ADVERTISEMENT

ಗಣೇಶ ಉತ್ಸವದಲ್ಲಿ ಅನಿಲ್‌ ಕಪೂರ್‌ ಮಿಂಚು!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 20:00 IST
Last Updated 11 ಸೆಪ್ಟೆಂಬರ್ 2019, 20:00 IST
ಅನಿಲ್‌ ಕಪೂರ್‌ ಮತ್ತು ವಿಜಯ್‌ ಪ್ರಕಾಶ್‌
ಅನಿಲ್‌ ಕಪೂರ್‌ ಮತ್ತು ವಿಜಯ್‌ ಪ್ರಕಾಶ್‌   

‘ಪಲ್ಲವಿ ಅನುಪಲ್ಲವಿ’ ಕನ್ನಡ ಚಲನಚಿತ್ರದ ಮೂಲಕ ಸಿನಿಮಾ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ ಅನಿಲ್‌ ಕಪೂರ್‌, ‘ತೇಜಾಬ್‌’, ‘ಮಿಸ್ಟರ್‌ ಇಂಡಿಯಾ’ದಂಥ ಸೂಪರ್‌ ಹಿಟ್‌ ಬಾಲಿವುಡ್‌ ಚಿತ್ರಗಳ ಮೂಲಕ ದೇಶದಾದ್ಯಂತ ಮನೆ ಮಾತಾಗಿದ್ದು ಇತಿಹಾಸ.

ಇದೇ ಅನೀಲ್‌ ಕಪೂರ್‌ ಸಿನಿಮಾಕ್ಕೆ ತನ್ನನ್ನು ಪರಿಚಯಿಸಿದ ನೆಲದ ನೆನಪನ್ನು ತಾಜಾಗೊಳಿಸಿದ್ದು ‘ಬೆಂಗಳೂರು ಗಣೇಶ ಉತ್ಸವ’ದ ಮೂಲಕ. ವೇದಿಕೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಕರತಾಡನ. ಹೆಸರಾಂತ ಗಾಯಕ ವಿಜಯ್‌ ಪ್ರಕಾಶ್‌ ಜೊತೆಗಿನ ಸಂವಾದದಲ್ಲಿ ಬೆಂಗಳೂರಿನ ಕೆಲ ನೆನಪುಗಳನ್ನು ಮೆಲುಕು ಹಾಕಿದರು. ‘ಚಿತ್ರರಂಗದ ದಿಗ್ಗಜ ನಟರಾದ ದಿಲೀಪ್‌ ಕುಮಾರ್‌ ಮತ್ತು ಅಮಿತಾಬ್‌ ಬಚ್ಚನ್‌ ಅವರಂಥ ಮಹಾನಟರ ಯುಗದಲ್ಲಿ ನಾನಿರುವ ಮತ್ತು ಅವರೊಂದಿಗೆ ಅಭಿನಯಿಸುವ ಅದೃಷ್ಟ ನನ್ನದಾಗಿತ್ತು’ ಎಂದ ಅವರ ವಿನಯದ ಮಾತು ಗಮನ ಸೆಳೆಯಿತು. ನಟನ ಹಾವಬಾವ, ವೇದಿಕೆಯ ಮೇಲೆ ತಾನಿರುವಷ್ಟು ಹೊತ್ತು ತನ್ನ ಇರುವಿಕೆಯನ್ನು ಆಹ್ಲಾದಕರಗೊಳಿಸಿದ ಪ್ರತಿ ಕ್ಷಣ ಮತ್ತು ಮಾತುಗಳ ಮೂಲಕ ಅಭಿಮಾನಿಗಳ ಎದೆಯಲ್ಲಿ ಉಲ್ಲಾಸದ ಹೂಮಳೆಗರೆದ ಪರಿ ಸೊಗಸಾಗಿತ್ತು.

‘ಪಲ್ಲವಿ ಅನುಪಲ್ಲವಿ’ ಚಿತ್ರದ ‘ನಗುವ ನಯನ, ಮಧುರ ಮೌನ, ಮಿಡಿವಾ ಹೃದಯಾ ಇರೆ ಮಾತೇಕೆ?..’ ಎನ್ನುವ ಇಂಪಾದ ಹಾಡನ್ನು ಅನುರಾಧಾ ಭಟ್‌ ಮತ್ತು ಅಲೋಕ್‌ ನೆನಪಿಸಿದ್ದು ಅನಿಲ್‌ ಕಪೂರ್‌ ಅವರನ್ನು ಕೆಲ ಕ್ಷಣವಾದರೂ ಭಾವುಕರನ್ನಾಗಿಸಿರಬೇಕು. ಆರ್‌.ಎನ್‌. ಜಯಗೋಪಾಲ ಅವರ ಗೀತರಚನೆ, ಇಳಯರಾಜ ಅವರ ರಾಗ ಸಂಯೋಜನೆಗೆ ಎಸ್‌.ಪಿ. ಬಾಲಸುಬ್ರಮಣ್ಯಂ ಮತ್ತು ಎಸ್‌. ಜಾನಕಿ ದನಿ ನೀಡಿದ್ದು ಕನ್ನಡ ಚಿತ್ರ ಅಭಿಮಾನಿಗಳಲ್ಲಿ ಅಚ್ಚಳಿಯದ ನೆನಪು.

ADVERTISEMENT

ಇಡೀ ವೇದಿಕೆಯಲ್ಲಿ ಜುಬ್ಬಾ ಪೈಜಾಮ ಮತ್ತು ಓವರ್‌ಕೋಟ್‌ ಗೆಟಪ್‌ನಲ್ಲಿ ಅನಿಲ್‌ ಕಪೂರ್‌ ಇಪ್ಪತ್ತರ ಹರೆಯದ ಹುಡುಗನಂತೆ ಮಿಂಚಿದ್ದು ಇಡೀ ಗಣೇಶ ಉತ್ಸವದ ಹೈಲೈಟ್‌!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.