ADVERTISEMENT

‘ಗೊನೆಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ...’

ಲಹರಿ

ಪದ್ಮನಾಭ ಭಟ್ಟ‌
Published 7 ಏಪ್ರಿಲ್ 2016, 19:40 IST
Last Updated 7 ಏಪ್ರಿಲ್ 2016, 19:40 IST
ಸಾಂದರ್ಭಿಕ ಚಿತ್ರ: ವಿಶ್ವನಾಥ ಸುವರ್ಣ
ಸಾಂದರ್ಭಿಕ ಚಿತ್ರ: ವಿಶ್ವನಾಥ ಸುವರ್ಣ   

ಮೆಸೇಜು ಬಂದು ಇನ್‌ಬಾಕ್ಸಿನಲ್ಲಿ ಬಿದ್ದಿದ್ದೇ ಕಿಸೆಯಲ್ಲಿದ್ದ ಮೊಬೈಲು ಗಿರ್ರನೇ ಅದುರಿತು. ತೆಗೆದು ನೋಡಿದರೆ ‘ಹ್ಯಾಪಿ ಯುಗಾದಿ ಇನ್‌ ಅಡ್ವಾನ್ಸ್‌’ ಗೆಳೆಯನೊಬ್ಬನಿಂದ ಬಂದ ಶುಭಾಶಯ ಸಂದೇಶ.

ಯಾವುದೇ ಹಬ್ಬ–ಹರಿದಿನ ಎಂದರೂ ಮನಸ್ಸು ಥಟ್ಟನೇ ನಾನು ಹುಟ್ಟಿ ಬೆಳೆದ ಹಳ್ಳಿಗೆ ಜಿಗಿಯುತ್ತದೆ. ಅಲ್ಲಿ ಯುಗಾದಿಗೆ ಎಷ್ಟೆಲ್ಲ ಬಣ್ಣಗಳು... ಸಮೃದ್ಧ ಹಸಿರಿನ, ವಿರಳ ಮನೆಗಳ ಆ ಪರಿಸರ, ಯುಗಾದಿ ದಿನದ ಅಭ್ಯಂಜನ, ಎಲೆ ಉದುರಿಸಿ ಹೊಸ ಚಿಗುರಿಗೆ ಸಿದ್ಧವಾಗಿ ನಿಂತ ಇಡೀ ಕಾಡು, ಪಾದ ಮುಚ್ಚುವ ತರಗೆಲೆಗಳ ನಡುವೆ ಸರ್ರನೆ ಸರಿದುಹೋಗುವ ಹಾವು, ಮನೆಯಂಗಳದಲ್ಲಿ ಅಮ್ಮನ ಕಣ್ಣುತಪ್ಪಿಸಿ ಹೂವಿನ ಗಿಡದ ಸುಳಿಗೆ ಬಾಯಿ ಹಾಕಿರುವ ಆಕಳ ಕರು, ಮಾಡು ಹೊಚ್ಚುವ ಗಡಿಬಿಡಿಯಲ್ಲಿರುವ ಸಿದ್ದಿಜನರು.... ಮುಚ್ಚಿದ ಕಣ್ಣೆದುರಲ್ಲಿ ಎಷ್ಟೆಲ್ಲ ಚಿತ್ರಗಳು.

ಆದರೆ ಕಣ್ತೆರೆದರೆ ಮಾತ್ರ ಉದ್ದೋ ಉದ್ದಕ್ಕೆ ಚಾಚಿಕೊಂಡಿರುವ ಮಹಾನಗರ. ಹಳ್ಳಿಯ ನೆನಪು ನೆನಪಲ್ಲಷ್ಟೇ ನಿಜವಾಗುವ ನಾನು ಬದುಕುತ್ತಿರುವ ಈ ನಗರಜಗದಲ್ಲಿ ಯುಗಾದಿಯನ್ನು ಹೇಗೆ ಗ್ರಹಿಸಿಕೊಳ್ಳುವುದು? ಹೊಸ ವರ್ಷ ಹೊಸ ಹುಟ್ಟು ಎಂಬೆಲ್ಲ ಚಂದದ ಪರಿಕಲ್ಪನೆಗಳಿಗೆ ಈ ಕರ್ಮಭೂಮಿಯಲ್ಲಿ ಯಾವ ಅರ್ಥವಿದೆ?

ರಾತ್ರಿಯ ತಂಪುಗಾಳಿಯನ್ನು ಸವಿಯಲು ಟೆರೇಸಿನ ಮೇಲೆ ನಿಂತಿದ್ದವ ಸುಮ್ಮನೇ ಕತ್ತೆತ್ತಿ ನೋಡಿದೆ. ನಾಳೆ ಬೆಳಗಾದರೆ ಹಿಂದೂ ಪಂಚಾಂಗದಲ್ಲಿ ದಪ್ಪಕ್ಷರದಲ್ಲಿ ಬರೆದಿರುವ ಹೊಸ ವರ್ಷದ ಹೆಸರಿನ ‘ಯುಗಾದಿ’ಯನ್ನು ಆಚರಿಸಲು ಈ ನಗರ ಹೇಗೆ ಸಿದ್ಧಗೊಂಡಿದೆ? ಯುಗಾದಿ ಎನ್ನುವುದು ಹೊಸ ವರ್ಷ, ಅಂದರೆ ‘ಹೊಸತಿನ’ ಸಂಕೇತ. ಈ ಹೊಸತು ಎನ್ನುವ ಪರಿಕಲ್ಪನೆಯನ್ನೇ ಧ್ಯಾನಿಸುತ್ತಾ ವೀಕ್ಷಿಸಿದರೆ ಈ ಶಹರ ಹೇಗೆ ಕಾಣಬಹುದು?

ತೇರು ಬರುವ ಹೊತ್ತಲ್ಲಿ ರಥಬೀದಿಯಲ್ಲಿ ಜನ ನಿಂತಂತೆ ಒತ್ತೊತ್ತಾಗಿ ನಿಂತಿರುವ ಬಹುಮಹಡಿ ಕಟ್ಟಡಗಳು, ಒಂದೇ ರೀತಿಯ ಕೋಣೆ–ಕಿಟಕಿಗಳಿಂದ ರಾತ್ರಿ ಕತ್ತಲನ್ನು ಸೀಳಿ ಹೊರಚೆಲ್ಲುತ್ತಿರುವ ಒಳಬೆಳಕು, ಟೆರೇಸುಗಳ ಮೇಲೆ ಕ್ಲಿಪ್ಪಿಗಪ್ಪಿ ಹಾರಾಡುತ್ತಿರುವ ಬಣ್ಣಬಣ್ಣದ ಬಟ್ಟೆಗಳು, ಅದ್ಯಾವುದೋ ಮನೆಯ ಬಗೀಚಾದಿಂದ ಹೊರಚಾಚಿದ ಕುಂಡದ ಗಿಡ,

ಸುಯ್ಯನೇ ಬಂದು ನಿಂತ ಕ್ಯಾಬಿನೊಳಗೆ ಹೆಗಲಿಗೆ ಬ್ಯಾಗು ನೇತುಹಾಕಿಕೊಂಡು ಹತ್ತಿಕೂತ ನೈಟು ಶಿಫ್ಟಿನ ಹುಡುಗಿ, ಸರ್ರನೆ ಆಕಾಶಕ್ಕೇರಿ ಚಿತ್ತಾರವಾಗಿ ಸಿಡಿದ ಯಾರೋ ಹಾರಿಬಿಟ್ಟ ಪಟಾಕಿ, ಪಕ್ಕದ ಬೀದಿಯಿಂದ ಪರಸ್ಪರ ಜುಗಲ್‌ಬಂದಿಗಿಳಿಂದಂತೆ ಕೇಳಿಬರುವ ಭಜನೆ ಮತ್ತು ಮಸೀದಿಯ ಪ್ರಾರ್ಥನೆ ಈ ನಗರದ ಅಣುರೇಣು ತೃಣ ಕಾಷ್ಠಗಳಲ್ಲಿಯೂ ಪ್ರತಿಕ್ಷಣ ಹೊಸತುಗೊಳ್ಳುವ ಉತ್ಸಾಹ ಮತ್ತು ಅನಿವಾರ್ಯ ಎರಡೂ ತುಂಬಿರುವಂತೆ ಕಂಡಿತು.

ಯುಗಾದಿ ಅಂತರ್ಗತವಾಗಿಸಿಕೊಂಡಿರುವ ನವೀಕರಣದ ಆಶಯವೇ ಈ ನಗರದ ಜೀವನ ಧರ್ಮ. ಹಾಗೆ ನೋಡಿದರೆ ಬೆಂಗಳೂರು ಎನ್ನುವುದೇ ಒಂದು ಧರ್ಮ. ತನಗೇ ವಿಶಿಷ್ಟವಾದ ನೋಟ, ಬದುಕಿನ ಓಟ, ನಡಿಗೆಯ ಲಯ, ಸಾಧ್ಯಾಸಾಧ್ಯತೆಗಳ ಅನನ್ಯ ಮಾಟವಿರುವ ಮನೋಧರ್ಮ. ಜಗದ ಎಲ್ಲ ಧರ್ಮಗಳಲ್ಲಿಯೂ ಕಾಣಬರುವ ಕೊಳೆಯುವಿಕೆ–ಬೆಳೆಯುವಿಕೆ ಎರಡನ್ನೂ ಈ ಶಹರ ಒಳಗೊಂಡಿದೆ.

ಕಾರ್ಪೊರೇಟ್‌ ಕಂಪೆನಿ ಒಡೆಯನೊಟ್ಟಿಗೆ ಕಡಲೆಕಾಯಿ ಮಾರುವ ಹುಡುಗನಿಗೂ ಇಲ್ಲಿ ಗೌರವದ ಬದುಕಿದೆ. ಈ ನಗರದ ಮಾಯೆಯನ್ನು, ಲೋಲುಪತೆಯ ಸೌಖ್ಯವನ್ನು ಆರಾಧಿಸುವವನೊಟ್ಟಿಗೇ ಕಾಡುವ ಬರ್ಬರ ಅನಾಥಪ್ರಜ್ಞೆಯಿಂದ ಕಂಗೆಟ್ಟು ಶಹರವನ್ನು ಶಪಿಸುವವನಿಗೂ ಇಲ್ಲಿ ತಾವಿದೆ.

ಇಲ್ಲಿಯೇ ಹುಟ್ಟಿಬೆಳೆದವರಿಗಿಂತ ಹೊರಗಿನಿಂದ ಬಂದವರೇ ಬಹುಸಂಖ್ಯಾತರಾಗಿರುವುದರಿಂದಲೇ ಇಲ್ಲಿನ ‘ಯುಗಾದಿ’ ಸಾಂಪ್ರದಾಯಿಕ  ಆಚರಣೆಗೂ ಮೀರಿ ಹೊಸ ಹೊಸ ಅರ್ಥವಿನ್ಯಾಸ ಪಡೆದುಕೊಳ್ಳುತ್ತದೆ.  ಅರ್ಥದಷ್ಟೇ ಅಪಸವ್ಯಕ್ಕೂ ಜಾಗವಿದೆ.

ಇಲ್ಲಿ ಹೊಸತುಗೊಳ್ಳುವುದು ವರ್ಷದಾರಂಭದ ಬಾಬತ್ತಷ್ಟೇ ಅಲ್ಲ, ಅನುದಿನದ ಅನುಕ್ಷಣದ ಸತ್ಯ. ಇಲ್ಲಿನ ಸಂಬಂಧಗಳು, ವ್ಯಾಪಾರಗಳು, ಮನಸ್ಥಿತಿಗಳು ಎಲ್ಲವೂ ಹೊಸಹೊಸ ಹೊಸತನ್ನೇ ಬೇಡುವಂಥವು. ಇಲ್ಲಿನ ಮಾರುಕಟ್ಟೆ ಉತ್ಪನ್ನಗಳ ಭಿತ್ತಿಪತ್ರಗಳು ಜಾಹೀರಾತುಗಳನ್ನೇ ಗಮನಿಸಿ.

‘ಪರಿಚಯಿಸುತ್ತಿದ್ದೇವೆ. ಹೊಚ್ಚ ಹೊಸ.....’ ಎಂದೇ ಅವು ಆರಂಭವಾಗುತ್ತವೆ. ಮನುಷ್ಯನಾಗಲಿ– ವಸ್ತುವಾಗಲಿ ಹೊಸತಾಗದಿದ್ದರೆ ಮಹಾನಗರದ ಮಾರುಕಟ್ಟೆಯಲ್ಲಿ ಸ್ಥಾನವಿಲ್ಲ.

ಇನ್ನೊಂದು ಕುತೂಹಲಕಾರಿ ಅಂಶವಿದೆ. ಇಷ್ಟೊಂದು ಹೊಸತುಗಳು ಇಲ್ಲಿ ಹೇಗೆ ಹುಟ್ಟಿಕೊಳ್ಳುತ್ತವೆ. ಕಣ್ಣುಬಿಟ್ಟಲ್ಲೆಲ್ಲ ಕಾಣಿಸುವಷ್ಟು ಹೊಸತುಗಳನ್ನು ಸೃಷ್ಟಿಸುವುದು ಮನುಷ್ಯನಿಗೆ ನಿಜವೂ ಸಾಧ್ಯವೇ?

ಆಗದಿರುವುದನ್ನು ಆಗುತ್ತಿರುವಂತೆ ಭ್ರಮೆ ಹುಟ್ಟಿಸುವುದು ನಗರಧರ್ಮದ ಇನ್ನೊಂದು ಪವಾಡ. ಬೇಂದ್ರೆ ಒಂದು ಪದ್ಯದಲ್ಲಿ ಹೇಳಿದ್ದಾರೆ ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಯುಗಾದಿ ಹೊಸತು ನಿಜ. ಆದರೆ ಅದು ಮರಳಿ ಬಂದ ಯುಗಾದಿ. ಮರಳುವುದು ಎಂದರೆ ಅದು ಮೊದಲಿನದೇ ಎಂದೂ ಅರ್ಥವಲ್ಲವೇ? ಹಾಗಾದರೆ ಅದು ಹೊಸತು ಹೇಗಾದೀತು?

ADVERTISEMENT

ಹಾಗೆ ನೋಡಿದರೆ ಹೊಸದು ಎನ್ನುವಂಥದ್ದು ಏನೂ ಇಲ್ಲ. ಇರುವ ಹಳೆತನ್ನೇ ಹೊಸದಾಗಿ ಕಾಣಿಸುವುದೇ ನಡೆಯುತ್ತಿದೆ. ಪ್ರತಿವರ್ಷ ಮರ ಎಲೆ ಉದುರಿಸುತ್ತದೆ. ಮತ್ತೆ ಚಿಗುರುತ್ತದೆ. ಆಗ ಅದು ಹೊಸತು. ನೋಡುವ ನಮಗೆ ಹೊಸತು. ಪ್ರಕೃತಿಗಲ್ಲ. ಹೊಸಚಿಗುರಿನ ಮೂಲಕ ಮರ ಇನ್ನಷ್ಟು ಹಳೆತಾಗುತ್ತದೆ.

ಮರ–ಎಲೆ ಅಂದಾಕ್ಷಣ ಅಡಿಗರ ಸಾಲು ನೆನಪಾಗುತ್ತಿದೆ. ‘ಕೂಪ ಮಂಡೂಕ’ ಪದ್ಯದ ಜನಪ್ರಿಯ ಸಾಲು ‘ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ/ ಹಿಂಡು ಹಿಳ್ಳುಗಳಲ್ಲಿ ಪ್ರಾಣವೂರಿ’. ಮಹಾನಗರದ ಹೊಸ ವರ್ಷದ ಪರಿಕಲ್ಪನೆಗೆ ಇದೊಂದು ರೂಪಕವಾಗಿ ಕಾಣುತ್ತದೆ. ಬಾಳೆಗೊಂದೇ ಗೊನೆ. ಗೊನೆ ಬಿಟ್ಟು ನಂತರ ಅದು ಕೊಳೆತು ಸಾಯುತ್ತದೆ.

ಹಾಗೆ ಕೊಳೆತ ಬಾಳೆಯ ಬುಡದಲ್ಲಿಯೇ ಒಂದಕ್ಕೆ ನಾಲ್ಕು ಹೊಸತಾಗಿ ಮೊಳಕೆಯೊಡೆಯುತ್ತವೆ. ಹೀಗೆ ಹಳತೇ ಹೊಸತಾಗುವುದು, ಹೊಸತರಲ್ಲಿ ಹಳೆತು ಪ್ರಾಣವೂರುವ ಆವರ್ತನಚಕ್ರವು ಮಹಾನಗರದ ಜೀವಸೂತ್ರಗಳಲ್ಲಿ ಒಂದು. ಉತ್ಪಾದನಾ ಶಕ್ತಿ ಮುಗಿದದ್ದೆಲ್ಲ ಇಲ್ಲಿ ಹಳಸಲು. ಹಾಗೆಂದು ಅದು ಪೂರ್ತಿ ನಾಶವಾಗುವುದಿಲ್ಲ. ಹೊಸದೇ ರೂಪದಲ್ಲಿ ಮತ್ತೆ ಹುಟ್ಟುತ್ತದೆ.

ಹಳೆಯ ಚಿತ್ರಮಂದಿರಗಳೆಲ್ಲ ಹೊಸ ಮಾಲ್‌ಗಳಾಗಿ ಬದಲಾಗುವುದು, ಹಳೆ ಬ್ರ್ಯಾಂಡಿನಲ್ಲಿ ಹೊಸಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರುವುದು, ಹಳೆ ರಸ್ತೆಗಳ ಮೇಲೆ ರಾತ್ರಿ ಬೆಳಗಾಗುವುದರೊಳಗೆ ಹೊಸ ತೇಪೆ ಕಾಣಿಸಿಕೊಳ್ಳುವುದು, ಸರ್ಕಾರಿ ಕಡತಗಳಲ್ಲಿ ಹಳೆ ಯೋಜನೆಗಳೇ ಹೊಸ ಹೆಸರಿನಲ್ಲಿ ರಾರಾಜಿಸುವುದು ಹೀಗೆ ಎಷ್ಟೆಲ್ಲ ಹಳಸಿ ಆದರೆ ನಾಶವಾಗದೇ ಹೊಸರೂಪದಲ್ಲಿ ಹುಟ್ಟಿಕೊಳ್ಳುವ ಪರಿ ಅಡಿಗರ ಸಾಲಿಗೆ ಹಿಂದಿನ ಧ್ವನಿಯ ತಪ್ಪು ಅರ್ಥೈಸುವಿಕೆ ಅನಿಸಿದರೂ ಈ ಜಗದ ವಾಸ್ತವವೇ.

ಹಾಗಾಗಿಯೇ ಇಲ್ಲಿ ‘ಮರುಬಳಕೆ’, ‘ಸಂಸ್ಕರಣೆ’ ಎಂಬೆಲ್ಲ ಶಬ್ದಗಳು ತುಂಬ ಜನಪ್ರಿಯ. ಅಂದಹಾಗೆ ನಿನ್ನೆಯಷ್ಟೇ ವರದಿಯಾಗಿದೆ. ಕಟ್ಟಡಗಳ ಅವಶೇಷಗಳ ಮರುಬಳಕೆಗಾಗಿ ಬಿಬಿಎಂಪಿ ಮೂರು ನಗರದಲ್ಲಿ ಮೂರು ಕಡೆಗಳಲ್ಲಿ ಕಟ್ಟಡ ಅವಶೇಷ ಮರುಬಳಕೆ ಘಟಕವನ್ನು ಸ್ಥಾಪಿಸಲು ಮುಂದಾಗಿದೆಯಂತೆ!

ಅವೆಲ್ಲ ಏನೇ ಇದ್ದರೂ ಬೆಂಗಳೂರಿಗೆ ‘ಜೀವನ್ಮುಕ್ತ ಹಳಸುವಿಕೆ’ ಇದ್ದಂತೆಯೇ ಜೀವನ್ಮುಖಿ ಬೆಳಗುವಿಕೆಯೂ ಇದೆ. ಇಲ್ಲಿನ ಅನುದಿನದ ಯುಗಾದಿಯ ಹಿಂದೆ ಅಸಂಖ್ಯಾತ ಮನಸುಗಳ ಅರಳುವಿಕೆ ಇದೆ. ಹಲವು ಜೀವಗಳ ಬೆಳೆಯುವಿಕೆ ಇದೆ.

ಇಲ್ಲಿನ ಅಪರಿಮಿತ ವೇಗದ ಹಿಂದೆ ಒಂದು ‘ನಿಧಾನ ಶ್ರುತಿ’ ಇದೆ. ಬೆಂಗಳೂರು ಅನುದಿನವೂ ಹೊಸ ಯುಗಾದಿಗಾಗಿ ಕಾಯುತ್ತದೆ. ಬರುವ ಹೊಸವರ್ಷವನ್ನು ತೆರೆದ ಬಾಹುಗಳಿಂದ ಒಳಗೊಳ್ಳುತ್ತದೆ. ಎಂದೂ ಹಳತಾಗದ ಚಿರಯುಗಾದಿಯ ಸೆಲೆಯೊಂದು ಈ ಶಹರದ ಆತ್ಮದಲ್ಲಿ ಹೊಳೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.