ADVERTISEMENT

ಫ್ಯಾಕ್ಟ್‌ಚೆಕ್: ಬಾಂಗ್ಲಾದೇಶದಲ್ಲಿ ಕಾಳಿ ಮಾತೆಯ ಮೂರ್ತಿ ದಹನ ಸುದ್ದಿ ನಿಜವೇ?

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 18:04 IST
Last Updated 23 ಮಾರ್ಚ್ 2021, 18:04 IST
   

ಬಾಂಗ್ಲಾದೇಶದ ಥಾಕುರ್ ಗಾವ್‌ನಲ್ಲಿ ಕಾಳಿ ಮಾತೆಯ ಮೂರ್ತಿಯನ್ನು ದಹನ ಮಾಡಲಾಗಿದೆ ಎಂದು 'ಪೋಸ್ಟ್‌ಕಾರ್ಡ್ ಕನ್ನಡ' ತನ್ನ ಫೇಸ್‌ಬುಕ್ ಪುಟದಲ್ಲಿ ಮಂಗಳವಾರ ಒಂದು ಪೋಸ್ಟ್‌ ಮಾಡಿದೆ. ಸುಟ್ಟುಹೋಗಿರುವ ಕಾಳಿ ಮಾತೆಯ ಮೂರ್ತಿಯ ಚಿತ್ರವನ್ನೂ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜತೆಗೆ, 'ಕೆಲವು ತಿಂಗಳ ಹಿಂದೆ ಪಾಕಿಸ್ತಾನದಲ್ಲಿ ಕೃಷ್ಣ ದೇವಸ್ಥಾನವನ್ನು ಬೆಂಕಿ ಹಚ್ಚಿ ದಾಳಿ ಮಾಡಲಾಗಿತ್ತು. ಆದರೆ ವಿಶ್ವಸಂಸ್ಥೆ ಮಾತ್ರ ಮೌನವಾಗಿದೆ. ಅವರಿಗೆ ಕೇವಲ ಅಬ್ರಾಹಮಿಕ್ ಮತಗಳ ಮೇಲಿನ ದಾಳಿಗಳಷ್ಟೇ ಕಾಣುತ್ತವೆ' ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಈ ಪೋಸ್ಟ್‌ ಅನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ, 140ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ.

ಇದು ಹಳೆಯ ಚಿತ್ರ ಎಂದು ದಿ ಪ್ರಿಂಟ್, ಆಲ್ಟ್‌ ನ್ಯೂಸ್ 2020ರ ಸೆಪ್ಟೆಂಬರ್‌ನಲ್ಲಿಯೇ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. 2020ರ ಸೆಪ್ಟೆಂಬರ್ 20ರಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್, ಟ್ವಿಟರ್‌ನಲ್ಲಿ ಈ ಚಿತ್ರವನ್ನು ಟ್ವೀಟ್ ಮಾಡಿದ್ದರು. ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಮುಸ್ಲಿಮರು ಕಾಳಿ ಮಾತೆಯ ಮೂರ್ತಿಯನ್ನು ಸುಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದರು. ಆದರೆ, 'ಬೆಂಕಿ ಅವಘಡದಿಂದ ಮೂರ್ತಿ ಸುಟ್ಟುಹೋಗಿದೆ. ಇದರಲ್ಲಿ ಬೇರೆ ಧರ್ಮವನ್ನು ಎಳೆದು ತರುವುದು ಬೇಡ. ನಮ್ಮ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಇದ್ದೇವೆ' ಎಂದು ದೇವಾಲಯದ ಟ್ರಸ್ಟಿ ಸುಖದೇವ್ ವಾಜಪೇಯಿ ಅವರು ಹೇಳಿಕೆ ನೀಡಿದ್ದರು. ಮುರ್ಶಿದಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಸಹ ಇದನ್ನು ದೃಢಪಡಿಸಿದ್ದರು. ಆದರೆ, ಈಗ ಈ ಚಿತ್ರವನ್ನು ತಪ್ಪು ಮಾಹಿತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT