ADVERTISEMENT

‘ಗುಂಡಾಯಣ’ ಇಂದು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2014, 19:30 IST
Last Updated 10 ಫೆಬ್ರುವರಿ 2014, 19:30 IST

ಇಂದು (ಫೆ.11) ಜೋಸೆಫ್ ನಿರ್ದೇಶನದ ‘ಗುಂಡಾಯಣ’ ನಾಟಕದ ಪ್ರದರ್ಶನ. ಖ್ಯಾತ ಹಾಸ್ಯಲೇಖಕ ನಾ.ಕಸ್ತೂರಿ ಅವರ ಕಾದಂಬರಿ ‘ಚಕ್ರದೃಷ್ಟಿ’ಯ ರಂಗರೂಪವಿದು. ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ; ಮಧ್ಯಾಹ್ನ 3.30 ಹಾಗೂ ಸಂಜೆ 7.30.‌

ವೈಶಿಷ್ಟ್ಯ
ನಾಟಕದ ಕೇಂದ್ರಬಿಂದು ಗುಂಡಪ್ಪ ರಂಗದ ಮೇಲೆ ಬರುವುದೇ ಇಲ್ಲ. ಬದಲಿಗೆ ಹತ್ತು ವಿಭಿನ್ನ ಪಾತ್ರಗಳು ಅವನ ವ್ಯಕ್ತಿತ್ವವನ್ನು ತಾವು ಕಂಡಂತೆ ನಿರೂಪಿಸುತ್ತಾ ಹೋಗುತ್ತವೆ. ಆದರೆ ಅವರಾಡುವ ಮಾತುಗಳು ಗುಂಡಪ್ಪ ಚರಿತ್ರೆಗಿಂತ ಅವರ ವ್ಯಕ್ತಿತ್ವವನ್ನೇ ಮತ್ತೂ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಲೇ ಸಮಾಜದ ಅಂಕುಡೊಂಕುಗಳಿಗೂ ಕನ್ನಡಿ ಹಿಡಿಯುತ್ತವೆ. ಇಲ್ಲಿ ಭ್ರಷ್ಟ ಅಧಿಕಾರಿಗಳಿದ್ದಾರೆ, ಕಳ್ಳ ಸನ್ಯಾಸಿಗಳಿದ್ದಾರೆ, ಮತ್ತೊಬ್ಬರ ಏಳಿಗೆ ಕಂಡು ಕರುಬುವ ನೆರೆಹೊರೆಯವರು, ಸಹೋದ್ಯೋಗಿಗಳಿದ್ದಾರೆ.

ಹಾಗೆಯೇ ಸ್ನೇಹಿತನ ಸಂಸಾರ ಹಸನುಗೊಳಿಸಲು ಭಗೀರಥ ಪ್ರಯತ್ನ ಮಾಡುವ ಸಜ್ಜನರು, ಬಡತನದಲ್ಲೇ ಸುಖ ಕಾಣುವ ಕಷ್ಟಜೀವಿಗಳೂ ಇದ್ದಾರೆ. ಕಸ್ತೂರಿಯವರ ಪ್ರಾಸಬದ್ಧ ಕನ್ನಡ, ತಿಳಿಹಾಸ್ಯದ ಲೇಪನ ನಾಟಕದುದ್ದಕ್ಕೂ ಪ್ರೇಕ್ಷಕರಿಗೆ ಕಚಗುಳಿಯಿಡುತ್ತವೆ. ನಾಟಕದ ಹತ್ತು ಪಾತ್ರಗಳನ್ನು ಸುಂದರ್ ಹಾಗೂ ಲಕ್ಷ್ಮಿ ಚಂದ್ರಶೇಖರ್ ಇವರಿಬ್ಬರೇ ನಿರ್ವಹಿಸಿದ್ದು, ಪಾತ್ರದಿಂದ ಪಾತ್ರಕ್ಕೆ ಅವರು ಬದಲಾಗುವ ಬಗೆ ಕುತೂಹಲಕರ.

ಮೇಕಪ್ ಕಲಾವಿದ ರಾಮಕೃಷ್ಣ ಕನ್ನರಪಾಡಿಯವರ ಕೈಚಳಕ, ನಿರ್ದೇಶಕರ ಪರಿಕಲ್ಪನೆ, ಗಜಾನನ ನಾಯಕ್ ಸಂಗೀತ ಸಂಯೋಜನೆ, ಅಂತರರಾಷ್ಟ್ರೀಯ ಖ್ಯಾತಿಯ ವಯೊಲಿನ್ ವಾದಕ ಎಚ್.ಎನ್. ಭಾಸ್ಕರ್ ತಮ್ಮ ವಾದ್ಯದಿಂದ ಮಾತು ಹೊರಡಿಸುವ ಬಗೆ, ಮುದ್ದಣ್ಣ ರಟ್ಟೆಹಳ್ಳಿಯವರ ಬೆಳಕು ವಿನ್ಯಾಸ, ಹಾಗೂ ಕೇಶಿಯವರ ರಂಗವಿನ್ಯಾಸ ನಾಟಕಕ್ಕೆ ಕಳೆ ಕಟ್ಟಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT