ADVERTISEMENT

ರಂಗನಾಥರಾವ್ ಅವರಿಗೆ ಸಮೂಹ ಮಾಧ್ಯಮ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST
ರಂಗನಾಥರಾವ್ ಅವರಿಗೆ ಸಮೂಹ ಮಾಧ್ಯಮ ಪ್ರಶಸ್ತಿ
ರಂಗನಾಥರಾವ್ ಅವರಿಗೆ ಸಮೂಹ ಮಾಧ್ಯಮ ಪ್ರಶಸ್ತಿ   

ಕನ್ನಡ ಪತ್ರಿಕೋದ್ಯಮಕ್ಕೆ ಹಲವು ಪ್ರಥಮಗಳನ್ನು ಪರಿಚಯಿಸಿದ ದಿವಂಗತ ವಿ.ನಾಗರಾಜ ರಾವ್‌ ಅವರ ಹೆಸರಿನಲ್ಲಿ ಬಿ.ಎಂ.ಶ್ರೀ. ಪ್ರತಿಷ್ಠಾನದಿಂದ ನೀಡಲಾಗುವ ‘ಸಮೂಹ ಮಾಧ್ಯಮ ಪ್ರಶಸ್ತಿ’ಯ ಎರಡನೆಯ ವರ್ಷದ ಗೌರವ (ಜೀವಮಾನ ಸಾಧನೆಗಾಗಿ), ಹಿರಿಯ ಪತ್ರಕರ್ತ ಜಿ.ಎನ್‌. ರಂಗನಾಥರಾವ್ ಅವರಿಗೆ ಸಲ್ಲುತ್ತಿದೆ.

‘ತಾಯಿನಾಡು’ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ ಜಿ.ಎನ್. ರಂಗನಾಥರಾವ್, 1967ರಲ್ಲಿ ‘ಪ್ರಜಾವಾಣಿ’ ಸೇರಿದರು. ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ, ‘ಸುಧಾ’, ‘ಮಯೂರ’ ಸಹ ಸಂಪಾದಕರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ, ವಿಶೇಷ ಸಂಚಿಕೆಗಳ ಸಂಪಾದಕರಾಗಿ 33 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ವಸ್ತುನಿಷ್ಠ ವಿಶ್ಲೇಷಣೆ, ನಿಖರತೆ, ಪ್ರಾಮಾಣಿಕತೆ, ಹೊಸ ದೃಷ್ಟಿಕೋನದ ಶೈಲಿಯಿಂದ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿವೃತ್ತಿಯ ನಂತರ ಪ್ರತಿಷ್ಠಿತ ಕಾಲೇಜುಗಳಲ್ಲಿ ಪತ್ರಿಕೋದ್ಯಮದ ಪ್ರಾಚಾರ್ಯರಾಗಿ, ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ರಾಯರ ಬರವಣಿಗೆಯಲ್ಲಿ ಕಾದಂಬರಿಗಳು, ಕಥಾ ಸಂಕಲನ, ನಾಟಕ, ವಿಮರ್ಶಾ ಸಂಕಲನಗಳು, ‘ಸಮುಚ್ಚಯ’ ಸಮಗ್ರ ವಿಮರ್ಶೆ ಸಂಪುಟಗಳು ಸೇರಿವೆ. ಐವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಹಲವು ಸುಪ್ರಸಿದ್ಧ ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವು ಪುರಸ್ಕಾರ ಗೌರವಗಳಿಗೆ ಭಾಜನರಾಗಿದ್ದಾರೆ.

ADVERTISEMENT

ಹಲವು ಪ್ರಥಮಗಳ ಒಡೆಯ

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಸುದ್ದಿ ಪ್ರಪಂಚಕ್ಕೆ ಕಾಲಿಟ್ಟವರು ವಿ.ನಾಗರಾಜ ರಾವ್‌ (1924–2015). ಸೌಲಭ್ಯಗಳಿಗಿಂತ ಸವಾಲುಗಳೇ ಹೆಚ್ಚಾಗಿದ್ದ ವೃತ್ತಿ ಬದುಕಿನಲ್ಲಿ ಸಾಧನೆ ಮಾಡಿ, ಹಲವು ಮೊದಲುಗಳಿಗೆ ಕಾರಣಕರ್ತರಾಗಿ ಮನ್ನಣೆ ಗಳಿಸಿದ ಕೀರ್ತಿ ಅವರದು. ತಂದೆ ಪಂಡಿತ ವೆಂಕಣ್ಣ ಭಟ್ಟರ ಪ್ರಭಾವ, ಗಾಂಧೀಜಿಯವರ ಪ್ರತ್ಯಕ್ಷ ದರ್ಶನ ಹಾಗೂ ಬರಹಗಳು, ಮಿತ್ರರಾದ ಬಿ.ವಿ.ಕೆ. ಶಾಸ್ತ್ರಿ, ಎಚ್‌.ವೈ. ಶಾರದಾ ಪ್ರಸಾದ್‌,  ಪ್ರೊ.ಎಲ್‌.ಎಸ್‌. ಶೇಷಗಿರಿ ರಾವ್‌, ಪ್ರೊ. ಎಚ್‌.ಕೆ. ರಾಮಚಂದ್ರಮೂರ್ತಿ ಅವರ ಒಡನಾಟವು ನಾಗರಾಜರಾಯರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದ್ದವು.

ಮೈಸೂರು ಸಂಸ್ಥಾನದ ಆಕಾಶವಾಣಿಯಲ್ಲಿ ವೃತ್ತಿ ಆರಂಭಿಸಿದ ನಾಗರಾಜ ರಾವ್, ದೆಹಲಿ ಆಕಾಶವಾಣಿ ಕೇಂದ್ರದ ಕನ್ನಡ ಸುದ್ದಿ ವಿಭಾಗದಲ್ಲಿ ಕೆಲಸ ಮಾಡಿದ್ದರು. ಬೆಂಗಳೂರು ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕರಾಗಿದ್ದರು. ದೆಹಲಿಯಲ್ಲಿ ಕನ್ನಡ ವಾರ್ತೆಗಳ ಪ್ರಾರಂಭ, ಪ್ರಮುಖ ಭಾಷಣಗಳ ಟಿಪ್ಪಣಿ, ನೇರ ಪ್ರಸಾರ, ‘ವಿಧಾನ ಮಂಡಲದಲ್ಲಿ ಇಂದು’, ‘ನ್ಯೂಸ್‌ ರೀಲ್‌’, ‘ಜಿಲ್ಲಾ ವಾರ್ತಾ ಪತ್ರ’ ಇವರ ವೃತ್ತಿ ಬದುಕಿನಲ್ಲಿ ತೃಪ್ತಿ ನೀಡಿದ ಕೆಲವು ಘಟ್ಟಗಳು.

ಬೆಂಗಳೂರು ದೂರದರ್ಶನ ಕೇಂದ್ರ ಅಸ್ತಿತ್ವಕ್ಕೆ ಬಂದಾಗ ಅದರ ಪ್ರಥಮ ಕನ್ನಡ ವಾರ್ತಾ ಪ್ರಸಾರವನ್ನು ಬಿತ್ತರಿಸಿದ ಹೆಗ್ಗಳಿಕೆ ಇವರದು. ನಿವೃತ್ತಿಯ ನಂತರ ಪತ್ರಿಕೋದ್ಯಮ ಕಾಲೇಜುಗಳ ಪ್ರಾಚಾರ್ಯರಾಗಿ, ಅಂಕಣಕಾರರಾಗಿ, ಆಯ್ಕೆ ಮಂಡಳಿಗಳ ಸದಸ್ಯರಾಗಿ ಕೆಲಸ ಮಾಡಿದರು. 2015ರ ಫೆಬ್ರುವರಿ 16 ರಂದು ನಿಧನರಾದರು.

*

– ರಾಜೇಶ್ವರಿ ಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.