ADVERTISEMENT

ಫ್ಯಾಕ್ಟ್‌ ಚೆಕ್‌: 2026ರ ಮಾರ್ಚ್‌ ಬಳಿಕ ₹500 ನೋಟು ಬಳಕೆ ಸ್ಥಗಿತ; ಇದು ಸುಳ್ಳು

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 0:32 IST
Last Updated 10 ಜೂನ್ 2025, 0:32 IST
.
.   

2026ರ ಮಾರ್ಚ್‌ ಬಳಿಕ ₹500 ಮುಖಬೆಲೆಯ ನೋಟುಗಳ ಬಳಕೆಯನ್ನು ಸ್ಥಗಿತಗೊಳಿಸುವ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ ಎಂದು ಪ್ರತಿಪಾದಿಸಿಸುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಾರಗಳಿಂದ ಹರಿದಾಡುತ್ತಿದೆ. ಸೆಪ್ಟೆಂಬರ್‌ ಹೊತ್ತಿಗೆ ಶೇ 75ರಷ್ಟು ಎಟಿಎಂಗಳಲ್ಲಿ ₹100 ಮತ್ತು ₹200 ಮುಖಬೆಲೆಯ ನೋಟುಗಳನ್ನು ಮಾತ್ರ ವಿತರಿಸಲಿವೆ. ಮುಂದಿನ ಮಾರ್ಚ್‌ ಹೊತ್ತಿಗೆ ಶೇ 90ರಷ್ಟು ಎಟಿಎಂಗಳಲ್ಲಿ ₹100 ಮತ್ತು ₹200ರ ಮುಖಬೆಲೆಯ ನೋಟುಗಳು ಮಾತ್ರ ಲಭ್ಯವಿರಲಿವೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.  ಆದರೆ, ಇದು ಸುಳ್ಳು. 

ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಈ ಸಂಬಂಧ ಆರ್‌ಬಿಐ ಹೊರಡಿಸಿರುವ ಯಾವುದೇ ಅಧಿಕೃತ ಪ್ರಕಟಣೆ ಅಥವಾ ಅಧಿಸೂಚನೆ ಸಿಗಲಿಲ್ಲ. ಮತ್ತಷ್ಟು ಹುಡುಕಿದಾಗ ಏಪ್ರಿಲ್‌ 28ರಂದು ಆರ್‌ಬಿಐ ಹೊರಡಿಸಿರುವ ಅಧಿಸೂಚನೆಯೊಂದು ಸಿಕ್ಕಿತು. ಜನರ ಅನುಕೂಲಕ್ಕಾಗಿ ₹100 ಮತ್ತು ₹200 ಮುಖಬೆಲೆಯ ನೋಟುಗಳನ್ನು ಪೂರೈಸುವಂತೆ ಅದರಲ್ಲಿ ಆರ್‌ಬಿಐ ಹೇಳಿತ್ತು. ಅದರ ಪ್ರಕಾರ, ಈ ವರ್ಷದ ಸೆ.30ರ ವೇಳೆಗೆ ಶೇ 75ರಷ್ಟು ಎಟಿಎಂಗಳು, ಕನಿಷ್ಠ ಒಂದು ಪೆಟ್ಟಿಗೆಯಿಂದ (ಕ್ಯಾಸೆಟ್‌– ನೋಟುಗಳನ್ನು ಇಡುವ ಪೆಟ್ಟಿಗೆ. ಒಂದು ಎಟಿಎಂನಲ್ಲಿ ನಾಲ್ಕು ಪೆಟ್ಟಿಗೆಗಳಿರುತ್ತವೆ)  ₹100 ಇಲ್ಲವೇ ₹200 ಮುಖ ಬೆಲೆಯ ನೋಟುಗಳನ್ನು ಗ್ರಾಹಕರಿಗೆ ವಿತರಿಸಬೇಕು. 2026ರ ಮಾರ್ಚ್‌ 31ರವರೆಗೆ ಶೇ 90ರಷ್ಟು ಎಟಿಎಂಗಳು ಇದನ್ನು ಅಳವಡಿಸಿಕೊಳ್ಳಬೇಕು. ಅಂದರೆ ನಾಲ್ಕು ಪೆಟ್ಟಿಗೆಗಳ ಪೈಕಿ ಒಂದು ಪೆಟ್ಟಿಗೆಯಲ್ಲಿ ₹100 ಇಲ್ಲವೇ ₹200 ಮುಖಬೆಲೆಯ ನೋಟುಗಳನ್ನೇ ಇಡಬೇಕು. ₹500 ಮುಖ ಬೆಲೆಯ ನೋಟಿನ ಬಳಕೆ ರದ್ದತಿ ಕುರಿತಂತೆ ಆರ್‌ಬಿಐ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪೋಸ್ಟ್‌ನಲ್ಲಿರುವ ಮಾಹಿತಿ ತಪ್ಪು ಎಂದು ಹೇಳಿದರಲ್ಲದೇ, ಈ ಬಗ್ಗೆ ಸ್ಪಷ್ಟನೆ ನೀಡಿ ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೊ ಮಾಡಿರುವ ಪೋಸ್ಟ್‌ ಬಗ್ಗೆಯೂ ಮಾಹಿತಿ ನೀಡಿದರು ಎಂದು ಬೂಮ್‌ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT