ADVERTISEMENT

ಗಂಜಾಂ ಆಭರಣ ಪ್ರದರ್ಶನ ಇಂದು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 19:30 IST
Last Updated 13 ಅಕ್ಟೋಬರ್ 2019, 19:30 IST
ಆಭರಣ ಪ್ರದರ್ಶನ
ಆಭರಣ ಪ್ರದರ್ಶನ   

ವಜ್ರ, ಚಿನ್ನದ ವಿವಿಧ ವಿನ್ಯಾಸಗಳ ಆಭರಣಗಳನ್ನು ಒಂದೇ ಸೂರಿನಡಿ ನೋಡುವುದೇ ಹಬ್ಬ. ಗಾಜಿನ ಪೆಟ್ಟಿಗೆಯೊಳಗೆ ಅಂದವಾಗಿ ಜೋಡಿಸಿಟ್ಟ ವಜ್ರದ ಕಂಠಿಹಾರ, ನೆಕ್ಲೇಸ್‌, ಪೆಂಡೆಂಟ್‌ ಸರ, ಕಿವಿಯೋಲೆ, ಬಳೆ, ಉಂಗುರಗಳ ವಿನ್ಯಾಸಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವು. ವಜ್ರ, ಮುತ್ತು, ಬೇರೆ ಬೇರೆ ರತ್ನಗಳಿಂದ ಅಲಂಕೃತಗೊಂಡ ಆಭರಣಗಳನ್ನು ನೆರೆದಿದ್ದ ಜನರು ಆಸಕ್ತಿಯಿಂದ ನೋಡುತ್ತಿದ್ದರು.

ಪರಂಪರಾಗತ ವಜ್ರಾಭರಣಗಳ ಮಳಿಗೆ ಗಂಜಾಂಗೆ ಈಗ 130 ವರ್ಷ. ಈ ಸಂಭ್ರಮಾಚರಣೆಯ ಅಂಗವಾಗಿ ಬಸವನಗುಡಿಯ ಗಂಜಾಂ ಮಂಟಪದಲ್ಲಿ ಎರಡು ದಿನಗಳ ಕಾಲ ಸಾಂಪ್ರದಾಯಿಕ ವಜ್ರಾಭರಣಗಳ ವಿಶೇಷ ಸಂಗ್ರಹದ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಿತ್ತು.

130 ವರ್ಷಾಚರಣೆಗಾಗಿ ಗಂಜಾಂ, ಈ ಬಾರಿ ತಮ್ಮ ಕುಟುಂಬ ಸಂಗ್ರಹದಲ್ಲಿದ್ದ ಪಾರಂಪರಿಕ, 200 ವರ್ಷಕ್ಕಿಂತಲೂ ಹಳೆಯದಾದ ಬಳೆ, ತೋಳುಬಂದಿ, ಡಾಬು, ಕಿವಿಯೋಲೆ, ನೆಕ್ಲೇಸ್‌, ವಿವಿಧ ಶೈಲಿಯ ಸರ, ಜಡೆಯ ಆಭರಣಗಳನ್ನು ಪ್ರದರ್ಶನಕ್ಕಿಟ್ಟಿದೆ. ಪ್ರತಿ ಆಭರಣದ ಜೊತೆಗೆ ಇರುವ ವಿವರಣೆ, ಫೋಟೊಗಳು ಹಳೆ ಕಾಲದ ಶ್ರೀಮಂತಿಕೆ, ಆಭರಣ ವೈಭವವನ್ನು ತಿಳಿಸುತ್ತದೆ. ವಿಶೇಷ ಅಂದ್ರೆ ಗಂಜಾಂನಲ್ಲಿ ಈಗಲೂ ಸಾಂಪ್ರದಾಯಿಕ ಆಭರಣ, ಟೆಂಪಲ್‌ ಜ್ಯುವೆಲ್ಲರಿಗಳನ್ನು ವಿನ್ಯಾಸಿಸಲಾಗುತ್ತದೆ. ಪ್ರದರ್ಶನದಲ್ಲಿ ಇಟ್ಟಿದ್ದ ಹೊಸ ವಿನ್ಯಾಸದ ಆಭರಣಗಳನ್ನು ನೋಡಿದಾಗ ಹರಳುಗಳ ಆಯ್ಕೆ, ವಿನ್ಯಾಸ ಎಲ್ಲವೂ ಅಲ್ಲಿ ಇಟ್ಟಿದ್ದ ಹಳೆಯ ಕಾಲದ ಆಭರಣ ಹೋಲುತ್ತಿತ್ತು.

ADVERTISEMENT

‘ಗಂಜಾಂನಲ್ಲಿ ಪ್ರತಿ ಆಭರಣಗಳ ವಿನ್ಯಾಸದಲ್ಲೂ ಚೇರ್‌ಮನ್‌ ಈಶ್ವರ್ ಗಂಜಾಂ ಅವರು ಮುತುವರ್ಜಿ ವಹಿಸುತ್ತಾರೆ. ಕೆಲ ಅಪರೂಪದ ಆಭರಣಗಳನ್ನು ಇಲ್ಲಿ ಈಗಲೂ ಅಕ್ಕಸಾಲಿಗರೇ ಕೈಯಿಂದಲೇ ಸ್ವತಃ ವಿನ್ಯಾಸ ಮಾಡುತ್ತಾರೆ’ ಎಂದು ಮಾಹಿತಿ ನೀಡಿದರು ಸಂಸ್ಥೆಯ ನಿರ್ದೇಶಕ ದುಷ್ಯಂತ್‌ ಗಂಜಾಂ.

‘ನವತತ್ವ ಆಭರಣಗಳು’ ಈ ಪ್ರದರ್ಶನದ ಮತ್ತೊಂದು ವಿಶೇಷ. ಇದನ್ನು ನವಗ್ರಹಗಳನ್ನು ಬಳಸಿ ಮಾಡಲಾಗಿದೆ. ಇಲ್ಲಿ ನವಗ್ರಹಗಳ ಪೆಂಡೆಂಟ್‌, ಉಂಗುರ, ಕಿವಿಯೋಲೆ, ಬಳೆ ಆಕರ್ಷಣೀಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.