ADVERTISEMENT

ಮನೆಯೆಂಬುದು ಉಪಕರಣಗಳ ಸಂತೆ!

ನಾಗರಾಜ ರಾ.ಚಿನಗುಂಡಿ
Published 28 ಆಗಸ್ಟ್ 2012, 19:30 IST
Last Updated 28 ಆಗಸ್ಟ್ 2012, 19:30 IST

ಮನೆಯೆಂಬುದು ನಾಲ್ಕು ದಿಕ್ಕುಗಳನ್ನು ಆವರಿಸಿಕೊಂಡ ಬದುಕಿನ ಸುರಕ್ಷಾ ಕವಚ. ಆದಿಕಾಲದ ಮಾನವ ಮಳೆ, ಗಾಳಿ, ಚಳಿಯಿಂದ ರಕ್ಷಿಸಿಕೊಳ್ಳಲು ಬರೀ ಕಲ್ಲಿನ ಸುರಕ್ಷಾ ಗೋಡೆಗಳನ್ನು ಕಟ್ಟಿಕೊಂಡಿದ್ದ. ಕಾಲ ಬದಲಾಗಿದೆ. ಮನೆ ನಿರ್ಮಾಣಕ್ಕೆ ಕಲ್ಲು, ಮನೆ ಕಡ್ಡಾಯವಲ್ಲ. ತಂತ್ರಜ್ಞಾನದ ಆವಿಷ್ಕಾರಗಳು ಕಲ್ಲು-ಮಣ್ಣಿಗೆ ಸಾಕಷ್ಟು ಪರ್ಯಾಯಗಳನ್ನು ಸೃಷ್ಟಿಸಿದೆ.
 
ಅದೇ ರೀತಿ ಗೃಹೋಪಯೋಗಿ ಸಾಧನ ಸಲಕರಣೆಗಳಲ್ಲಿಯೂ ಸಾಕಷ್ಟು ಪರಿವರ್ತನೆಯಾಗಿದ್ದು, ಸುಧಾರಿತ ವಿಜ್ಞಾನ-ತಂತ್ರಜ್ಞಾನದ ಪ್ರತಿಬಿಂಬವನ್ನು ಎಲ್ಲರ ಮನೆಗಳಲ್ಲೂ ನಿಚ್ಚಳವಾಗಿ ಗುರುತಿಸಬಹುದು.

ಗೃಹೋಪಯೋಗಿ ವಸ್ತುಗಳಲ್ಲಿ ಪ್ರಮುಖವಾಗಿ ಎಲೆಕ್ಟ್ರಾನಿಕ್ ಸಾಧನ, ಯಂತ್ರೋಪಕರಣಗಳು ಜಾಗ ಪಡೆದಿವೆ. ಟಿವಿ, ರೇಡಿಯೊಗಳು ವಿಜ್ಞಾನ ಕ್ಷೇತ್ರದ ಅಪೂರ್ವ ಕೊಡುಗೆಗಳು ಎಂದು ಮೋಜುಪಟ್ಟುಕೊಳ್ಳುತ್ತಿದ್ದ ದಿನಗಳು ಈಗಿಲ್ಲ. ದಿನದಿನಕ್ಕೂ ಎಲೆಕ್ಟ್ರಾನಿಕ್ ಸಾಧನಗಳಲ್ಲೆ ಅತ್ಯಾಧುನಿಕತೆ ಮನೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಇಂದು ಖರೀದಿಸಿದ್ದು ನಾಳೆಗೆ ಹಳೆಯದಾಗಿ ಕಾಣುತ್ತದೆ!

ಷಾಪಿಂಗ್ ಮಾಲ್‌ಗಳಲ್ಲಿ ಮಾರಾಟ ಹಾಗೂ ಖರೀದಿ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಬಹುತೇಕ ಗೃಹೋಪಯೋಗಿ ಎನ್ನುವುದು ವಿಶೇಷ. ಹಲ್ಲುಜ್ಜಿಕೊಳ್ಳಲು ಎಲೆಕ್ಟ್ರಿಕ್ ಬ್ರಷ್ ಕೂಡಾ ಮಾರುಕಟ್ಟೆಗೆ ಬಂದಿದೆ ಎನ್ನುವುದು ಗೊತ್ತಿಲ್ಲದವರಿಗೆ ಹೊಸದು, ಈಗಾಗಲೇ ಉಪಯೋಗಿಸಿದವರಿಗೆ ಹಲ್ಲುಜ್ಜದೆ ಇರುವ ತಂತ್ರಜ್ಞಾನ ಬರುವುದು ಯಾವಾಗ ಎನ್ನುವ ತವಕ.

ಹೀಗೆ ಪ್ರತಿಯೊಂದು ಕೆಲಸಕ್ಕೂ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಳ್ಳುವುದು ಅನಿವಾರ್ಯ ಎನ್ನುವಷ್ಟು ಎಲ್ಲರೂ ಅವಲಂಬಿಗಳಾಗಿದ್ದೇವೆ. ಇಂಥದ್ದೇ ಸಾಧನ ಖರೀದಿಸಬೇಕು ಎಂದು ಹೋಗಿ ಖರೀದಿಸಿ ತರುವುದು ಒಂದು ಭಾಗವಾದರೆ, ನೋಡಿದ ಮೇಲೆ ಆಸೆಪಟ್ಟು ತರುವುದು ಇನ್ನೊಂದು ಕೊಳ್ಳುಬಾಕ ವಿಧಾನ.
 
ಒಂದಿಷ್ಟು ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಸಾಧನಗಳು ವೈಯಕ್ತಿಕ ಬಳಕೆಗೆ, ಇನ್ನೊಂದಿಷ್ಟು ಮನೆಮಂದಿಯೆಲ್ಲರ ಬಳಕೆಗೆ ಬರುವಂತಹವು. ಗ್ರಾಮೀಣ ಭಾಗದ ಮನೆಗಳಲ್ಲಿ ತೀರಾ ಅವಶ್ಯಕ ಎಲೆಕ್ಟ್ರಿಕಲ್ ಸಾಧನಗಳನ್ನು ಕಾಣುತ್ತೇವೆ.
 
ಆದರೆ ನಗರದ ಮನೆಗಳಲ್ಲಿ ಹಾಗಾಗುವುದಿಲ್ಲ. ಎಲೆಕ್ಟ್ರಿಕ್ ಸಾಧನಗಳ ಮೇಲೆ ಜನರ ಅವಲಂಬನೆ ಬೆಳೆಸಲು ಎಲೆಕ್ಟ್ರಾನಿಕ್ ಸಾಧನಗಳ ಕಂಪೆನಿಗಳು ಸದಾ ಹೊಸದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೆ ಇರುತ್ತವೆ.
 
ಮಕ್ಕಳು ಆಡುವ ಆಟದ ವಸ್ತುಗಳಿಂದ ಹಿಡಿದು ಅಜ್ಜ ಬಳಸುವ `ಹಿಯರಿಂಗ್ ಮೆಷಿನ್~ ಎಲ್ಲವೂ ವಿದ್ಯುತ್ ಅವಲಂಬಿತ ಸಾಧನಗಳು. ಮನೆ-ಮನೆಮಂದಿಯ ನಡುವೆ ಹಾಸುಹೊಕ್ಕಾಗಿರುವ ಎಲೆಕ್ಟ್ರಾನಿಕ್ ಸಾಧನಗಳನ್ನು ನಿರ್ವಹಿಸುವುದು, ದೀರ್ಘಕಾಲಿಕ ಬಾಳಿಸುವುದು, ಸಣ್ಣ ರಿಪೇರಿ ಮಾಡಿಕೊಳ್ಳುವುದು ಕೂಡಾ ಜೀವನ ಕ್ರಮದಲ್ಲಿ ಬಹಳ ಮುಖ್ಯವಾದ ಭಾಗ.

ನೇರವಾಗಿ ವಿದ್ಯುತ್‌ನ್ನು ಬಳಸುವ ಸಾಧನಗಳು ಎಲೆಕ್ಟ್ರಿಕಲ್ಸ್. ಚಾರ್ಜ್ ಮಾಡಿದರೆ ಅಥವಾ ಬ್ಯಾಟರಿ ಮೂಲಕ ನಡೆಯುವ ಸಾಧನಗಳು ಎಲೆಕ್ಟ್ರಾನಿಕ್ಸ್. ಮಾಧ್ಯಮ ವರ್ಗದವರ ಮನೆಗಳಲ್ಲಿ ಇವುಗಳನ್ನು ಅತೀ ಹೆಚ್ಚಾಗಿ ಕಾಣಬಹುದು. ಟಿವಿ, ಮೊಬೈಲ್, ಮಿಕ್ಸರ್, ವಾಟರ್ ಹೀಟರ್, ಪ್ಲೇಯರ್, ಆಟಿಕೆಗಳು, ವಾಷಿಂಗ್ ಮೆಷಿನ್..
 
ಹೀಗೆ ಮನೆಯಲ್ಲಿ ಒಂದು `ಸಂಡೇ ಬಜಾರ್~ಗೆ ಆಗುವಷ್ಟು ಸಾಧನಗಳನ್ನು ಕಾಣಬಹುದು. ಎಲ್ಲ ಆಧುನಿಕ ಜೀವನದ ಪರಿಣಾಮ. `ಹೆಳ್ಕೊಳ್ಳಾಕ್ ಒಂದೂರು ತಲೆಮೇಲೆ ಒಂದ್ಸೂರು; ಮಲಗೋಕೆ ಭೂಮ್‌ತಾಯ್ ಮಂಚ್~ ಎನ್ನುವ ನೆಮ್ಮದಿ ಮಾತ್ರ ಓಡಿಹೋಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.