ADVERTISEMENT

ಪಂ. ಹವಾಲ್ದಾರ್‌ಗೆ ಷಷ್ಟಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:45 IST
Last Updated 20 ಡಿಸೆಂಬರ್ 2019, 19:45 IST
ಡಾ.ನಾಗರಾಜ್ ಹವಾಲ್ದಾರ್‌
ಡಾ.ನಾಗರಾಜ್ ಹವಾಲ್ದಾರ್‌   

ತುಂಬು ಜೀವನದ 60 ವಸಂತಪೂರೈಸಿದ‘ಕಿರಾನಾ ಘರಾನ’ ಶೈಲಿಯ ಹಿಂದೂಸ್ತಾನಿ ಗಾಯಕಪಂಡಿತ್ ಡಾ.ನಾಗರಾಜ್ ಹವಾಲ್ದಾರ್‌ ಅವರಿಗೆ ಇದೀಗ ಷಷ್ಟಿ ಪೂರ್ತಿ ಸಂಭ್ರಮ. ಅವರ ಬದುಕಿನ ಈ ಮಹತ್ವದ ಘಟ್ಟವನ್ನು ಸ್ಮರಣೀಯವಾಗಿಸಲು ಮತ್ತು ತುಂಬು ಜೀವನದ ಸಂಕ್ಷಿಪ್ತ ಅವಲೋಕನಕ್ಕೆ ಅವರ ಶಿಷ್ಯಂದಿರು ನಗರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ.

1959ರಲ್ಲಿ ಹೊಸಪೇಟೆಯಲ್ಲಿ ಜನಿಸಿದ ನಾಗರಾಜ್ ಹವಾಲ್ದಾರ್ ತಮ್ಮ ಇಡೀ ಬದುಕನ್ನು ಹಿಂದೂಸ್ತಾನಿ ಸಂಗೀತಕ್ಕಾಗಿ ಮೀಸಲಿಟ್ಟವರು. ಅವರ ಕನ್ನಡ ವಚನ ಮತ್ತು ಕನ್ನಡ ಖಯಾಲ್ ಜನಮನ ಸೂರೆಗೊಂಡಿವೆ. ಭಗವದ್ಗೀತೆಯ 18 ಅಧ್ಯಾಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿ ಹಾಡಿ, ಧ್ವನಿ ಸಾಂದ್ರಿಕೆ ರೂಪದಲ್ಲಿ ಹೊರತಂದಿದ್ದಾರೆ. ನಾಲ್ಕು ದಶಕಗಳಿಂದ ದೇಶ, ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ.

ಬಸವನಗುಡಿಯ ನರಸಿಂಹರಾಜ ಕಾಲೋನಿಯಲ್ಲಿರುವ ಪತ್ತಿ ಸಭಾಂಗಣದಲ್ಲಿ ಇದೇ ಡಿ.21ರ ಶನಿವಾರ ಸಂಜೆ 4 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿವೆ. ಹವಾಲ್ದಾರ್‌ ಅವರ ಆಯ್ದ ಸಂಯೋಜನೆಗಳ ಪುನರವತರಣಿಕೆಗಳನ್ನು ಅವರ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ.

ADVERTISEMENT

ಹವಾಲ್ದಾರ್‌ ಅವರ ಜೀವನ ಹಾಗೂ ಸಂಗೀತ ಪಯಣದ ಒಂದು ಪಕ್ಷಿನೋಟ ಕುರಿತು ಡಾ. ಕೆ.ಎಸ್ ವೈಶಾಲಿ, ಪ್ರೊ. ಶೇಷಾಚಲ ಹವಾಲ್ದಾರ್‌ ಸಂವಾದ ನಡೆಸಿಕೊಡಲಿದ್ದಾರೆ.ಆಗ್ರಾ ಘರಾನಾದ ದಿಗ್ಗಜ ಪಂಡಿತ್ ಡಾ. ಇಂದೂಧರ್ ನಿರೋಡಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.

ಭಾರತಿ ಪ್ರತಾಪ್ ಅವರು ಹಿಂದೂಸ್ತಾನಿ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ನಾಗರಾಜ್‌ ಅವರ ಮಕ್ಕಳಾದ ಕೇದಾರನಾಥ್ ತಬಲಾ ಹಾಗೂ ಸಮೀರ್ ಹವಾಲ್ದಾರ್‌ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.

-ವಿಶ್ವಾಸ್ ಭಾರದ್ವಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.