ADVERTISEMENT

ಟಿನ್‌ಫ್ಯಾಕ್ಟರಿ ಜಂಕ್ಷನ್‌ ಎಂಬ ‘ನಿತ್ಯ ನರಕ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 19:45 IST
Last Updated 18 ನವೆಂಬರ್ 2019, 19:45 IST
ಟಿನ್‌ ಫ್ಯಾಕ್ಟರಿ ಜಂಕ್ಷನ್‌
ಟಿನ್‌ ಫ್ಯಾಕ್ಟರಿ ಜಂಕ್ಷನ್‌   

ಬೈಯ್ಯಪ್ಪನಹಳ್ಳಿ ಮೆಟ್ರೊ ಸ್ಟೇಷನ್‌, ಹೆಬ್ಬಾಳ, ಕೆ.ಆರ್‌. ಪುರ, ರಾಮಮೂರ್ತಿ ನಗರ ಕಡೆಗಳಿಂದ ಐಟಿಪಿಎಲ್‌ಗೆ ಬರುವ ವಾಹನಗಳು ಒಂದೆಡೆ ಸೇರುವುದು ಟಿನ್‌ಫ್ಯಾಕ್ಟರಿ ಜಂಕ್ಷನ್‌ ಬಳಿ. ಇಲ್ಲಿಂದ ಐಟಿಪಿಎಲ್‌, ಮಾರತಹಳ್ಳಿ, ಹೂಡಿ, ವರ್ತೂರು, ಫೀನಿಕ್ಸ್‌ ಮಾಲ್‌ ಕಡೆಗೆ ವಾಹನಗಳ ಭರಾಟೆ ಹೆಚ್ಚು. ನಗರದ ಐಟಿ, ಬಿಟಿ ಕಂಪೆನಿಗಳ ಟೆಕಿಗಳು ನಿತ್ಯ ಬಳಸುವ ಅತ್ಯಂತ ಪ್ರಮುಖ ಜಂಕ್ಷನ್‌ ಇದು.

ಸಮೀಪದ ರೈಲು ನಿಲ್ದಾಣ ಕೆ.ಆರ್‌. ಪುರ ರೈಲು ನಿಲ್ದಾಣ. ಕೋಲಾರ, ತಮಿಳುನಾಡು ಕಡೆಗಳಿಂದ ಇಲ್ಲಿಗೆ ಹಲವು ರೈಲುಗಳು ದಾಂಗುಡಿ ಇಡುತ್ತವೆ. ಐಟಿ, ಬಿಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಟೆಕಿಗಳು ಕೂಡ ಈ ರೈಲುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಸಮೀಪದ ಪ್ರದೇಶಗಳಿಂದ ನಗರಕ್ಕೆ ನಿತ್ಯ ಓಡಾಡುವರ ಸಂಖ್ಯೆಯೂ ಹೆಚ್ಚು. ಟಿನ್‌ಫ್ಯಾಕ್ಟರಿ ಪ್ರಮುಖ ಜಂಕ್ಷನ್‌ ಆದ್ದರಿಂದ ಇಲ್ಲಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಹಲವಾರು ವೋಲ್ವೊ ಬಸ್‌ಗಳು ಓಡಾಡುತ್ತವೆ.

ಬೈಯ್ಯಪ್ಪನಹಳ್ಳಿಗೆ ಸಮೀಪದಲ್ಲಿ ಗೋಪಾಲನ್‌ ಆರ್ಕೇಡ್‌ ಮಾಲ್‌ ಇದೆ. ಸಮೀಪದಲ್ಲೇ ಆರ್‌ಎಂಝಡ್‌ ಕೂಡ ಇದೆ. ಇಲ್ಲಿಗೆ ವಾರಾಂತ್ಯದಲ್ಲಿ ವಿಶೇಷವಾಗಿ ಶಾಪಿಂಗ್‌ಗೆಂದು ಜನರ ಓಡಾಟ ಹೆಚ್ಚು. ಬೈಯ್ಯಪ್ಪನಹಳ್ಳಿ ಮೆಟ್ರೊ ಸ್ಟೇಷನ್‌ನಿಂದ ಕನೆಕ್ಟಿಂಗ್‌ ಬಸ್‌ಗಳಿಗಾಗಿ ಸ್ಟೇಷನ್‌ ಎದುರಿನ ನಿಲ್ದಾಣ ಬಳಸುತ್ತಾರೆ. ಇಲ್ಲಿಗೆ ಬರುವ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ವಾಹನಗಳಿಗೆ ಲೆಕ್ಕವೇ ಇಲ್ಲ. ಇಲ್ಲಿನ ಬಹುತೇಕ ವಾಹನಗಳು ಸಮೀಪದ ಟಿನ್‌ಫ್ಯಾಕ್ಟರಿಗೆ ಧಾವಿಸುವುದು ಹೆಚ್ಚು. ಹೀಗಾಗಿ ಇಲ್ಲಿ ಯಾವತ್ತೂ ವಾಹನಗಳ ದಟ್ಟಣೆ.

ADVERTISEMENT

ವಾರಾಂತ್ಯ ಅಥವಾ ಹಬ್ಬದ ದಿನಗಳಲ್ಲಿ ದಂಡಿಯಾಗಿ ರಜೆಗಳು ಬಂದರಂತೂ ಟಿನ್‌ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಕಾಲಿಡುವುದಕ್ಕೂ ಜಾಗ ಇರುವುದಿಲ್ಲ. ದೂರದ ಊರುಗಳಿಗೆ ತೆರಳಲು ನೂರಾರು ಟೆಕಿಗಳು ತಮ್ಮ ಲಗೇಜ್‌ ಸಮೇತ ಜಂಕ್ಷನ್‌ ಬಳಿ ಜಮಾಯಿಸುತ್ತಾರೆ. ಲಾಂಗ್‌ ರೂಟ್‌ ಬಸ್‌ಗಳಿಗಾಗಿ ಇಲ್ಲಿಯೇ ಕಾದು ನಿಲ್ಲುತ್ತಾರೆ. ಇದರ ಜೊತೆಗೆ ಖಾಸಗಿ ಬಸ್‌ಗಳ ಹಾವಳಿಯಂತೂ ಹೇಳತೀರದು. ಪ್ರಮುಖ ರಸ್ತೆಯಗುಂಟ ದಂಡಿಯಾಗಿ ಖಾಸಗಿ ಬಸ್‌ಗಳು ದಾಂಗುಡಿ ಇಡುತ್ತವೆ. ಇದರಿಂದ ರಸ್ತೆ ಜಾಮ್‌ ಆಗಿ ಕಾರು, ದ್ವಿಚಕ್ರವಾಹನ ಸವಾರರಿಗೆ ತುಂಬ ತೊಂದರೆಯಾಗುತ್ತದೆ.

ಇಲ್ಲೊಂದು ಸ್ಕೈವಾಕ್‌ ವ್ಯವಸ್ಥೆಯೂ ಇದೆ. ಇದರ ಅಕ್ಕಪಕ್ಕದಲ್ಲಿ ಹಲವು ಅಂಗಡಿಗಳು ಕೂಡ ಲಗ್ಗೆ ಇಟ್ಟಿವೆ. ರಸ್ತೆಯ ಎರಡೂ ಬದಿಗಳಲ್ಲಿ ಬಸ್‌ ನಿಲ್ದಾಣಗಳಿವೆ. ಆದರೆ ಇಲ್ಲಿ ಬಸ್‌ ನಿಲ್ಲುವುದೇ ಅಪರೂಪ. ಇಕ್ಕಟ್ಟಾದ ಈ ನಿಲ್ದಾಣಗಳ ಬಳಿ ತಲೆ ಎತ್ತಿರುವ ಪುಟ್ಟ ಗೂಡಂಗಡಿಗಳ ಸುತ್ತ ಗ್ರಾಹಕರು ಸೇರುವುದರಿಂದ ವಾಹನಗಳ ನಿಲುಗಡೆಗೆ ತೊಂದರೆ.

ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ತಮ್ಮ ಬಸ್‌ಗಳಿಗಾಗಿ ನಿಲ್ದಾಣಗಳ ಬದಲು ಫ್ಲೈಓವರ್‌ ಹತ್ತಿರದ ಪ್ರದೇಶದಲ್ಲಿ ಕಾದು ನಿಲ್ಲುತ್ತಾರೆ. ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಅದರಲ್ಲೂ ವಾರಾಂತ್ಯದಲ್ಲಿ ಇಲ್ಲಿ ಪ್ರಯಾಣಿಕರ ಜನಸಂದಣಿ ಜೋರಾಗಿರುತ್ತದೆ. ಇದರ ಜೊತೆಗೆ ಪ್ರಗತಿಯಲ್ಲಿರುವ ಮೆಟ್ರೊ ಕಾಮಗಾರಿ ಕೂಡ ಇರುವ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಇಲ್ಲಿಂದ ಸಾಗುವ ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಹಿಡಿ ಶಾಪ ಹಾಕುವಂತಾಗಿದೆ. ಸುತ್ತಮುತ್ತಲಿನ ಜನವಸತಿ ಪ್ರದೇಶದವರು ಇದರಿಂದ ರೋಸಿ ಹೋಗಿದ್ದಾರೆ.

ಇಲ್ಲಿ ಮೆಟ್ರೊ ಸ್ಟೇಷನ್‌ ಬಂದ ಮೇಲೆ ಪರಿಸ್ಥಿತಿ ಇನ್ನೂ ಅದ್ವಾನವಾಗುವ ಸಾಧ್ಯತೆಯೇ ಹೆಚ್ಚು. ಕನೆಕ್ಟಿಂಗ್‌ ಬಸ್‌ಗಳಿಗಾಗಿ ಈ ಪ್ರದೇಶವನ್ನೇ ಜನ ಹೆಚ್ಚು ಆಶ್ರಯಿಸುವುದರಿಂದ ಜನದಟ್ಟಣೆಯ ಸಾಧ್ಯತೆ ತಪ್ಪಿದ್ದಲ್ಲ. ಐಟಿಪಿಎಲ್‌, ಹೂಡಿ, ಕುಂದಲಹಳ್ಳಿ ಜಂಕ್ಷನ್‌, ಫೀನಿಕ್ಸ್‌ ಮಾಲ್‌ ಅದರ ಸುತ್ತಲಿನ ಬೃಹತ್‌ ಅಪಾರ್ಟ್‌ಮೆಂಟ್‌ ನಿವಾಸಿಗಳು, ಕೆ.ಆರ್‌ ಪುರ ರೈಲು ನಿಲ್ದಾಣ ಬಳಸುವ ಪ್ರಯಾಣಿಕರು ಇದರಿಂದ ಈಗಾಗಲೇ ಹೆಚ್ಚು ಪರದಾಡುವಂತಾಗಿದೆ.

ಇಲ್ಲಿ ಬಿಎಂಟಿಸಿ ಅಥವಾ ಖಾಸಗಿ ಬಸ್‌ಗಳಿಗಾಗಿ ಸೂಕ್ತ ಬಸ್‌ ತಂಗುದಾಣಗಳ ತುರ್ತು ಅಗತ್ಯವಿದೆ. ಇಲ್ಲವಾದರೆ ಇದು ಸದಾ ವಾಹನಗಳ ಭರಾಟೆ ಮತ್ತು ಎಲ್ಲೆಂದರಲ್ಲಿ ನಿಲ್ಲುವ ವಾಹನಗಳ ಅವ್ಯವಸ್ಥೆಯಿಂದ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತದೆ. ಇಲ್ಲಿ ನಿತ್ಯ ನಡೆಯುವ ಸಣ್ಣ ಪುಟ್ಟ ಅಪಘಾತಗಳಿಗೂ ಲೆಕ್ಕವಿಲ್ಲ. ಇಡೀ ದಿನ ಮತ್ತು ರಾತ್ರಿ ಸಮಯದಲ್ಲಿ ಕೂಡ ತುಂಬ ಬಿಸಿಯಾಗಿರುವ ಟಿನ್‌ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಜನರಿಗೆ ಸೂಕ್ತ ರಕ್ಷಣೆ ಕೂಡ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.