ADVERTISEMENT

ಹಿತ್ತಿಲು: ಹಿಗ್ಗಿನ ಕೊಯಿಲು

ಬಿಂಡಿಗನವಿಲೆ ಭಗವಾನ್
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

`ಪೇಟೆ ಕೊಳ್ಳಿರಿ ಕೊಳ್ಳಿರಿ ಎನ್ನುತ್ತದೆ. ಹಿತ್ತಿಲು ಯಾಕೆ ಯಾಕೆ ಎನ್ನುತ್ತದೆ~ ಇದು ಮನೆಯ ಹಿತ್ತಿಲಿನ ಹಿರಿಮೆ ಕುರಿತ ಒಂದು ಉಕ್ತಿ. ಮನೆಯ ಅವಿಭಾಜ್ಯ ಅಂಗವಾದ ಹಿತ್ತಿಲು ನಮ್ಮ ಅಪೇಕ್ಷೆ ನಿರೀಕ್ಷೆಗಳಿಗೆ ಖಚಿತ ರೂಪರೇಷೆ ಪಡೆದುಕೊಳ್ಳಲು ಪ್ರೇರಕ. ಖಾಸಗಿತನಕ್ಕೆ ಇನ್ನೊಂದು ಹೆಸರೇ ಹಿತ್ತಿಲು.
 
ಇದೆಲ್ಲ ಸರಿಯೆ. ಏರುತ್ತಿರುವ ಜನಸಂಖ್ಯೆ ನಾನಾ ಒತ್ತಡಗಳು, ವಾಹನ ದಟ್ಟಣೆ, ಗಗನಮುಖಿಯಾಗಿರುವ ಜೀವನಾವಶ್ಯಕ ವಸ್ತುಗಳ ಬೆಲೆಗಳು, ತತ್‌ಫಲವಾಗಿ ಬದಲಾಗುತ್ತಿರುವ ಜೀವನಶೈಲಿ. ಅಂಗುಲಂಗುಲ ನಿವೇಶನವೂ ಚಿನ್ನವಾಗಿರುವ  ಲೆಕ್ಕದ ಈ ದಿನಗಳಲ್ಲಿ ಹಿತ್ತಿಲೆಂಬ ಪರಿಕಲ್ಪನೆಗೆ ಅರ್ಥವಾದರೂ ಉಂಟೆ? ಮನಸ್ಸಿದ್ದರೆ ಮಾರ್ಗ. ಖಂಡಿತ ಉಂಟು.

ಮನೆ ಎಷ್ಟೇ ಚಿಕ್ಕದಿರಲಿ ಹಿಂಭಾಗದಲ್ಲಿ ಒಂದಷ್ಟು ಜಾಗವಿರಲಿ. ಒಂದೆರಡು ಬೆಡ್‌ರೂಂ ಇಲ್ಲದಿದ್ದರೂ ಅಡ್ಡಿಯಿಲ್ಲ ಹಿತ್ತಿಲು ಇರಲಿ. ಮನೋರಂಜನೆಗೆ, ನಿರಾಳಕ್ಕೆ ವಿಶ್ರಾಂತಿಗೆ. ಬರಿಬಯಲಾದರೂ ಹಿತ್ತಿಲು ನೆಮ್ಮದಿಗೆ ಹಾದಿಯಾದೀತು. ತನ್ಮಯತೆಯಿಂದ ಆಗಸ ವೀಕ್ಷಿಸುವುದಕ್ಕಿಂತ ಹಿಗ್ಗು ಬೇಕೆ?

ಹಿತ್ತಿಲಿನಲ್ಲಿ ಮನೆಗೆ ಅಗತ್ಯವಾದ ಸೊಪ್ಪು ಸದೆ, ತರಕಾರಿಗಳನ್ನು ಬೆಳೆದುಕೊಳ್ಳಬಹುದು. ಸ್ವಾವಲಂಬನೆ ಹಾಗೂ ಹಸಿರ ವೈಭವ-ಎರಡನ್ನೂ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಂತೆ. ಹಿರಿಯರಿಗೆ ವ್ಯಾಯಾಮಕ್ಕೆ ಕಿರಿಯರ ಆಟೋಟಕ್ಕೆ ತಕ್ಕಮಟ್ಟಿಗೆ ಹಿತ್ತಿಲು ವ್ಯವಧಾನ ಕಲ್ಪಿಸುತ್ತದೆ.

ನೆರೆಹೊರೆಯವರೊಂದಿಗೆ ಪರಸ್ಪರಸಂವಾದಕ್ಕೆ ಇದು ನೆರವಾಗುತ್ತದೆ. ಸಾಕುಪ್ರಾಣಿಗಳಿಗೂ  ಆಶ್ರಯವಾಗುತ್ತದೆ. ತುಳಸಿ, ದೊಡ್ಡಪತ್ರೆ, ಒಂದೆಲಗ ಬೆಳೆದು ಹಿತ್ತಿಲಿನಲ್ಲಿ ಮದ್ದನ್ನು ಅರಸಬಹುದು.
ಕಲ್ಲು ಬೆಂಚು, ಹಾಸು ಮೇಜು ಹಾಕಿ ಓದು, ಬರಹದಲ್ಲಿ ನಿರತರಾಗುವುದರಲ್ಲಿ ಸ್ವರ್ಗಸುಖ. ಆಹಾರ ಸೇವನೆಗೆ ಹಿತ್ತಿಲು ಅದೆಷ್ಟು ಆಪ್ಯಾಯಮಾನ ಅಂತ ಬೇರೆ ಹೇಳಬೇಕೆ? ಒಂದಾದರೂ ಮರವಿದ್ದರೆ ಅದಕ್ಕನ್ನಬೇಕಲ್ಲವೆ ವರ.

ಅದೆಷ್ಟು ಆಪ್ತವಾಗಬಹುದೆಂದರೆ ಹಿತ್ತಿಲೆಂದರೆ ಮರವೇ ಆಗುತ್ತದೆ. ಸಂತೋಷದ ಆರಾಧನೆ, ನೋವಿನ ನಿವೇದನೆ. ಎರಡನ್ನೂ ಸಾಧ್ಯವಾಗಿಸುತ್ತದೆ ಹಿತ್ತಿಲಿನ ಮರ. ಎಲ್ಲಿಂದಲೋ ಹಾರಿ ಬರುವ ಗುಬ್ಬಿ, ಪಾರಿವಾಳ, ಮೈನಾ, ಮರಕುಟಕ ಮುಂತಾದ ಹಕ್ಕಿಗಳು ಹಿತ್ತಿಲಿನಲ್ಲಿ ವಿಹರಿಸುತ್ತಿದ್ದರೆ ಪಕ್ಷಿಧಾಮದ ರಂಗು. ಉದ್ಯಾನವೆ ಮಡಿಲಲ್ಲಿ.

ಸೌರಶಕ್ತಿಯ, ಮಳೆ ನೀರಿನ ಕೊಯಿಲಿಗೆ ಹಿತ್ತಿಲು ಅನನ್ಯ. ಬಟ್ಟೆ ಬರೆ ಒಣಹಾಕುವುದರಿಂದ ಹಿಡಿದು ಹಪ್ಪಳ, ಸಂಡಿಗೆ, ಶ್ಯಾವಿಗೆ, ಆಹಾರಧಾನ್ಯಗಳಾದಿಯಾಗಿ ಬಿಸಿಲಿನ ನೆರವಿನಿಂದ ಸಂಸ್ಕರಿಸಲು ಮನೆಯ ಹಿಂಬದಿಯಲ್ಲೇ ನಿಸರ್ಗದತ್ತ ಘಟಕ. ಒಟ್ಟಾರೆ ಹಿತ್ತಿಲು ಹಿಗ್ಗಿಲು ಕೊಯಿಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.