ಫ್ಯಾಕ್ಟ್ ಚೆಕ್: ಹೆದರುವುದಿಲ್ಲ ಎಂದು ರಾಜೀನಾಮೆ ಹಿಂದಿನ ದಿನ ಧನಕರ್ ಹೇಳಿದ್ದಾರೆಯೇ?
ಉಪರಾಷ್ಟ್ರಪತಿ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ ಜಗದೀಪ್ ಧನಕರ್ ಅವರ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ಇದೇ ಜುಲೈ 23ರ ಸಂಸತ್ ಅಧಿವೇಶನದ್ದು ಎಂದೂ, ‘ನಾನು ರೈತನ ಮಗನಾಗಿದ್ದು, ರೈತರ ಮಕ್ಕಳು ಯಾರಿಗೂ ಹೆದರುವುದಿಲ್ಲ’ ಎಂಬುದಾಗಿ ಅವರು ತಮ್ಮ ರಾಜೀನಾಮೆಯ ಹಿಂದಿನ ದಿನ ಹೇಳಿದ್ದಾರೆ ಎಂದೂ ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಕೀಫ್ರೇಮ್ ಇನ್‌ವಿಡ್ ಟೂಲ್‌ನಿಂದ ಪ್ರತ್ಯೇಕಿಸಿ, ಅದನ್ನು ಗೂಗಲ್ ಲೆನ್ಸ್‌ನಿಂದ ಪರಿಶೀಲನೆ ಮಾಡಿದಾಗ, ಅದೇ ವಿಡಿಯೊ ಅನ್ನು ಹಲವರು, ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಪತ್ತೆಯಾಯಿತು. ಈ ಬಗ್ಗೆ ಮತ್ತಷ್ಟು ಹುಡುಕಿದಾಗ, 2025ರ ಏ.4ರಂದು ಧನಕರ್ ಅವರು ಈ ಮಾತನ್ನು ಹೇಳಿರುವುದಾಗಿ ‘ಎನ್‌ಡಿಟಿವಿ’ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಕಂಡಿತು. ಇದೇ ವಿಡಿಯೊ ಸಿಎನ್‌ಎನ್ ನ್ಯೂಸ್18 ಯೂ ಟ್ಯೂಬ್ ಚಾನೆಲ್‌ನಲ್ಲಿ 2025ರ ಏ.3ರಂದು ಲೈವ್ ಆಗಿ ಪ್ರಸಾರವಾಗಿದ್ದೂ ಕಂಡಿತು. ರಾಜ್ಯಸಭೆಯ ಬಜೆಟ್ ಮೇಲಿನ ಚರ್ಚೆಯ ವಿಡಿಯೊ ಅನ್ನು ಇತ್ತೀಚಿನ ವಿಡಿಯೊ ಎಂದು ಸುಳ್ಳು ಪ್ರತಿಪಾದನೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.