ನೋಡಲು ಅದೊಂದು ರುದ್ರಾಕ್ಷಿ ಮಾಲೆ. ಆಧ್ಯಾತ್ಮಿಕ ಹಂಬಲವಿರುವವರು, ಸನ್ಯಾಸಿಗಳು ಧರಿಸುವ ಮಾಲೆ.
ಆದರೆ, ಈ ಮಾಲೆಯ ಬೆಲೆ ಮಾತ್ರ ಊಹಾತೀತ. ನೆಲ್ಲಿಕಾಯಿ ಗಾತ್ರದ 14 ರುದ್ರಾಕ್ಷಿಗಳನ್ನು ಹೊಂದಿರುವ ಈ ಸಿದ್ಧಿಮಾಲೆಯ ಬೆಲೆ 1.45 ಲಕ್ಷ ರೂಪಾಯಿಗಳು...!
ಮುಂಬೈನ `ರುದ್ರಲೈಫ್~ ಸಂಸ್ಥೆ ಇದೀಗ ನಗರದಲ್ಲಿ ಏರ್ಪಡಿರುವ ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಈ ಅಪರೂಪದ `ಸಿದ್ಧಿ ಮಾಲೆ~ ಪ್ರದರ್ಶಿಸಲಾಗಿದೆ.
ಪ್ರದರ್ಶನದಲ್ಲಿ 75ರೂನಿಂದ ಆರಂಭವಾಗಿ 1 ಲಕ್ಷ ರೂಪಾಯಿವರೆಗಿನ ಮಾಲೆಗಳು ಲಭ್ಯ.
ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಅದರಲ್ಲಿರುವ ವಿದ್ಯುತ್ ಕಾಂತಿಯ ಗುಣಗಳು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ಉದ್ಯೋಗ ಮತ್ತು ಜೀವನದಲ್ಲಿ ಯಶಸ್ಸು ಕಾಣಬಹುದು ಎನ್ನುತ್ತಾರೆ ಪ್ರದರ್ಶನದ ಸಂಘಟಕರು.
ರುದ್ರಾಕ್ಷಿ ಧರಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಮಾನಸಿಕ ಒತ್ತಡ ಮತ್ತು ಆತಂಕ ತಗ್ಗುತ್ತದೆ. ಆಧ್ಯಾತ್ಮಿಕ ಶಾಂತಿ ಲಭಿಸುತ್ತದೆ. ವೈವಾಹಿಕ ಮತ್ತು ಕೌಟುಂಬಿಕ ಸಾಮರಸ್ಯದ ವಾತಾವರಣ ಮನೆಯಲ್ಲಿ ಮೂಡುತ್ತದೆ ಎನ್ನುತ್ತಾರೆ ಅವರು.
ರುದ್ರ ಲೈಫ್ ಸಂಸ್ಥೆ ರುದ್ರಾಕ್ಷಿಯನ್ನು ಧರಿಸುವುದರಿಂದ ಆಗುವ ಉಪಯೋಗ ಮತ್ತು ಆ ಕುರಿತು ಜಾಗೃತಿ ಮೂಡಿಸಲು ಕಳೆದ ಕೆಲ ವರ್ಷಗಳಿಂದ ದೇಶ ವಿದೇಶಗಳಲ್ಲಿ 450 ಪ್ರದರ್ಶನ ಆಯೋಜಿಸಿದೆ.
ಸಂಸ್ಥೆ ಈಗಾಗಲೇ ಮುಂಬೈನ ಕೆಮಿಕಲ್ ರಿಸರ್ಚ್ ಸೆಂಟರ್‌ನಲ್ಲಿ ರುದ್ರಾಕ್ಷಿಯ ಬಗ್ಗೆ ಸಂಶೋಧನೆ ನಡೆಸಿದ್ದು ಇದನ್ನು ಧರಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವುದು ಸಾಬೀತಾಗಿದೆ ಎನ್ನುತ್ತಾರೆ ರುದ್ರ ಲೈಫ್‌ನ ಸಂಸ್ಥಾಪಕ ತನಯ್ ಸೀತಾ.
ರುದ್ರಾಕ್ಷಿ ಫಲ: `ಪ್ರತಿಯೊಬ್ಬರೂ ಒಂದೇ ರೀತಿಯ ರುದ್ರಾಕ್ಷಿಗಳನ್ನು ಧರಿಸಲು ಸಾಧ್ಯವಿಲ್ಲ, ಅವರ ಜನ್ಮ ನಕ್ಷತ್ರ, ಹುಟ್ಟಿದ ದಿನಾಂಕ, ಒಳಗೊಂಡಂತೆ ಯಾವ ಉದ್ದೇಶದಿಂದ ಧರಿಸಲು ಇಚ್ಛಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ನಂತರ ರುದ್ರಾಕ್ಷಿಗಳ ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡಲಾಗುವುದು.~
`ಆರು ಮುಖದ ರುದ್ರಾಕ್ಷಿಯನ್ನು ಪತ್ರಕರ್ತರು, ಸೃಜನಾತ್ಮಕ ಬರವಣಿಗೆ ಇಟ್ಟುಕೊಂಡಿರುವವರು ಧರಿಸಬಹುದು.~
`ಹನ್ನೊಂದು ಮುಖದ ರುದ್ರಾಕ್ಷಿಯು ಆಂಜನೇಯನಿಗೆ ಪ್ರಿಯವಾಗಿದ್ದು ಇದನ್ನು ಧರಿಸುವುದರಿಂದ ನಕಾರತ್ಮಕ ಯೋಚನೆಗಳು ದೂರವಾಗುವುದರೊಂದಿಗೆ, ಜೀವನದಲ್ಲಿ ಉತ್ತಮವಾದ ಯಶಸ್ಸು ಕೂಡ ಪಡೆಯಬಹುದು.~
`ದ್ವಾದಶಮುಖಿ ರುದ್ರಾಕ್ಷಿಯು ಸೂರ್ಯ ದೇವರನ್ನು ಪ್ರತಿನಿಧಿಸುತ್ತದೆ. ತ್ರಯೋದಶಮುಖಿ ರುದ್ರಾಕ್ಷಿಯನ್ನು ಮಾರಾಟಗಾರರು ಮತ್ತು ಮಾರುಕಟ್ಟೆ ವೃತ್ತಿಪರರು ಧರಿಸುತ್ತಾರೆ.~
`ರುದ್ರ ಲೈಫ್ 2 ಕೋಟಿ ರೂಪಾಯಿ ಮೌಲ್ಯದ ಇಂದ್ರಮಾಲೆಯನ್ನೂ ಹೊಂದಿದೆ. ಈ ಪ್ರದರ್ಶನದಲ್ಲಿ ಇದು ಇಲ್ಲ. ಆದರೆ, ಗ್ರಾಹಕರು ಬಯಸಿದ್ದಲ್ಲಿ ಆ ಮಾಲೆ ಸಿದ್ಧಮಾಡಿಕೊಡಲಾಗುವುದು~ ಎನ್ನುತ್ತಾರೆ ತನಯ್.
ಪ್ರದರ್ಶನ ಮೇ 31ರವರೆಗೆ ನಡೆಯಲಿದೆ.
ಸ್ಥಳ: ಇನ್‌ಫೆಂಟ್ರಿ ಹೋಟೆಲ್, ಇನ್‌ಫೆಂಟ್ರಿ ರಸ್ತೆ. ಬೆಳಿಗ್ಗೆ 9ರಿಂದ ರಾತ್ರಿ 9.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.