ADVERTISEMENT

ಪಾನಮತ್ತ ವಾಹನ ಸವಾರಿ: ತಪಾಸಣೆಗೆ ಏಕೆ ಆತಂಕ?

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:30 IST
Last Updated 22 ಸೆಪ್ಟೆಂಬರ್ 2019, 19:30 IST
ಪಾನಮತ್ತ ಚಾಲಕರ ತಪಾಸಣೆ ನಡೆಸಿರುವ ಟ್ರಾಫಿಕ್‌ ಪೊಲೀಸರು (ಸಂಗ್ರಹ ಚಿತ್ರ) 
ಪಾನಮತ್ತ ಚಾಲಕರ ತಪಾಸಣೆ ನಡೆಸಿರುವ ಟ್ರಾಫಿಕ್‌ ಪೊಲೀಸರು (ಸಂಗ್ರಹ ಚಿತ್ರ)    

ಪಾನಮತ್ತರಾಗಿ ಚಾಲನೆ ಮಾಡುವಾಗ ಟ್ರಾಫಿಕ್‌ ಪೊಲೀಸರಿಗೆ ಸಿಕ್ಕಿ ಬೀಳುವ ಮತ್ತು ಭಾರಿ ದಂಡ ತೆರುವ ಆತಂಕ ವಾಹನ ಸವಾರರನ್ನು ಸದಾ ಕಾಡುತ್ತಿರುತ್ತದೆ.ಆದರೆ, ಕಾನೂನು ಏನು ಹೇಳುತ್ತದೆ ಎನ್ನುವ ವಿಷಯ ಬಹಳಷ್ಟು ಚಾಲಕರಿಗೆ ತಿಳಿದಿರುವುದಿಲ್ಲ.

ಕಾನೂನು ಅನುಮತಿಸುವ ಮಿತಿಯೊಳಗೆ ಕುಡಿದು ವಾಹನ ಚಲಾಯಿಸಿದರೆ ದಂಡ ವಿಧಿಸುವಂತಿಲ್ಲ. ವಾಹನವನ್ನು ನೀವೇ ಚಾಲನೆ ಮಾಡಿಕೊಂಡು ಮನೆ ಸೇರಬಹುದು ಎಂದು ಕಾನೂನು ಹೇಳುತ್ತದೆ.

ಟ್ರಾಫಿಕ್‌ ಪೊಲೀಸರು ತಡೆದು, ಉಸಿರು ವಿಶ್ಲೇಷಕ (ಅಲ್ಕೋಮೀಟರ್‌) ಕೊಳವೆ ಬಳಿ ಊದಲು ಹೇಳಬಹುದು.ಕೆಂಪು ದೀಪ ಉರಿದು ಬೀಪ್‌ ಸೌಂಡ್‌ ಬಂದರೆ ಅಲ್ಕೋಮೀಟರ್‌ಗೆ ಹೊಸ ಕೊಳವೆ (ಸ್ರ್ಟಾ) ಹಾಕಿ ಮತ್ತೊಮ್ಮೆ ಊದಿ ಎಂದು ಪೊಲೀಸರು ಕೇಳಬಹುದು. ಇಲ್ಲವೇ ನೀವೇ ಹೊಸ ಕೊಳವೆ ಹಾಕಿ ಮತ್ತೊಮ್ಮೆ ಊದಲು ಅವಕಾಶ ನೀಡುವಂತೆ ಪೊಲೀಸರನ್ನು ಕೇಳಬಹುದು.

ADVERTISEMENT

30 ಮಿಲಿ ಗ್ರಾಂ ಮಿತಿ

ಅಲ್ಕೋಮೀಟರ್‌, ವ್ಯಕ್ತಿಯ ಉಸಿರಿನ ವಿಶ್ಲೇಷಣೆ ಮೂಲಕ ರಕ್ತದಲ್ಲಿರುವ ಮದ್ಯದ ಪ್ರಮಾಣವನ್ನು ಪತ್ತೆ ಮಾಡುತ್ತದೆ. ಅಲ್ಕೋಮೀಟರ್‌ ರೀಡಿಂಗ್‌ ‘30ಎಂಎಲ್‌ಜಿ’ಗಿಂತ (ಮಿಲಿ ಗ್ರಾಂ) ಕಡಿಮೆ ಇದ್ದರೆ ಭಯಪಡಬೇಕಿಲ್ಲ.ನೂರು ಮಿಲಿ ಲೀಟರ್‌ ರಕ್ತದಲ್ಲಿ ಮದ್ಯದ ಪ್ರಮಾಣ 30 ಮಿಲಿ ಗ್ರಾಂ ಇದ್ದರೆ ಕಾನೂನು ಅನುಮತಿಸುವ ಮಿತಿಯೊಳಗೆ ಇದ್ದೀರಿ ಎಂದರ್ಥ.

ಬೆಂಗಳೂರಿನಲ್ಲಿ ಈ ಮಿತಿಯನ್ನು40 ಮಿಲಿ ಗ್ರಾಂ/100 ಮಿಲಿ ಲೀಟರ್‌ ಎಂದು ನಿಗದಿ ಮಾಡಲಾಗಿದೆ. ಈ ಮಿತಿಯೊಳಗಿದ್ದರೆ ನೀವೇ ವಾಹನ ಚಾಲನೆ ಮಾಡಿಕೊಂಡು ಮನೆಗೆ ಹೊರಡಬಹುದು. ಪೊಲೀಸರು ನಿಮ್ಮನ್ನು ಅಡ್ಡಿಪಡಿಸುವಂತೆ ಇಲ್ಲ ಮತ್ತು ಪ್ರಕರಣ ದಾಖಲಿಸುವಂತೆ ಇಲ್ಲ. ಅಲ್ಕೋಮೀಟರ್‌ನಲ್ಲಿಯ ರೀಡಿಂಗ್‌ ತೋರಿಸುವಂತೆ ಪೊಲೀಸರನ್ನು ಕೇಳುವ ಹಕ್ಕು ಸವಾರರಿಗೆ ಇರುತ್ತದೆ.

ಹೆಚ್ಚಾದರೆ ಆಪತ್ತು!

ಒಂದು ವೇಳೆ ರಕ್ತದಲ್ಲಿ ಮದ್ಯದ ಪ್ರಮಾಣ ‘40 ಮಿಲಿ ಗ್ರಾಂ’ಗಿಂತ ಹೆಚ್ಚಿದ್ದರೆ ಖಂಡಿತ ನೀವು ಸಂಚಾರ ನಿಯಮ ಉಲ್ಲಂಘಿಸಿದ್ದೀರಿ ಎಂದರ್ಥ.

ಪೊಲೀಸರು ತಾಜಾ ಕೊಳವೆ ಕೊಡದಿದ್ದರೆ ಚಾಲಕರು ಪರೀಕ್ಷೆ ನಿರಾಕರಿಸಬಹುದು. ಅಲ್ಕೋಮೀಟರ್‌ನಲ್ಲಿ ರೀಡಿಂಗ್‌ 40ಎಂಎಲ್‌ಜಿಕ್ಕಿಂತ ಹೆಚ್ಚಿದ್ದರೆ ಪೊಲೀಸರು ಕೂಡಲೇ ಪಿಡಿಎ ಮೆಷಿನ್‌ನಿಂದ ಪ್ರಿಂಟ್ಔಟ್‌ ತೆಗೆದು ಪಾನಮತ್ತ ಚಾಲನೆ (ಡ್ರಂಕ್‌ ಆ್ಯಂಡ್‌ ಡ್ರೈವ್‌) ಪ್ರಕರಣ ದಾಖಲಿಸಬಹುದು. ವಾಹನ ಮತ್ತು ಚಾಲನಾ ಪರವಾನಗಿ ವಶಪಡಿಸಿಕೊಳ್ಳಲು ಅವರಿಗೆ ಅವಕಾಶವಿರುತ್ತದೆ.

ವಾಹನ ಚಾಲಕರು ಅಥವಾ ಸವಾರರು ಮದ್ಯಪಾನ ಮಾಡಿರದ ವ್ಯಕ್ತಿಯ ನೆರವಿನಿಂದ ಅಲ್ಲಿಂದ ವಾಹನ ತೆಗೆದುಕೊಂಡು ಹೊರಡಬಹುದು. ಪಾನಮತ್ತ ಚಾಲಕರು ವಾಹನ ಚಾಲನೆ ಮಾಡಲು ಅವಕಾಶ ಇಲ್ಲ.

ಒಂದು ವೇಳೆ ವಾಹನ ಸವಾರರು ಅಲ್ಕೋಮೀಟರ್‌ ರೀಡಿಂಗ್‌ ಬಗ್ಗೆ ಶಂಕೆ ವ್ಯಕ್ತಪಡಿಸಿದರೆ ಅಥವಾ ತಗಾದೆ ತೆಗೆದರೆ ಪೊಲೀಸರು ಅಂಥವರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಬಹುದು.

ಏನು ಶಿಕ್ಷೆ?

ಪಾನಮತ್ತ ಚಾಲನೆ ಪ್ರಕರಣದಲ್ಲಿ ಡ್ರೈವಿಂಗ್ ಲೈಸನ್ಸ್‌ ಅಮಾನತು ಮಾಡಲು ಕಾನೂನಿನಲ್ಲಿ ಅವಕಾಶವಿದೆ

ಪಾನಮತ್ತ ಚಾಲನೆಯ ವೇಳೆ ಅಪಘಾತವಾಗಿ ಬೇರೆಯವರ
ಜೀವ ಹೋದಲ್ಲಿ ಅಂತಹ ಚಾಲಕರ ವಿರುದ್ಧ ‘ಉದ್ದೇಶಪೂರ್ವಕವಲ್ಲದ ಹತ್ಯೆ’ ಎಂದು ಪರಿಗಣಿಸಿ ಪ್ರಕರಣ ದಾಖಲಿಸಬಹುದು

ಇದು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಜಾಮೀನು ರಹಿತ ಅಪರಾಧವಾಗಿರುತ್ತದೆ

ದಂಡ ವಿಧಿಸುವ ಅಧಿಕಾರ ಪೊಲೀಸರಿಗಿಲ್ಲ!

ಅಲ್ಕೋಮೀಟರ್‌ ರೀಡಿಂಗ್‌ ದಾಖಲಿಸದೆ ಅಥವಾ ಪ್ರಿಂಟ್‌ಔಟ್‌ ಕೊಡದೆ ಪೊಲೀಸರು ಯಾವುದೇ ಕಾರಣಕ್ಕೂ ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ.

ಪಾನಮತ್ತ ಚಾಲನೆ ಪ್ರಕರಣಗಳಲ್ಲಿ ಟ್ರಾಫಿಕ್‌ ಪೊಲೀಸರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಅಧಿಕಾರ ಇಲ್ಲ. ತಪ್ಪಿತಸ್ಥರು ನ್ಯಾಯಾಲಯದಲ್ಲಿಯೇ ದಂಡ ಕಟ್ಟಬೇಕು.

ಜೀವ ಅಮೂಲ್ಯ

‘ಕುಡಿದು ವಾಹನ ಚಾಲನೆ ಮಾಡುವ ಮುನ್ನ ಈ ಎಲ್ಲಾ ಅಂಶಗಳು ಗಮನದಲ್ಲಿರಬೇಕು. ಇವು ನಾಗರಿಕರ ಮೂಲಭೂತ ಹಕ್ಕುಗಳ ವಿವರಣೆಯೇ ಹೊರತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಲು ಪ್ರೇರಣೆ ಅಲ್ಲ. ಜೀವ ಅಮೂಲ್ಯ. ಮದ್ಯಪಾನ ಮಾಡಿದಾಗವಾಹನ ಚಾಲನೆ ಮಾಡುವುದು ಸುರಕ್ಷಿತವಲ್ಲ‘ ಎಂದು ಸಂಚಾರ ಪೊಲೀಸರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.