ADVERTISEMENT

ಹಬ್ಬಕ್ಕೆ ಎಳ್ಳು-ಬೆಲ್ಲದ ಕಳೆ

ಗಣಪತಿ ಶರ್ಮಾ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
ಗಾಂಧಿ ಬಜಾರಿನ ಮಳಿಗೆಯಲ್ಲಿ ಸುಗ್ರೀವ
ಗಾಂಧಿ ಬಜಾರಿನ ಮಳಿಗೆಯಲ್ಲಿ ಸುಗ್ರೀವ   

ಇದು ಸಂಕ್ರಮಣದ ಕಾಲ. ಸೂರ್ಯ ಉತ್ತರಾಯಣಕ್ಕೆ ಪಥ ಬದಲಿಸುವ ದಿನವನ್ನೇ ಸಂಕ್ರಾಂತಿ ಎಂದು ಆಚರಿಸುವುದು ಸರ್ವವೇದ್ಯ. ಕ್ಯಾಲೆಂಡರ್ ವರ್ಷದ, ಹೊಸ ವರ್ಷದಲ್ಲಿ ಬರುವ ಮೊದಲ ಹಬ್ಬವೂ ಹೌದು. ‘ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ’ ಎಂದು ಈ ಹಬ್ಬದ ಸಂದರ್ಭ ಶುಭ ಕೋರುವುದು ಸಾಮಾನ್ಯ.

ಹಬ್ಬದ ದಿನ ಹತ್ತಿರವಾಗುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆಪಪ್ಪು ಮಾರಾಟದ ಭರಾಟೆ ಜೋರಾಗಿದೆ.

ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಮಲ್ಲೇಶ್ವರ, ಗಾಂಧಿ ಬಜಾರ್ ಮತ್ತಿತರೆಡೆಗಳ ಅಂಗಡಿಗಳ ಮುಂದೆ ಸಾಲುಸಾಲಾಗಿ ಇಟ್ಟಿರುವ ಎಳ್ಳು, ಬೆಲ್ಲ, ಸಕ್ಕರೆ ಅಚ್ಚುಗಳು ಕಣ್ಮನ ಸೆಳೆಯುವಂತಿವೆ. ಇನ್ನೊಂದೆಡೆ ಇವುಗಳ ಖರೀದಿಗೆ ಗ್ರಾಹಕರು ಮುಗಿಬೀಳುತ್ತಿರುವುದೂ ಕಂಡುಬರುತ್ತಿದೆ.

ADVERTISEMENT

ಎರಡು ತಿಂಗಳ ಹಿಂದೆಯೇ ಸಿದ್ಧತೆ

ಇದು ಸಿದ್ಧ ಆಹಾರದ ಕಾಲ. ರಾಸಾಯನಿಕಗಳನ್ನು ಉಪಯೋಗಿಸಿಕೊಂಡು ಮಾಡಿರುವ ಸಿಹಿ ತಿಂಡಿ, ಆಹಾರಗಳನ್ನೇ ಬಳಸ ಬೇಕಾದ ಪರಿಸ್ಥಿತಿ ಇದೆ. ವಿಶೇಷವೆಂದರೆ, ಸಂಕ್ರಾಂತಿ ಸಂದರ್ಭ ಮಾರಾಟ ಮಾಡುವ ಎಳ್ಳು, ಬೆಲ್ಲ, ಸಕ್ಕರೆ ಅಚ್ಚನ್ನು ಹೆಚ್ಚಿನ ಕಡೆ ಇಂದಿಗೂ ಮನೆಯಲ್ಲೇ ತಯಾರಿಸಲಾಗುತ್ತಿದೆ.

ಪ್ರಮುಖ ಮಾರುಕಟ್ಟೆಗಳ ಹೆಚ್ಚಿನೆಲ್ಲ ವ್ಯಾಪಾರಿಗಳೂ ಮನೆಯಲ್ಲೇ ತಯಾರಿಸಿದ ಎಳ್ಳು, ಬೆಲ್ಲ, ಸಕ್ಕರೆ ಅಚ್ಚನ್ನೇ ಮಾರಾಟ ಮಾಡುತ್ತಿದ್ದಾರೆ.

ಸಾಮಾನ್ಯ ಎರಡು ತಿಂಗಳ ಹಿಂದೆಯೇ ಹಬ್ಬಕ್ಕೆ ಬೇಕಾದ ಎಳ್ಳು, ಬೆಲ್ಲ, ಸಕ್ಕರೆ ಅಚ್ಚಿನ ತಯಾರಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ ಎನ್ನುತ್ತಾರೆ ಗಾಂಧಿ ಬಜಾರ್‌ನ ಅಶ್ವಿನಿ ಸ್ಟೋರ್ ಮಾಲೀಕ ಅಂಜನ್ ಕುಮಾರ್.

ಇವರು 40 ವರ್ಷಗಳಿಂದ ಹಬ್ಬದ ಸಮಯದಲ್ಲಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ತಯಾರಿಸಿ ಮಾರಾಟ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಆರಂಭದ ವರ್ಷದ ಮಾರಾಟದ ಸಂದರ್ಭ (40 ವರ್ಷ ಹಿಂದೆ) 15 ಕಿಲೋದಷ್ಟು ಅಚ್ಚು ತಯಾರಿಸಿದ್ದರಂತೆ. ಅದೀಗ ಅಂದಾಜು 1,000ದಿಂದ 1,500 ಕಿಲೋಗೆ ತಲುಪಿದೆ ಎನ್ನುತ್ತಾರೆ ಅವರು. ಬ್ಯಾಂಕ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲೇ ತಯಾರಿ ನಡೆಯುತ್ತದೆ. ಮನೆಯ ಸದಸ್ಯರೇ ಅಚ್ಚು ತಯಾರಿ ಮಾಡುತ್ತಿದ್ದರು. ಈಗ ಮಾರಾಟದ ಪ್ರಮಾಣ ಹೆಚ್ಚಾಗಿರುವುದರಿಂದ ಕೆಲಸದವರನ್ನು ನೇಮಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಅಂಜನ್.

ಹಬ್ಬದ ವ್ಯಾಪಾರಕ್ಕೆ ಡಿಸೆಂಬರ್‌ನಲ್ಲೇ ಸಿದ್ಧತೆ ಆರಂಭಿಸುತ್ತೇವೆ ಎಂಂಬುದು ಗಾಂಧಿ ಬಜಾರ್‌ನ ವೆಂಕಟೇಶ್ವರ ಫ್ಯಾನ್ಸಿ ಅಂಗಡಿಯ ಮಾಲೀಕ ಸಂತೋಷ್ ನೀಡುವ ಮಾಹಿತಿ.

ತಯಾರಿ ಹೇಗೆ?

ಮೊದಲಿಗೆ ಕೊಬ್ಬರಿ, ಬೆಲ್ಲ, ಸಕ್ಕರೆ, ಎಳ್ಳು ಮತ್ತು ಕಡಲೆ ಬೀಜಗಳನ್ನು ಖರೀದಿಸಿ ತರಲಾಗುತ್ತದೆ. ಕೊಬ್ಬರಿ ಹಾಗೂ ಬೆಲ್ಲವನ್ನು ತುರಿದು ಒಣಗಿಸಲಾಗುತ್ತದೆ. ಮಾರಾಟಕ್ಕೆ 10 ದಿನ ಇರುವಾಗ ಎಳ್ಳು ಹಾಗೂ ಕಡಲೆಬೀಜದ ತಯಾರಿ ಆರಂಭವಾಗುತ್ತದೆ. ಇವುಗಳನ್ನು ಒಲೆಯಲ್ಲಿ ಚೆನ್ನಾಗಿ ಹುರಿದು ಹದಮಾಡಿ ಪ್ಯಾಕ್ ಮಾಡಲಾಗುತ್ತದೆ.

ಸಕ್ಕರೆ ಅಚ್ಚಿನ ತಯಾರಿ ಕ್ರಮ ಸ್ವಲ್ಪ ಭಿನ್ನವಾದದ್ದು. ಸಕ್ಕರೆಯನ್ನು ಹಾಲು, ನಿಂಬೆಹಣ್ಣು ಮತ್ತು ಮೊಸರು ಹಾಕಿ ಸ್ವಚ್ಛಗೊಳಿಸಲಾಗುತ್ತದೆ. ಇದರಿಂದ ಸಕ್ಕರೆ ಶುದ್ಧವಾಗುವುದಲ್ಲದೆ ಮತ್ತಷ್ಟು ಬಿಳಿಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು. ನಂತರ ಹದವಾದ ಬಿಸಿಯಲ್ಲಿ ಕಾಯಿಸಿ ಪಾಕ ಮಾಡಲಾಗುತ್ತದೆ.

ಬೇಡಿಕೆ ಹೆಚ್ಚು

ಮನೆಯಲ್ಲೇ ತಯಾರಿಸಿದ ಸಕ್ಕರೆ ಅಚ್ಚಿಗೆ ಬೇಕರಿಗಳಲ್ಲಿ ದೊರೆಯುವ ಸಿದ್ಧ ಸಕ್ಕರೆ ಅಚ್ಚಿಗಿಂತಲೂ ಬೇಡಿಕೆ ಹೆಚ್ಚಂತೆ! ಹೆಚ್ಚು ದರ ತೆತ್ತಾದರೂ ಇದನ್ನೇ ಕೊಂಡೊಯ್ಯುತ್ತಾರಂತೆ ಗ್ರಾಹಕರು.

ಈ ಬಾರಿ ಮನೆಯಲ್ಲೇ ತಯಾರಿಸಿದ ಸಕ್ಕರೆ ಅಚ್ಚು ಅರ್ಧ ಕಿಲೋಗೆ 100 ರೂಪಾಯಿಗೆ ಮಾರಾಟವಾಗುತ್ತಿದ್ದರೆ ಸಿದ್ಧ ಅಚ್ಚು ಅರ್ಧ ಕಿಲೋಗೆ 80 ರೂಪಾಯಿಗೆ ಮಾರಾಟವಾಗುತ್ತಿದೆ. ದರ ಹೆಚ್ಚಾದರೂ ಮನೆಯಲ್ಲೇ ತಯಾರಿಸಿದ ಅಚ್ಚಿಗೆ ಬೇಡಿಕೆ ಹೆಚ್ಚಾಗಿದೆ.

**

ಈ ಬಾರಿ ಕೊಬ್ಬರಿ ದರ ತುಸು ಹೆಚ್ಚಾಗಿದ್ದು ಬಿಟ್ಟರೆ ಎಳ್ಳು, ಕಡಲೆಬೀಜ, ಬೆಲ್ಲ, ಸಕ್ಕರೆ ಅಚ್ಚು ಕಳೆದ ವರ್ಷಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಒಟ್ಟಾರೆ ಕಳೆದ ವರ್ಷಕ್ಕಿಂತ ವ್ಯಾಪಾರ ಉತ್ತಮವಾಗಿದೆ.

–ಸುಗ್ರೀವ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.