ADVERTISEMENT

ಫ್ಯಾಕ್ಟ್‌ಚೆಕ್: ವಿಶ್ವವಿದ್ಯಾಲಯದಲ್ಲಿ ಬಾಂಬ್ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 19:30 IST
Last Updated 26 ಏಪ್ರಿಲ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಉತ್ತರ ‍ಪ್ರದೇಶದ ಅಲಹಾಬಾದ್ ವಿಶ್ವವಿದ್ಯಾಲಯವು ಈಗ ಭಯೋತ್ಪಾದನಾ ಚಟುವಟಿಕೆಗಳ ಹೊಸ ಕೇಂದ್ರಸ್ಥಾನವಾಗಿ ಬದಲಾಗಿದೆ. ವಿಶ್ವವಿದ್ಯಾಲಯದಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ 25 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಯೋಗಿ ಆದಿತ್ಯನಾಥ ಅವರ ಸರ್ಕಾರ ಇದ್ದ ಕಾರಣಕ್ಕೆ ಈ ಬಂಧನ ಸಾಧ್ಯವಾಗಿದೆ. ಬಂಧಿತರೆಲ್ಲರೂ ಮುಸ್ಲಿಮರು. ಹೀಗಾಗಿ ಯಾವ ಮಾಧ್ಯಮಗಳೂ ಈ ಸುದ್ದಿಯನ್ನು ಪ್ರಕಟಿಸುತ್ತಿಲ್ಲ’ ಎಂಬ ವಿವರ ಇರುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜತೆಗೆ 23 ಜನರನ್ನು ಪೊಲೀಸರು ಬಂಧಿಸಿ, ಪೋಸು ನೀಡಿರುವ ಚಿತ್ರವೂ ವೈರಲ್ ಆಗಿದೆ.

‘ಇದು ಸುಳ್ಳು ಸುದ್ದಿ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ 15 ಪುರುಷರು ಮತ್ತು 8 ಮಹಿಳೆಯರನ್ನು2019ರ ಜುಲೈನಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಕೂರಿಸಿ, ತಾವು ನಿಂತುಕೊಂಡು ಪೊಲೀಸರು ತೆಗೆಸಿಕೊಂಡಿದ್ದ ಚಿತ್ರವನ್ನು ಪತ್ರಿಕೆಗಳು ಪ್ರಕಟಿಸಿದ್ದವು. ಅದೇ ಚಿತ್ರವನ್ನು ಬಳಸಿಕೊಂಡು, ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಬಾಂಬ್‌ ತಯಾರಿಸುತ್ತಿದ್ದ ವೇಳೆ 25 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ ಎಂದು ದಿ ಲಾಜಿಕಲ್ ಇಂಡಿಯನ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT