ADVERTISEMENT

ಮೀ–ಟೂ ಆಯ್ತು ಈಗ ‘ಮೆನ್–ಟೂ’

ಮಂಜುಶ್ರೀ ಎಂ.ಕಡಕೋಳ
Published 23 ಅಕ್ಟೋಬರ್ 2018, 1:44 IST
Last Updated 23 ಅಕ್ಟೋಬರ್ 2018, 1:44 IST
ಮೆನ್‌ ಟೂ
ಮೆನ್‌ ಟೂ   

‘ಮೀ–ಟೂ’ ಅಭಿಯಾನ ಹಚ್ಚಿರುವ ಕಿಡಿಗೆ ಬಾಲಿವುಡ್, ಚಂದನವನ ತತ್ತರಿಸಿದೆ. ಇದುವರೆಗೂ ಮನದಾಳದಲ್ಲಿ ಅದುಮಿಟ್ಟ ಅವಳ ನೋವುಗಳಿಗೆ ‘ಮೀಟೂ’ ದನಿಯಾಗಿದೆ. ಈ ನಡುವೆ ಬರೀ ಹೆಣ್ಣುಮಕ್ಕಳ ಮೇಲಷ್ಟೇ ಶೋಷಣೆ ನಡೆಯುತ್ತಾ, ಗಂಡಸರ ಮೇಲೂ ನಡೆಯುತ್ತೆ ಅನ್ನುವ ಮಾತುಗಳೂ ಕೇಳಿಬರುತ್ತಿವೆ. ಶೋಷಣೆಗೆ ಲಿಂಗಭೇದವಿಲ್ಲ. ಅಧಿಕಾರದ ಮದವೇ ಶೋಷಣೆಯ ಮೂಲ ಎಂಬುದು ಕೆಲವರ ವಾದ. ಈ ಮಾತಿಗೆ ಇಂಬುಗೊಡುವಂತೆ ಕಬ್ಬನ್ ಪಾರ್ಕ್‌ನಲ್ಲಿ ಈಚೆಗೆ ‘ಮೆನ್–ಟೂ’ ಅಭಿಯಾನಕ್ಕೆ ಚಾಲನೆ ದೊರೆತಿದೆ.

‌‘ಮೆನ್‌–ಟೂ’ ಅಭಿಯಾನದಡಿಯಲ್ಲಿ ಕೆಲ ಪುರುಷರು ತಮ್ಮ ಮೇಲೆ ನಡೆದ ದೌರ್ಜನ್ಯದ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡರೆ, ಕೆಲವರು ತಮ್ಮ ಹೆಸರು ಮರೆಮಾಚಿ ತಮಗಾದ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಹೊಟ್ಟೆಪಾಡಿಗೆಂದು ಉದ್ಯೋಗ ಅರಸಿಕೊಂಡು ಬರುವ ಯುವಕರಿಗೆ ಕಚೇರಿಯಲ್ಲಿ ಲೇಡಿ ಬಾಸ್‌ಗಳು ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬರುವಂತೆ ಮೆಸೇಜ್ ಮಾಡುವುದು, ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಅಂತ ಕರೆಯುವುದು ನಡೆಯುತ್ತಿದೆ ಅನ್ನುವುದು ‘ಮೆನ್‌–ಟೂ’ ಅಭಿಯಾನದಡಿ ಕೇಳಿಬರುತ್ತಿರುವ ದೂರುಗಳು.

ಗಂಡಸರ ಮೇಲೂ ಲೈಂಗಿಕ ದೌರ್ಜನ್ಯ

ADVERTISEMENT
ವಸುಧೇಂದ್ರ

‘ಗಂಡಸರ ಮೇಲೂ ಲೈಂಗಿಕ ದೌರ್ಜನ್ಯ ಖಂಡಿತಾ ಆಗುತ್ತೆ. ಅದರಲ್ಲಿ ಬಾಲ್ಯದಲ್ಲಿ ಗಂಡು ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯದ ಅಂಕಿಅಂಶಗಳು ದಂಗುಪಡಿಸುವಂತಿವೆ. ಉದ್ಯೋಗ ಕ್ಷೇತ್ರದಲ್ಲಿ ಲೇಡಿ ಬಾಸ್ ಪುರುಷರ ಮೇಲೆ ದೌರ್ಜನ್ಯ ನಡೆಸಿದ ಅನೇಕ ಪ್ರಕರಣಗಳಿವೆ. ಆದರೆ, ಇಲ್ಲಿ ಹೆಣ್ಣು ಗಂಡು ಅನ್ನೋದಕ್ಕಿಂತ ಅಧಿಕಾರವೇ ಮುಖ್ಯ ಕಾರಣವಾಗುತ್ತದೆ. ನಮ್ಮದು ಪಿತೃಪ್ರಧಾನ ಸಮಾಜ. ಹಾಗಾಗಿ, ಹೆಣ್ಣೇ ಹೆಚ್ಚು ದೌರ್ಜನ್ಯಕ್ಕೀಡಾಗಿರುವ ಸಾಧ್ಯತೆಗಳಿವೆ. ಹಾಗಂತ ಗಂಡಸರ ಮೇಲಿನ ದೌರ್ಜನ್ಯಗಳನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆ ನೋಡಿದರೆ ಲಿಂಗಾಂತರಿಗಳ ಮೇಲೆ ಅತಿ ಹೆಚ್ಚು ಲೈಂಗಿಕ ದೌರ್ಜನ್ಯಗಳಾಗುತ್ತವೆ. ಫ್ಯಾಷನ್ ಜಗತ್ತಿನಲ್ಲಂತೂ ಗಂಡಸು ರೂಪದರ್ಶಿಗಳ ಮೇಲೆ ಹೆಚ್ಚು ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯಗಳಾಗುತ್ತಿವೆ. ಇದೆಲ್ಲಾ ಅವಕಾಶ ಪಡೆಯಲು ನಡೆಯುತ್ತದೆ. ‘ಮೀ–ಟೂ’ ಆಗಲಿ, ‘ಮೆನ್–ಟೂ’ ಆಗಲಿ ದುರಪಯೋಗವಾಗಬಾರದು. ಆರೋಪ ಸುಳ್ಳಾದರೆ ಆರೋಪ ಮಾಡಿದವರಿಗೆ ಶಿಕ್ಷೆಯಾಗಲೇಬೇಕು’ಎಂದು ಒತ್ತಾಯಿಸುತ್ತಾರೆ ಕಥೆಗಾರ ವಸುಧೇಂದ್ರ.

‘ಗಂಡಸರು ಮರ್ಯಾದೆ ಮತ್ತು ಅಹಂಕಾರದ ಕಾರಣಕ್ಕಾಗಿ ತಮ್ಮ ಮೇಲಿನ ಶೋಷಣೆಯನ್ನು ಮುಕ್ತವಾಗಿ ಹೇಳಿಕೊಳ್ಳಲಾರರು. ಗಂಡಸರಷ್ಟೇ ಹೆಣ್ಣು ಮಕ್ಕಳೂ ಶೋಷಣೆ ಮಾಡುತ್ತಾರೆ. ಗಂಡು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿಕೊಂಡರೆ ಅವನನ್ನು ನೋಡಿ ನಗುವವರೇ ಹೆಚ್ಚು. ಅಧಿಕಾರದ ಕೇಂದ್ರದಲ್ಲಿ ಲೇಡಿ ಬಾಸ್‌ಗಳು ಪ್ರಮೋಷನ್ ಕೊಡುವುದಿಲ್ಲ. ಮಂಚಕ್ಕೆ ಕರೆಯುವುದು, ಕೆಲಸದಾಳಿನಂತೆ ನೋಡುವುದು, ಅಶ್ಲೀಲ ಜೋಕ್ ಮಾಡುವುದು ನಡೆಯುತ್ತದೆ. ಅದರಲ್ಲೂ ಐಟಿ ಕ್ಷೇತ್ರದಲ್ಲಿರುವ ಕೆಲ ಉನ್ನತ ಹುದ್ದೆಯಲ್ಲಿರುವ ಹೆಣ್ಣುಮಕ್ಕಳು ಗಂಡಸರಿಗಿಂತ ಕ್ರೂರವಾಗಿ ನಡೆದುಕೊಳ್ಳುವ ಉದಾಹರಣೆಗಳಿವೆ. ಮುಟ್ಟಬಾರದ ಜಾಗದಲ್ಲಿ ಮುಟ್ಟುವುದು. ಪದೇ ಪದೇ ಮುಟ್ಟುವುದು ಹೀಗೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತವೆ. ಕೆಲ ಗಂಡಸರು ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳಬಹುದು. ಆದರೆ, ಎಲ್ಲ ಗಂಡಸರು ಹಾಗಿರುವುದಿಲ್ಲ. ಹೆಣ್ಣಿನಷ್ಟೇ ಸೂಕ್ಷ್ಮ ಮನಸಿನ ಏಕ ಸಂಗಾತಿ ನಿಷ್ಠ ಪುರುಷರೂ ಇರುತ್ತಾರೆ ಎಂಬುದನ್ನು ನೆನಪಿನಲ್ಲಿಡಬೇಕು’ ಅನ್ನುವುದು ಅವರ ಅಭಿಮತ.

ಸಮಾನ ಕಾನೂನು ಬೇಕು

ಕುಮಾರ್ ಜಾಗೀರ್‌ದಾರ್

‘ಶೋಷಿತ ಪುರುಷರ ಸಂಖ್ಯೆ ಕಡಿಮೆ ಇರಬಹುದು. ಹಾಗೆಂದು ಅವರ ಮೇಲೆ ದೌರ್ಜನ್ಯ ನಡೆಯುವುದೇ ಇಲ್ಲವೆಂತಲ್ಲ. ಈ ಬಗ್ಗೆ ನಮ್ಮ ಎನ್‌ಜಿಒಗೆ ತುಂಬಾ ಕೇಸ್‌ಗಳು ಬರುತ್ತಿವೆ. ಉನ್ನತ ಹುದ್ದೆಯಲ್ಲಿರುವ ಮಹಿಳೆಯರು ತಮ್ಮ ಕಿರಿಯ ಪುರುಷ ಸಹೋದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಗಳಿವೆ. ಹೆಣ್ಣಿನ ಘನತೆಗೆ ಕುಂದು ತರಬಾರದು ಎಂದು ಕಾನೂನು ಹೇಳುತ್ತದೆ. ನಿಜ. ಆದರೆ, ಹೆಣ್ಣೇ ಗಂಡಿನ ಮೇಲೆ ಶೋಷಣೆ ನಡೆಸಿದರೆ ಯಾವ ಕಾನೂನು ರಕ್ಷಿಸುತ್ತದೆ? ಎಲ್ಲಾ ಕಾನೂನುಗಳು ಮಹಿಳಾ ಪರವಾಗಿವೆ. ಶೋಷಿಸುವ ಹೆಣ್ಣಿನ ವಿರುದ್ಧ ದೂರು ನೀಡಿದರೆ, ಕಾನೂನು ಗಂಡಸರಿಗೇ ಉಲ್ಟಾ ಆಗುವ ಸಾಧ್ಯತೆಯಿರುತ್ತದೆ. ಒಟ್ಟಿನಲ್ಲಿ ಕಾನೂನಿನಲ್ಲಿ ಪುರುಷ– ಮಹಿಳೆ ಎನ್ನುವ ತಾರತಮ್ಯ ತೋರದೇ ಇಬ್ಬರಿಗೂ ಸಮಾನವಾದ ಕಾನೂನು ಇರಬೇಕು’ ಎನ್ನುತ್ತಾರೆ ಚಿಲ್ಡ್ರನ್ಸ್‌ ರೈಟ್ಸ್‌ ಇನ್ಷಿಯೇಟಿವ್ ಫಾರ್ ಶೇರ್ಡ್ ಪೇರೆಂಟಿಂಗ್ ಅಧ್ಯಕ್ಷ ಹಾಗೂ ‘ಮೆನ್ ಟೂ’ ಅಭಿಯಾನದ ಚಾಲಕ ಕುಮಾರ್ ಜಾಗೀರ್‌ದಾರ್.

‘ಮೀ–ಟೂ’, ‘ಮೆನ್–ಟೂ’ ಏನೇ ಇರಲಿ ಶೋಷಣೆಗೊಳಗಾದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಅನ್ನೋದು ಪುರುಷರ ವಾದ.

ಹೇಳಿಕೊಳ್ಳಲು ಅಹಂ ಅಡ್ಡಿ

ಯೋಗೇಶ್ ಮಾಸ್ಟರ್

ಗಂಡಸರ ಮೇಲೆ ಲೈಂಗಿಕ ಶೋಷಣೆಗಳಿಗಿಂತ ಕಾನೂನಾತ್ಮಕ ನೆಲೆಯಲ್ಲಿ ಹೆಚ್ಚು ಶೋಷಣೆಗಳಾಗುತ್ತವೆ. ಬರೀ ಲೈಂಗಿಕ ಅಥವಾ ದೈಹಿಕ ದೌರ್ಜನ್ಯ ನೆಲೆಯಲ್ಲಷ್ಟೇ ಅಲ್ಲ ಮಾನಸಿಕ ನೆಲೆಯಲ್ಲೂ ದೌರ್ಜನ್ಯ ಆಗುತ್ತಿರುತ್ತದೆ. ಗಂಡ, ಬಾಯ್ ಫ್ರೆಂಡ್‌ಗಳ ಮೇಲೂ ಬ್ಲ್ಯಾಕ್‌ ಮೇಲ್ ತಂತ್ರಗಳು ನಡೆಯುತ್ತಿರುತ್ತವೆ. ಹೆಣ್ಣಿನಂತೆ ಗಂಡಸು ತನ್ನ ಮೇಲಾದ ಶೋಷಣೆಯನ್ನು ಹೇಳಿಕೊಳ್ಳಲು ಮುಂದೆ ಬರುವುದಿಲ್ಲ. ಅದಕ್ಕೆ ಆತನ ಅಹಂ ಕಾರಣ. ತನ್ನ ಪುರುಷಾಧಿತ್ಯದ ಅಹಂಕಾರವನ್ನು ಪ್ರಕಟಪಡಿಸುವ ಸಲುವಾಗಿ ತಾನೂ ಮಾನಸಿಕವಾಗಿ ನೋವು ಅನುಭವಿಸಿ, ಹೆಣ್ಣನ್ನೂ ಶೋಷಿಸುವುದು ಕೆಲ ಪುರುಷರ ಜಾಯಮಾನ. ನಪುಂಸಕತ್ವದ ಭಯಕ್ಕಿಂತ ದೊಡ್ಡ ಭಯ ಪುರುಷರಿಗೆ ಬೇರೆ ಇಲ್ಲ. ಒಂದು ಹೆಣ್ಣು, ಗಂಡನ್ನು ಕಾನೂನಾತ್ಮಕವಾಗಿ ತಲೆ ಬಗ್ಗಿಸುವುದಕ್ಕಿಂತ ನಾಲ್ಕು ಗೋಡೆಗಳ ಮಧ್ಯೆಯೇ ಸುಲಭವಾಗಿ ಸೋಲಿಸಬಹುದು. ಹೆಣ್ಣಿಗೆ ಬಂಜೆ ಅಂದಾಗ ಆಗುವ ನೋವು ಗಂಡಸಿಗೆ ನೀನು ನಪುಂಸಕ ಅಂದಾಗಲೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.