ADVERTISEMENT

ಇವಳು ‘ಮದುಮಗಳು’

ಮಂಜುಶ್ರೀ ಎಂ.ಕಡಕೋಳ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
‘ಮಲೆಗಳಲ್ಲಿ ಮದುಮಗಳು’ ನಾಟಕದಲ್ಲಿ ಗಂಗಮ್ಮ ಮೇಘರಾಜ್(ಮಧ್ಯೆ ಇರುವವರು) ಚಿತ್ರಗಳು: ತಾಯಿ ಲೋಕೇಶ್
‘ಮಲೆಗಳಲ್ಲಿ ಮದುಮಗಳು’ ನಾಟಕದಲ್ಲಿ ಗಂಗಮ್ಮ ಮೇಘರಾಜ್(ಮಧ್ಯೆ ಇರುವವರು) ಚಿತ್ರಗಳು: ತಾಯಿ ಲೋಕೇಶ್   

ನಿರೂಪಣೆ...

ನನ್ನದು ರಾಯಚೂರು ಜಿಲ್ಲೆಯ ಪೋತನಾಳ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಏಳು ಮಂದಿ ಮಕ್ಕಳಲ್ಲಿ ನಾನು ಐದನೆಯವಳು. ಅಪ್ಪ ಸೈಕಲ್ ಶಾಪ್ ನಡೆಸುತ್ತಾರೆ. ಅಮ್ಮ ಟೈಲರಿಂಗ್ ಮಾಡ್ತಾರೆ. ದೊಡ್ಡಕ್ಕ ಓದಲೇ ಇಲ್ಲ. ನಮ್ಮೆಲ್ಲರನ್ನು ಸಾಕುವುದರಲ್ಲೇ ಅವಳ ಜೀವನ ಮುಗೀತು. ಮತ್ತೊಬ್ಬ ಅಕ್ಕ ಎಂ.ಎಸ್ ಡಬ್ಲ್ಯೂ ಮಾಡಿದ್ದಾಳೆ. ನಾನು ‘ಸಖಿ’ ಸಂಸ್ಥೆ ಸಹಾಯದಿಂದ ಫ್ಯಾಷನ್ ಡಿಸೈನರ್ ಪದವಿ ಮುಗಿಸಿದೆ. ನಮ್ಮಿಬ್ಬರನ್ನು ಬಿಟ್ಟರೆ ಮನೆಯಲ್ಲಿ ಹೆಚ್ಚು ಓದಿದವರಿಲ್ಲ. ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದಾಗ ರಂಗದ ಒಡನಾಟ ದೊರೆಯಿತು.

ನಮ್ಮ ಜಾತಿಯಲ್ಲಿ ಹೆಣ್ಣುಮಕ್ಕಳನ್ನು ಓದಿಸುವುದೇ ಇಲ್ಲ. ಇನ್ನು ಅಭಿನಯ ಅಂದರೆ ಮುಗೀತು ಅಷ್ಟೇ. ಆರಂಭದಲ್ಲಿ ಅಮ್ಮ ತುಂಬಾ ಗಾಬರಿಯಾಗಿದ್ದರು. ಸಂಬಂಧಿಕರು, ಜನರು ಏನು ಹೇಳಬಹುದು ಎನ್ನುತ್ತಾ ಧೈರ್ಯಗೆಟ್ಟಿದ್ದರು. ನಿಧಾನವಾಗಿ ಅಮ್ಮನ ಮನವೊಲಿಸಿದೆ. ಅವರಿಗೂ ಮಗಳು ಸಿನಿಮಾ, ಕಿರುತೆರೆಯಲ್ಲಿ ಮಿಂಚಲಿ ಎನ್ನುವ ಆಸೆ ಮೊಳೆಯಿತು. ಮೊದಲ ಬಾರಿಗೆ ಚಿನ್ನಮ್ಮ ಆಗಿ 20 ಷೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟೆ.

ADVERTISEMENT

‘ಜನಮಿತ್ರ ಅರಸು’, ‘ಭಾರತ ಭಾಗ್ಯವಿದಾತ’ ನಾಟಕಗಳು ಹಾಗೂ ಸಿನಿಮಾವೊಂದರಲ್ಲಿಯೂ ಅಭಿನಯಿಸಿದ್ದೇನೆ. ಬಿಡುವಿನ ವೇಳೆಯಲ್ಲಿ ಟೆರಾಕೋಟಾ ಆಭರಣಗಳನ್ನು ತಯಾರಿಸಿ ಮಾರುತ್ತೇನೆ.

‘ಮಲೆಗಳಲ್ಲಿ ಮದುಮಗಳು’ ನಾಟಕದಲ್ಲಿ ಚಿನ್ನಮ್ಮನ ಪಾತ್ರ ಮಾಡುವಾಗ ಆರಂಭದಲ್ಲಿ ಭಯವಾಗಿತ್ತು. ನನ್ನದು ರಾಯಚೂರಿನ ಕಡ್ಡು (ಒರಟು) ಭಾಷೆ. ಚಿನ್ನಮ್ಮ ಅಪ್ಪಟ ಮಲೆನಾಡಿನ ಸುಂದರ ಹೆಣ್ಣು, ಮಿತಭಾಷಿ. ಈ ಪಾತ್ರಕ್ಕೆ ನಾನು ಒ‍ಪ್ಪಿಕೊಳ್ಳಬಾರದಿತ್ತು ಅನಿಸಿಬಿಟ್ಟಿತ್ತು. ಗೆಳತಿ ರೇಣುಕಾ ಮಲೆನಾಡಿನ ಭಾಷೆ ಕಲಿಸಿದಳು. ಚಿನ್ನಮ್ಮನ ಪಾತ್ರ ಮಾಡೋಕೆ ತುಂಬಾ ಸ್ಪರ್ಧೆ ಇತ್ತು. ಕೆಲವರು ನನ್ನ ಮುಗ್ಧತೆ, ಮೆಲುದನಿ ನೋಡಿ ನೀನು ಈ ಪಾತ್ರಕ್ಕೆ ಒಗ್ಗುತ್ತೀಯಾ ಅಂದರು. ನೀನು ಚೆನ್ನಾಗಿಲ್ಲ ಎಂದವರೂ ಇದ್ದಾರೆ.

ನನ್ನ ನಿಜದ ವಯಸ್ಸಿಗಿಂತಲೂ ಚಿಕ್ಕ ವಯಸ್ಸಿನವಳು ಚಿನ್ನಮ್ಮ. ಅವಳಿಗೆ ಮುಕುಂದ ಭಾವನೇ ಪ್ರಪಂಚ. ಪ್ರೀತಿ ಅಂದರೇನು? ಗಂಡನ ಜತೆ ಹೇಗಿರಬೇಕು ಅನ್ನುವ ಸಣ್ಣ ತಿಳಿವಳಿಕೆಯೂ ಇಲ್ಲದ ಮುಗ್ಧೆ ಅವಳು. ಅಂಥ ಪಾತ್ರ ಮಾಡುವ ಅದೃಷ್ಟ ನನಗೆ ಸಿಕ್ಕಿದ್ದು ತುಂಬಾ ಖುಷಿ ತಂದಿದೆ. ನಿಜ ಜೀವನದಲ್ಲೂ ನನಗೆ ಮುಕುಂದ ಭಾವನಂಥ ಗಂಡ ಸಿಕ್ಕರೆ ಎಷ್ಟೊಂದು ಚೆನ್ನಾಗಿರುತ್ತೆ ಅನಿಸುತ್ತೆ. ಆದರೆ, ಇನ್ನೊಂದು ವರ್ಷ ಮದ್ವೆಯ ಮಾತಿಲ್ಲ. ಮನೆ ಕಟ್ಟಲು ಮಾಡಿದ ಸಾಲ ತೀರಿದ ಮೇಲೆಯೇ ಮದ್ವೆ ಆಗ್ತೀನಿ.

ಫ್ಯಾಷನ್ ಡಿಸೈನಿಂಗ್ ಪದವಿ ಮುಗಿಸಿ ಕೆಲಸಕ್ಕೆಂದು 2015ರಲ್ಲಿ ರಾಜಧಾನಿಗೆ ಬಂದೆ. ಇಲ್ಲಿನ ಆಹಾರ ಒಗ್ಗದೇ ವಾಪಸ್ ಊರಿಗೆ ಹೋಗಬೇಕೆಂದು ಯೋಚಿಸುತ್ತಿದ್ದೆ. ಆಗ ಪಿ.ಜಿ.ಯಲ್ಲಿ ಜತೆಯಾಗಿದ್ದ ಗೆಳತಿ ರೇಣುಕಾ ‘ಮಲೆಗಳಲ್ಲಿ ಮದುಮಗಳು’ ನಾಟಕಕ್ಕೆ ಹೊಸ ಮುಖ ಬೇಕು. ಅಭಿನಯಿಸುತ್ತೀಯಾ?’ ಅಂತ ಕೇಳಿದಳು. ‘ನನ್ನ ಕೈಲಿ ಆಗೋದಿಲ್ಲ’ ಅಂದಿದ್ದೆ. ಆದರೆ, ರೇಣುಕಾ ನನ್ನ ಫೋಟೊವನ್ನು ರಂಗಕರ್ಮಿ ರಾಜೇಶ್ ಅವರಿಗೆ ಕಳಿಸಿದ್ದಳು. ನನ್ನ ಫೋಟೊ ನೋಡಿದ ಅವರು ಮದುಮಗಳು ಚಿನ್ನಮ್ಮ ಪಾತ್ರಕ್ಕೆ ಈ ಹುಡುಗಿಯೇ ಸೂಕ್ತ ಅಂತ ಹೇಳಿ ಕಳಿಸಿದರು. ನಂತರ ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ನನ್ನ ರಿಹರ್ಸಲ್‌ ನೋಡಿ ಚಿನ್ನಮ್ಮ ಪಾತ್ರಕ್ಕೆ ಈ ಹುಡುಗಿಯೇ ಸೂಕ್ತ ಅಂತ ಸರ್ಟಿಫಿಕೇಟ್ ಕೊಟ್ಟರು.

‘ಮದುಮಗಳು’ ನಾಟಕದಲ್ಲಿ ಚಿನ್ನಮ್ಮನ ಪಾತ್ರಕ್ಕೆ ಭಾರಿ ಸ್ಪರ್ಧೆ ಇತ್ತು. ನಾನೋ ಮೊದಲ ಬಾರಿಗೆ ಬಣ್ಣ ಹಚ್ಚಿದವಳು. ಅಭಿನಯ ಅಂದರೇನು ಅಂತ್ಲೂ ಗೊತ್ತಿರಲಿಲ್ಲ. ಜತೆಯಲ್ಲಿದ್ದ ಕೆಲವರು ಇವಳ ಕೈಲಿ ಇಂಥ ಮುಖ್ಯ ಪಾತ್ರ ಮಾಡಿಸೋದು ಬೇಡ ಅಂತಿದ್ರು. ಆದರೆ, ಬಸು ಸರ್ ನನ್ನ ಹತ್ತಿರವೇ ಮಾಡಿಸಬೇಕೆಂದು ಪಟ್ಟು ಹಿಡಿದು ಮಾಡಿಸಿದಾಗ ಧೈರ್ಯ ಬಂತು. ಈಗಂತೂ ನನ್ನ ಮೂಲ ಹೆಸರೇ ಮರೆತು ಹೋಗಿ ಚಿನ್ನಮ್ಮ ಅಂತ್ಲೇ ಫೇಮಸ್ ಆಗಿದ್ದೀನಿ. 2015ರಲ್ಲಿ ಆರಂಭವಾದ ಮದುಮಗಳ ಒಡನಾಟ ಇಂದಿಗೂ ಮುಂದುವರಿದಿದೆ.

ಗಂಗಮ್ಮ ಅವರ ಫೇಸ್‌ಬುಕ್ ಪುಟ facebook.com/gangamma.ganga.3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.