ADVERTISEMENT

ಪ್ರೀತಿಯನ್ನು ಹೀಗೂ ಹೇಳೋಣರೀ...

ರೋಹಿಣಿ ಮುಂಡಾಜೆ
Published 4 ಫೆಬ್ರುವರಿ 2018, 19:30 IST
Last Updated 4 ಫೆಬ್ರುವರಿ 2018, 19:30 IST
ಯೂ ಟ್ಯೂಬ್‌ ಮತ್ತು ಫೇಸ್‌ಬುಕ್‌ಗಾಗಿ ಮಾಡಿರುವ ‘#14 ಡೇಸ್‌ ಆಫ್‌ ಲವ್‌’ ಪೋಸ್ಟರ್‌
ಯೂ ಟ್ಯೂಬ್‌ ಮತ್ತು ಫೇಸ್‌ಬುಕ್‌ಗಾಗಿ ಮಾಡಿರುವ ‘#14 ಡೇಸ್‌ ಆಫ್‌ ಲವ್‌’ ಪೋಸ್ಟರ್‌   

ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್‌ ಡೇ ಅಂದ ತಕ್ಷಣ ಕಣ್ಣ ಮುಂದೆ ಬರುವುದು ಗಂಡು ಹೆಣ್ಣಿನ ಪ್ರೀತಿ ಪ್ರೇಮ ಪ್ರಣಯದ ದೃಶ್ಯ. ಆದರೆ ಪ್ರೇಮಿಗಳ ದಿನಕ್ಕೆ ಬೇರೆಯದೇ ಆಯಾಮ ಕೊಡುವ ನಿಟ್ಟಿನಲ್ಲಿ ಯುವಕರ ತಂಡವೊಂದು ಹೊಸ ಪರಿಕಲ್ಪನೆಯನ್ನು ನಮ್ಮ ಮುಂದಿಟ್ಟಿದೆ. ಇದಕ್ಕಾಗಿ ‘ಪೋಸ್ಟರ್‌ ಬಾಯ್‌ ಆರ್ಟ್‌ ಸ್ಟುಡಿಯೋಸ್‌’ನ ಪುನೀತ್‌ ಮತ್ತವರ ನಾಲ್ವರು ಸ್ನೇಹಿತರು ‘ಪ್ರಾಜೆಕ್ಟ್‌ ಜಿಪ್ಸಿ’ಯ ಜತೆಗೂಡಿ ಪರಿಕಲ್ಪನೆಯೊಂದನ್ನು ಜನರ ಮುಂದಿಟ್ಟಿದ್ದಾರೆ.

ಅದರಂತೆ, ಆಯ್ದ 14 ಮಂದಿ ಭಾವನೆಗಳ ಅಭಿವ್ಯಕ್ತಿ ರೂಪದಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಫೆ.1ರಿಂದ 14ರವರೆಗೆ ದಿನಕ್ಕೊಬ್ಬರು ಈ ಅಭಿಯಾನದಡಿ ತಮ್ಮ ಪ್ರೀತಿಪಾತ್ರರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಅಚ್ಚರಿ ಕೊಡುತ್ತಾರೆ. ಕರೆ ಮಾಡಬೇಕಾದ ವ್ಯಕ್ತಿಯನ್ನು ಪೋಸ್ಟರ್‌ ಬಾಯ್‌ ಮತ್ತು ಜಿಪ್ಸಿ ತಂಡ ಹೆಕ್ಕಿದೆ. ಆದರೆ ಯಾರಿಗೆ ಕರೆ ಮಾಡಬೇಕು ಎಂಬುದನ್ನು ಅತಿಥಿಗಳೇ ನಿರ್ಧರಿಸುತ್ತಾರೆ. ಅವರಿಬ್ಬರ ದೂರವಾಣಿ ಸಂಭಾಷಣೆಯನ್ನು ಈ ಹುಡುಗರ ತಂಡ ವಿಡಿಯೊ ಚಿತ್ರೀಕರಣ ಮಾಡುತ್ತದೆ. facebook.com/ideeriaofficial ಹಾಗೂ Poster Boy Art Studios ಯುಬ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೊಗಳು ಪ್ರಸಾರವಾಗುತ್ತಿವೆ.

ಫೆ.1ರಂದು ರಾಘವೇಂದ್ರ ಗೌಡ ಎಂಬ ಯುವಕ, ತನ್ನ ಶಾಲಾ ದಿನಗಳಲ್ಲಿ ಅಪರಿಮಿತವಾಗಿ ಪ್ರೇಮಿಸುತ್ತಿದ್ದ ಮಾನಸಾ ಎಂಬ ಯುವತಿಗೆ ಕರೆ ಮಾಡಿದ್ದಾರೆ. ತಾನು ಪ್ರೀತಿಸುತ್ತಿದ್ದೆ ಎಂದು ಹೇಳಿದಾಗ ಆಕೆಗೆ ದಿಗ್ಭ್ರಮೆ. ಮಾತು ಹೊರಳದೆ ಆಕೆ ಮೌನವಾದಾಗ ‘ನನಗೆ ಮದುವೆಯಾಗಿದೆ’ ಎಂದು ರಘು ಹೇಳುತ್ತಾರೆ.

ADVERTISEMENT

ಈ ಸರಣಿಯಲ್ಲಿ ಫೆ.2ರಂದು ಪ್ರಸಾರವಾದ ವಿಡಿಯೊದಲ್ಲಿ ವಂದಿತಾ ನಾರಾಯಣ್‌ ಎಂಬ ಯುವತಿ ಸಹನಾ ಎಂಬ ತನ್ನ ಆಪ್ತ ಗೆಳತಿಗೆ ಕರೆ ಮಾಡಿ, ‘ನಾನು ಇರುವ ಹಾಗೇ ಸ್ವೀಕರಿಸಿ ನನ್ನ ಜೀವದ ಗೆಳತಿಯಾಗಿದ್ದಕ್ಕೆ ನಿನಗೆ ಕೃತಜ್ಞತೆಗಳು, ಯಾವತ್ತೂ ನನ್ನ ವ್ಯಾಲೆಂಟೈನ್‌ ಆಗಿ ಇರು’ ಎಂದು ಹೇಳುತ್ತಾರೆ. ಫೆ. 13ರವರೆಗೂ ಇದು ಮುಂದುವರಿಯುತ್ತದೆ. ಫೆ.14ರಂದು ಪ್ರೇಮಿಗಳ ದಿನದಂದು ಚಿತ್ರ ನಟಿ ಸುಮನ್‌ ನಗರ್‌ಕರ್‌ ಅವರು ಚಿತ್ರ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ಅವರಿಗೆ ಕರೆ ಮಾಡಲಿದ್ದಾರೆ. ‘ಬೆಳದಿಂಗಳ ಬಾಲೆ’ ಚಿತ್ರದ ಚಿತ್ರೀಕರಣದ ಅನುಭವ, ದೇಸಾಯಿ ಅವರ ಬಗೆಗಿನ ತಮ್ಮ ಮನದಾಳದ ಮಾತುಗಳನ್ನು ಅಂದು ಸುಮನ್‌ ಹಂಚಿಕೊಳ್ಳಲಿದ್ದಾರೆ.

‘ವ್ಯಾಲೆಂಟೈನ್ಸ್‌ ಡೇಯನ್ನು ಸಂಬಂಧಗಳು ಮತ್ತು ಭಾವನೆಗಳ ಅಭಿವ್ಯಕ್ತಿಯ ದಿನವನ್ನಾಗಿ ನೋಡುವ ಅಗತ್ಯವಿದೆ ಎಂದು ನನಗೆ ಅನಿಸುತ್ತದೆ. ನಾವು ಕೆಲವರನ್ನು ತುಂಬಾ ಗೌರವಿಸುತ್ತೇವೆ, ಪ್ರೀತಿಸುತ್ತೇವೆ, ಅಭಿಮಾನದಿಂದ ನೋಡುತ್ತೇವೆ. ಆದರೆ ಮನಸ್ಸಿನ ಭಾವನೆಯನ್ನು ಬಾಯಿ ಬಿಟ್ಟು ಹಂಚಿಕೊಳ್ಳುವುದಿಲ್ಲ. ದಕ್ಷಿಣ ಭಾರತದಲ್ಲಿ ಇದು ಸಾಮಾನ್ಯ ಸಂಗತಿ. ಅಪ್ಪ–ಅಮ್ಮನನ್ನು ನಮ್ಮ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತೇವೆ. ಆದರೆ ಎಂದೂ ಹೇಳಿಕೊಂಡಿರುವುದಿಲ್ಲ. ಅದಕ್ಕಾಗಿ, ಪ್ರೇಮಿಗಳ ದಿನದ ನೆಪದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ವೇದಿಕೆ ನಿರ್ಮಿಸಿದ್ದೇವೆ’ ಎಂದು ಹೇಳುತ್ತಾರೆ ‘ಪೋಸ್ಟರ್‌ ಬಾಯ್‌’ನ ಪುನೀತ್‌ ಬಿ.ಎ.

‘ಅಮೆರಿಕದಲ್ಲಿರುವ ಮಗ ತನ್ನ ತಾಯಿಗೆ ಮಾಡಿರುವ ಕರೆ, ಎಷ್ಟೋ ವರ್ಷಗಳಿಂದ ದೂರವಾಗಿದ್ದ ಸ್ನೇಹಿತರ ಸಂಭಾಷಣೆ, ಯುವಕನೊಬ್ಬ ತನಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ್ದ ನೆಚ್ಚಿನ ಶಿಕ್ಷಕಿಯೊಂದಿಗೆ ಮಾತನಾಡಿದ್ದು... ಹೀಗೆ ಸದಾ ಆರಾಧಿಸುವ, ಗೌರವಿಸುವ, ಪ್ರೀತಿಸುವ ವ್ಯಕ್ತಿಗಳ ಕುರಿತು ಮನದ ಮೂಲೆಯಲ್ಲಿ ಬಂಧಿಸಿಟ್ಟ ಭಾವನೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ಕಂಡಾಗ ನಮಗೇ ಮನಸ್ಸು ತುಂಬಿಬಂದಿತ್ತು.

ನಾವು ಇಷ್ಟಪಡುವವರ ಬಗೆಗಿನ ಭಾವನೆಗಳನ್ನು ಬಚ್ಚಿಡಬಾರದು, ಮುಚ್ಚಿಡಬಾರದು. ಅಹಂ (ಇಗೊ), ಸ್ವಾಭಿಮಾನ, ಕೀಳರಿಮೆ, ಕೆಲಸದ ಜಂಜಾಟ, ಬದುಕಿನ ಒತ್ತಡ, ದೂರದಲ್ಲಿದ್ದೇವೆ... ಹೀಗೆ ನಮ್ಮ ಭಾವನೆಗಳನ್ನು ಅದುಮಿಡಲು ನಾವು ಎಷ್ಟೋ ಕಾರಣ ಕೊಡಬಹುದು. ಆದರೆ ದೂರವಾಣಿ ಮೂಲಕವಾದರೂ ಮಾತನಾಡಿ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು ಎಂಬ ಸಂದೇಶ ರವಾನಿಸುವುದು ನಮ್ಮ ಉದ್ದೇಶ. ಇದೊಂದು ವೇದಿಕೆಯನ್ನು ನಾವು ನಿರ್ಮಿಸಿಕೊಟ್ಟಿದ್ದೇವೆ. ವಿಡಿಯೊ ನೋಡಿದ ಒಂದಷ್ಟು ಮಂದಿಯಾದರೂ ಇದನ್ನು ಅನುಕರಿಸಿದರೆ ನಮ್ಮ ಉದ್ದೇಶ ಸಫಲವಾಗುತ್ತದೆ’ ಎಂದು ಪುನೀತ್‌ ವಿವರಿಸುತ್ತಾರೆ.

ಈ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಪುನೀತ್‌ ಜೊತೆ ‘ಪೋಸ್ಟರ್‌ ಬಾಯ್‌ ಆರ್ಟ್‌ ಸ್ಟುಡಿಯೋಸ್‌’ನ ರಾಹುಲ್‌ ಬಿ.ಎಂ, ಸಮರ್ಥ, ಚಂದ್ರ, ಪ್ರಥಮ್‌ ಸುಭಾಷ್‌, ‘ಅರಳಿಕಟ್ಟೆ’ಯ ಸಂಧ್ಯಾ ಪ್ರಕಾಶ್‌ ಮತ್ತು ‘ಪ್ರಾಜೆಕ್ಟ್‌ ಜಿಪ್ಸಿ’ಯ ಸಂದೀಪ್‌ ಹಟ್ಟಿ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.