ಫ್ಯಾಕ್ಟ್ ಚೆಕ್
ಭಾರಿ ಸ್ಫೋಟ ಸಂಭವಿಸುವ ಮತ್ತು ಜನರು ಬೆದರಿ ಓಡುವ ದೃಶ್ಯಾವಳಿಯನ್ನು ಒಳಗೊಂಡ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಭಾರತ ಸೇನೆಯು ಪಾಕಿಸ್ತಾನದ ಸಿಯಾಲ್‌ಕೋಟ್ ಮೇಲೆ ದಾಳಿ ನಡೆಸಿರುವ ವಿಡಿಯೊವನ್ನು ಅಲ್–ಜಝೀರಾ ವಾಹಿನಿ ಬಿಡುಗಡೆ ಮಾಡಿದೆ ಎಂಬ ಪ್ರತಿಪಾದನೆಯೊಂದಿಗೆ ಈ ತುಣುಕನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು.
ವಿಡಿಯೊವನ್ನು ಕೀಫ್ರೇಮ್‌ಗಳಾಗಿ ವಿಭಾಗಿಸಿ, ಒಂದು ಫ್ರೇಮ್ ಅನ್ನು ರಿವರ್ಸ್ ಇಮೇಜ್ ವಿಧಾನದಲ್ಲಿ ಹುಡುಕಾಟ ನಡೆಸಿದಾಗ, ಆಲ್ ಜಝೀರಾ ವಾಹಿನಿಯ ವಾಟರ್‌ಮಾರ್ಕ್ ಹೊಂದಿರುವ ಇದೇ ವಿಡಿಯೊವನ್ನು 2023ರ ನ.9ರಂದು ಪೋಸ್ಟ್ ಮಾಡಿರುವುದು ಕಂಡು ಬಂತು. ಪ್ಯಾಲೆಸ್ಟೀನ್‌ನ ಮಾಧ್ಯಮ ಕ್ಯುಡ್ಸ್ ನ್ಯೂಸ್ ನೆಟ್‌ವರ್ಕ್ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಇದೇ ವಿಡಿಯೊವನ್ನು ಹಂಚಿಕೊಂಡಿತ್ತು. ಗಾಜಾ ಪಟ್ಟಿಯಲ್ಲಿ ಇಂಡೊನೇಷ್ಯಾದ ಆಸ್ಪತ್ರೆ ಇರುವ ಪ್ರದೇಶವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಬಾಂಬ್ ದಾಳಿ ಮಾಡಿದೆ. ಇದರಲ್ಲಿ ಹಲವರು ಮೃತಪಟ್ಟಿದ್ದು, ಬಹುತೇಕರು ಮಕ್ಕಳು ಎಂದು ವರದಿಯಾಗಿದೆ’ ಎಂದು ಅದರಲ್ಲಿ ವಿವರಿಸಲಾಗಿತ್ತು. ಇದರ ಆಧಾರದಲ್ಲಿ ಅರೇಬಿಕ್ ಭಾಷೆಯಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಿದಾಗ ಅಲ್–ಜಝೀರಾದ ಅರೇಬಿಕ್ ಭಾಷೆಯ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ 2023ರ ನ.9ರಂದು ಇದೇ ವಿಡಿಯೊವನ್ನು ಪೋಸ್ಟ್ ಮಾಡಲಾಗಿತ್ತು. ಹಳೆಯ ವಿಡಿಯೊವನ್ನು ಪೋಸ್ಟ್ ಮಾಡಿ ಪಾಕಿಸ್ತಾನದ ಸಿಯಾಲ್‌ಕೋಟ್‌ನ ಮೇಲೆ ಭಾರತ ಸೇನೆ ದಾಳಿ ಮಾಡಿದೆ ಎಂದು ಬಿಂಬಿಸಲಾಗಿದೆ ಎಂದು ಬೂಮ್ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.