ADVERTISEMENT

12ರಂದು ದ್ವಾದಶ ಸ್ವರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST
12ರಂದು ದ್ವಾದಶ ಸ್ವರ ಸಂಭ್ರಮ
12ರಂದು ದ್ವಾದಶ ಸ್ವರ ಸಂಭ್ರಮ   

ಡಿಸೆಂಬರ್ 12 ಈ ವರ್ಷದ ವಿಶೇಷ ದಿನ ಎಂಬುದು ಕೆಲವರ ನಂಬಿಕೆ. ಪ್ರತಿವರ್ಷ ಬರುವಂತೆ ಇದೂ ಒಂದು ಫ್ಯಾನ್ಸಿ ದಿನಾಂಕ ಅಷ್ಟೇ ಎಂಬುದು ವಾಸ್ತವವಾದಿಗಳ ಮಾತು. ಆದರೆ ಈ ದಿನವನ್ನು ಅವಿಸ್ಮರಣೀಯವಾಗಿಸುವ ಪ್ರಯತ್ನ ಕೆಲವರದ್ದು. ನಗರದ ಬಿಜಾಪುರೆ ಹಾರ್ಮೋನಿಯಂ ಪ್ರತಿಷ್ಠಾನ ಅಂತಹುದೊಂದು ಚಿಂತನೆ ಮಾಡಿ ಡಿ. 12ರಂದು `ದ್ವಾದಶ ಸ್ವರ ಸಂಭ್ರಮ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದೆ.

ಹಿರಿಯ ಹಾರ್ಮೋನಿಯಂ ಕಲಾವಿದ ರವೀಂದ್ರ ಕಾಟೋಟಿ ಅವರ ಪರಿಕಲ್ಪನೆಯ ಈ ಕಾರ್ಯಕ್ರಮ ದಲ್ಲಿ ಮಾಧುರ‌್ಯ, ವರ್ಣಸಂಯೋಜನೆ ಮತ್ತು ಬೌದ್ಧಿಕ ರಸಗವಳವನ್ನು ಆಸ್ವಾದಿಸಲು ಅವಕಾಶವಿದೆ.

`ದ್ವಾದಶ ಸ್ವರ ಸಂಭ್ರಮ'ದಲ್ಲಿ 10 ಮಂದಿ ವಿವಿಧ ಪ್ರಕಾರದ ಗಾಯನ, ವಾದನ ನಡೆಸಿಕೊಟ್ಟರೆ ಚಿತ್ರಕಲಾವಿದ ಗುರುದಾಸ ಶೆಣೈ ಸಂಗೀತವನ್ನು ಕುಂಚದಲ್ಲಿ ಗ್ರಹಿಸಿ ಕಲಾಕೃತಿ ರಚಿಸಲಿದ್ದಾರೆ. ನಂತರ ಪ್ರತಿ ರಾಗ ಮತ್ತು ಕೃತಿಯನ್ನು ಶತಾವಧಾನಿ ಆರ್. ಗಣೇಶ್ ವಿಶ್ಲೇಷಿಸುತ್ತಾರೆ.

ಪ್ರವೀಣ್ ಗೋಡ್ಖಿಂಡಿ (ಕೊಳಲು), ಪ್ರಕಾಶ್ ಸೋಂಟಕ್ಕೆ (ಗಿಟಾರ್), ಸಂಗೀತಾ ಕಟ್ಟಿ ಕುಲಕರ್ಣಿ, ಪೂರ್ಣಿಮಾ ಭಟ್ ಕುಲಕರ್ಣಿ ಹಾಗೂ ಫಯಾಜ್ ಖಾನ್ (ಗಾಯನ), ಉದಯರಾಜ ಕರ್ಪೂರ (ತಬಲಾ), ಗುರುಮೂರ್ತಿ ವೈದ್ಯ (ಪಕ್ಕವಾದ್ಯ), ಮಧುಸೂದನ ಎಸ್. (ಲಯವಾದ್ಯ), ಸಂಗೀತ್ ಕಾಮತ್ (ಕೀಬೋರ್ಡ್) ಹಾಗೂ ರವೀಂದ್ರ ಕಾಟೋಟಿ (ಹಾರ್ಮೋನಿಯಂ) ಕಾರ್ಯಕ್ರಮ ನೀಡಲಿದ್ದಾರೆ. ಪ್ರತಿಯೊಬ್ಬ ಪ್ರತ್ಯೇಕ ಸ್ವರ, ಕೃತಿಯನ್ನು ಆಯ್ಕೆಮಾಡಿಕೊಳ್ಳುವುದರಿಂದ ಅದೊಂದು ನಿಜ ಅರ್ಥದ ಸ್ವರ ಸಂಭ್ರಮವಾಗಲಿದೆ. ಒಟ್ಟು ಮೂರು ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ಪ್ರತಿ ಕಲಾವಿದನಿಗೆ 10ರಿಂದ 12 ನಿಮಿಷ ಮೀಸಲಿರುತ್ತದೆ ಎಂದು ಸ್ವರ ಸಂಭ್ರಮದ ತಮ್ಮ ಪರಿಕಲ್ಪನೆಯನ್ನು ವಿವರಿಸುತ್ತಾರೆ ರವೀಂದ್ರ ಕಾಟೋಟಿ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯ್ಯಾಲಿಕಾವಲ್. ಸಮಯ: ಸಂಜೆ 6ರಿಂದ. ಮಾಹಿತಿಗೆ: 98457 93012/ 90350 10157.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.