ADVERTISEMENT

2ನೇ ಇನ್ನಿಂಗ್ಸ್ ಕಟ್ಟುತ್ತಾ..

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 19:30 IST
Last Updated 29 ಜೂನ್ 2012, 19:30 IST
2ನೇ ಇನ್ನಿಂಗ್ಸ್ ಕಟ್ಟುತ್ತಾ..
2ನೇ ಇನ್ನಿಂಗ್ಸ್ ಕಟ್ಟುತ್ತಾ..   

`ನಾನಿರುವುದೇ ಈ ಜಗವನ್ನು ಗೆಲ್ಲಲು. ಇನ್ನು ಈ ರೋಗವನ್ನು ಜಯಿಸಲಾರದಷ್ಟು ದುರ್ಬಲನೇ ನಾನು?~

-ಕ್ಯಾನ್ಸರ್‌ನಿಂದ ಗುಣಮುಖರಾಗಿ ಸತತ ಏಳು ಬಾರಿ ಟೂರ್ ಡಿ ಫ್ರಾನ್ಸ್ ಪ್ರಶಸ್ತಿ ಜಯಿಸಿದ ಸೈಕ್ಲಿಸ್ಟ್ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಈ ರೀತಿ ನುಡಿದಿದ್ದರು.
`ರೋಗ ಇರುವುದು ದೇಹಕ್ಕೆ ಮನಸ್ಸಿಗಲ್ಲ~

-ಏಡ್ಸ್ ಎಂಬ ಮಹಾಮಾರಿ ರೋಗದಿಂದ ಬಳಲುತ್ತಿದ್ದರೂ ವಿಂಬಲ್ಡನ್ ಚಾಂಪಿಯನ್ ಆದ ಟೆನಿಸ್ ದಂತಕತೆ ಆರ್ಥರ್ ಆ್ಯಷ್ ಹೇಳಿದ ಮಾತಿದು. ಅದು ಜೀವನ. ಶಹಬ್ಬಾಸ್ ಆರ್ಮ್‌ಸ್ಟ್ರಾಂಗ್, ಕಮಾನ್ ಆರ್ಥರ್.

ಅಂದಹಾಗೆ, ಅಮೆರಿಕದ ಬಾಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾಗ ಯುವರಾಜ್ ಸಿಂಗ್ ಬಳಿ ಇ್ದ್ದದ್ದದ್ದು ತಾಯಿ ಶಬ್ನಮ್ ಸಿಂಗ್ ಹಾಗೂ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಅವರ ಜೀವನ ಚರಿತ್ರೆ ಪುಸ್ತಕ `ಇಟ್ಸ್ ನಾಟ್ ಎಬೌಟ್ ದ ಬೈಕ್: ಮೈ ಜರ್ನಿ ಬ್ಯಾಕ್ ಟು ಲೈಫ್~.

***

`ಸರ್, ನಮ್ಮ ಯುವಿ ಈಗ ಹೇಗಿದ್ದಾರೆ? ಮತ್ತೆ ಆಡ್ತಾರಾ? ಭಾರತ ತಂಡದಲ್ಲಿ ಸ್ಥಾನ ಸಿಗುತ್ತಾ?~

ಉದ್ಯಾನ ನಗರಿಯಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯುವರಾಜ್ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಸುದ್ದಿ ತಿಳಿದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ ಕೆಲ ಅಭಿಮಾನಿಗಳ ಪ್ರಶ್ನೆ ಇದು. ಯುವರಾಜ್ ಅವರನ್ನು ನೋಡಲು ಆ ಅಭಿಮಾನಿಗಳು ತುಂಬಾ ಕಾತರದಲ್ದ್ದ್‌ದ್ದರು.

ಅಂದಹಾಗೆ, ಚಾಂಪಿಯನ್ ಆಟಗಾರ ಯುವಿ ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಅಂಗಳಕ್ಕಿಳಿದಿದ್ದಾರೆ. ಎನ್‌ಸಿಎನಲ್ಲಿ ದೈಹಿಕ ಕಸರತ್ತು ಹಾಗೂ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿದ್ದಾರೆ. ಏಳು ತಿಂಗಳ ನಂತರ ಮೊದಲ ಬಾರಿ ಬ್ಯಾಟ್ ಹಿಡಿದ ಆ ಸಂತೋಷವನ್ನು ಅವರು ಹಂಚಿಕೊಂಡರು.

`ಭಾರತ ಕ್ರಿಕೆಟ್ ತಂಡದ ನೀಲಿ ಬಣ್ಣದ ಪೋಷಾಕು ತೊಡಲು ನನ್ನ ಹೃದಯ ತುಡಿಯುತ್ತಿದೆ. ಭಾರತ ತಂಡಕ್ಕೆ ಮತ್ತೆ ಆಡುವುದೇ ನನ್ನ ಪ್ರಮುಖ ಗುರಿ. ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್‌ಷಿಪ್‌ಗೆ ಸ್ಥಾನ ಪಡೆಯಲು ಪ್ರಯತ್ನಿಸುತ್ತೇನೆ. ಆ ಉದ್ದೇಶದಿಂದಲೇ ಈಗ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿದ್ದೇನೆ~ ಎನ್ನುತ್ತಾರೆ ಯುವರಾಜ್.

15 ನಿಮಿಷಕೊಮ್ಮೆ ವಿಶ್ರಾಂತಿ ಪಡೆದು ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು. ಜೂನಿಯರ್ ತಂಡದ ಆಟಗಾರರು ಅವರಿಗೆ ಬೌಲ್ ಮಾಡುತ್ತಿದ್ದರು. ಯುವಿ ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಿಸುತ್ತಿದ್ದರು. ಕೆಲವೊಮ್ಮೆ ಸುಸ್ತಾಗಿ ಏದುಸಿರು ಬಿಡುತ್ತಿದ್ದರು. ಎನ್‌ಸಿಎಗೆ ಆಗಮಿಸಿರುವ ಸೆಹ್ವಾಗ್, ವಿರಾಟ್ ಕೊಹ್ಲಿ, ಇರ್ಫಾನ್ ಪಠಾಣ್, ಇಶಾಂತ್ ಶರ್ಮ ಕೂಡ ಯುವಿಗೆ ಪ್ರೋತ್ಸಾಹ ನೀಡುತ್ತಿದ್ದರು.

`ನಾನು ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರಬಹುದು. ಆದರೆ ನನ್ನ ದೇಹ ದೊಡ್ಡ ಆಘಾತಕ್ಕೆ ಒಳಗಾಗಿದೆ. ಆ ಆಘಾತದಿಂದ ಹೊರಬರುವುದು ಅಷ್ಟು ಸುಲಭವಲ್ಲ. ಈಗ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿದೆಯಲ್ಲ ಅದೇ ನನ್ನ ದೊಡ್ಡ ಸಾಧನೆ. ಅದು ಹಿಂದಿನ ನೋವನ್ನು ಕೊಂಚ ಮರೆಸಿದೆ~ ಎಂದು ಪಂಜಾಬ್‌ನ ಎಡಗೈ ಬ್ಯಾಟ್ಸ್ ಮನ್ ಹೇಳುತ್ತಾರೆ.
ಅಮೋಘ ಬ್ಯಾಟಿಂಗ್, ಫೀಲ್ಡಿಂಗ್ ಮೂಲಕ ಕ್ರೀಡಾ ಅಭಿಮಾನಿಗಳಲ್ಲಿ ಸಂತೋಷಕ್ಕೆ ಕಾರಣವಾಗ್ದ್ದಿದ ಚಾಂಪಿಯನ್ ಆಟಗಾರ ಯುವಿ ಕ್ರಿಕೆಟ್ ಆಡದೇ ಏಳು ತಿಂಗಳಾಯಿತು.
 
2011ರ ನವೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಮುಂಬೈನಲ್ಲಿ ನಡೆದ ಟೆಸ್ಟ್ ಅವರಾಡಿದ ಕೊನೆಯ ಪಂದ್ಯ. ಏಕದಿನ ಹಾಗೂ ಟ್ವೆಂಟಿ-20 ಪಂದ್ಯವಾಡಿ ವರ್ಷವೇ ಕಳೆದಿದೆ.
`ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗುವ ಮೊದಲು ಪೂರ್ಣ ಫಿಟ್‌ನೆಸ್ ಕಂಡುಕೊಳ್ಳಬೇಕು. ಶೇಕಡಾ ನೂರರಷ್ಟು ಸಾಮರ್ಥ್ಯದೊಂದಿಗೆ ಕ್ರೀಡಾಂಗಣಕ್ಕೆ ಇಳಿಯಬೇಕು. ಹಾಗಾಗಿ ಅವಸರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ~ ಎಂದು ನುಡಿಯುತ್ತಾರೆ ಯುವಿ.

ಚೊಚ್ಚಿಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಸತತ ಆರು ಸಿಕ್ಸರ್ ಎತ್ತಿದ್ದ ಯುವಿ ಕ್ರಿಕೆಟ್ ಇಲ್ಲದ ಆ ದಿನಗಳಲ್ಲಿ ಇಷ್ಟು ಯಾತನೆ ಅನುಭವಿಸಿದ್ದಾರೇನೊ? ಆದರೆ ಅವರೇ ಹೇಳಿದ ಹಾಗೆ `ಇದು ಜೀವನದ ಒಂದು ಭಾಗ. ಕೆಳಗೆ ಬೀಳುತ್ತೀರಿ. ಮತ್ತೆ ಮೇಲೆದ್ದು ನಿಲ್ಲುತ್ತೀರಿ~. ನಿಜವಾದ ಮಾತು ಅಲ್ಲವೇ?

2011ರ ವಿಶ್ವಕಪ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಯುವರಾಜ್ `ಟೂರ್ನಿ ಶ್ರೇಷ್ಠ~ ಎನಿಸಿದ್ದರು. 362 ರನ್ ಕಲೆಹಾಕುವ ಜೊತೆಗೆ 15 ವಿಕೆಟ್ ಪಡೆದಿದ್ದರು. ನಾಲ್ಕು ಬಾರಿ `ಪಂದ್ಯಶ್ರೇಷ್ಠ~ ಗೌರವಕ್ಕೆ ಪಾತ್ರರಾಗಿದ್ದರು.

`ಅಮ್ಮ ಶಬ್ನಮ್ ನನ್ನ ಬಹುದೊಡ್ಡ ಶಕ್ತಿ. ಅಕಸ್ಮಾತ್ ಅವಳ ನೆರವು ಇಲ್ಲದಿದ್ದರೆ ನನ್ನ ಜೀವನದ ಪಯಣ ಇಲ್ಲಿಯವರೆಗೆ ಬರುತ್ತಿರಲಿಲ್ಲ. ಹಾಗೇ, ಕ್ರಿಕೆಟ್ ಆಡುವುದು ಮಾತ್ರ ತಿಳಿದಿದ್ದ ನನಗೆ ಈಗ ಜೀವನದ ನಿಜವಾದ ಅರ್ಥ ಗೊತ್ತಾಗಿದೆ~ ಎಂದು ಭಾವುಕರಾಗುತ್ತಾರೆ.

`ಸೈಕ್ಲಿಂಗ್ ದಂತಕತೆ ಆರ್ಮ್‌ಸ್ಟ್ರಾಂಗ್ ನನಗೆ ಸ್ಫೂರ್ತಿ ನೀಡಿದ ವ್ಯಕ್ತಿ. ಅವರು ಬರೆದಿರುವ ಪುಸ್ತಕ ನನ್ನಲ್ಲಿ ಶಕ್ತಿ ತುಂಬಿದೆ. ಚಿಕಿತ್ಸೆ ಪಡೆಯುವ ವೇಳೆ ಅವರ ಪುಸ್ತಕ ಓದುತ್ತಿದ್ದೆ. ಮುಂದೊಂದು ದಿನ ನಾನು ಕೂಡ ಒಂದು ಪುಸ್ತಕ ಬರೆಯುತ್ತೇನೆ. ಕ್ಯಾನ್ಸರ್ ಕಲಿಸಿದ ಪಾಠವನ್ನು ನಿಮ್ಮಂದಿಗೆ ಹಂಚಿಕೊಳ್ಳುತ್ತೇನೆ~ ಎಂದು ಅವರು ಹೇಳುತ್ತಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಮೈಕಲ್ ಕ್ಲಾರ್ಕ್ (ಚರ್ಮ ಕ್ಯಾನ್ಸರ್), ಮ್ಯಾಥ್ಯೂ ವೇಡ್ (ವೃಷಣ ಕ್ಯಾನ್ಸರ್), ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವ್ ಕ್ಯಾಲಗಾನ್ (ವೃಷಣ ಕ್ಯಾನ್ಸರ್) ಹಾಗೂ ಸೈಕ್ಲಿಸ್ಟ್ ಆರ್ಮ್‌ಸ್ಟ್ರಾಂಗ್ (ವೃಷಣ ಕ್ಯಾನ್ಸರ್) ಅವರು ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಮತ್ತೆ ಕಣಕ್ಕಿಳಿದು ಯಶಸ್ವಿಯಾದ ಉದಾಹರಣೆಗಳಿವೆ.

ಯುವಿ ಆಡುವುದನ್ನು ಮತ್ತೆ ನೋಡಲು ಅಭಿಮಾನಿಗಳು ಕೂಡ ತವಕದಲ್ಲಿದ್ದಾರೆ. `ಯುವಿ ನಿಜವಾದ ಚಾಂಪಿಯನ್, ಅದ್ಭುತ ಹೋರಾಟಗಾರ. ಭಾರತ ತಂಡವನ್ನು ಅದೆಷ್ಟು ಬಾರಿ ಸೋಲಿನಿಂದ ಪಾರು ಮಾಡಿಲ್ಲ ಹೇಳಿ? ಅವರು ಮತ್ತೆ ಕಣಕ್ಕಿಳಿಯುತ್ತಾರೆ~ ಎಂಬ ವಿಶ್ವಾಸ ಅಭಿಮಾನಿಗಳದ್ದು.

ಜೀವನದಲ್ಲಿ ಒಬ್ಬ ವ್ಯಕ್ತಿಗೆ ಎಷ್ಟೆಲ್ಲಾ ಖ್ಯಾತಿ, ಐಶ್ವರ್ಯ ಸಿಗಬಹುದು. ಆದರೆ ಸಂತೋಷ ಎಂಬುದು ಎಷ್ಟು ಮುಖ್ಯ ಅಲ್ಲವೇ? ಏನೇ ಇರಲಿ, ಗುಡ್ ಲಕ್ ಯುವಿ.
 
ಚಿತ್ರ: ಸತೀಶ್ ಬಡಿಗೇರ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.