ಎಲ್ಲಾದರೂ ಹೊರಗಡೆ ಹೋಗಿ ಬಂದಾಗ ಅಥವಾ ಕೆಲಸ ಮುಗಿಸಿ ಮನೆಗೆ ಬಂದಾಗ ಸಿಕ್ಕಾಪಟ್ಟೆ ಸುಸ್ತಾಗಿರುತ್ತೆ. ಆಗ ಏನಿಲ್ಲ ಅಂದ್ರು ನನಗೆ ಅನ್ನ ಸಾರು ಹಾಗೂ ತುಪ್ಪ ಕೊಟ್ಟುಬಿಟ್ಟರೆ ಸಾಕು. ನನಗೆ ಅದೇ ಮೃಷ್ಟಾನ್ನ. ನನಗೆ ಆಹಾರವೆಂಬುದು ಮೂಡ್ ಹಾಗೂ ಎನರ್ಜಿ ಬೂಸ್ಟರ್.
ನಾನು ಶುದ್ಧ ಸಸ್ಯಹಾರಿ. ಅಷ್ಟೇ ಆಹಾರ ಪ್ರಿಯೆ. ನನಗೆ ಚೈನೀಸ್ ಶೈಲಿಯ ಆಹಾರ ಇಷ್ಟ. ಅದರ ಜೊತೆಗೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತ, ಇಟಾಲಿಯನ್ ಹಾಗೂ ಥಾಯ್ ಶೈಲಿಯ ಆಹಾರವೂ ಅಚ್ಚುಮೆಚ್ಚು. ಅವುಗಳೆಲ್ಲವೂ ನನಗೆ ಕರಗತವಾಗಿವೆ.
ನನಗೆ ಅಮ್ಮ ಮಾಡುವ ಬಹುತೇಕ ಅಡುಗೆಗಳು ಇಷ್ಟ. ಅವರು ಸೆಟ್‌ದೋಸೆ ಹಾಗೂ ಮಸಾಲೆ ದೋಸೆಯನ್ನು ಭಯಂಕರ ಚೆನ್ನಾಗಿ ಮಾಡುತ್ತಾರೆ. ಜೊತೆಗೆ, ಅವರೇಕಾಳು ಉಪ್ಪಿಟ್ಟು ಅಂದರೆ ಬಲುಪ್ರೀತಿ. ಉಪ್ಪು ಹುಳಿ ಖಾರ ಹಾಗೂ ತರಕಾರಿಯ ಜೊತೆಗೆ ಪ್ರೀತಿಯನ್ನು ಮಿಶ್ರಣ ಮಾಡಿರುತ್ತಾರೆ. ಅದಕ್ಕೆ ಅವರು ಮಾಡುವ ಎಲ್ಲ ಅಡುಗೆ ಇಷ್ಟ. ಪ್ರೀತಿಯೇ ಅಮ್ಮ ಮಾಡುವ ಅಡುಗೆಯ ಸೀಕ್ರೆಟ್ ರೆಸಿಪಿ.
ನಾನು ಚಿಕ್ಕವಳಿದ್ದಾಗಅಪ್ಪ–ಅಮ್ಮ ಇಬ್ಬರು ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ನಾನು ಹಾಗೂ ಅಣ್ಣ ಇಬ್ಬರೇ ಇದ್ದೆವು. ಆಗೆಲ್ಲ, ಕುತೂಹಲಕ್ಕೆಂದು ಎಣ್ಣೆಗೆ ಅಕ್ಕಿ ಹಾಗೂ ಅವಲಕ್ಕಿ ಹಾಕಿ ಏನೇನೊ ಮಾಡುತ್ತಿದ್ದೆವು. ಅದರಿಂದ ಅಪ್ಪ–ಅಮ್ಮನ ಕೈಲಿ ಪೆಟ್ಟು ತಿಂದದ್ದುಂಟು.
ನಾನು ಅಡುಗೆ ಮಾಡುವುದನ್ನು ಮೊದಲು ಕಲಿತದ್ದು ಅಮ್ಮನಿಂದಲೇ. ನಾನು ವಿದೇಶ ಹಾಗೂ ಹೊರ ರಾಜ್ಯಗಳಿಗೆ ಹೋಗುತ್ತಿರುತ್ತೇನೆ. ಆಗೆಲ್ಲ, ಪರಿಚಿತರು ಹಾಗೂ ಸ್ನೇಹಿತರು ಅಡುಗೆ ಮಾಡುವುದನ್ನು ನೋಡಿ ಮತ್ತು ಅವರಿಂದ ಹೇಳಿಸಿಕೊಂಡು ಅಡುಗೆ ಮಾಡುವುದನ್ನು ಕಲಿತೆ.
ನಾನಾಗ 8ನೇ ತರಗತಿಯಲ್ಲಿದ್ದೆ. ಚಾಕೋಲೆಟ್ ಕೇಕ್ ಮಾಡುವುದನ್ನು ಟಿವಿಯಲ್ಲಿ ನೋಡಿ ಬರೆದಿಟ್ಟುಕೊಂಡಿದ್ದೆ. ಮನೆಗೆ ಹೊಸದಾಗಿ ಮೈಕ್ರೋ ಒವೆನ್ ಸಹ ಬಂದಿತ್ತು. ಅದರ ಮೂಲಕ ಚಾಕೋಲೆಟ್ ಕೇಕ್ ಮಾಡುವ ಆಲೋಚನೆ ತಲೆಗೆ ಬಂತು. ಪ್ರಯತ್ನ ಮಾಡಿದೆ. ಅದೇನೇನೊ ಎಡವಟ್ಟಾಗಿ ಕಲ್ಲಿಗಿಂತ ಗಟ್ಟಿಯಂತಾಗಿತ್ತು ಅದು.
ಅದನ್ನು ವರ್ಣಿಸುವುದಾದರೆ ಬಂಡೆಯೇ ಎಷ್ಟೋ ಸಾಫ್ಟ್ ಆಗಿತ್ತು. ನನಗೆ ಬೇಜಾರು ಆಗಬಾರದು ಎಂಬ ಕಾರಣಕ್ಕೆ ಅಪ್ಪ, ಅಮ್ಮ ಹಾಗೂ ಅಣ್ಣ ಆ ಕೇಕ್ ಅನ್ನು ಪುಡಿ ಮಾಡಿ ತಿಂದಿದ್ದರು. ಅದಾದ ಮರುದಿನವೇ ಸ್ನೇಹಿತೆಯ ಅಮ್ಮನಿಂದ ಚಾಕೋಲೆಟ್ ಕೇಕ್ ಮಾಡುವುದನ್ನು ಕೇಳಿ ಬರೆದುಕೊಂಡು ಬಂದು ಅದರಂತೆಯೇ ಮಾಡಿದ್ದೆ. ಅದು ಸಕ್ಸಸ್ ಆಗಿತ್ತು.
ಆಲೂ ಜೀರಾ ಫ್ರೈ
ಬೇಕಾಗುವ ಸಾಮಗ್ರಿ: ಆಲೂಗಡ್ಡೆ, ಎಣ್ಣೆ, ಹಸಿಮೆಣಸಿನಕಾಯಿ, ಈರುಳ್ಳಿ, ಜೀರಿಗೆ, ಉಪ್ಪು, ಮೆಣಸಿನಕಾಯಿ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸ.
ಮಾಡುವ ವಿಧಾನ: ಕ್ಯೂಬ್ (ಘನಾಕೃತಿ) ಆಕಾರದಲ್ಲಿ ಕತ್ತರಿಸಿಕೊಂಡ ಆಲೂಗಡ್ಡೆಯನ್ನು ಒವೆನ್ ಅಥವಾ ಪಾತ್ರೆಯಲ್ಲಿ ಉಪ್ಪು ಹಾಕದೆ 5 ರಿಂದ 8 ಬೇಯಿಸಿಕೊಳ್ಳಬೇಕು. ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ, ಜೀರಿಗೆ, ಸೀಳಿಕೊಂಡ ಹಸಿಮೆಣಸಿನಕಾಯಿ ಹಾಕಿ ಬಿಸಿಮಾಡಬೇಕು. ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವ ವರೆಗೆ ಬಿಸಿಮಾಡಬೇಕು. ಬಳಿಕ ಆಲೂಗಡ್ಡೆ ಹಾಕಿ ಬೇಕಿದ್ದಷ್ಟು ಖಾರ ಹಾಗೂ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
ತಟ್ಟೆಗೆ ಅದನ್ನು ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸವನ್ನು ಚಿಮುಕಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.