ADVERTISEMENT

ಜನವರಿ 18ರಿಂದ ಅಬ್ಬರಿಸಲಿದೆ ಅಬ್ಬೂರು ನಾಟಕೋತ್ಸವ

ಹಿತೇಶ ವೈ.
Published 17 ಜನವರಿ 2019, 19:30 IST
Last Updated 17 ಜನವರಿ 2019, 19:30 IST
dgdg
dgdg   

ಪ್ರೇಕ್ಷಕರುಕತ್ತಲೆಯಲ್ಲಿದ್ದಾರೆ ಎಂದು ನಾವು ತಪ್ಪು ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾವು ಬೆಳಕಿನಲ್ಲಿರುತ್ತೇವೆ.. ಎನ್ನುವುದು ಬಹುತೇಕ ಅನುಭವಿ ಕಲಾವಿದರ ನಂಬಿಕೆ. ಇದೊಂದು ತರಹದ ಬದ್ಧತೆ ಕೂಡ. ಇಂಥ ಬದ್ಧತೆಯೊಂದಿಗೆ ಕ್ರಿಯಾಶೀಲರಾಗಿರುವ ಕಲಾವಿದರಿಂದಾಗಿಯೇ ರಂಗಭೂಮಿಯಲ್ಲಿ ಪ್ರಯೋಗಶೀಲತೆ ಇಂದಿಗೂ ಉಳಿದುಕೊಂಡಿದೆ.

ಹಲವರು ಅಭಿನಯ, ರಂಗವಿನ್ಯಾಸ, ಮೇಕಪ್‌, ಬೆಳಕು ವಿನ್ಯಾಸ, ರಂಗ ಪರಿಕರ ಮುಂತಾದ ವಿಭಾಗಗಳಲ್ಲಿ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ತಮ್ಮದೇ ತಂಡಗಳನ್ನು ಕಟ್ಟಿಕೊಂಡು ರಂಗಭೂಮಿ ಹರವನ್ನು ಹಬ್ಬಿಸುವಲ್ಲಿ ತೊಡಗಿದ್ದಾರೆ. ನಿರ್ದೇಶನ, ಸಂಘಟನೆ, ರಂಗಸಜ್ಜಿಕೆ ಹೀಗೆ ರಂಗಭೂಮಿಯ ವಿವಿಧ ಆಯಾಮಗಳನ್ನು ನಿಭಾಯಿಸುತ್ತ ಕ್ರಿಯಾಶೀಲರಾದ ರಂಗಕರ್ಮಿಅಬ್ಬೂರು ಜಯತೀರ್ಥ. ಅರುವತ್ತರ ದಶಕದಿಂದ ಇಲ್ಲಿಯವರೆಗೆ ರಂಗಭೂಮಿಯಲ್ಲಿ ನಡೆದ, ನಡೆಯುತ್ತಿರುವ ಹೊಸ ಪ್ರಯೋಗಗಳಿಗೆ ಇವರು ಸಾಕ್ಷಿಯಾಗಿದ್ದಾರೆ. ಕೆಲವೊಮ್ಮೆ ಅಂತಹ ಚಟುವಟಿಕಗಳಲ್ಲಿ ಸಹಭಾಗಿಯಾಗಿದ್ದಾರೆ.

‘ಆಷಾಢದ ಒಂದು ದಿನ’, ‘ಸಿಕ್ಕು‘, ‘ಉದ್ಭವ‘, ‘ಮಾರೀಚನ ಬಂಧುಗಳು‘, ‘ನೆರಳಿಲ್ಲದ ಜೀವಗಳು‘, ‘ಸದ್ದು ವಿಚಾರಣೆ ನಡೆಯುತ್ತಿದೆ’... ಇವು ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು. ರಾಷ್ಟ್ರೀಯ ನಾಟಕೋತ್ಸವದಲ್ಲಿ ಎಜಿಎಸ್ ತಂಡದಿಂದ ‘ಹಯವದನ‘, ‘ದೊಡ್ಡಪ್ಪ’ ನಾಟಕಗಳನ್ನು ಪ್ರದರ್ಶಿಸಿದ್ದಾರೆ.

ADVERTISEMENT

ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ‘ವಿಶ್ವ ಕನ್ನಡ ಸಮ್ಮೇಳನಕ್ಕಾಗಿ’ ಉದ್ಭವ ನಾಟಕವನ್ನೂ ಪ್ರದರ್ಶಿಸಿದ್ದಾರೆ. ‘ಪ್ರತಿಯೊಂದು ರಂಗ ಪ್ರಯೋಗ ಕಲಿಕೆಯ ಶಾಲೆ, ಶಿಸ್ತಿನ ಅಧ್ಯಯನ’ ಎನ್ನುವುದುಅಬ್ಬೂರು ಜಯತೀರ್ಥ ಅವರ ಮಾತು.

1958ರಲ್ಲಿ ‘ಕನ್ನಡ ಸಾಹಿತ್ಯ ಕಲಾ ಸಂಘ’ದ ಸ್ಥಾಪನೆಯಾಯಿತು. ಈ ಸಂಘವನ್ನು ಎರಡು ಭಾಗವಾಗಿ ವಿಂಗಡಿಸಿ ನಾಟ್ಯದರ್ಪಣ ಮತ್ತು ಸಾಹಿತ್ಯದರ್ಪಣ ವೇದಿಕೆ ರೂಪಿಸಲಾಯಿತು. ನಾಟ್ಯದರ್ಪಣ ತಂಡದಿಂದ ನಾಟಕಗಳ ಪ್ರದರ್ಶನ ಏರ್ಪಡಿಸಿದರೆ,ಸಾಹಿತ್ಯದರ್ಪಣದಲ್ಲಿ ನಾಟಕದ ರಚನೆಯ ಬಗ್ಗೆ, ಸಾಹಿತ್ಯದ ಬಗ್ಗೆ ಚರ್ಚೆ ನಡೆಯುತ್ತದೆ.

ಕನ್ನಡ ಮತ್ತು ಇನ್ನಿತರ ಭಾರತೀಯ ಭಾಷೆಗಳಲ್ಲಿ ಬಂದ ಪ್ರಮುಖ ಮತ್ತು ರಂಗಕ್ಕೆ ಹೊಸತನವನ್ನು ಕೊಡುವ ಹತ್ತು ಹಲವು ನಾಟಕಗಳು ನಾಟ್ಯದರ್ಪಣದಿಂದ ಪ್ರದರ್ಶನಗೊಂಡಿವೆ.ನಾಟಕೋತ್ಸವಗಳ ಜೊತೆಗೆ ಬೇಸಿಗೆ ರಂಗ ತರಬೇತಿಯನ್ನೂ ಈ ವೇದಿಕೆಗಳಿಂದ ಸಂಘಟಿಸಲಾಗುತ್ತಿದೆ.

ಈ ವರ್ಷವೂ ‘ಅಬ್ಬೂರು ನಾಟಕೋತ್ಸವ’ ಹೆಸರಿನಲ್ಲಿ ನಗರದ ಎಚ್‌.ಕೆ ಕಲಾಸೌಧದಲ್ಲಿ ಮೂರು ದಿನ ಮೂರು ಪ್ರಮುಖ ನಾಟಕಗಳನ್ನು ಏರ್ಪಡಿಸಲಾಗಿದೆ.

ಭೂತಗಳು:ಪರ್ವತವಾನಿಯವರು ಈ ನಾಟಕ ರಚಿಸಿದ್ದಾರೆ. ಸತ್ತುಹೋದ ತಂದೆಯ ಚಿತ್ರ ಮಗನಿಂದ, ಗಂಡನ ವ್ಯಕ್ತಿತ್ವ ಹೆಂಡತಿಯಿಂದ, ಗುರುವಿನ ಅಂತರ್ಯ ಶಿಷ್ಯನಿಂದ ಹೀಗೆ ಅನಾವರಣಗೊಂಡು, ಎದುರು ನಡೆಯುವುದಕ್ಕಿಂತ ಹಿಂದೆ ನಡೆದದ್ದನ್ನು ಕಣ್ಣೆದುರಿನಲ್ಲಿ ನಿಲ್ಲಿಸುವುದು ಈ ನಾಟಕದ ವಿಶೇಷ.

ತಪಸ್ವಿ– ತರಂಗಿಣಿ: ಬುದ್ಧದೇವ್ ಬಸು ಅವರು ಈ ನಾಟಕ ರಚಿಸಿದ್ದಾರೆ. ಪ್ರೀತಿ– ಪ್ರೇಮ ಏನಿದರ ವ್ಯಾಖ್ಯಾನ ? ಹೃದಯ ಸಂಬಂಧಿಯೊ ಅಥವಾ ದೇಹ ಸಂಬಂಧಿಯೊ ? ಪುಷ್ಪ ಪರಿಮಣದಂತೆ ಸ್ವಾಭಾವಿಕವೊ ಅಥವಾ ಭ್ರಮರ ಪುಷ್ಪದಂತೆ ಆಕರ್ಷವೊ? ಎನ್ನುವುದು ಈ ನಾಟಕದ ಕಥಾವಸ್ತು.

ದೇವರೆಲ್ಲಿದ್ದಾನೆ?: ವಿಶ್ವೇಶ್ವರ ಭಟ್ ಅವರ ಕಥೆ. ದೇವರೆಲ್ಲಿದ್ದಾನೆ ಎನ್ನುವುದು ಬಹುಚರ್ಚಿತ ವಿಷಯ. ಕೆಲವರು ಪ್ರಮಾಣಿಕವಾಗಿ ತಿಳಿದುಕೊಳ್ಳುವ ಇಚ್ಛೆಯಿಂದ, ಆಧ್ಯಾತ್ಮಿಕ ದೃಷ್ಟಿಕೋನದಿಂದ ಇನ್ನೂ ಕೆಲವರು ಕುಚೇಷ್ಟೆಗಾಗಿ, ಅವಹೇಳನ ಮಾಡುವ ಸಲುವಾಗಿ ಚರ್ಚಿಸುವುದೂ ಉಂಟು ಇದು ‘ದೇವರೆಲ್ಲಿದ್ದಾನೆ’ ಎನ್ನುವುದು ನಾಟಕದ ಕಥಾವಸ್ತು. ಈಮೂರು ನಾಟಕಗಳು ಈ ಬಾರಿ ಉತ್ಸವದಲ್ಲಿ ಪ್ರದರ್ಶನವಾಗಲಿವೆ.

ಸ್ಥಳ: ಕೆ.ಎಚ್‌. ಕಲಾಸೌಧ. ಸಂಜೆ 6.30.

(ಟಿಕೆಟ್‌ ದರ ₹ 200., ಮೂರು ದಿನಗಳಿಗೆ.

ಒಂದು ದಿನಕ್ಕೆ ₹ 100.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.