ADVERTISEMENT

ನಮ್ಮೂರಲ್ಲಿ ಹಬ್ಬ ಅಂದ್ರೆ ಹೀಗೆ...

ಕಲಾವತಿ ಬೈಚಬಾಳ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ನಮ್ಮೂರಲ್ಲಿ ಹಬ್ಬ ಅಂದ್ರೆ ಹೀಗೆ...
ನಮ್ಮೂರಲ್ಲಿ ಹಬ್ಬ ಅಂದ್ರೆ ಹೀಗೆ...   

ಸಂಕ್ರಾತಿ ಹಬ್ಬಕ್ಕೆ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು. ತಮಿಳುನಾಡು ಮತ್ತು ಆಂಧ್ರದಲ್ಲಿ ಪೊಂಗಲ್, ಪಂಜಾಬ್ ಮತ್ತು ಹರಿಯಾಣದಲ್ಲಿ ಲೋಹರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬೋಗಲಿ ಬಿಹು, ಗುಜರಾತ್ ಮತ್ತು ರಾಜಸ್ತಾನದಲ್ಲಿ ಉತ್ತರಾಯಣ (ಗಾಳಿಪಟ ಹಾರಿಸುವ ಹಬ್ಬ). ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಸಂಕ್ರಾಂತಿಗೆ ಮಕರ ವಿಳಕ್ಕ್ ಉತ್ಸವದ ವೈಭವ.

ಉತ್ತರ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬಕ್ಕೂ ಎತ್ತುಗಳಿಗೂ ಹತ್ತಿರದ ನಂಟು. ಗೆಜ್ಜೆ, ಮೂಗುದಾನಿ (ಮೂಗುದಾರ), ಕೊಂಬಿಗೆ ಬಣ್ಣಬಣ್ಣದ ರಿಬ್ಬನ್‌, ಕಣ್ಣಿಗೆ ಕಾಡಿಗೆ ತೀಡಿರುವ ಎತ್ತುಗಳು ಸಿಗರಿಸಿದ ಬಂಡಿಗೆ ಕೊರಳೊಡ್ಡಿ, ಹೊಲದ ದಾರಿಯತ್ತ ಮುಖಮಾಡಿ ನಿಂತಿರುತ್ತವೆ. ಮನೆಯ ಮುಂದೆ ತಳಿರು ತೋರಣ, ಹೊಸ ಉಡುಗೆಯುಟ್ಟ ಮಂದಿ ನಲಿಯುತ್ತಿರುತ್ತಾರೆ.

ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೆಳಗಿನ ಜಾವವೇ ಬೇಗ ಎದ್ದು ಮನೆಯನ್ನು ಅಲಂಕರಿಸಿ, ಮನೆಮಂದಿಯೆಲ್ಲ ಎಳ್ಳೆಣ್ಣೆಯ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸುತ್ತಾರೆ. ಹೆಂಗಳೆಯರು ಪೂಜಾ ಕಾರ್ಯಗಳನ್ನು ಮುಗಿಸಿ ಹಬ್ಬದಡುಗೆಯ ತಯಾರಿಯಲ್ಲಿ ತೊಡಗುತ್ತಾರೆ. ಹಬ್ಬದ ನಿಮಿತ್ತ ಮನೆಯಲ್ಲಿ ಸಜ್ಜಿ ರೊಟ್ಟಿ, ಗರಗಟ್ಟಿ ಪಲ್ಯ, ಶೇಂಗಾ ಹೋಳಿಗೆ, ಎಳ್ಳುಂಡೆ, ಕಡಲೆಬೇಳೆ ಹೋಳಿಗೆ, ಕರಿಗಡಬು, ಮೊಸರನ್ನ ಹೀಗೆ ಬಗೆಬಗೆಯ ಭಕ್ಷ್ಯ. ಅಂದು ಮುತ್ತೈದೆಯರು ಪರಸ್ಪರ ‘ಮುತ್ತೈದೆ ಮುತ್ತೈದೆ ಬಾಗಿನ ತಗೋ’ ಎಂದು ಹೇಳಿ ಬಾಗಿನ ಕೊಡುವ ಪದ್ಧತಿ ಇದೆ.

ADVERTISEMENT

‘ಸಂಕ್ರಾಂತಿ ಅಂದ್ರ ಹಬ್ಬಗಳ ಸುರಿಮಳೆ ಶುರುವಾದಂಗ. ಅವತ್ತ ಮುಂಜಾನೆ ಎತ್ತಿನ ಬಂಡಿ ಕಟ್ಟಿಕೊಂಡು, ಹಳ್ಳಿಗೆ ಹೋಗಿ ಬೆಳೆದ ರಾಶಿಗೆ ಪೂಜೆ ಮಾಡ್ತೀವಿ. ಕೆಲಸಾ ಮಾಡಿ ದಣದೋರು, ಹಬ್ಬದ ನೆಪದಾಗೆ ಊರಿಗೆ ಹೋಗಿ ಎಲ್ಲಾರ ಜೋಡಿ ಬೇರಿತೀವಿ. ಮರೆಯಲಾರಷ್ಟು ಹಬ್ಬದ ನೆನಪು ಹೊತ್ತು ಬರ್ತೀವಿ’ ಎಂದು ಹಬ್ಬದ ಆಚರಣೆಯ ವಿವರ ನೀಡಿದರು ಶಿಕ್ಷಕ ಮಹೇಶ ಬಾಡಗಿ.

ಮದುವೆಯಾದ ಹೆಣ್ಣುಮಕ್ಕಳು ಎಳ್ಳುಬೀರಿ ಹಿರಿಯರ ಆಶಿರ್ವಾದ ಪಡೆಯುತ್ತಾರೆ. ಮಗು ಹುಟ್ಟಿದ ವರ್ಷ ಎಳ್ಳಿನ ಜೊತೆಗೆ ಬೆಳ್ಳಿಕೃಷ್ಣ ಅಥವಾ ಬೆಳ್ಳಿಬಟ್ಟಲು ಬೀರುವ ಪದ್ಧತಿ ಕೆಲವು ಮನೆಗಳಲ್ಲಿದೆ. ಮನೆಯಲ್ಲಿ ಚಿಕ್ಕಮಕ್ಕಳಿಗೆ ಸಂಕ್ರಾಂತಿ ದಿನ ಸಂಜೆ ಆರತಿ ಮಾಡುತ್ತಾರೆ. ಇನ್ನೂ ಕೆಲವೆಡೆ ನವ ವಿವಾಹಿತ ಮಹಿಳೆಯರು ತಮ್ಮ ಮದುವೆಯ ಮೊದಲ ವರ್ಷದಿಂದ ಐದು ವರ್ಷ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಂತೆ ಹೆಚ್ಚಿಸಲಾಗುತ್ತದೆ.

‘ನವ ವಿವಾಹಿತರಿಗೆ ಸಂಕ್ರಾಂತಿ ಸಡಗರದ ಹಬ್ಬ. ಅಂದು ಮುತ್ತೈದೆಯರಿಗೆ ಬಾಗಿಣ ಅರ್ಪಿಸಿ ಆಶೀರ್ವಾದ ಪಡೆಯುತ್ತೇವೆ. ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಆರತಿ ಎತ್ತಿ, ಹಣ್ಣೆರೆಯುತ್ತೆವೆ. ಎಳ್ಳುಬೆಲ್ಲದಂತೆ ನಮ್ಮ ಬದುಕು ಸಮರಸವಾಗಿರಬೇಕು’ ಎಂದು ಖುಷಿಹಂಚಿಕೊಂಡರು ವಿಜಯಪುರ ಮೂಲದ ಬೆಂಗಳೂರು ನಿವಾಸಿ ಗೀತಾ– ಸಚಿನ್‌ ದಂಪತಿ.

ನಗರದಲ್ಲಿ ತೆಲುಗು ಭಾಷಿಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ನಗರದ ತೆಲುಗು ವಿಜ್ಞಾನ ಸಮಿತಿಯು ಪ್ರತಿ ವರ್ಷ ‘ಸಂಕ್ರಾಂತಿ ಸಂಬರಾಲು’ ಆಯೋಜಿಸುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸುತ್ತಿದೆ.

‘ಸಂಕ್ರಾಂತಿ ಪ್ರಯುಕ್ತ ಪ್ರತಿವರ್ಷವೂ ‘ಸಂಕ್ರಾಂತಿ ಸಂಬರಾಲು’ ಕಾರ್ಯಕ್ರಮ ಆಯೋಜಿಸುತ್ತೇವೆ. ಮಕ್ಕಳಿಗೆ ಛದ್ಮವೇಷ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕೋಲಾಟದಂಥ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ.

ಸಾಧ್ಯವಾದಷ್ಟು ಹಳ್ಳಿ ವಾತಾವರಣದ ಸಂಕ್ರಾಂತಿ ಸಂಭ್ರಮವನ್ನು ಇಲ್ಲೇ ಕಟ್ಟಿಕೊಂಡು ಹಬ್ಬ ಆಚರಿಸುತ್ತೇವೆ’ ಎಂದು ಮಾಹಿತಿ ನೀಡಿದರು ತೆಲುಗು ವಿಜ್ಞಾನ ಸಮಿತಿಯ ಕಾರ್ಯದರ್ಶಿ ಲಕ್ಷ್ಮೀ ಶರತ್‌.

-ಗೀತಾ ಸಚಿನ್‌ ದಂಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.