ADVERTISEMENT

ಬಡವರ ಮದುವೆಗೆ ಜೈನರ ಉಚಿತ ಛತ್ರ

ಪ್ರಜಾವಾಣಿ ವಿಶೇಷ
Published 5 ಜನವರಿ 2020, 19:45 IST
Last Updated 5 ಜನವರಿ 2020, 19:45 IST
‘ಗೋಡವಾಡ ಭವನ’ದ ನೀಲನಕ್ಷೆ
‘ಗೋಡವಾಡ ಭವನ’ದ ನೀಲನಕ್ಷೆ   

ಕೈಯಲ್ಲಿ ಪುಡಿಗಾಸು ಇಲ್ಲದ ಬಡವರುಬೆಂಗಳೂರಿನಂತಹ ಮಹಾನಗರದ ಭವ್ಯ ಕಲ್ಯಾಣ ಮಂಟಪಗಳಲ್ಲಿ ಮಕ್ಕಳ ಮದುವೆ ಮಾಡುವ ಕನಸು ಕಾಣಲು ಸಾಧ್ಯವೇ ಇಲ್ಲ. ಆದರೆ, ಈ ಮಾತನ್ನು ಸುಳ್ಳು ಮಾಡಿ ತೋರಿದ್ದು ಬೆಂಗಳೂರಿನ ಜೈನ ಸಮಾಜ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿ 45 ಹವಾನಿಯಂತ್ರಿತ ಕೊಠಡಿಗಳಿರುವ ಸುಸಜ್ಜಿತ ಕಲ್ಯಾಣ ಮಂಟಪ‘ಗೋಡವಾಡ ಭವನ’ವನ್ನು ಜೈನ ಸಮುದಾಯ ನಿರ್ಮಿಸಿದೆ.ಈ ಛತ್ರವನ್ನು ಬಡವರ ಮದುವೆ ಕಾರ್ಯಗಳಿಗೆ ಉಚಿತವಾಗಿ ನೀಡಲಾಗುತ್ತದೆ.

ಜೈನ ಸಮುದಾಯ ಸೇರಿದಂತೆಎಲ್ಲ ಸಮುದಾಯದಶ್ರೀಮಂತರ ಮದುವೆ,ಶುಭ ಕಾರ್ಯಗಳಿಗೆ ಈ ಛತ್ರವನ್ನು ಬಾಡಿಗೆ ನೀಡಲಾಗುತ್ತದೆ. ಬಾಡಿಗೆ ಕೂಡ ದುಬಾರಿ. ಬಡವರಿಂದ ನಯಾ ಪೈಸೆ ಹಣವನ್ನೂ ಸ್ವೀಕರಿಸುವುದಿಲ್ಲ.ಇದಕ್ಕಾಗಿಯೇ ಗೋಡವಾಡ ಭವನಕ್ಕೆ ‘ಬಡವರ ಛತ್ರ’ ಎಂಬ ಹೆಸರು ಬಂದಿದೆ.ಭವನ ಯಾವಾಗಲೂ ಫಳ, ಫಳ ಹೊಳೆಯುತ್ತಿರುತ್ತದೆ. ಸ್ವಚ್ಛತೆಗೆ ಇಲ್ಲಿ ಮೊದಲ ಆದ್ಯತೆ.

ADVERTISEMENT

ಛತ್ರದ ಬಾಡಿಗೆ ರೂಪದಲ್ಲಿ ಬರುವ ಹಣವನ್ನು ಬಡವರ ಮದುವೆ, ಆರೋಗ್ಯ ಶಿಬಿರ, ಕೃತಕ ಕಾಲು ಜೋಡಣಾ ಶಿಬಿರಗಳಂತಹ ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ.

ಛತ್ರ ಹುಟ್ಟಿದ್ದಾದರೂ ಹೇಗೆ?

ದಶಕಗಳ ಹಿಂದೆಯೇ ವ್ಯಾಪಾರಕ್ಕಾಗಿ ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಜೈನ್‌ ಸಮುದಾಯ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಮೂಲಕ ಸ್ಥಳೀಯರ ಜತೆ ಬೆರೆತು ಹೋಗಿದೆ. ರಕ್ತಗತವಾಗಿ ಬಂದಿರುವ ವ್ಯಾಪಾರದೊಂದಿಗೆ ಸಮಾಜ ಸೇವೆಯನ್ನೂ ಮೈಗೂಡಿಸಿಕೊಂಡಿದೆ.

ಬಡ ಮಕ್ಕಳ ವಿದ್ಯಾಭ್ಯಾಸ,ಆರೋಗ್ಯ, ವೈದ್ಯಕೀಯ ನೆರವು, ಮದುವೆಯ ಕನಸುಗಳಿಗೆ ಕಸುವು ತುಂಬುವ ಉದ್ದೇಶ
ದೊಂದಿಗೆ ಬೆಂಗಳೂರಿನ ಜೈನ ಸಮುದಾಯ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿತ್ತು. ಈ ಚಟುವಟಿಕೆಗಳಿಗೆಶಿಸ್ತುಬದ್ಧವಾದ ರೂಪ ದೊರೆತದ್ದು 1985ರಲ್ಲಿ ಅಸ್ತಿತ್ವಕ್ಕೆ ಬಂದ ಜೈನ್‌ ಟ್ರಸ್ಟ್‌ ಮೂಲಕ.

ಟ್ರಸ್ಟ್‌ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ ಸಮುದಾಯ ನೂರಾರು ಬಡ ಮತ್ತು ನಿರ್ಗತಿಕರಿಗೆ ದಾರಿದೀಪವಾಗಿತ್ತು. ಮೊದ, ಮೊದಲು ಬಡವರಿಗೆ ಉಚಿತ ಚಿಕಿತ್ಸೆ ನೀಡಲು ಕೊಳೆಗೇರಿಗಳಿಗೆ ವೈದ್ಯಕೀಯ ವ್ಯಾನ್‌ ತೆಗೆದುಕೊಂಡು ಹೋಗಲಾಗುತ್ತಿತ್ತು. ಹತ್ತು ವರ್ಷ ನಿರಂತರವಾಗಿ ಮೊಬೈಲ್‌ ಆರೋಗ್ಯ ಸೇವೆ ಮುಂದುವರಿದಿತ್ತು. ಇನ್ನೂ ಹೆಚ್ಚಿನ ಸಂಖ್ಯೆಯ ಬಡವರಿಗೆ ಸಹಾಯ ವಿಸ್ತರಿಸಬೇಕು ಎಂಬ ಆಲೋಚನೆ ಹುಟ್ಟಿದಾಗ ತಲೆ ಎತ್ತಿದ್ದೇ ಗೋಡವಾಡ ಭವನ.

ಗೋಡವಾಡ ಭವನ ಜೈನ್‌ ಟ್ರಸ್ಟ್‌ ಅಧ್ಯಕ್ಷ ಭೀಮರಾಜ ಕರ್ಬವಾಲ, ಟ್ರಸ್ಟಿಗಳಾದ ಕುಮಾರಪಾಲ್ ಸಿಷೋದಿಯಾ, ದಿಲೀಪ್ ಸುರಾನ, ದಿನೇಶ ರಾಖ, ಪ್ರವೀಣ ಸೋನಿಗ, ಅಮೋಲಕಚಂದ್ ಗಾದಿಯಾ ಅವರ ಪರಿಶ್ರಮದ ಫಲವಾಗಿ ಈ ಭವನ ತಲೆ ಎತ್ತಿದೆ. ಬಡವರು ಕೂಡ ಎಲ್ಲರಂತೆ ಅದ್ಧೂರಿಯಾಗಿ ತಮ್ಮ ಮಕ್ಕಳ ಮದುವೆ ಮಾಡುವಂತಾಗಿದೆ.

ಟ್ರಸ್ಟ್‌ ಸದಸ್ಯರು ತಮ್ಮ ದೈನಂದಿನ ಕೆಲಸ, ವ್ಯಾಪಾರ, ವಹಿವಾಟಿಗೆ ತೆರಳುವ ಮುಂಚೆಗೋಡವಾಡ ಭವನಕ್ಕೆ ಕಡ್ಡಾಯವಾಗಿ ಭೇಟಿ ನೀಡುತ್ತಾರೆ. ಎಷ್ಟೇ ಬ್ಯುಸಿಯಾಗಿರಲಿ ಪ್ರತಿನಿತ್ಯ ಭವನದ ಕೆಲಸಗಾರರು ಹಾಗೂ ಬಡವರ ಯೋಗಕ್ಷೇಮ ವಿಚಾರಿಸಿ ಮುಂದಿನ ಕೆಲಸಕ್ಕೆ ತೆರಳುತ್ತಾರೆ. ಗೋಡವಾಡ ಭವನ ಟ್ರಸ್ಟ್‌ ಸದಸ್ಯರ ಜೀವನದಲ್ಲಿ ಬೆರೆತು ಹೋಗಿದೆ.

‘ನಿಮ್ಮ ಬಳಿ ನೆರವು ಕೋರಿ ಬರುವವರನ್ನು ಬಡವರು ಎಂದು ಹೇಗೆ ಗುರುತಿಸುತ್ತೀರಿ’ ಎಂಬ ಸಹಜ ಮತ್ತು ಕುತೂಹಲದ ಪ್ರಶ್ನೆಗೆಕುಮಾರಪಾಲ್ ಸಿಷೋದಿಯಾ ಉತ್ತರಿಸುವುದು ಹೀಗೆ...ಮದುವೆ ಸಮಾರಂಭ, ಅಲ್ಲಿಗೆ ಬರುವ ಅತಿಥಿಗಳ ಮೇಲೆ ಕಣ್ಣಾಡಿಸಿದ ತಕ್ಷಣ ನಮಗೆ ಗೊತ್ತಾಗಿ ಬಿಡುತ್ತದೆ ಎನ್ನುತ್ತಾರೆ.

ಉಚಿತ ಊಟ

ಗೋಡವಾಡ ಭವನದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಿರಿಯ ನಾಗರಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಚಿಕಿತ್ಸೆಗಾಗಿ ಪರಸ್ಥಳಗಳಿಂದ ಬರುವ ಬಡವರಿಗೆ ಉಚಿತ ಊಟ, ವಸತಿ ಒದಗಿಸಲಾಗುತ್ತದೆ.ಜೈನ ಸಮುದಾಯವಲ್ಲದೇ ಬೇರೆ ಸಮುದಾಯದ ಕಡು ಬಡ ಮಕ್ಕಳ ಊಟ, ವಸತಿ, ವಿದ್ಯಾಭ್ಯಾಸದ ಜತೆ ಬಡ ರೋಗಿಗಳ ವ್ಯೆದ್ಯಕೀಯ ವೆಚ್ಚವನ್ನೂ ಭರಿಸಲಾಗುತ್ತದೆ ಎನ್ನುತ್ತಾರೆ ಟ್ರಸ್ಟ್‌ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಕುಮಾರಪಾಲ್ ಶಿಷೋದಿಯಾ.

ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸೆ, ಕೃತಕ ಕಾಲು ಜೋಡಣೆ ಹೀಗೆ ಹತ್ತು ಹಲವು ಶಸ್ತ್ರ ಚಿಕಿತ್ಸಾ ಶಿಬಿರಗಳ ಜತೆಗೆಹಿರಿಯ ನಾಗರಿಕರು, ಅಸಹಾಯಕರು ಮತ್ತು ಬಡ ಕುಟುಂಬಕ್ಕೆ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಉಚಿತವಾಗಿ ಊಟದ ಕ್ಯಾರಿಯರ್ ಕಳಿಸಲಾಗುತ್ತದೆ.

ನೆರವು ಕೋರಿ ಗೋಡವಾಡ ಭವನ ಜೈನ್‌ ಟ್ರಸ್ಟ್‌ ಬಳಿ ಬರುವ ಯಾರೊಬ್ಬರು ಇದುವರೆಗೂ ಬರಿಗೈಯಲ್ಲಿ ಮರಳಿದ ಉದಾಹರಣೆಗಳಿಲ್ಲ ಎನ್ನುವುದು ಕುಮಾರಪಾಲ್‌ ಸಿಷೋದಿಯಾ ಅವರ ಹೆಮ್ಮೆಯ ನುಡಿ. ಇದು ನಿಜ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.