ADVERTISEMENT

ಸಾಮರಸ್ಯದ ಹಣತೆ ಹಚ್ಚಿದ ಹುಣ್ಣಿಮೆ ಹಾಡು: ಕಾಡು ಮಲ್ಲೇಶ್ವರ ಬೆಳದಿಂಗಳ ಹಬ್ಬ

ಬೆಳದಿಂಗಳ ಹಬ್ಬಕ್ಕೆ ದಶಕದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 19:31 IST
Last Updated 15 ನವೆಂಬರ್ 2019, 19:31 IST
   

ಮಲ್ಲೇಶ್ವರ ಎಂದಾಕ್ಷಣನೆನಪಾಗುವುದು ಸಂಪಿಗೆ ಮರಗಳ ಸಾಲು ಮತ್ತು ಪುರಾತನ ಕಾಡುಮಲ್ಲೇಶ್ವರ ದೇವಸ್ಥಾನ. ಇವೆರಡನ್ನು ಹೊರಗಿಟ್ಟು ಮಲ್ಲೇಶ್ವರ ಮತ್ತು ಅಲ್ಲಿನ ಜನಜೀವನ ಊಹಿಸಿಕೊಳ್ಳುವುದು ಅಸಾಧ್ಯ! ಶತಮಾನಗಳ ಇತಿಹಾಸವಿರುವ ಕಾಡು ಮಲ್ಲೇಶ್ವರನಂತೂ ಇಲ್ಲಿಯ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದಾನೆ.

ಪರಿಸರ ಸಂರಕ್ಷಿಸುವ ಬದ್ಧತೆ ಮತ್ತು ಧ್ಯೇಯ ದೊಂದಿಗೆ ಹುಟ್ಟಿಕೊಂಡ ಕಾಡುಮಲ್ಲೇಶ್ವರ ಗೆಳೆಯರ ಬಳಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ ರಕ್ಷಣೆಗೂ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ. ಶಿವರಾತ್ರಿಗೆ ಮಾತ್ರ ಸೀಮಿತ ವಾಗಿದ್ದ ದೇವಾಲಯದೊಂದಿಗಿನ ಭಾವನಾತ್ಮಕ ಸಂಬಂಧ ಹುಣ್ಣಿಮೆ ಹಾಡು ಕಾರ್ಯಕ್ರಮದೊಂದಿಗೆ ಮತ್ತಷ್ಟು ಗಟ್ಟಿಗೊಂಡಿತು.

ಪ್ರತಿ ಹುಣ್ಣಿಮೆ ಬೆಳದಿಂಗಳಲ್ಲಿ ಮನಕ್ಕೆ ಮುದ ನೀಡಲು ಆರಂಭಿಸಿದ ಸಾಂಸ್ಕೃತಿಕ ಮತ್ತು ಸಾಹಿತ್ಯಗಳ ಸಂಗಮವಾದ’ಹುಣ್ಣಿಮೆ ಹಾಡು’ ಸಮಸರಸಕ್ಕೆ ನಾಂದಿ ಹಾಡಿತು. ಸಾಮಾಜಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಜನವರಿ 30, 2010ರಲ್ಲಿ ಆರಂಭವಾದ ಹುಣ್ಣಿಮೆ ಹಾಡು ಕಳೆದ ವರ್ಷ ಶತ ಸಂಭ್ರಮ ಕಂಡು, 125ನೇ ಹುಣ್ಣಿಮೆ ಹಾಡಿಗೆ ಸಜ್ಜಾಗಿದೆ.

ADVERTISEMENT

ಸರ್ಕಾರದ ಅನುದಾನದ ನೆರವು ಇಲ್ಲದೆ 11 ವರ್ಷಗಳಿಂದ ಒಂದು ಹುಣ್ಣಿಮೆಯನ್ನೂ ತಪ್ಪಿಸದೆ ನಿರಂತರವಾಗಿ ಈ ಸಾಂಸ್ಕೃತಿಕ ಹಣತೆ ನಂದದಂತೆ ಕಾಪಿಟ್ಟುಕೊಂಡು ಬರುತ್ತಿರುವ ಶ್ರೇಯ ಕಾಡುಮಲ್ಲೇಶ್ವರ ಗೆಳೆಯರ ಬಳಗಕ್ಕೆ ಸಲ್ಲಬೇಕು. ಹುಣ್ಣಿಮೆ ಹಾಡು ಕೇವಲ ಸಾಂಸ್ಕೃತಿಕ ನೆಲೆಯನ್ನು ವಿಸ್ತರಿಸಿಲ್ಲ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಪವಿತ್ರ ತಾಣ ಭೂಗಳ್ಳರ ಪಾಲಾಗದಂತೆ ತಡೆದಿದೆ.

ಸೂಫಿಗಳು, ಶರಣರು, ಸಂತರು, ದಾಸರು, ಜನಪದರ ಭಾವೈಕ್ಯ ತತ್ವವನ್ನು ಪಸರಿಸುತ್ತಿದೆ. ಜಾತಿ, ಧರ್ಮ, ಭಾಷೆ, ಸಿದ್ಧಾಂತಗಳ ಗಡಿ ಮೀರಿ ಬೆಳೆದಿದೆ. ಆ ಮೂಲಕ ಮಲ್ಲೇಶ್ವರದ ಸಾಂಸ್ಕೃತಿಕ ಅಸ್ಮಿತೆ ಮತ್ತು ಸಮಾಜದ ಎಲ್ಲ ಜನಸಮುದಾಯದ ಉತ್ಸವವಾಗಿ ರೂಪಗೊಂಡಿದೆ. ಬದುಕಿನ ನೋವು, ನಲಿವು, ಪರಂಪರೆ, ಸಂಸ್ಕೃತಿ, ಪರಿಸರ ಪ್ರೀತಿಯ ಪ್ರತಿಬಿಂಬವಾಗಿ‌ ಈ ಉತ್ಸವ ನಡೆಯುತ್ತಿದೆ.

ಬೆಂಗಳೂರಿನ ಜಂಜಾಟದ ಬದುಕಿಗೆ ತಣ್ಣನೆಯ ಸಿಂಚನ ಮಾಡಲು ಕಂಡುಕೊಂಡ ಮಾರ್ಗವೇ ಹುಣ್ಣಿಮೆ ಹಾಡು. ಪೂರ್ಣಚಂದ್ರಮನ ಸಮ್ಮುಖದಲ್ಲಿ ಹಣತೆಗಳ ತಣ್ಣನೆಯ ಬೆಳಕಿನಲ್ಲಿ ಹುಣ್ಣಿಮೆ ಹಾಡುಗಳನ್ನು ಆಸ್ವಾದಿಸುವುದೇ ಬಲು ಸೊಗಸು ಎನ್ನುವುದು ಬಳಗದ ಸದಸ್ಯೆ ಡಾ. ಲೀಲಾ ಸಂಪಿಗೆ ಅವರ ಅನುಭವದ ಮಾತು. ದಶಕಗಳ ಈ ಸಾಂಸ್ಕೃತಿಕ ಪಯಣಕ್ಕೆ ಇವರು ಸಾಕ್ಷಿಯಾಗಿದ್ದಾರೆ.

ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ

ಹುಣ್ಣಿಮೆ ಹಾಡು ನಿಸರ್ಗದ ಭಾಗವಾಗಿದೆ. ಮಾನವೀಯತೆ, ಸಾಮರಸ್ಯ ಬೆಳಗುವ ಜ್ಯೋತಿಯಾಗಿ ಹೊರಹೊಮ್ಮಿದೆ. ನಾಡಿನ ವಿವಿಧ ಮೂಲೆ, ಮೂಲೆಗಳ ಕಲಾವಿದರು ಇಲ್ಲಿ ಸಂಗೀತದ ಹೊನಲು ಹರಿಸಿದ್ದಾರೆ. ಜನಪದ, ವಚನ, ತತ್ವಪದ, ದಾಸರ ಪದ, ಭಾವಗೀತೆಗಳಂತಹ ಮನುಜ ಪ್ರೇಮದ ಹಾಡುಗಳ ಮೂಲಕ ಮಾನವೀಯತೆಯ ಹಣತೆ ಹಚ್ಚುತ್ತಿದ್ದಾರೆ... ಎಂದು ಹುಣ್ಣಿಮೆ ಹಾಡು ಪಸರಿಸಿದ ಬೆಳದಿಂಗಳನ್ನು ವಿಶ್ಲೇಷಿಸುತ್ತಾರೆ.

ಈ ಬಾರಿಯ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಮರೆಯಲಾಗದ ಡಾ. ರಾಜ್‌ ಮಧುರ ಗೀತೆಗಳು ಸಂಗೀತ ಪ್ರೇಮಿಗಳನ್ನು 70–80ರ ದಶಕದ ಭಾವ ಪಯಣಕ್ಕೆ ಮರಳಿ ಕರೆದೊಯ್ಯಲಿವೆ. ದಾಸ ವಚನ ಸಂಗಮ, ಗಾನ ಕಲರವ ಜನರ ಸಂಭ್ರಮವನ್ನು ಇಮ್ಮಡಿಗೊಳಿಸಲಿವೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಪ್ರತಿವರ್ಷ ಸಾಹಿತಿಗಳು, ಕಲಾವಿದರಿಗೆ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಬೆಳಗಾವಿಯ ಅಥಣಿಯ ಚೌಡಿಕೆ ಕಲಾವಿದೆ ರಾಧಾಬಾಯಿ ಮತ್ತು ಚಾರ್ಮಾಡಿ ಘಾಟ್‌ ಜೀವರಕ್ಷಕ ಕಾರ್ಯಕರ್ತ ಹಸನಬ್ಬ ಚಾರ್ಮಾಡಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಬಿ.ಕೆ.ಶಿವರಾಂ

ಜಾತ್ಯತೀತ ಮನಸ್ಥಿತಿ ಕಾರಣ

ಇಲ್ಲಿ ಎಲ್ಲಾ ಜಾತಿ, ಧರ್ಮ, ವರ್ಗ, ಭಾಷೆ ಮತ್ತು ವಿಭಿನ್ನ ಸಿದ್ಧಾಂತಗಳ ಜನರು ಮುಕ್ತವಾಗಿ ಬೆರೆಯುವಂಥ ವಾತಾವರಣ ನೆಲೆಸಿದೆ ಎನ್ನುವುದು ಹೆಮ್ಮೆ ಪಡಬೇಕಾದ ಸಂಗತಿ. ಸಾಂಸ್ಕೃತಿಕ ಪಯಣ ಯಾವುದೇ ಅಡೆತಡೆಗಳಿಲ್ಲದೆ ಶತಕ ಪೂರೈಸಿ ಮುನ್ನುಗ್ಗಬೇಕಾದರೆ ಜಾತ್ಯತೀತ ಮನಸ್ಥಿತಿ ಮತ್ತು ಪರಿಸರವೇ ಕಾರಣಎಂದು ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.