ಇಲ್ಲ. ಕಾಸು ಕೊಟ್ಟರೆ ಅನಾಯಾಸವಾಗಿ ಹೋಳಿಗೆ ಲಭ್ಯ. ಮೊದಲು ಅಜ್ಜಿ ಹೋಳಿಗೆ ಮಾಡುತ್ತಿದ್ದರು. ಮನೆ ಮಂದಿಯೆಲ್ಲಾ ಕುಳಿತು ಒಬ್ಬಟ್ಟು ಮಾಡುವ ಕಾಲವಿತ್ತು. ಹೆಚ್ಚೆಂದರೆ ಮನೆಯಲ್ಲಿ 25-30 ಹೋಳಿಗೆ ಮಾಡಬಹುದು. ಇತ್ತೀಚೆಗೆ ಸಮಯ, ಶ್ರಮ ವ್ಯಯಿಸಿ ಕಷ್ಟಪಡುವ ಮನಸ್ಥಿತಿಯೂ ಕಡಿಮೆ ಆಗುತ್ತಿದೆ. ಹೀಗಾಗಿ ಬೇಕಾದಷ್ಟು ಒಬ್ಬಟ್ಟನ್ನು ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಹೋಟೆಲ್‌ನಲ್ಲಿ ಪ್ರತಿದಿನ ಒಬ್ಬಟ್ಟು ಊಟ ಇದೆ. ದಿನಕ್ಕೆ 200 ಒಬ್ಬಟ್ಟಿನ ಊಟ ಖಾಲಿ ಆಗುತ್ತೆ. ಹೋಳಿಗೆಯಷ್ಟೇ ಆದರೆ 100 ಖಾಲಿ ಆಗೇ ಆಗುತ್ತವೆ' ಎಂಬುದು ಹಳ್ಳಿ ತಿಂಡಿ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ಬಾರ್ಕೂರ್ ನೀಡುವ ಲೆಕ್ಕಾಚಾರ.

ಸವಿ ವಿವಿಧ ಹೋಳಿಗೆ
`ನೀವು ನಮ್ಮ ಅಂಗಡಿ ಹೆಸರು ಪ್ರಸ್ತಾಪಿಸಿಬಿಡುತ್ತಿರಿ. ಆಮೇಲೆ ನಮಗೆ ಬರುವ ಆರ್ಡರ್ ಪೂರೈಸುವುದು ತುಂಬಾ ಕಷ್ಟವಾಗುತ್ತದೆ. ಮಾಹಿತಿಗೆ ಬೇರೆ ಕಡೆ ನೋಡಿಕೊಳ್ಳಿ' ಎಂದು ಬೆಂಗಳೂರಿನ ಪ್ರಸಿದ್ಧ ಹೋಳಿಗೆ ವ್ಯಾಪಾರಿಯೊಬ್ಬರು ಮೂಗು ಮುರಿದರು. ಅಬ್ಬಾ... ಬೇಳೆ ಹಾಗೂ ಕಾಯಿ ಹೋಳಿಗೆ ಉದ್ಯಮಕ್ಕೆ ಇಷ್ಟೊಂದು ಬೇಡಿಕೆಯೇ? ಎಂದು ಹೋಳಿಗೆ ವೈವಿಧ್ಯವನ್ನು ಹುಡುಕಿ ಹೊರಟಾಗ ಆಶ್ಚರ್ಯವಾಯಿತು. ಸುಮಾರು ಆರು ರೂಪಾಯಿಯಿಂದ 30ರೂಪಾಯಿವರಗೆ ವಿವಿಧ ರೀತಿಯ ಒಬ್ಬಟ್ಟುಗಳು ಲಭ್ಯ. ಮೆಲ್ಲುವ ಮನಸ್ಸಿದ್ದರೆ ಅಂಗಡಿ ಅಥವಾ ಹೋಟೆಗ್‌ಗಳಿಗೆ ಭೇಟಿ ನೀಡಿ. ಬಾಯಿ ಸಿಹಿಯಾಗಿಸಿಕೊಳ್ಳಿ.

ಬಗೆಬಗೆ ಒಬ್ಬಟ್ಟು
ತೆಂಗಿನಕಾಯಿ, ತೊಗರಿ ಬೇಳೆ, ಸಕ್ಕರೆ, ಒಣ ಕೊಬ್ಬರಿ, ಖರ್ಜೂರ, ಬಾದಾಮಿ, ಕಡ್ಲೆಬೇಳೆ, ಅನಾನಾಸ್, ಕ್ಯಾರೆಟ್, ಗಸಗಸೆ, ಶೇಂಗಾ ಒಬ್ಬಟ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.