ADVERTISEMENT

ದೌರ್ಜನ್ಯಮುಕ್ತ ಮುಟ್ಟಿನತ್ತ ಸಿಟಿಜನರ ಚಿತ್ತ

ಶರತ್‌ ಹೆಗ್ಡೆ
Published 27 ನವೆಂಬರ್ 2019, 19:45 IST
Last Updated 27 ನವೆಂಬರ್ 2019, 19:45 IST
ಮಹಿಳೆಯರು
ಮಹಿಳೆಯರು   

#ದೌರ್ಜನ್ಯ ಮುಕ್ತ ಮುಟ್ಟು ನಮ್ಮದಾಗಬೇಕು.ಹೀಗೊಂದು ಮಾತನಾಡಿಸುವ ‘ಮೌನ ಚಳವಳಿ’ ಇದೀಗ ರಾಜ್ಯದಾದ್ಯಂತ ವ್ಯಾಪಿಸಿದೆ. ಮುಟ್ಟಿನ ಹೆಸರಿನಲ್ಲಿ ಕಂದಾಚಾರಗಳು, ಅಸ್ಪಶ್ಯರಂತೆ ಕಾಣುವ ವರ್ತನೆಗಳು ನಿಲ್ಲಲಿ. ಅದೊಂದು ನಿಸರ್ಗ ಸಹಜ ಕ್ರಿಯೆ. ಅದರ ಬಗ್ಗೆ ಸ್ವೀಕಾರವಿರಲಿ. ವಿಕಾರ ಬೇಡ ಎಂಬ ಧ್ವನಿಗಳು ಯುವಜನರ ನಡುವೆ ವಿನಿಮಯವಾಗುತ್ತಿವೆ.ಈ ಧ್ವನಿಗೊಂದು ವೇದಿಕೆ ಕೊಟ್ಟಿದೆ ಬೆಂಗಳೂರು ವಿವೇಕನಗರದ ಸುಖೀಭವ ಸಂಸ್ಥೆ.

ಸದ್ಯ ಈ ಸಂಸ್ಥೆ ಸಾಮಾಜಿಕ ಜಾಲತಾಣಗಳನ್ನು ಜಾಗೃತಿ ಮೂಡಿಸುವ ಪ್ರಧಾನ ಭೂಮಿಕೆಯಾಗಿಸಿಕೊಂಡಿದೆ. ಜಾಲತಾಣಗಳು ತಲುಪದ ಕಡೆಗೆ ಈ ತಂಡದ ಸದಸ್ಯರೇ ಹೋಗಿ ಗುಂಪುಗಳಲ್ಲಿ ಜಾಗೃತಿ ಮೂಡಿಸುತ್ತಾರೆ. ಮುಕ್ತ ಸಭೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆ, ಕೊಪ್ಪಳ ಭಾಗಗಳಿಗೂ ಈ ಅಭಿಯಾನ ವ್ಯಾಪಿಸಿದೆ.

ಈಗೇಕೆ ಇದೆಲ್ಲಾ?

ADVERTISEMENT

ನವೆಂಬರ್ 25ರಿಂದ ಈ ಅಭಿಯಾನ ಆರಂಭಗೊಂಡಿದೆ. ಅದು ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನ. ಡಿ.10ರಂದು ಮುಕ್ತಾಯಗೊಳ್ಳಲಿದೆ. ಅಂದು ವಿಶ್ವ ಮಾನವ ಹಕ್ಕುಗಳ ದಿನ. ಇವೆರಡೂ ಒಂದಕ್ಕೊಂದು ಕೊಂಡಿಯಾಗಿರುವ ಆಚರಣೆಗಳು. ದೌರ್ಜನ್ಯ, ಗೃಹ ಹಿಂಸೆ, ಸಾಮಾಜಿಕ ಶೋಷಣೆ, ಔದ್ಯೋಗಿಕ ಸಮಸ್ಯೆಗಳು ಇತ್ಯಾದಿ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ದೌರ್ಜನ್ಯಕ್ಕೆ ಗಂಡು ಹೆಣ್ಣು ಎಂಬ ಬೇಧ ಇಲ್ಲ. ಯಾರ ಮೇಲೆ ಬೇಕಾದರೂ ಆಗಬಹುದು. ಈ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಮುಟ್ಟಾಗುವಿಕೆ, ಆ ದಿನಗಳಿಗೆ ಸಂಬಂಧಿಸಿದ ವಿಷಯಗಳು ತುಂಬಾ ಸೂಕ್ಷ್ಮವಾದದ್ದು. ಹಾಗೆಂದು ಅದನ್ನು ಗುಟ್ಟಾಗಿಡುವಲ್ಲೂ ಅರ್ಥವಿಲ್ಲ. ಈ ಅರಿವು ಎಲ್ಲರಲ್ಲೂ ಮೂಡಿದರೆ ಹೆಣ್ಣನ್ನು ನೋಡುವ, ಆ ದಿನಗಳಲ್ಲಿ ನಡೆಸಿಕೊಳ್ಳುವ ಮನೋಭಾವ ಸ್ವಲ್ಪವಾದರೂ ಬದಲಾದೀತು ಎನ್ನುವ ಆಶಯವಿದೆ ಎನ್ನುತ್ತಾರೆ ಈ ಅಭಿಯಾನದ ರೂವಾರಿ ಜ್ಯೋತಿ ಹಿಟ್ನಾಳ್.

ಸ್ಪಂದಿಸುವಲ್ಲೂ ಹುಡುಗರೇ ಮುಂದೆ

ಈ ಅಭಿಯಾನಕ್ಕೆ ಗೌರವಯುತ ಪ್ರತಿಕ್ರಿಯೆ ಕೊಟ್ಟವರ ಸರಾಸರಿ ಪ್ರಮಾಣ ನೋಡಿದರೆ ಹುಡುಗರೇ ಮುಂದಿದ್ದಾರೆ. ‘ಮುಟ್ಟು ಎಂದರೆ ಮುಟ್ಟದಿರು ಎನ್ನುವ ನಿಷೇಧದ ಅರ್ಥ ಬರುವ ಹಾಗೆ ಸಮಾಜ ಬಿಂಬಿಸಿರುವುದು ದುರಂತವೇ ಸರಿ. ಯುವಜನರಂತೂ ಅದು ಜೀವ ಸಹಜ ಪ್ರಕ್ರಿಯೆಗೆ ಪೂರಕ ಎಂಬ ಪರಿಕಲ್ಪನೆಯಿಂದ ದೂರ ಉಳಿದಿರುವುದು ವಿಪರ್ಯಾಸ. ಇದರ ಕುರಿತು ಮಾತನಾಡುವ ತುರ್ತು ಇದೆ. ನಾನಂತೂಮುಕ್ತವಾಗಿ ಮಾತನಾಡುತ್ತೇನೆ' ಎಂದಿದ್ದಾರೆ ಚಾಂದ್ ಪಾಷಾ.

‘ದಲಿತ ಅಲ್ಪ ಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ನಾವು ಮಹಿಳೆಯ ಹಕ್ಕುಗಳನ್ನೂ ಗೌರವಿಸಬೇಕಿದೆ. ಮಹಿಳೆ ಹೆರುವ ಯಂತ್ರ ಅಲ್ಲ. ಮುಟ್ಟಿನ ಸಂದರ್ಭದಲ್ಲಿ ನಾವು ಆಕೆಯ ಮೇಲೆ ಎಸಗುವ ದೌರ್ಜನ್ಯಗಳೂ ಶೋಷಣೆಯೇ. ನಾನು ನಮ್ಮ ಮನೆಯಲ್ಲಿ ಇಂಥ ಶೋಷಣೆಗಳು ಆಗದಂತೆ ನೋಡಿಕೊಳ್ಳುತ್ತೇನೆ. ಮತ್ತೆ ನೀವು?’ ಎಂದು ಮನಪರಿವರ್ತನೆಯ ಪ್ರಶ್ನೆ ಇಟ್ಟಿದ್ದಾರೆ ಬೆಂಗಳೂರಿನ ಸೂರ್ಯಸಾತಿ.

‘ನಾನು ಮುಟ್ಟಾಗಿದೇನೆ ಎಂದು ಜೋರು ಧ್ವನಿಯಲ್ಲೇ ಹೇಳುತ್ತೇನೆ. ಅದರಲ್ಲಿ ಮುಚ್ಚಿಡುವಂಥದ್ದೇನೂ ಇಲ್ಲ. ತಪ್ಪು ಭಾವನೆಯಂತೂ ಇಲ್ಲವೇ ಇಲ್ಲ. ಆದರೆ, ಈ ಸಾಂಪ್ರದಾಯಿಕ ವ್ಯವಸ್ಥೆಯ ಸಮಾಜದಲ್ಲಿ ಇಂಥದ್ದೊಂದು ಪರಿವರ್ತನೆ ತರುವುದು ಕಷ್ಟವೇ ಸರಿ’ ಎಂದಿದ್ದಾರೆ ಯುವತಿ ಹನ್ನಾ.

‘ಮುಟ್ಟು ಈ ನೆಲದ ಜೀವ ಸತ್ವದ ಆದಿ. ನಮ್ಮೆಲ್ಲರ ಅಸ್ಮಿತೆ ಮತ್ತು ಅಸ್ತಿತ್ವ. ಮುಟ್ಟನ್ನು ಒಪ್ಪುವ ಮತ್ತು ಗೌರವಿಸುವ ಜತೆಯಾಗಬೇಕಾಗಿದೆ' ಎಂದು ಎಂ.ಜಿ. ಕೃಷ್ಣಮೂರ್ತಿ ಇಂಡ್ಲವಾಡಿ ಪ್ರತಿಕ್ರಿಯಿಸಿದ್ದಾರೆ.

‘ಋತುಸ್ರಾವ ತಿಂಗಳಲ್ಲಿ ಐದು ದಿನಗಳ ಕಾಲ ಅನುಭವಿಸುತ್ತೇನೆ. ನಾನೊಬ್ಬ ಮಹಿಳೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ಸಮಾಜ ಅದನ್ನೊಂದು ಕೊಳಕು ಎಂದೇ ಹೇಳಬಹುದು. ಆದರೆ, ನನ್ನ ಅಭಿಪ್ರಾಯ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಆ ನಕಾರಾತ್ಮಕ ಅಭಿಪ್ರಾಯ ತೊಡೆದುಹಾಕಲು ನಾವು ಅಭಿಪ್ರಾಯ ಹಂಚಿಕೊಳ್ಳಲು ಆರಂಭಿಸಬೇಕಿದೆ’ ಎಂದು ಸೌಮ್ಯಾ ಎಂಬ ಯುವತಿ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ನೇರ ಚರ್ಚೆ, ಆನ್‌ಲೈನ್‌ ಮಾತುಗಳು ಸೂಕ್ಷ್ಮ ವಿಷಯವೊಂದರ ಮೇಲೆ ವ್ಯಾಪಕ ಬೆಳಕು ಚೆಲ್ಲಿವೆ. ಸದ್ದು ಮುಂದುವರಿದಿದೆ.

ಜ್ಯೋತಿ ಹೇಳುವುದೇನು?

‘ಮುಟ್ಟಿಗೆ ಸಂಬಂಧಿಸಿದಂತೆ ಇರುವ ನಮ್ಮ ಸಂಪ್ರದಾಯದ ವ್ಯವಸ್ಥೆ ಅಸ್ಪಶ್ಯತೆಯಂಥ ಮೌಢ್ಯ, ಅಪೌಷ್ಟಿಕತೆ ಬಗ್ಗೆ ಹೇಳಲಾಗದಷ್ಟು ಮೌನ ವಹಿಸಿವೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಪ್ರವೃತ್ತಿ ಮಹಿಳೆಯರು ವಿಕಸನದೆಡೆಗೆ ಸಾಗಲು ಹಿನ್ನಡೆ ಉಂಟು ಮಾಡಿದೆ. ಈ ಬಗ್ಗೆ ಮಾತನಾಡಬೇಕು. ಇಂಥ ಮೌಢ್ಯಗಳನ್ನು ಪ್ರಶ್ನೆ ಮಾಡಬೇಕು. ಹಾಗಾದಾಗ ಸಮಾಜವನ್ನು ಒಳ್ಳೆಯ ದಿಕ್ಕಿನೆಡೆಗೆ ಕರೆದುಕೊಂಡು ಹೋಗಬಹುದು’ ಎಂದರು ಜ್ಯೋತಿ ಹಿಟ್ನಾಳ್‌.

ಮಾತು ಹೇಗೆ?

ಜ್ಯೋತಿ ಅವರು ಯುವಜನರಿಗೆ ಕರೆ ಮಾಡಿ ಅವರ ಅಭಿಪ್ರಾಯ ಕೇಳುತ್ತಾರೆ. ಕೆಲವರು ಸಂದೇಶ ಬರೆದು ಕಳುಹಿಸುತ್ತಾರೆ. ಒಂದು ವೇಳೆ ಬರೆಯಲು ಗೊತ್ತಿಲ್ಲವಾದರೆ, ಅವರು ಜ್ಯೋತಿ ಅಭಿಪ್ರಾಯವನ್ನು ಬರೆದುಕೊಳ್ಳುತ್ತಾರೆ. ಸುಖೀಭವ ಸಂಸ್ಥೆಯ ಹೆಸರಿನಲ್ಲಿ ಫೇಸ್‍ಬುಕ್ ಪೋಸ್ಟರ್‌ಗಳನ್ನು ಸಿದ್ಧಪಡಿಸಿದ್ದಾರೆ. ಆಯಾ ಅಭಿಪ್ರಾಯದ ಧ್ವನಿಗೆ ತಕ್ಕಂತೆ ವಿಶೇಷ ವಿನ್ಯಾಸಗೊಳಿಸಿ ಪೋಸ್ಟರ್‌ಗಳಲ್ಲಿ ಬರಹ ಹಾಕಿ ಪ್ರಕಟಿಸುತ್ತಾರೆ. ಹಾಗೆಯೇ ಇದು ವೈರಲ್ ಆಗುತ್ತಿದೆ. ಜನ ನಿಧಾನಕ್ಕೆ ಮಾತನಾಡಲು ಆರಂಭಿಸುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ನೀಲಿ ಇಂಕ್ ಜಾಹೀರಾತು ಏಕೆ?

'ಸ್ಯಾನಿಟರಿ ಪ್ಯಾಡ್ ಜಾಹೀರಾತುಗಳಲ್ಲಿ ಪ್ಯಾಡ್ ಮೇಲೆ ನೀಲಿ ಬಣ್ಣದ ಶಾಯಿ ಬಿದ್ದು ಅದು ಅಲ್ಲಿಯೇ ಒಣಗಿ ಹೋಗುವ ದೃಶ್ಯ ತೋರಿಸುತ್ತಾರೆ. ಎಲ್ಲವನ್ನೂ ನೈಜ ಎಂಬಂತೆ ತೋರಿಸುವ ಜಾಹೀರಾತುಗಳು ಈ ವಿಷಯದಲ್ಲಿ ಮಡಿವಂತಿಕೆ ಪ್ರದರ್ಶಿಸುವುದೇಕೆ ಎಂದು ಪ್ರಶ್ನಿಸುತ್ತಾರೆ ಜ್ಯೋತಿ.

‘ರಕ್ತದ ಬಣ್ಣವನ್ನೇ ತೋರಿಸಬಹುದಲ್ಲವೇ? ಈ ರೀತಿ ದೃಶ್ಯ ತೋರಿಸುವುದರಿಂದ ಮುಟ್ಟಿನ ಸ್ರಾವ ನೀಲಿಯಾಗಿಯೇ ಇರುತ್ತದೆ. ಅದೊಂದು ಕಟು ವಿಷ ಎಂದೇ ತಿಳಿದುಕೊಂಡವರು ಹೆಚ್ಚು ಮಂದಿ. ಇದೂ ಬದಲಾಗಬೇಕು' ಎಂದು ಅವರು ಒತ್ತಾಯಿಸಿದರು.

ಕೊಲೆ, ಹಿಂಸೆಯ ದೃಶ್ಯಗಳಲ್ಲಿ ನೈಜ ರಕ್ತ ಚಿಮ್ಮುವಂತೆ ಸಿನಿಮಾಗಳಲ್ಲಿ ತೋರಿಸುತ್ತಾರೆ. ಆದರೆ, ನಿಸರ್ಗ ಸಹಜ ಕ್ರಿಯೆಯಲ್ಲಿ ಬಳಸುವ ಪ್ಯಾಡ್‍ನಲ್ಲಿ ಉಂಟಾಗುವ ಬಣ್ಣವನ್ನು ನೈಜ ಬಣ್ಣದಲ್ಲಿ ತೋರಿಸಬಹುದಲ್ಲವೇ ಎಂದು ಪ್ರಶ್ನಿಸುತ್ತಾರೆ ಜ್ಯೋತಿ.

ಎಲ್ಲೆಲ್ಲಾ ಜಾಗೃತಿ?

ಫ್ಲವರ್ ಗಾರ್ಡನ್, ಕೆ.ಆರ್. ಮಾರ್ಕೆಟ್‌, ಮೈಸೂರು ರಸ್ತೆ, ನಾಗವಾರ ಪಾಳ್ಯ, ಬೈಯ್ಯಪ್ಪನಹಳ್ಳಿ, ವಿವೇಕನಗರ, ಕೋರಮಂಗಲ ಇಲ್ಲೆಲ್ಲಾ ಯುವಜನರ ಗುಂಪುಗಳಿಗೆ ನೇರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಹರಡುತ್ತಿರುವ ಸಂದೇಶಕ್ಕೆ ಇತಿಮಿತಿ ಹಾಕಲಾಗದು. ಅಂತೂ ಇದುವರೆಗೆ ಒಳ್ಳೆಯ ಪ್ರತಿಕ್ರಿಯೆ ಇದೆ ಎಂದರು ಜ್ಯೋತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.